ವಿಟ್ಲ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಕರೋಪಾಡಿ ಗ್ರಾಮದ ಬೇತ ನಿವಾಸಿ, ಯಕ್ಷಗಾನ ಹಿರಿಯ ಕಲಾವಿದ ಬೇತ ಕುಂಞ ಕುಲಾಲ್(83) ಅವರು ಅಸೌಖ್ಯದಿಂದ ಸ್ವಗೃಹದಲ್ಲಿ ಜ.26ರಂದು ನಿಧನ ಹೊಂದಿದರು. ಧರ್ಮಸ್ಥಳ ಮೇಳದಲ್ಲಿ ಯಕ್ಷಗಾನ ರಂಗವನ್ನು ಪ್ರವೇಶಿಸಿದ ಅವರು ಕುತ್ಯಾರು ಮೇಳ, ಸುಬ್ರಹ್ಮಣ್ಯ ಮೇಳ, ಇರಾ ಕುಂಡಾವು ಮೇಳ ಮತ್ತು ಬಪ್ಪನಾಡು ಮೇಳದಲ್ಲಿ ಸೇರಿ ಒಟ್ಟು 35 ವರ್ಷಗಳ ಕಾಲ ಯಕ್ಷರಂಗದಲ್ಲಿ ಸೇವೆ ಸಲ್ಲಿಸಿದ್ದರು. ಹಿತಮಿತವಾದ ನಾಟ್ಯ ಮಾತುಗಳಿಂದ ಪ್ರಬುದ್ಧನಾಗಿ, ರಂಗನಡೆ, ಪ್ರಸಂಗಜ್ಞಾನ ಹೊಂದಿದ ಕಲಾವಿದ, ಪೀಠಿಕೆ ವೇಷವನ್ನು ಚೆನ್ನಾಗಿ ನಿರ್ವಹಿಸಬಲ್ಲವರಾಗಿದ್ದ ಬೇತ ಶ್ರೀ ಕುಂಞ ಕುಲಾಲ್ ಸುಮಾರು 2010ನೇ ಇಸವಿಯವರೇಗೂ ಪರಂಪರೆಯ, ಸಂಪ್ರದಾಯದ ಸಮರ್ಥ ಪೀಠಿಕಾ ವೇಷಧಾರಿಯಾಗಿ ಮೆರೆದಿದ್ದರು.
ಬೇತ ಶ್ರೀ ಕುಂಞ ಕುಲಾಲ್ ಅವರು 1943ರಲ್ಲಿ ಮುತ್ತ ಮೂಲ್ಯ ಮತ್ತು ಅಬ್ಬು ಹೆಂಗಸು ದಂಪತಿಗಳಿಗೆ ಮಗನಾಗಿ ಬಂಟ್ವಾಳ ತಾಲೂಕು ಕರೋಪಾಡಿ ಗ್ರಾಮದ ಬೇತ ಎಂಬಲ್ಲಿ ಜನಿಸಿದರು. ಮನೆಯಲ್ಲಿ ಕಡುಬಡತನ. ಆದರೂ ಮಿತ್ತನಡ್ಕ ಶಾಲೆಯಲ್ಲಿ 5ನೇ ತರಗತಿವರೆಗೆ ಓದಿದ್ದರು. ಎಳವೆಯಲ್ಲೇ ಯಕ್ಷಗಾನಾಸಕ್ತಿ ತೀವ್ರವಾಗಿತ್ತು. ಆಸುಪಾಸಿನಲ್ಲಿ ನಡೆಯುತ್ತಿದ್ದ ಆಟ, ತಾಳಮದ್ದಳೆ ಕಾರ್ಯಕ್ರಮಗಳನ್ನು ಬಿಡದೆ ನೋಡುತ್ತಿದ್ದರು. ಮನೆಯವರು ಕರೆದುಕೊಂಡೂ ಹೋಗುತ್ತಿದ್ದರು. ತಾನೂ ಕಲಾವಿದನಾಗಬೇಕೆಂಬ ಆಸೆ ಚಿಗುರೊಡೆಯಿತು. ಹಿರಿಯರ ಪ್ರೋತ್ಸಾಹವೂ ಸಿಕ್ಕಿತ್ತು. ಕುಂಞ ಕುಲಾಲರ ಆಸೆಗೆ ಹಿರಿಯರು ಅಡ್ಡಿಯಾಗಲಿಲ್ಲ. ಪ್ರೋತ್ಸಾಹಿಸಿದರು. ಹುರಿದುಂಬಿಸಿದರು. ನಾಟ್ಯ ಕಲಿಯಬೇಕೆಂಬ ಉದ್ದೇಶದಿಂದ ತೆಂಕಿನ ನಾಟ್ಯಾಚಾರ್ಯ ಕುರಿಯ ವಿಠಲ ಶಾಸ್ತ್ರಿಗಳ ಬಳಿಗೆ ತೆರಳಿದರು. ಕುಂಞ ಕುಲಾಲರ ಮನೆಯಿಂದ ಕುರಿಯ ವಿಠಲ ಶಾಸ್ತ್ರಿಗಳ ಮನೆಗೆ ಐದಾರು ಮೈಲಿಗಳ ದೂರ. ಅವರ ಮನೆಯಲ್ಲೇ ಉಳಿದು ಕುಲಾಲರು ಯಕ್ಷಗಾನ ನಾಟ್ಯ ಕಲಿತರು. ವಾರಕ್ಕೊಮ್ಮೆ ಮನೆಗೆ ಬರುತ್ತಿದ್ದರಂತೆ. ಕುರಿಯ ವಿಠಲ ಶಾಸ್ತ್ರಿಗಳು ಅನ್ನ, ವಸತಿಗಳನ್ನಿತ್ತು ನನಗೆ ಕಲಿಸಿದರು. ನಾನು ಮನೆಯ ಸದಸ್ಯನಂತೆಯೇ ಇದ್ದು ಕಲಿತೆ. ಗುರುಗಳು ಮನೆಯ ಸದಸ್ಯನಂತೆಯೇ ನನ್ನನ್ನು ನೋಡಿ ಪ್ರೀತಿಯಿಂದ ಹೇಳಿಕೊಟ್ಟರು. ನನ್ನಿಂದ ಸಾಧ್ಯವಾದಷ್ಟು ಕಲಿತಿದ್ದೇನೆ ಎಂದು ಹೇಳುವ ಕುಂಞ ಕುಲಾಲರ ಮಾತಿನ ಧ್ವನಿಯಲ್ಲಿ ಗುರುಗಳಿಗೆ ಅರ್ಪಿಸುವ ಕೃತಜ್ಞತೆಯ ಭಾವವು ಅಡಗಿದೆ. ಅದೇ ವರ್ಷ ಕುಂಞ ಕುಲಾಲರನ್ನು ಶಾಸ್ತ್ರಿಗಳು ಶ್ರೀ ಧರ್ಮಸ್ಥಳ ಮೇಳಕ್ಕೆ ಕರೆದುಕೊಂಡು ಹೋದರು. ಧರ್ಮಸ್ಥಳ ಮೇಳದಲ್ಲಿ ಬಾಲಗೋಪಾಲನಾಗಿ ರಂಗಪ್ರವೇಶ. ಆಗ ಸದ್ರಿ ಮೇಳದಲ್ಲಿ ಅಗರಿ ಭಾಗವತರು, ಕುರಿಯ ವಿಠಲ ಶಾಸ್ತ್ರಿಗಳು, ಬಣ್ಣದ ಮಹಾಲಿಂಗ, ಕರುವೊಳು ದೇರಣ್ಣ ಶೆಟ್ರು, ಕುಂಞ ಬಾಬು ಮೊದಲಾದ ಕಲಾವಿದರಿದ್ದರು. ಧರ್ಮಸ್ಥಳ ಮೇಳದಲ್ಲಿ ಕುಲಾಲರದ್ದು ಒಟ್ಟು ಹತ್ತು ವರುಷಗಳ ತಿರುಗಾಟ. ಹಂತ ಹಂತವಾಗಿ ಬೆಳೆಯುತ್ತಾ ಸಾಗಿದರು. ಬಾಲಗೋಪಾಲ, ಮುಖ್ಯ ಸ್ತ್ರೀವೇಷ ಮಾಡುತ್ತಾ ಬಹಳ ಬೇಗ ಕಲಿತು ಬೆಳೆಯುತ್ತಾ 2ನೇ ಪುಂಡುವೇಷದ ಎಲ್ಲಾ ವೇಷಗಳನ್ನೂ ಮಾಡಲಾರಂಭಿಸಿದರು. ಶ್ರೀ ಧರ್ಮಸ್ಥಳ ಮೇಳದ ಹತ್ತು ವರ್ಷಗಳ ತಿರುಗಾಟದಲ್ಲಿ ಅಗರಿ ಭಾಗವತರು, ಕಡತೋಕಾ, ಕುರಿಯ ವಿಠಲ ಶಾಸ್ತ್ರಿಗಳು, ಬಣ್ಣದ ಮಹಾಲಿಂಗ, ಮುಳಿಯಾಲ ಭೀಮ ಭಟ್, ಕದ್ರಿ ವಿಷ್ಣು, ವಿಟ್ಲ ರಾಮಯ್ಯ ಶೆಟ್ಟಿ, ಕೋಳ್ಯೂರು ರಾಮಚಂದ್ರ ರಾವ್, ಹೊಸಹಿತ್ತಿಲು ಮಹಾಲಿಂಗ ಭಟ್ (ಲಿಂಗಣ್ಣ), ಕರುವೊಳು ದೇರಣ್ಣ ಶೆಟ್ಟಿ, ಕುಂಞ ಬಾಬು ಮೊದಲಾದ ಶ್ರೇಷ್ಠ ಕಲಾವಿದರ ಒಡನಾಟವು ಸಿಕ್ಕಿತ್ತು. ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮ್ಯೆ ಪ್ರಸಂಗದ ಕಾಳರ್ಕಾಯಿ ಪಾತ್ರವನ್ನು ನಿರ್ವಹಿಸಿ ಮೆಚ್ಚುಗೆಗೆ ಪಾತ್ರರಾದರು. ಆಗ ಬೆಳಾಲು ಶೀನಾಚಾರಿಯವರು ಕನ್ಯಾಕುಮಾರಿ ಪಾತ್ರವನ್ನು ಮಾಡುತ್ತಿದ್ದರಂತೆ. ಕುರಿಯ ವಿಠಲ ಶಾಸ್ತ್ರಿಗಳು ಈಶ್ವರ ಮಾಡಿ ಅಣ್ಣಪ್ಪನಾಗಿ ಅಭಿನಯಿಸುತ್ತಿದ್ದರೆಂದು ಹೇಳಿ ಕುಲಾಲರು ಆ ದಿನಗಳನ್ನು ಈಗಲೂ ನೆನಪಿಸುತ್ತಾರೆ. ಹೊಸಹಿತ್ತಿಲು ಮಹಾಲಿಂಗ ಭಟ್ಟರೂ, ಕುಂಞ ಕುಲಾಲರೂ ಜೋಡಿ ವೇಷಗಳಲ್ಲಿ ಪ್ರಸಿದ್ಧರು. ಅನೇಕ ಪುಂಡುವೇಷಗಳಲ್ಲಿ ಇವರು ಜತೆಯಾಗಿ ಅಭಿನಯಿಸುತ್ತಿದ್ದರು. 2ನೇ ಪುಂಡುವೇಷ ಮಾಡುತ್ತಿರುವಾಗಲೇ ಕಿರೀಟ ವೇಷಗಳತ್ತ ಗಮನ ಹರಿಯಿತು. ನಾನೊಬ್ಬ ಉತ್ತಮ ಪೀಠಿಕೆ ವೇಷಧಾರಿಯಾಗಬೇಕೆಂಬ ಬಯಕೆಯೂ ಕುಂಞ ಕುಲಾಲರಿಗಿತ್ತು. ಧರ್ಮಸ್ಥಳ ಮೇಳದಲ್ಲಿ ಹತ್ತು ವರ್ಷಗಳ ಕಾಲ ಕಲಾಸೇವೆಯನ್ನು ಮಾಡಿದ ಬೇತ ಕುಂಞ ಕುಲಾಲರು ನಂತರ ಕೂಡ್ಲು, ಮುಲ್ಕಿ, ಕೊಲ್ಲೂರು ಮೊದಲಾದ ಮೇಳಗಳಲ್ಲಿ ತಿರುಗಾಟ ನಡೆಸಿದ್ದರು. ಈ ಸಮಯಗಳಲ್ಲಿ ಸತತ ಸಾಧನೆಯಿಂದ ಕುಲಾಲರು ಪೀಠಿಕೆ ವೇಷಧಾರಿಯಾಗಿ ರೂಪುಗೊಂಡಿದ್ದರು. ಆ ವಿಭಾಗಕ್ಕೆ ಸಂಬಂಧಿಸಿದ ಎಲ್ಲಾ ಪಾತ್ರಗಳನ್ನೂ ಪರಂಪರೆಯಂತೆ ನಿರ್ವಹಿಸತೊಡಗಿದರು ಕುಂಞ ಕುಲಾಲರು. ಪರಂಪರೆಯ ಎಲ್ಲಾ ಕುಣಿತದ ರೀತಿಗಳನ್ನೂ ಅಭ್ಯಸಿಸಿದ್ದರು. ದೇವೇಂದ್ರ, ಅರ್ಜುನನಾಗಿ ಸಾಂಪ್ರದಾಯಿಕವಾಗಿ, ಅತ್ಯುತ್ತಮವಾಗಿ ಸಭಾಕ್ಲಾಸ್ ಕುಣಿಯುವ ಕಲೆ ಇವರಿಗೆ ಕರಗತವಾಗಿತ್ತು. ಮತ್ತೆ ಪೀಠಿಕಾ ವೇಷಧಾರಿಯಾಗಿ ಸುಂಕದಕಟ್ಟೆ ಮೇಳಕ್ಕೆ ಸೇರ್ಪಡೆ. ನಿರಂತರ 36 ವರ್ಷಗಳ ಕಾಲ ಸುಂಕದಕಟ್ಟೆ ಮೇಳದಲ್ಲಿ ತಿರುಗಾಟ. ದೀರ್ಘಕಾಲದ ಒಡನಾಡಿ ಸಣ್ಣ ತಿಮ್ಮಪ್ಪು ಅವರಿಂದ ಪರಂಪರೆಯ ಕ್ರಮಗಳ ಅಭ್ಯಾಸ ಮೊದಲೇ ಮಾಡಿದ್ದರು. ಪರಂಪರೆಯ ಹನುಮಂತನ ಮುಖವರ್ಣಿಕೆ, ತೆರೆಕುಣಿತ, ಒಡ್ಡೋಲಗದ ಕ್ರಮವನ್ನು ಅವರಿಂದ ತಿಳಿದು ಅಭಿನಯಿಸಿ ಕುಂಞ ಕುಲಾಲರೂ ಪ್ರಸಿದ್ಧರಾದರು. ಹೆಚ್ಚಿನ ಪ್ರಸಂಗಗಳ ಅರ್ಜುನ, ದೇವೇಂದ್ರನ ಪಾತ್ರಗಳು ಕುಂಞ ಕುಲಾಲರಿಗೆ ಅಪಾರ ಹೆಸರನ್ನು ತಂದುಕೊಟ್ಟಿತು. ಪೀಠಿಕೆ ವೇಷಗಳಲ್ಲಿ ‘ತಜ್ಞ’ (Specialist) ಎಂಬ ಪ್ರಶಂಸೆಗೂ ಪಾತ್ರರಾದರು. ದೇವೀಮಹಾತ್ಮ್ಯೆ ಪ್ರಸಂಗದಲ್ಲಿ ಮಧುಕೈಟಭರು, ಚಂಡಮುಂಡರು, ರಕ್ತಬೀಜ ಪಾತ್ರಗಳನ್ನು ನಿರ್ವಹಿಸಿದ್ದಲ್ಲದೆ ಹಲವು ಬಾರಿ ಶ್ರೀ ದೇವಿಯ ಪಾತ್ರವನ್ನೂ ಮಾಡಿದ್ದರಂತೆ. ಹಲವು ಸ್ತ್ರೀಪಾತ್ರಗಳನ್ನೂ ನಿರ್ವಹಿಸಿದ್ದಲ್ಲದೆ, ಹೆಣ್ಣುಬಣ್ಣಕ್ಕೆ ಸಂಬಂಧಿಸಿದ ತಾಟಕಿ, ಪೂತನಿ, ಅಜಮುಖಿ, ಶೂರ್ಪನಖಿ, ಕರಾಳನೇತ್ರೆ ಮೊದಲಾದ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡರು. ಪೀಠಿಕೆ ವೇಷಧಾರಿಯಾಗಿಯೇ ಗುರುತಿಸಿಕೊಂಡರೂ ಇವರೊಬ್ಬ ಆಲ್ರೌಂಡರ್ ಕಲಾವಿದ. ಎಲ್ಲಾ ವೇಷಗಳನ್ನೂ ಮಾಡಬಲ್ಲರು. ಅನುಭವಗಳನ್ನು ಇನ್ನೊಬ್ಬರಿಗೆ ಹೇಳಬಲ್ಲರು.
ಶ್ರೀ ಬೇತ ಕುಂಞ ಕುಲಾಲರು ತುಳುಪ್ರಸಂಗಗಳಲ್ಲಿ ಪರಿಣತರು. ತುಳು ಸಾಮಾಜಿಕ, ಐತಿಹಾಸಿಕ ಅನೇಕ ಪ್ರಸಂಗಗಳಲ್ಲಿ ವೇಷಗಳನ್ನು ಮಾಡಿದವರು. ಚೆನ್ನಯ, ಬೂದಾಬಾರೆ ಮೊದಲಾದ ವೇಷಗಳಲ್ಲಿ ರಂಜಿಸಿದ್ದರು. ಅನೇಕ ಸಂಘ-ಸಂಸ್ಥೆಗಳೂ, ಸಂಘಟಕರೂ ಇವರನ್ನು ಗೌರವಿಸಿ ಸನ್ಮಾನಿಸಿದ್ದಾರೆ. ತುಳು ಸಾಹಿತ್ಯ ಅಕಾಡಮಿಯವರೂ ಗೌರವಿಸಿದ್ದಾರೆ. ಯಕ್ಷಧ್ರುವ ಪಟ್ಲ ಸಂಸ್ಥೆಯೂ ಧನಸಹಾಯವನ್ನು ನೀಡಿ ಗೌರವಿಸಿದೆ. 2012ರಲ್ಲಿ ಯಕ್ಷಗಾನ ಕ್ಷೇತ್ರದಿಂದ ನಿವೃತ್ತರಾದ ಅತ್ಯುತ್ತಮ ಪೀಠಿಕೆ ವೇಷಧಾರಿ ಬೇತ ಶ್ರೀ ಕುಂಞ ಕುಲಾಲ್ ಅವರು ಸಾಂಸಾರಿಕವಾಗಿಯೂ ತೃಪ್ತರಾಗಿದ್ದರು. ಅವರು ಪತ್ನಿ ಸೀತಾ, ಪುತ್ರಿಯರಾದ ಚಂದ್ರಾವತಿ, ಶ್ರೀಮತಿ, ಜಯಂತಿ, ಸುನೀತ ಹಾಗೂ ಪುತ್ರ ಯತೀಶ ಅವರನ್ನು ಬಿಟ್ಟು ಅಗಲಿದ್ದಾರೆ.