ಕುಂದಾಪುರ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಸಾಸ್ಥಾನ ಗೋಳಿಗರಡಿಯ ಪಂಜುರ್ಲಿ ಮತ್ತು ಬ್ರಹ್ಮ ಬೈದರ್ಕಳ ದೇವಸ್ಥಾನದ ವತಿಯಿಂದ 150 ಕ್ಕೂ ಮಿಕ್ಕಿ ವರ್ಷಗಳಿಂದ ನಡೆದು ಕೊಂಡು ಬರುತ್ತಿರುವ ಶ್ರೀ ಪಂಜುರ್ಲಿ ಕೃಪಾ ಪೋಷಿತ ಗೋಳಿಗರಡಿ ಮೇಳದ ರಂಗಸ್ಥಳದಲ್ಲಿ ಸುರೇಶ್ ಕುಲಾಲ್ ಹಂದಿಗದ್ದೆ ಯವರ 25 ನೇ ಯಕ್ಷಗಾನ ಕಲಾಕೃತಿಯನ್ನು ಬಿಡುಗಡೆ ಮಾಡಿ ಮೇಳದ ಈ ವರ್ಷದ ತಿರುಗಾಟಕ್ಕೆ ಅರ್ಪಿಸಲಾಯಿತು.
ಗೋಳಿಗರಡಿಯ ಪಂಜುರ್ಲಿಯನ್ನು ಮನೆ ದೇವರಾಗಿ ನಂಬಿರುವ ವೈದ್ಯ ಶಿಕ್ಷಕ, ಖುದ್ದು ಹವ್ಯಾಸಿ ಯಕ್ಷಗಾನ ಕಲಾವಿದ, ಸಾಹಿತಿ, ವಿಮರ್ಶಕ, ಭಾರತೀಯ ವೈದ್ಯಕೀಯ ಸಂಘದ ವೈದ್ಯ ಬರಹಗಾರರ ಬಳಗದ ರಾಜ್ಯ ಅಧ್ಯಕ್ಷ, ಶ್ರೀನಿವಾಸ್ ವಿ ವಿ ಯ ಮುಖ್ಯ ವೈದ್ಯಾಧಿಕಾರಿ ಹಾಗೂ ಪ್ರೊಫೆಸರ್ ಆಗಿರುವ ಡಾ ಎಂ ಅಣ್ಣಯ್ಯ ಕುಲಾಲ್ ಉಳ್ತೂರು ಪ್ರಸಂಗವನ್ನು ಬಿಡುಗಡೆ ಮಾಡಿ ಮೇಳದ ಪ್ರಧಾನ ಭಾಗವತರಾದ ಸುರೇಶ್ ರಾವ್ ಅವರಿಗೆ ಹಸ್ತಾಂತರಿಸಿ, ಯಕ್ಷಗಾನದ ಹಿರಿಮೆ ಗರಿಮೆ, ಅದರಲ್ಲಿರುವ ಸಾಹಿತ್ಯ ಸಂಗೀತ ನೃತ್ಯ ವಾಕ್ಚಾತುರ್ಯ ಗಳ ಹೆಚ್ಚುಗಾರಿಕೆ ಬಗ್ಗೆ ವಿವರಿಸಿ, ಗೋಳಿ ಗರಡಿ ದೇವಸ್ಥಾನದ ಈ ಮೇಳವನ್ನ ಕಟ್ಟಿ ಬೆಳೆಸುವಲ್ಲಿ ಪ್ರಧಾನ ಪಾತ್ರ ವಹಿಸಿಕೊಂಡು ಜಾತ್ಯತೀತ ಚಿಂತನೆಯ ಮೂಲಕ ಒಗ್ಗಟ್ಟಿನ ಸಂದೇಶ ಸಾರುತ್ತಿರುವ ಬಾರಕೂರು, ಬ್ರಹ್ಮಾವರ, ಕುಂದಾಪುರ, ಶಂಕರನಾರಾಯಣ, ಬೈಂದೂರು, ತೀರ್ಥಳ್ಳಿ, ಶಿವಮೊಗ್ಗ, ಚಿಕಮಂಗಳೂರು ಭಾಗದಲ್ಲಿ ನೆಲೆಸಿರುವ ಪಂಜುರ್ಲಿಯ ಭಕ್ತರಾದ ಬಿಲ್ಲವ, ಕುಲಾಲ- ಕುಂಬಾರ, ಬಂಟ, ವಿಶ್ವಕರ್ಮ, ಮಡಿವಾಳ ಸಮುದಾಯದ ಕುಟುಂಬಗಳ ಸೇವೆಯನ್ನ ಶ್ಲಾಘಿಸಿ ಶುಭ ಹಾರೈಸಿದರು.
ಮಣಿಪಾಲ ಇಂಜಿನಿಯರಿಂಗ್ ಕಾಲೇಜ್ ನ ಪ್ರಧ್ಯಾಪಕ, ಪಂಜುರ್ಲಿ ಭಕ್ತ, ಯಕ್ಷಗಾನದ ವಿಮರ್ಶಕ, ಅಂಕಣಕಾರ ಉದಯ ಕುಮಾರ್ ಶೆಟ್ಟಿ ಅಧ್ಯಕ್ಷ ಸ್ಥಾನದಿಂದ ಮಾತಾಡಿ ಯಕ್ಷಗಾನ ಸಮಾಜಕ್ಕೆ ಕೊಟ್ಟ ಕೊಡುಗೆ, ಈ ಭಾಗದ ಖ್ಯಾತ ಮಂದಾರ್ತಿ, ಮಾರಣಕಟ್ಟೆ, ಸೌಕೂರು, ಅಮೃತೇಶ್ವರಿ, ಯಕ್ಷಗಾನ ಮೇಳಗಳ ಜೊತೆ ಗೋಳಿಗರಡಿ ದೇವಸ್ಥಾನದ ಮೇಳ ಕಳೆದ 150 ವರ್ಷಗಳಿಂದ ಯಕ್ಷಗಾನ ಸೇವೆ ಮಾಡುತ್ತಿರುವುದು ದೊಡ್ಡ ಕೊಡುಗೆ. ಹೆಚ್ಚಿನ ಮೇಳಗಲು ದೊಡ್ಡ ದೊಡ್ಡ ದೇವಸ್ಥಾನ ಹಾಗೂ ದೇವರುಗಳ ಹೆಸರಲ್ಲಿ ನಡೆಯುತ್ತಿರುವಾಗ,ಯಾವುದೇ ದೊಡ್ಡ ರಾಜಶ್ರಯ ಇಲ್ಲದ ಒಂದು ಗರಡಿ ದೇವಸ್ಥಾನ ಹಿಂದುಳಿದ ವರ್ಗದ ಕುಟುಂಬಗಳೇ ಜಾಸ್ತಿ ಪೂಜಿಸುವ ಬಡವರ ಮೇಳವಾಗಿ 150 ವರ್ಷ ಪೂರೈಸಿರುವುದು ಒಂದು ದೊಡ್ಡ ಕೊಡುಗೆ ಎಂದರು. ಇಲ್ಲಿಯ ಕಲಾವಿದರಿಗೆ, ಪ್ರಸಂಗಕರ್ತರಿಗೆ ಇನ್ನೂ ದೊಡ್ಡ ಮಟ್ಟದ ಸಹಾಯ ಸಹಕಾರದ ಜೊತೆ ಅವರನ್ನ ಗುರುತಿಸಿ ಗೌರವಿಸುವ ಕೆಲಸ ಆಗಬೇಕು ಎನ್ನುತ್ತಾ, 25 ಪ್ರಸಂಗ ಬರೆದಿರುವ ಸುರೇಶ್ ಕುಲಾಲ ಹಂದಿಗದ್ದೆಯಂತಹ ಎಲೆಮರೆಯ ಕಾಯಂತೆ ಇರುವ ಪ್ರಸಂಗ ಕರ್ತರನ್ನ ದೊಡ್ಡ ಮಟ್ಟದಲ್ಲಿ ಗುರುತಿಸಲು ಪ್ರಯತ್ನ ಪಡಬೇಕು ಎಂಬ ಕಿವಿಮಾತು ಹೇಳಿದರು.
ಯಕ್ಷಗಾನ ಪೋಷಕ, ಕೊಡುಗೈ ದಾನಿ ಹೆಗ್ಗುoಜೆ ಪಂಚಾಯತ್ ನ ಜನಪ್ರಿಯ ಸದಸ್ಯ ಗುರುಪ್ರಸಾದ್ ಅವರನ್ನ ಸನ್ಮಾನಿಸಿ ಅವರ ಜನಪರ ಸೇವೆಯನ್ನ ಗುರುತಿಸಲಾಯಿತು. ವೇದಿಕೆಯಲ್ಲಿ ಸುರೇಶ್ ಕುಲಾಲ ಹಂದಿಗದ್ದೆ, ಭಾಗವತ ಸುರೇಶ್ ರಾವ್, ಯಕ್ಷಗಾನ ಕಲಾ ಪ್ರೇರಪಕರುಗಳಾದ ಕೃಷ್ಣ ಶೆಟ್ಟಿ, ರಾಮ ಶೆಟ್ಟಿ, ಜಯಕರ ಪೂಜಾರಿ, ವಿಠ್ಠಲ್ ಪೂಜಾರಿ, ಶಂಕರ ಕುಲಾಲ, ಹರೀಶ್ ಸಾಲ್ಯಾನ್, ರಾಘವೇಂದ್ರ ಪೂಜಾರಿ, ಗುರುಪ್ರಸಾದ್, ಗೋಪಿನಾಥ್ ಕಾಮತ್, ಶ್ರೀನಿವಾಸ್ ಪೂಜಾರಿ, ಪ್ರಸಂಗಕರ್ತ ಜಿ ಕೆ ಸಾಲ್ಯಾನ್ ಬೋಂದೆಲ್, ಡಾ ಜಿ.ಕೆ ಭಟ್ ಸಂಕಬಿತ್ತಿಲು, ಕಾಡೋರು ಗ್ರಾಮ ಪಂಚಾಯತ್ ಸದಸ್ಯ ಸತೀಶ್ ಕುಲಾಲ ನಡೂರು, ಮೇಳದ ಹಿರಿ ಕಿರಿಯ ಕಲಾವಿದರಸಹಿತ ಊರ ಪರ ಊರ ಯಕ್ಷಗಾನ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದರು.
–