ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಹವ್ಯಾಸಿ ಯಕ್ಷಗಾನ ರಂಗದಲ್ಲಿ ಎಲೆಮರೆಯ ಕಾಯಿಯಂತೆ ದುಡಿದ ಕಲಾಸಾಧಕ ಅಸೈಗೋಳಿ ವೆಂಕಪ್ಪ ಮಾಸ್ಟರ್ ಅವರಿಗೆ ‘ಯಕ್ಷಧ್ರುವ ಪಟ್ಲ ಫೌಂಡೇಷನ್’ನ 2019ನೇ ಸಾಲಿನ ‘ಯಕ್ಷಧ್ರುವ ಕಲಾ ಗೌರವ’ ಪುರಸ್ಕೃತರಾಗಿದ್ದಾರೆ.
ಜೂ. 2ರಂದು ಅಡ್ಯಾರ್ನಲ್ಲಿರುವ ಅಡ್ಯಾರ್ ಗಾರ್ಡನ್ನಲ್ಲಿ ನಡೆದ `ಯಕ್ಷಧ್ರುವ ಪಟ್ಲ ಸಂಭ್ರಮ -2019 ಕಾರ್ಯಕ್ರಮದಲ್ಲಿ ಈ ಗೌರವ ಪ್ರದಾನ ಮಾಡಲಾಯಿತು. ಈ ಪುರಸ್ಕಾರ ಪಡೆದ ಅಸೈಗೋಳಿ ವೆಂಕಪ್ಪ ಮಾಸ್ಟರ್ ಹವ್ಯಾಸಿ ಯಕ್ಷರಂಗದ ಮಹನೀಯರಲ್ಲಿ ಒಬ್ಬರು.
ದಕ್ಷಿಣ ಕನ್ನಡದ ಮಂಜನಾಡಿ ಗ್ರಾಮದ ಗಂಗರಮಜಲು ಎಂಬಲ್ಲಿ ಸೋಮಯ ಮೂಲ್ಯ ಮತ್ತು ಕೊರೊಪೊಳು ದಂಪತಿಯ ಪುತ್ರರಾಗಿ 1938ರಲ್ಲಿ ಜನಿಸಿದ ವೆಂಕಪ್ಪ ಮಾಸ್ಟರ್, ನರಿಂಗಾನ ಪ್ರಾಥಮಿಕ ಶಾಲೆ, ಮುಡಿಪು ಶ್ರೀ ಭಾರತಿ ಕಿರಿಯ ಪ್ರಾಥಮಿಕ ಶಾಲೆ ಮತ್ತು ಕೈರಂಗಳ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಎಂಟನೇ ತರಗತಿಯವರೆಗೆ ಕಲಿತರು. 1953-55ರವರೆಗೆ ಕೊಡಿಯಾಲ್ಬೈಲ್ನ ಬುನಾದಿ ಶಿಕ್ಷಣ ತರಬೇತಿ ಶಾಲೆಯಲ್ಲಿ ಶಿಕ್ಷಕ ತರಬೇತಿ ಪಡೆದು 1956ರಲ್ಲಿ ಆಸೈಗೋಳಿ ವಿದ್ಯೋದಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ವೃತ್ತಿ ಆರಂಭಿಸಿದರು.
ವೆಂಕಪ್ಪ ಮಾಸ್ಟರ್ ಹಲವು ಧರ್ಮಗಳ ಬಗೆಗಿನ ಸಾಹಿತ್ಯವನ್ನೂ ಸಾಕಷ್ಟು ಅಧ್ಯಯನ ಮಾಡಿದ್ದಾರೆ. ‘ಯಕ್ಷಗಾನ ನೋಡುತ್ತಾ ನೋಡುತ್ತಾ ಅದರ ಬಗ್ಗೆ ಆಸಕ್ತಿ ಹೆಚ್ಚಿ ಗೆಜ್ಜೆ ಕಟ್ಟುವಂತಾಯಿತು. ಯಕ್ಷಗಾನದ ಮೂಲಕವೇ ಓದುವ ಜ್ಞಾನ ಸಂಗ್ರಹದ ತುಡಿತ ಹೆಚ್ಚಿ ಅನೇಕ ಪುಸ್ತಕ ಸಂಗ್ರಹಕ್ಕೆ ದಾರಿಯಾಯಿತು. ಯಕ್ಷಗಾನ ಪಾಮರರ ಕಲೆ. ಪ್ರೇಕ್ಷಕನಿಗೆ ಸರಿಯಾದ ಶಿಕ್ಷಣ ಸಿಗುವುದಕ್ಕೆ ಈ ಕಲೆ ಉಪಯುಕ್ತ ಎನ್ನುವುದು ನನ್ನ ನಂಬಿಕೆ’ ಎನ್ನುವ ಅವರು ಯಕ್ಷಗಾನದ ಬಗ್ಗೆ ಅಪಾರ ಆಸಕ್ತಿ ಹೊಂದಿ ಬಣ್ಣಗಾರಿಕೆ ಮತ್ತು ವೇಷಗಾರಿಕೆಯಲ್ಲಿ ಬಹಳಷ್ಟು ಸಾಧನೆ ಮಾಡಿದ್ದಾರೆ.
ಕೈರಂಗಳ ಶ್ರೀ ಗೋಪಾಲ ಕೃಷ್ಣ ಯಕ್ಷಗಾನ ಸಂಘದ ನಾಟ್ಯ ಗುರುಗಳಾದ ಬಜಾಲ್ ಗೋಪಾಲರಿಂದ, ಬಾಯರು ಐತಪ್ಪ ಶೆಟ್ಟಿ ಅವರಿಂದ, ಹೊಸಹಿತ್ಲು ಮಹಾಲಿಂಗ ಭಟ್ಟರಿಂದ ಮತ್ತು ಆನೆಗುಂಡಿ ಗಣಪತಿ ಭಟ್ಟರಿಂದ ಯಕ್ಷಗಾನ ನಾಟ್ಯ ತರಬೇತಿ ಪಡೆದು ರಂಗಸ್ಥಳದಲ್ಲಿ ಮೆರೆದರು. ಸುಮಾರು 61 ವರ್ಷಗಳ ಕಾಲ ಯಕ್ಷಗಾನ ಸೇವೆ ಸಲ್ಲಿಸಿದ ಹಿರಿಮೆ ಅವರದು.
ಮಂಗಳೂರು ವಿ.ವಿ ಆರಂಭವಾಗುವ ಕಾಲಕ್ಕೆ ಅವಿವಾಹಿತರಾಗಿದ್ದ ಇವರು, ವಿದ್ಯಾರ್ಥಿಗಳಿಗೆ ವಾಸ್ತವ್ಯದ ಕೊರತೆ ಕಂಡಾಗ ತಮ್ಮದೇ ಮನೆಯನ್ನು ಅವರಿಗೆ ನೀಡಿದ್ದರು. ಅಂದು ಅವರ ಮನೆಯಲ್ಲಿ ಇದ್ದು ಕಲಿತ ವಿದ್ಯಾರ್ಥಿಗಳು ಇಂದು ಸಮಾಜದಲ್ಲಿ ಗೌರವ ಸ್ಥಾನದಲ್ಲಿದ್ದು, ಈಗಲೂ ವೆಂಕಪ್ಪ ಮಾಸ್ಟರರ ಸೇವಾ ಗುಣವನ್ನು ನೆನಪಿಸಿಕೊಳ್ಳುತ್ತಾರೆ.
ಯುವಕರ ಬಗ್ಗೆ ಕಾಳಜಿ ಇರುವ ಅವರು ಮಂಗಳೂರು-ಕಾಸರಗೋಡು ವ್ಯಾಪ್ತಿಯಲ್ಲಿ ಅನೇಕ ಯುವ ನಾಯಕತ್ವ ತರಬೇತಿ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ. ನಿರಂತರ ಓದು ಮತ್ತು ಸಾಹಿತ್ಯಾಸಕ್ತಿಯಿಂದ ಅನೇಕ ಕೆಲಸಗಳನ್ನು ಮಾಡಿದ್ದಾರೆ. ಕನ್ನಡ ಮತ್ತು ತುಳು ಭಾಷೆಗಳಲ್ಲಿ ಅವರು ಬರೆದಿರುವ ಅನೇಕ ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 15,000 ತುಳು ಗಾದೆಗಳನ್ನು ಸಂಪಾದಿಸಿದ್ದಾರೆ. ‘ಕುಂಬಾರ ಪರ್ವ’ ಇತ್ಯಾದಿ ಪ್ರಸಂಗಗಳನ್ನೂ ರಚಿಸಿದ್ದಾರೆ. ಆಸಕ್ತರಿಗಾಗಿ ತಮ್ಮ ಮನೆಯಲ್ಲೇ ಸುಮಾರು 5,000 ಪುಸ್ತಕಗಳುಳ್ಳ ಸುಸಜ್ಜಿತ ಗ್ರಂಥಾಲಯವನ್ನು ನಿರ್ಮಿಸಿದ್ದಾರೆ.
ವೆಂಕಪ್ಪ ಮಾಸ್ಟರ್ ಅವರ ಸಮಾಜಮುಖಿ ಸಾಧನೆಯನ್ನು ಗುರುತಿಸಿ ಕಿನ್ಯ ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಯುವಕ ಮಂಡಲ, ಕಿನ್ಯಾ ಕೇಶವ ಶಿಶು ಮಂದಿರ ಸಂಸ್ಥೆ, ತೊಕ್ಕೊಟ್ಟು ಭಗತ್ ಸಿಂಗ್ ಸೇವಾ ಪ್ರತಿಷ್ಠಾನ, ದಕ್ಷಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಅನೇಕ ಸಂಘ ಸಂಸ್ಥೆಗಳು ಸನ್ಮಾನಿಸಿವೆ.
ಆಡಂಬರದ ಬಗ್ಗೆ ಬೇಸರ : ಯಕ್ಷಗಾನ ಕಲಾಸಕ್ತರಿಗಾಗಿ ವೆಂಕಪ್ಪ ಮಾಸ್ಟರ್ 1963ರಲ್ಲಿ ‘ಶ್ರೀ ಗಣೇಶ ಸಂಘ’ವನ್ನು ಆಸೈಗೋಳಿಯಲ್ಲಿ ಸ್ಥಾಪಿಸಿದರು. 1975ರಲ್ಲಿ `ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಯುವಕ ಮಂಡಲ’ವನ್ನು ಕಿನ್ಯದಲ್ಲಿ ಸ್ಥಾಪಿಸಿದರು. ಶಿಕ್ಷಣ ಕ್ಷೇತ್ರದಲ್ಲಿ ಯಕ್ಷಗಾನ ಕಲೆಯ ಬೆಳವಣಿಗೆಗಾಗಿ ವಿಶ್ವಮಂಗಳ ಪ್ರಾಥಮಿಕ ಶಾಲೆ ಕೊಣಾಜೆ, ಗುಡ್ಡೆ ಹಿರಿಯ ಪ್ರಾಥಮಿಕ ಶಾಲೆ ತಲಪಾಡಿ ಮತ್ತು ಸಜಿಪ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನಾಟ್ಯ ಕಲಿಸಿ, ಅವರು ನೀಡಿದ ಪ್ರದರ್ಶನವು ಜನ ಮೆಚ್ಚುಗೆ ಗಳಿಸಿದೆ. ಯಕ್ಷಗಾನ ರಂಗವನ್ನು ಉತ್ಸಾಹದಲ್ಲಿ ಗಮನಿಸುವ ಇವರು, ‘ಯಕ್ಷಗಾನದಲ್ಲಿ ಹಿಂದಿನ ಕಾಲದ ದೈವಿಕತೆ ಮರೆಯಾಗಿ ಆಡಂಬರವೇ ಪ್ರಧಾನವಾಗುತ್ತಿದೆ. ಯಕ್ಷಗಾನದ ತಾಂತ್ರಿಕತೆಯಲ್ಲಿ ದೊಡ್ಡ ಬದಲಾವಣೆ ಮಾಡಿ, ಕೇವಲ ಮನರಂಜನೆಗೆ ಅದು ಬಳಕೆಯಾಗುತ್ತಿರುವುದರ ಬಗ್ಗೆ ಬೇಸರವಿದೆ’ ಎನ್ನುತ್ತಾರೆ.
(ಚಿತ್ರ-ಮಾಹಿತಿ ಕೃಪೆ : ರಾಧಿಕಾ ಕುಂದಾಪುರ)