ಭೀಮ ಕುಂಬಾರನು ತಿರುಪತಿಗೆ ಅನತಿ ದೂರದಲ್ಲಿ ವಾಸವಾಗಿದ್ದನು. ಈತನು ವೃತ್ತಿಯಲ್ಲಿ ಕುಂಬಾರ. ಗಂಡ-ಹೆಂಡಿರಿಬ್ಬರು ತಿರುಪತಿ ತಿಮ್ಮಪ್ಪನ ಭಕ್ತರಾಗಿದ್ದರು. ಇವರು ತಮ್ಮ ಮನೆಯಲ್ಲಿ ಮಣ್ಣಿನಿಂದ ಶ್ರೀನಿವಾಸ ದೇವರ ವಿಗ್ರಹವನ್ನು ಮಾಡಿಟ್ಟುಕೊಂಡು, ಮಣ್ಣಿನಿಂದ ಮಾಡಿದ ಕಮಲ ಪುಷ್ಪಗಳಿಂದ ಆ ದೇವರನ್ನು ಪೂಜಿಸುತ್ತಿದ್ದರು. ಅದೇ ಕಾಲದಲ್ಲಿ ಆ ಪ್ರಾಂತ್ಯವನ್ನು ತೊಂಡಮಾನ್ ರಾಜನು ಆಳುತ್ತಿದ್ದನು. ಅವನು ತಿರುಪತಿಯ ವೆಂಕಟೇಶನ ಭಕ್ತ. ಭಗವಂತನ ಪಾದಕಮಲಗಳನ್ನು ಚಿನ್ನದ ಕಮಲಗಳಿಂದ ಪೂಜಿಸಬೇಕೆಂದು ಅವನಿಗೆ ಒಮ್ಮೆ ಅಭಿಲಾಷೆಯಾಯಿತು.
ಅರಸನಿಗೇನು ಕಡಿಮೆ? ಅವನ ಆಶೆ ಬೇಗನೆ ಈಡೇರಿತು ಆದರೆ ಮಾರನೆಯ ಬೆಳಿಗ್ಗೆ ಬಂದು ನೋಡಿದರೆ ರಾಜನು ಅಪರ್ಿಸಿದ ಬಂಗಾರದ ಕಮಲಗಳು ಪೀಠದ ಕೆಳಗೆ ಬಿದ್ದಿದ್ದವು ಪಾದಗಳ ಸಮೀಪದಲ್ಲಿ ಮಣ್ಣಿನಿಂದ ಕೂಡಿದ ಸುಂದರವಾದ ಕಮಲಗಳು ಮುದ್ದಾಗಿ ಮಲಗಿವೆ. ಅದನ್ನು ಕಂಡು ತೊಂಡುಮಾನನಿಗೆ ಅಚ್ಚರಿಯಾಯಿತು. ಇದು ಒಂದು ದಿನವಲ್ಲ, ಪ್ರತಿದಿನವೂ ಹಾಗೆ ಆಯಿತು. ಅರಸನು ಕಾವಲಿರಿಸಿ ಪರಿಶೀಲಿಸಿದ. ಮಣ್ಣಿನ ಹೂಗಳನ್ನು ಯಾರು ಇಡುತ್ತಾರೆ ಎಂಬ ರಹಸ್ಯ ತಿಳಿಯಲಿಲ್ಲ ಆಗ ಯಾರೋ ಸೂಚನೆ ಕೊಟ್ಟರು. “ತಾವು ಆಳುವ ಪ್ರಾಂತದಲ್ಲಿ ಯಾರಾದರೂ ಶ್ರೀನಿವಾಸ ದೇವರಿಗೆ ಮಣ್ಣಿನ ಕಮಲ ಪುಷ್ಪಗಳನ್ನು ಅಪರ್ಿಸುತ್ತಾರೋ ಎಂಬುದನ್ನು ವಿಚಾರಿಸಿ ನೋಡಿರಿ” ಎಂದರು.
ರಾಜನು ಕೂಡಲೇ ಗೂಢಾಚಾರರನ್ನು ಕಳಿಸಿ ಪತ್ತೆ ಹಚ್ಚಲು ತಿಳಿಸಿದನು ಅದರಂತೆ ಗೂಢಚಾರರು ರಾಜ್ಯದ ಮೂಲೆ ಮೂಲೆಗಳಿಗೆ ತಿರುಗಿ ಪತ್ತೆ ಹಚ್ಚಿದರು. ಭೀಮ ಕುಂಬಾರನು ತನ್ನ ಹೆಂಡತಿಯೊಂದಿಗೆ ನಿತ್ಯವೂ ಮಣ್ಣಿನ ಶ್ರೀನಿವಾಸ ಮೂರುತಿಗೆ ಮಣ್ಣಿನ ಕಮಲಗಳನ್ನು ಅಪರ್ಿಸುವ ವಿಷಯವನ್ನು ರಾಜನಿಗೆ ವರದಿ ಮಾಡಿದರು.
ದೊರೆ ತಾನೇ ಖುದ್ದಾಗಿ ಪರಿಶೀಲಿಸಲು ಭೀಮ ಕುಂಬಾರನ ಮನೆಗೆ ತೆರಳಿ ಅವನ ನಿರಾಡಂಬರ ಭಕ್ತಿಯನ್ನು ಕಂಡು “ಇಂತಹ ಭಕ್ತಿಯನ್ನು ನಾನು ಇದುವರೆಗೂ ಕಂಡಿಲ್ಲ” ಎಂದು ಉದ್ಘಾರ ತೆಗೆದನು ಭೀಮ ಕುಂಬಾರನ ಭಕ್ತಿಗೆ ತೊಂಡಮಾನನು ಮಾರುಹೋಗಿ ಅವನಿಗೆ ಶರಣಾದನು.


