ತುಳು ಚಿತ್ರರಂಗದಲ್ಲಿ ಈಗ ಒಂದಷ್ಟು ಹೊಸಬಗೆಯ ಚಿತ್ರಗಳು ಬರುತ್ತಿವೆ. ತುಳುನಾಡಿನ ಜನ ಕೂಡ ಸಿನಿಮಾದತ್ತ ಹೆಚ್ಚು ಒಲವು ತೋರಿದ್ದೂ ಉಂಟು. ಈಗ ಹೊಸ ಸುದ್ದಿಯೆಂದರೆ, ಇದೇ ಮೊದಲ ಬಾರಿಗೆ ತುಳು ಚಿತ್ರರಂಗದಲ್ಲಿ (ಕುಲಾಲ ಸಮಾಜದ) ಮಹಿಳೆಯೊಬ್ಬರು ನಿರ್ದೇಶನದ ಜತೆಯಲ್ಲಿ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ನೃತ್ಯ, ವಸ್ತ್ರವಿನ್ಯಾಸ, ನಿರ್ಮಾಣ ವಿನ್ಯಾಸ, ಪ್ರಚಾರ ವಿನ್ಯಾಸ ಮತ್ತು ಕಲಾ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿ ದಾಖಲೆ ಎನಿಸಿದ್ದಾರೆ! ಅಂದಹಾಗೆ, ಅವರ ಹೆಸರು ಲಲಿತಶ್ರೀ. ಅವರ ಚೊಚ್ಚಲ ನಿರ್ದೇಶನದ ಹೆಸರು ‘ರಾರಾ’. ಇದು ತುಳು ಭಾಷೆಯಲ್ಲಿ ಮೂಡಿಬಂದಿರುವ ಚಿತ್ರ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಸದ್ಯಕ್ಕೆ ರಿಲೀಸ್ಗೆ ಅಣಿಯಾಗುತ್ತಿದೆ.
ಅಂದಹಾಗೆ, ಈ ಚಿತ್ರವನ್ನು ಪತ್ರಕರ್ತ ಕಮ್ ನಿರ್ದೇಶಕ ಎನ್ನಾರ್ ಕೆ ವಿಶ್ವನಾಥ್ ನಿರ್ಮಾಣ ಮಾಡಿದ್ದಾರೆ. ನಿರ್ದೇಶಕಿ ಲಲಿತಶ್ರೀ ಅವರ ಸಹೋದರಿ ಅನ್ನೋದು ಮತ್ತೊಂದು ವಿಶೇಷ. ತಮ್ಮ ಚೊಚ್ಚಲ ನಿರ್ದೇಶನದ ಚಿತ್ರದ ಬಗ್ಗೆ ಹೇಳಲೆಂದೇ, ತಮ್ಮ ತಂಡದೊಂದಿಗೆ ಪತ್ರಕರ್ತರ ಮುಂದೆ ಬಂದಿದ್ದರು ಲಲಿತಶ್ರೀ. ‘ಚಿಕ್ಕಂದಿನಲ್ಲಿ ಅಣ್ಣನ ಜತೆ ಬರಹದಲ್ಲಿ ತೊಡಗುತ್ತಿದ್ದೆ. ಹಲವು ಧಾರಾವಾಹಿ, ಸಿನಿಮಾಗಳಲ್ಲೂ ಅಣ್ಣನ ಜತೆ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದ್ದೆ. ಎಲ್ಲೋ ಒಂದು ಕಡೆ ಸಿನಿಮಾ ಮಾಡಬೇಕು ಎಂಬ ಆಸೆ ಇದ್ದರೂ, ಮನೆಯಲ್ಲಿ ಅಮ್ಮನಿಗೆ ಸಿನಿಮಾ ರಂಗ ಬೇಡ ಎನಿಸಿತ್ತು. ಹಾಗಾಗಿ, ಅಮ್ಮನ ಮಾತಿಗೆ ಗೌರವ ಕೊಟ್ಟು ಸುಮ್ಮನಿದ್ದೆ. ಆದರೆ, ಅಮ್ಮ ನಮ್ಮನ್ನಗಲುವ ಮುನ್ನ, ನೀನು ಸಿನಿಮಾ ನಿರ್ದೇಶನ ಮಾಡು ಎಂದು ಹೇಳುವ ಮೂಲಕ ನನ್ನೊಳಗಿನ ಆಸೆಯನ್ನು ಚಿಗುರಿಸಿದರು. ಆ ಆಸೆಯೇ, ‘ರಾರಾ’ ಚಿತ್ರವಾಗಿದೆ.
ಇದೊಂದು ಹಾರರ್ ಚಿತ್ರ. ತುಳು ಚಿತ್ರರಂಗದಲ್ಲಿ ಒಂದು ಹೊಸ ಪ್ರಯೋಗ ಎನ್ನಬಹುದು. ರೆಗ್ಯುಲರ್ ಹಾರರ್ ಚಿತ್ರಗಳಿಗಿಂತಲೂ ವಿಭಿನ್ನವಾಗಿರುವಂತಹ ಚಿತ್ರ ಎನ್ನಲು ಕಾರಣ, ಇಲ್ಲಿ ತಾಂತ್ರಿಕತೆ ಹೊಸದಾಗಿದೆ. ಕಥೆ ಕೂಡ ಫ್ರೆಶ್ ಆಗಿದೆ. ಹಾರರ್ ಚಿತ್ರಗಳ ಚಿತ್ರೀಕರಣ ವೇಳೆ ತೊಂದರೆ ಆಗಿದ್ದನ್ನು ಕೇಳಿದ್ದೇನೆ. ಆದರೆ, ಅದ್ಯಾವುದನ್ನೂ ನಾನು ನಂಬುತ್ತಿರಲಿಲ್ಲ. ನನ್ನ ಚಿತ್ರದಲ್ಲೇ ಅಂತಹ ಅನೇಕ ಘಟನೆಗಳು ನಡೆದಿವೆ. ನಿಜಕ್ಕೂ ಅದು ಯಾರ ಕಾಟ ಅನ್ನೋದು ಈಗಲೂ ಗೊತ್ತಿಲ್ಲ. ಎಲ್ಲರಿಗೂ ಒಂದಿಲ್ಲೊಂದು ತೊಂದರೆಯಾಗಿದೆ. ಎಲ್ಲಾ ತೊಂದರೆ ಎದುರಿಸಿ, ಈ ಚಿತ್ರ ಮಾಡಿದ್ದೇವೆ. ನಿಮ್ಮೆಲ್ಲರ ಸಹಕಾರ ನಮಗಿರಲಿ’ ಅಂದರು ಲಲಿತಶ್ರೀ.
ನಿರ್ಮಾಪಕ ಎನ್ನಾರ್ಕೆ ವಿಶ್ವನಾಥ್, ಸಿನಿಮಾ ಸಹವಾಸವೇ ಬೇಡ ಅಂದುಕೊಂಡು, ಸುಮ್ಮನಿದ್ದರಂತೆ. ಅವರ ಸಹೋದರಿ ಈ ಕಥೆ ಹೇಳಿದಾಗ, ಒಳ್ಳೇ ಸ್ಕ್ರಿಪ್ಟ್ ಇದ್ದುದರಿಂದ, ನೀನೇ ನಿರ್ದೇಶನ ಮಾಡು, ನಾನು ನಿರ್ಮಾಣ ಮಾಡ್ತೀನಿ ಅಂತ ಮುಂದೆ ಬಂದು ಈ ಚಿತ್ರ ಮಾಡಿದ್ದಾರಂತೆ. ಚಿತ್ರ ಮಾಡುವಾಗ, ಸಾಕಷ್ಟು ಸಮಸ್ಯೆಗಳು ಎದುರಾಗಿದ್ದನ್ನು ಹೇಳುವ ಅವರು, ‘ಈ ಚಿತ್ರಕ್ಕಾಗಿ ಪಡದ ಕಷ್ಟವಿಲ್ಲ. ಆದರೂ, ತಂಗಿಗಾಗಿ ಈ ಚಿತ್ರ ಮಾಡಿದ್ದೇನೆ. ಅಮ್ಮನ ಹಾಗೂ ತಂಗಿಯ ಆಸೆ ಈಡೇರಿಸಿದ್ದೇನೆ’ ಎನ್ನುತ್ತಾರೆ ಅವರು.
ನಾಯಕಿ ಸುವರ್ಣ ಶೆಟ್ಟಿಗೆ ಇದು ಮೊದಲ ಚಿತ್ರವಂತೆ. ಧಾರಾವಾಹಿಗಳಲ್ಲಿ ನಟಿಸಿರುವ ಅವರಿಗೆ ಸಿನಿಮಾ ಮಾಡುವ ಆಸೆ ಇದ್ದರೂ, ಅವಕಾಶ ಇರಲಿಲ್ಲವಂತೆ. ಲಲಿತಶ್ರೀ ಅವರು ಕರೆದು ಒಂದೊಳ್ಳೆಯ ಅವಕಾಶ ಕೊಟ್ಟಿದ್ದನ್ನು ನೆನಪಿಸಿಕೊಳ್ಳುತ್ತಾರೆ ಅವರು.
ನಾಯಕ ಮನೋಜ್ಗೂ ಇದು ಮೊದಲ ಚಿತ್ರ. ಅವರಿಗಿಲ್ಲಿ ರಫ್ ಅಂಡ್ ಟಫ್ ಪಾತ್ರವಿದೆಯಂತೆ. ಇನ್ನು, ದಿಲೀಪ್ ಪೈ ಅವರಿಲ್ಲಿ ವಿಶೇಷ ಅತಿಥಿ ಪಾತ್ರ ಮಾಡಿದ್ದಾರಂತೆ. ಅವರಿಗೂ ಇಲ್ಲಿ ಫೈಟ್ ಮಾಡುವಾಗ, ಕೆಲವೊಂದು ಸಮಸ್ಯೆ ಎದುರಾಯಿತಂತೆ. ಅದು ‘ರಾ ರಾ’ ಸಿನಿಮಾ ಎಫೆಕ್ಟ್ ಅಂತ ಆಮೇಲೆ ಗೊತ್ತಾಯಿತಂತೆ. ಕೊನೆಗೆ ಸಮಸ್ಯೆಗೊಂದು ಪರಿಹಾರ ಕಂಡುಕೊಂಡಿದ್ದರಿಂದ ಏನೂ ತೊಂದರೆ ಆಗಿಲ್ಲ ಅಂದರು ದಿಲೀಪ್. ಈ ಚಿತ್ರದಲ್ಲಿ ಜಯಕರ್ನಾಟಕದ ರಾಜ್ಯ ವಕ್ತಾರ ಪ್ರಕಾಶ್ ರೈ ಕೂಡ ಮಿನಿಸ್ಟರ್ ಆಗಿ ಕಾಣಿಸಿಕೊಂಡಿದ್ದಾರೆ.
( ಕೃಪೆ: ಉದಯವಾಣಿ)