ಐತಿಹಾಸಿಕ ಕುಂಬಾರ ಮನೆತನದಲ್ಲಿ ತಯಾರಿಸಿದ ಮಣ್ಣೆತ್ತು ಪೂಜಿಸಿದ ರೈತ ಮಹಿಳೆ ಗಂಡನನ್ನು ಬದುಕಿಸಿಕೊಂಡಳು ಎಂಬ ನಂಬಿಕೆಯಿಂದ ಕುಂಬಾರರು ಮಣ್ಣೆತ್ತುಗಳನ್ನು ತಯಾರಿಸುತ್ತ ಬಂದಿದ್ದೇವೆ…
ಲಿಂಗಸುಗೂರು: ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ರೈತ ಕುಟುಂಬ ಆಚರಿಸುವ ಮಣ್ಣೆತ್ತಿನ ಅಮಾವಾಸ್ಯೆ ಹಬ್ಬಕ್ಕಾಗಿ ಮಾರುಕಟ್ಟೆಯಲ್ಲಿ ಕುಂಬಾರಿಕೆ ಮನೆತನದವರು ತಯಾರಿಸಿದ ಮಣ್ಣೆತ್ತುಗಳಿಗೆ ಈಗ ಎಲ್ಲಿಲ್ಲದ ಬೇಡಿಕೆ.
‘ಮಣ್ಣೆತ್ತಿನ ಅಮಾವಾಸ್ಯೆಗಾಗಿ ಒಂದು ತಿಂಗಳ ಹಿಂದಿನಿಂದ ಸಂಪ್ರದಾಯಸ್ಥ ಕುಂಬಾರ ಮನೆತನದ ಸದಸ್ಯರು ಮಡಿವಂತಿಕೆಯಿಂದ ಕೆರೆಯ ಮಣ್ಣು ತಂದು ವೈವಿಧ್ಯಮಯ ಹಾಗೂ ವಿವಿಧ ಶೈಲಿಯ ಎತ್ತುಗಳನ್ನು ತಯಾರಿಸಿದ್ದಾರೆ. ಕೆಲ ರೈತರು ಆಯಗಾರ(ದವಸ ಧಾನ್ಯಗಳಿಗೆ ಮಾತ್ರ ಮಾರಾಟ) ಕುಟುಂಬದವರ ಬಳಿಯೇ ಮಣ್ಣಿನ ಎತ್ತು ಖರೀದಿಸಿ ಪೂಜಿಸುವ ಪದ್ಧತಿ ಇನ್ನೂ ಜೀವಂತವಾಗಿದೆ’ ಎಂದು ರೈತ ಅಮರಣ್ಣ ವಿವರಿಸುತ್ತಾರೆ.
‘ಜೂನ್ 24 ಮಣ್ಣೆತ್ತಿನ ಅಮಾವಾಸ್ಯೆ ಇರುವುದರಿಂದ ಆಯಗಾರಿಕೆಗೆ ಒಪ್ಪಂದ ಮಾಡಿಕೊಂಡ ಕುಂಬಾರಿಕೆ ಕುಟುಂಬಗಳು ಈಗಾಗಲೇ ರೈತರ ಮನೆಗಳಿಗೆ ತೆರಳಿ ಸಜ್ಜೆ, ಜೋಳ, ಇತರೆ ಕಾಳುಕಡಿಗೆ ಜೋಡೆತ್ತು ನೀಡುತ್ತಿರುವುದು ಕಂಡು ಬಂದಿದೆ. ಮಾರುಕಟ್ಟೆಯಲ್ಲಿ ಮಣ್ಣೆತ್ತುಗಳ ತಯಾರಿಕೆ ಕೊರತೆಯಿಂದಾಗಿ ಒಂದು ಜೋಡೆತ್ತು ಮಾರಾಟಕ್ಕೆ ₹30 ರಿಂದ 40 ಇದೆ’ ಎಂದು ವಿರೂಪಾಕ್ಷಪ್ಪ ಕರಡಕಲ್ ಹೇಳಿದರು.
‘ಐತಿಹಾಸಿಕ ಕುಂಬಾರ ಮನೆತನದಲ್ಲಿ ತಯಾರಿಸಿದ ಮಣ್ಣೆತ್ತು ಪೂಜಿಸಿದ ರೈತ ಮಹಿಳೆ ಗಂಡನನ್ನು ಬದುಕಿಸಿಕೊಂಡಳು ಎಂಬ ನಂಬಿಕೆಯಿಂದ ಕುಂಬಾರರು ಮಣ್ಣೆತ್ತುಗಳನ್ನು ತಯಾರಿಸುತ್ತ ಬಂದಿದ್ದೇವೆ. ಕುಂಬಾರಿಕೆ ಕುಲಕಸುಬಿನ ಜತೆ ಈ ಸಾಂಪ್ರದಾಯಿಕ ಆಚರಣೆಯನ್ನು ಮುಂದುವರೆಸಿಕೊಂಡು ಬಂದಿದ್ದೇವೆ’ ಎಂದು ಗೌರಮ್ಮ ಕುಂಬಾರ ವಿವರಿಸಿದರು.
ಕರಡಕಲ್ ಗ್ರಾಮದ ಮನೆತನಕ್ಕೆ ಬಂದಾಗಿನಿಂದ ನಾನು, ಮಣ್ಣೆತ್ತಿನ ಅಮಾವಾಸ್ಯೆಗೂ ಮುನ್ನ ಕೆರೆಯ ಮಣ್ಣು ತಂದು ಹದಿನೈದು ದಿನ ನೆನೆಹಾಕಿ ಮಣ್ಣಿನೊಂದಿಗೆ ಹದಕ್ಕೆ ತಕ್ಕಷ್ಟು ಸಣ್ಣ ಮರಳು, ಬೂದಿ ಬಳಸಿ ಮಣ್ಣೆತ್ತು ತಯಾರಿಸುತ್ತಿದ್ದೇವೆ. ಇದರಿಂದ ಲಾಭ ಏನು ಇಲ್ಲ. ಆಯಗಾರ ಕುಟುಂಬಸ್ಥರ ವಿಶ್ವಾಸಕ್ಕೆ ಮಣ್ಣೆತ್ತು ಮಾಡುತ್ತೇವೆ ಎಂದು ಸಿದ್ಧಲಿಂಗಪ್ಪ ಕುಂಬಾರ ವಿವರಿಸಿದರು.
ವಾಸ್ತವವಾಗಿ ಭಾರತೀಯ ಸಂಸ್ಕೃತಿಯಲ್ಲಿ ರೈತರು ಮೃತ್ತಿಕೆಯನ್ನು (ಮಣ್ಣು) ನಂಬಿ ಬದುಕು ಕಟ್ಟಿಕೊಂಡ ವರು. ಅಂತೆಯೆ ಮಣ್ಣೆತ್ತಿನ ಆಚರಣೆಯಂತೆ ನಾಗರ, ಗಣೇಶ ಇತರೆ ಆಚರಣೆಗಳು ಅಸ್ಥಿತ್ವದಲ್ಲಿವೆ. ಮಣ್ಣಿನ ಋಣ ಮತ್ತು ಎತ್ತಿನ ಋಣ ತೀರಿಸಲು ಹಿರಿಯರು ಈ ಪದ್ಧತಿ ಹಾಕಿಕೊಟ್ಟಿದ್ದಾರೆ ಎಂದು ಸಾಹಿತಿ ಗಿರಿರಾಜ ಹೊಸಮನಿ ಅಭಿಪ್ರಾಯಪಟ್ಟರು.