ಕಾಸರಗೋಡು(ಕುಲಾಲ ವರ್ಲ್ಡ್ ಡಾಟ್ ಕಾಮ್ ): ಪ್ರಕೃತಿಯ ಆರಾಧನೆಯ ಮಹತ್ವವನ್ನು ಸಾರುವ ತುಳುನಾಡಿನಲ್ಲಿ ನಾಗಾರಾಧನೆ ಬಹುವಿಶೇಷವಾಗಿದೆ. ಇದು ಇಲ್ಲಿನ ಸಂಸ್ಕೃತಿಯ ಅಭಿಭಾಜ್ಯ ಅಂಗವಾಗಿದೆ. ಇದೊಂದು ಗ್ರಾಮೀಣ ಜನರ ನಂಬಿಕೆಯಾಗಿ ಉಳಿಯದೇ ಎಲ್ಲರ ಮನೆಯಲ್ಲಿ ಆಳವಾಗಿ ಬೇರೂರಿದೆ. ಇಲ್ಲಿನ ಜನರು ಕಲಿಯುಗದಲ್ಲಿ ಜೀವಂತ ದೇವರೆಂದೇ ಆರಾಧಿಸುವುದು ನಾಗನನ್ನು. ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯಲ್ಲಿ ನಾಗಾರಾಧನೆ ವಿಶೇಷ ಸ್ಥಾನಮಾನ ನೀಡಲಾಗಿದೆ. ನಾಗಬನಗಳಲ್ಲಿ ನಾಗ ಆರಾಧನೆ, ನಾಗಮಂಡಲ, ಆಶ್ಲೇಷಾ ಬಲಿ, ನಾಗದರ್ಶನ ಹೀಗೆ ಹತ್ತು ಹಲವು ಆಚರಣೆಗಳನ್ನು ಇಲ್ಲಿ ಕಾಣಬಹುದು. ಈ ತುಳುನಾಡಿನ ನಾಗಾರಾಧನೆಯಲ್ಲಿ ಸೇರಿರುವ ನಾಗಮಂಡಲ ಹಾಗೂ ನಾಗದರ್ಶನವನ್ನು ಸಾಮಾನ್ಯವಾಗಿ ವೈದಿಕರ ಮೂಲಕ ಮಾಡಿಸುವುದು ಪದ್ಧತಿ. ಇದನ್ನು ನಡೆಸಲು ನಡೆಸಲು ವೈದಿಕರೇ ಆಗಬೇಕೇ ? ಖಂಡಿತಾ ಇಲ್ಲ. ಅಪರೂಪವೆಂಬಂತೆ ಇತರ ಜಾತಿಯ ವ್ಯಕ್ತಿಗಳೂ ನಾಗದರ್ಶನ ಮಾಡುವುದನ್ನು ಕಾಣುತ್ತೇವೆ. ಇತ್ತೀಚೆಗೆ ಮಂಜೇಶ್ವರ ವರ್ಕಾಡಿಯ ನಾಗಬನವೊಂದರಲ್ಲಿ ಮೂಲ್ಯ ಸಮುದಾಯದ ವ್ಯಕ್ತಿಯಿಂದ ನಾಗದರ್ಶನವು ಶೃದ್ಧಾ ಭಕ್ತಿಯಿಂದ ನಡೆಯಿತು.


