ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮ ಅದೆಷ್ಟೋ ಸಾಧನೆಗಳನ್ನು ಮಾಡಿದ ಪ್ರತಿಭಾ ಸಂಪನ್ನರನ್ನು ತನ್ನ ಮಡಿಲಿಗೇರಿಸಿಕೊಂಡಿದೆ. ಅವುಗಳಲ್ಲಿ ಕೆಲವು ಬೆಳಕಿಗೆ ಒಡ್ಡಿಕೊಳ್ಳದೆ ಎಲೆಮರೆ ಕಾಯಿಯಾಗಿವೆ. ಇನ್ನು ಕೆಲವು ಸೃಜನಶೀಲತೆ ಹೊರಸೂಸಿ ಪ್ರತಿಭೆ ಮೇಳೈಸುತ್ತವೆ. ಅಂತಹ ಪ್ರತಿಭಾ ಸಂಪನ್ನರಲ್ಲಿ ಮುಂಡ್ಕೂರು ಗ್ರಾಮದ “ದಡ್ಡು ಲಕ್ಷ್ಮೀನಿವಾಸ” ಮನೆತನದಲ್ಲಿ ಕುಂಬಾರಿಕೆಯ ವೃತ್ತಿಯನ್ನೇ ತನ್ನ ಕುಲಕಸುಬನ್ನಾಗಿ ಮಾಡಿ ಸಂತೃಪ್ತ ಜೀವನವನ್ನು ನಡೆಸಿಕೊಂಡು ಬಂದ ಪೂವ.ಬಿ.ಮೂಲ್ಯ ಮತ್ತು ಲಲಿತ ಮೂಲ್ಯ ದಂಪತಿಗಳಿಗೆ 21-07-1983 ರಲ್ಲಿ 7 ನೇ ಪುತ್ರರಾಗಿ ಜನ್ಮಪಡೆದ “ಮುಂಡ್ಕೂರಿನ ಮುತ್ತು ರಾಜೇಶ್ ಕುಲಾಲ್” ಚಿನ್ನದ ಪದಕಗಳೊಂದಿಗೆ ಹಾಗೂ ಇತರ ಹಲವಾರು ಪ್ರಶಸ್ತಿ ಪದಕಗಳನ್ನು ತನ್ನ ಮುಡಿಗೇರಿಸಿಕೊಂಡ “ಸಾಧನೆಗಳ ಸರದಾರ”.
ಇವರು ತನ್ನ ಕಿರಿಯ ಪ್ರಾಥಮಿಕ ಶಿಕ್ಷಣವನ್ನು ಕಜೆ ಶಾಲೆ, ಹಿರಿಯ ಪ್ರಾಥಮಿಕ ಶಿಕ್ಷಣವನ್ನು ಮುಂಡ್ಕೂರಿನಲ್ಲ್ಲಿ, ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಮುಂಡ್ಕೂರಿನ ವಿದ್ಯಾ ವರ್ಧಕ ಪದವಿಪರ್ವ ಕಾಲೇಜುನಲ್ಲಿ ಮುಗಿಸಿದರು. ನಂತರದ ದಿನಗಳಲ್ಲಿ ಸುಮಾರು 2 ವರ್ಷಗಳ ಕಾಲ ಸಚ್ಚರಿಪೇಟೆ ದೂರವಾಣಿ ಕೇಂದ್ರದಲ್ಲಿ ಲೈನ್ ಮ್ಯಾನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀ ಹೊನ್ನಪ್ಪ ಗೌಡರೊಂದಿಗೆ ಸಹಾಯಕರಾಗಿ ಸೇವೆ ಸಲ್ಲಿಸಿದರು.
ಹೀಗೆ ತನ್ನ ಬಾಲ್ಯದ ದಿನಗಳನ್ನು ದಡ್ಡು ಮನೆತನದಲ್ಲಿ ಕಳೆದ ಇವರು 2002ರಲ್ಲಿ ಮುಂಬಾಯಿಗೆ ಪ್ರಯಾಣ ಬೆಳೆಸಿದರು. ಅಲ್ಲಿ ತನ್ನ ಸಹೋದರ ಗಣೇಶ್ರವರಿದ್ದ ಶ್ರೀ ರಾಮ್ ಹೊಟೇಲ್ನಲ್ಲಿ ದುಡಿಮೆ ಮಾಡಿಕೊಂಡಿರುವಾಗಲೇ ಸಹೋದರ ಗಣೇಶ್ರವರು ತಮ್ಮನ ಉಜ್ವಲ ಭವಿಷ್ಯಕ್ಕೆ ನೀರೆರೆದು ತನ್ನ ತುಂಬು ಹೃದಯದ ಪ್ರೋತ್ಸಾಹ, ಸಹಕಾರವನ್ನಿತ್ತರು. ಅಂದಿನಿಂದಲೇ ತಾನು ಜೀವನದಲ್ಲಿ ಏನಾದರೊಂದು ಸಾಧನೆ ಮಾಡಲೇಬೇಕು ಎನ್ನುವ ಛಲದಿಂದ ಗಟ್ಟಿಯಾದ ನಿರ್ಧಾರವನ್ನು ಮಾಡಿಕೊಂಡು ತಾನು ದೈಹಿಕ ವ್ಯಾಯಾಮವನ್ನು ಕಲಿಯಬೇಕು ಎಂಬ ಹಂಬಲದಿಂದ ಆರೋಗ್ಯಯುತ ದೇಹ ನಿರ್ವಹಣೆಯ ಮೂಲ ಮಂತ್ರದೊಂದಿಗೆ ಆರಂಭವಾದ ಒಂದು ಸಣ್ಣ ವ್ಯಾಯಮ ಶಾಲೆಯಲ್ಲಿ ದೈಹಿಕ ವ್ಯಾಯಾಮದ ತರಬೇತಿ ಪಡೆಯುತ್ತಿದ್ದಂತೆಯೇ ಮುಂಬೈಯ ಲೀಲಾ ಕ್ಯಾಂಪಸ್ಕೀ ಫೈವ್ ಸ್ಟಾರ್ ಹೊಟೇಲ್ ನಲ್ಲಿ ಸುಮಾರು 2 ವರ್ಷಗಳ ಕಾಲ ಕಾರುಚಾಲಕ ವೃತ್ತಿಯನ್ನು ಮಾಡುತ್ತಿದ್ದರು.
ಕಠಿಣ ಶ್ರಮದಿಂದ ದುಡಿಮೆಯ ಜೊತೆಜೊತೆಗೆ ದೈಹಿಕ ವ್ಯಾಯಾಮ ತರಬೇತಿಯನ್ನು ಪಡೆಯುತ್ತಿದ್ದ ರಾಜೇಶ್ರವರು ಭವಿಷ್ಯದಲ್ಲಿ ಯಶಸ್ಸನ್ನು ಗಳಿಸುವ ಸದುದ್ದೇಶದಿಂದ ’ಮನಸ್ಸಿದ್ದರೆ ಮಾರ್ಗ’ ಇದ್ದೇ ಇದೆ ಎನ್ನುದನ್ನು ಮನಗಂಡು ಅವಕಾಶವನ್ನು ಅರಸಿಕೊಂಡು ಸಾಧನೆಯ ಹಾದಿಗೆ ಮುಂದಡಿಯಿಟ್ಟರು. ’ಸಾಧಿಸಿದರೆ ಸಬಳ ನುಂಗಬಹುದು’ ಸಾಧಿಸಲು ಅಸಾಧ್ಯವಾದುದು ಯಾವುದೂ ಇಲ್ಲ ಎಂಬುವುದನ್ನರಿತು ಮಹಾನ್ ಸಾಧನೆ ಮಾಡಬೇಕೆಂಬ ಕನಸು ಮತ್ತು ತಾನು ಅದರತ್ತ ಮಾಡುವ ಪರಿಶ್ರಮದ ಪ್ರಯತ್ನವೇ ತನ್ನ ಜೀವನದಲ್ಲಿ ಅತೀ ಮುಖ್ಯವಾದುದು ಎನ್ನುವ ಮೂಲಸೂತ್ರವನ್ನು ಕೈಗೊಂಡು “2007”ರಲ್ಲಿ ಮುಂಬಾಯಿಯ ವಿಕ್ರೋಲಿಯಲ್ಲಿ ನಡೆದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಸುಮಾರು 250ಕ್ಕೂ ಹೆಚ್ಚು ಮಂದಿ ಬಲಿಷ್ಠ ದೇಹದಾರ್ಢ್ಯ ಸ್ಪರ್ಧಾಳುಗಳೊಂದಿಗೆ ಸ್ಪರ್ಧಿಸಿ “ಮುಂಬೈ ಗಣೇಶ್ ಶ್ರೀ” ಟೈಟಲ್’ ಪಡೆದು ಮನೆಯವರ ಪ್ರೋತ್ಸಾಹ ಮತ್ತು ಸಹಕಾರದ ನೆರಳಿನಲ್ಲಿ ಮೊದಲನೆ ಬಾರಿಗೆ ಯಶಸ್ಸಿನ ತುತ್ತ ತುದಿಗೇರಿದರು.
ಕಷ್ಟದ ನಡುವೆ ಅವಕಾಶ ಅವಿತಿರತ್ತದೆ ಎನ್ನುವುದನ್ನು ಅರಿತುಕೊಂಡ ರಾಜೇಶ್ ಕುಲಾಲ್ ಮತ್ತೆಂದೂ ಹಿಂದಿರುಗಿ ನೋಡಲೇ ಇಲ್ಲ. 2007ನೇ ವರ್ಷದಲ್ಲಿ ಮುಂಬೈಯ ಗಿರ್ಗಾಂವ್’ ನಲ್ಲಿ ನಡೆದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಅಲ್ಲಿಯೂ ಯಶಸ್ಸನ್ನು ತನ್ನದಾಗಿಸಿಕೊಂಡು ” ಅಮರ್ವಾಡಿ ಚಿನ್ನದ ಪದಕ” ಪಡೆದ ಹೆಗ್ಗಳಿಕೆ ಇವರದ್ದು.
ಹೀಗೆ ಹಂತ ಹಂತವಾಗಿ ಯಶಸ್ಸನ್ನು ಗಳಿಸಿ ಇನ್ನಷ್ಟು ಉತ್ತಮ ಸಾಧನೆಗಳನ್ನು ಮಾಡಬೇಕೆಂದು ಹಂಬಲಿಸುತ್ತಿರುವಾಗಲೇ ತನ್ನ ತಂದೆಯ ತಮ್ಮ ಸಿದ್ದು ಮೂಲ್ಯ ದಂಪತಿಗಳು ರಾಜೇಶ್ರ ಭವಿಷ್ಯಕ್ಕೆ ಬೆನ್ನೆಲುಬಾಗಿ ನಿಂತು ಸದಾ ಪ್ರೋತ್ಸಾಹದ ಮಳೆಗೆರೆದರು. ಇದನ್ನೇ ಬಳುವಳಿಯಾಗಿ ಪಡೆದ ರಾಜೇಶ್ ಮತ್ತೆ ಅದೇ 2007ರಲ್ಲಿ ಮುಂಬೈಯಾ ವಿಲೇ ಪಾರ್ಲೆಯಲ್ಲಿ “ಮುಂಬೈ ಉದಯಶ್ರೀ” ವಿನ್ನರ್ ಪ್ರಶಸ್ತಿಯನ್ನು ಪಡೆದುಕೊಂಡರು.
2007ರಲ್ಲಿ ಮುಂಬೈಯಾ ಕುಲಾಬದಲ್ಲಿ ’ವೈ.ಎಂ.ಸಿ.ಎ ಚಿನ್ನದಪದಕ’ವನ್ನು ತನ್ನ ಹೆಗಲಿಗೇರಿಸಿಕೊಂಡರು. ’2007’ ತನ್ನ ಪಾಲಿನ ಅಮೃತಘಳಿಗೆ ಎಂದುಕೊಂಡು ಚೆಂಬೂರಿನಲ್ಲಿ ರಾಷ್ಟ್ರ ಚಿನ್ನದ ಪದಕವನ್ನು ಮತ್ತೆ ತನ್ನ ಮುಡಿಗೇರಿಸಿಕೊಂಡರು. ಸಾಧನೆಯ ಹಾದಿಯಲ್ಲಿ ಮುನ್ನಡೆಯುತ್ತಾ 2007 ರಲ್ಲಿ ರತ್ನಗಿರಿಯಲ್ಲಿ ನಡೆದ ಮಹಾರಾಷ್ಟ್ರದ ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ’ಮಹಾರಾಷ್ಟ್ರ ಉದಯ್’ ಚಿನ್ನದ ಪದಕ ಮತ್ತು ಅಂಬರ್ ನಾಥ್ನಲ್ಲಿ ’ಮಹಾರಾಷ್ಟ್ರ ಹರ್ಕ್ಯುಲಸ್’ ಚಿನ್ನದ ಪದಕವನ್ನು ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದರು. ಆದರೆ ದುರಾದೃಷ್ಟವೆಂದರೆ ಅದರ ತರಬೇತಿಯಲ್ಲಿರುವಾಗಲೇ ತನ್ನ ಪ್ರೀತಿಯ ತಾಯಿಯ ಅಕಾಲಿಕ ಮರಣದಿಂದ ನೊಂದುಕೊಂಡ ರಾಜೇಶ್ರವರು ರಾಷ್ಟ್ರಮಟ್ಟದಲ್ಲಿ ತನ್ನ ಸಾಧನೆಯನ್ನು ಪ್ರದರ್ಶಿಸುವಲ್ಲಿ ವಿಫಲರಾದರು, ಆದರೂ ಎದೆಗುಂದದೆ ತಾನು ಇನ್ನಷ್ಟು ಸಾಧಿಸಬೇಕು ಎನ್ನುವ ಛಲದಿಂದ 2007ರಲ್ಲಿ ಅಂದೇರಿಯಲ್ಲಿ ’ಮಿಸ್ಟರ್ ಉದಯ್ ಇಂಡಿಯಾ’ ಕಂಚಿನ ಪದಕ ಪಡೆದಿರುತ್ತಾರೆ.
2008-2009ನೇ ಸಾಲಿನಲ್ಲಿ ಮುಂಬೈಯ ಬಾಂದ್ರದಲ್ಲಿರುವ ಅಂತರರಾಷ್ಟ್ರೀಯ ತರಬೇತಿ ಕೇಂದ್ರವಾದ ’ಗೋಲ್ಡ್ಸ್ ಜಿಮ್ ಯೂನಿವರ್ಸಿಟಿಯಲ್ಲಿ 1 ವರ್ಷದ ಫಿಟ್ನೆಸ್ ಆಫೀಸರ್ ಸರ್ಟಿಫೈಡ್ ಕೋರ್ಸನ್ನು ಪೂರೈಸಿದರು ಇವರ ನಿರಂತರ ಅಭ್ಯಾಸ, ಕಾರ್ಯ ದಕ್ಷತೆ ಹಾಗೂ ಕಠಿಣ ಶ್ರಮದ ಪ್ರಯತ್ನದ ಫಲವಾಗಿ ಅದೇ ಸಂಸ್ಥೆಯಲ್ಲಿ “ಪರ್ಸನಲ್ ಫಿಟ್ನೆಸ್ ಆಫೀಸರ್” ಆಗಿ ನೇಮಕಗೊಂಡರು. ಇದೀಗ ಪ್ರಸ್ತುತ “ಫಿಲ್ಮ್ ಇಂಡಸ್ಟ್ರೀಯಲ್ಲಿ ಮಿನುಗುತ್ತಿರುವ ತಾರಾ-ತಾರೆಯರಿಗೆ” ಹಾಗೂ “ಅಂತರ್ರಾಷ್ಟ್ರೀಯ ಸೂಪರ್ ಸ್ಟಾರ್”ಗಳಿಗೆ ಒಬ್ಬ ದಕ್ಷ, ಸಮರ್ಥ,ಪರ್ಸನಲ್ ಫಿಟ್ನೆಸ್ ತರಬೇತುದಾರರಾಗಿ ತನ್ನ ವೃತ್ತಿ ಜೀವನವನ್ನು ಆರಂಭಿಸುತ್ತಿದ್ದು ಉತ್ತಮ ರೀತಿಯಲ್ಲಿ ಸೇವೆಸಲ್ಲಿಸುತ್ತಿದ್ದಾರೆ.
ತಾನೇ ಅವಕಾಶಗಳನ್ನು ಕಲ್ಪಿಸಿಕೊಂಡು ಅನಿರೀಕ್ಷಿತವಾಗಿ ಎದುರಾಗುವ ಅವಕಾಶಗಳನ್ನು ಬಳಸಿಕೊಂಡು ಇನ್ನಷ್ಟೂ ಸಾಧನೆಗಳನ್ನು ಮಾಡಿ ಎತ್ತರದ ಶಿಖರವನ್ನೇರುವ ಮಹಾತ್ವಾಕಾಂಕ್ಷೆಯಿಂದ ನವೆಂಬರ್ 18 2010ರಲ್ಲಿ ಮುಂಬೈಯ ವಿಲೇ ಪಾರ್ಲೆಯಲ್ಲಿ ನಡೆದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಸುಮಾರು 350ಕ್ಕೂ ಹೆಚ್ಚು ಸ್ಪರ್ಧಿಗಳೊಂದಿಗೆ ಸ್ಪರ್ಧಿಸಿ “ಮುಂಬೈಶ್ರೀ” ಚಿನ್ನದ ಪದಕ ಪಡೆದು ಅಭಿಮಾನಿಗಳ ಹೃದಯಾಂತರಾಳದಲ್ಲಿ ಬೇರೂರಿ ಬಿಟ್ಟಿದ್ದಾರೆ.
ಸಾಧನೆಯ ಶಿಖರದಲ್ಲಿ ಪ್ರತೀ ಕ್ಷಣವು ತನ್ನನ್ನು ತಾನು ತೊಡಗಿಸಿಕೊಂಡ ಯುವ ಪ್ರತಿಭೆ ರಾಜೇಶ್ ಸಮಯ ಅಮೂಲ್ಯವಾದುದು, ತಾನು ಜೀವನದಲ್ಲಿ ಮತ್ತಷ್ಟು ಸಾಧಿಸಬೇಕು ಎನ್ನುವ ದೃಢ ಸಂಕಲ್ಪದಿಂದ ತನ್ನ ಬಳಿ ಸಾಧನೆಗೆ ಬೇಕಾದ ಗಟ್ಟಿನೆಲೆಗಟ್ಟು, ಹಣ, ಸಂಪನ್ಮೂಲ ಅಥವಾ ಅದಕ್ಕೆ ಪರಕವಾದ ಸರಿಯಾದ ವ್ಯವಸ್ಥೆ ಇಲ್ಲದೆಯೂ ಕೂಡ ತನ್ನ ಬಳಿ ಸಾಧಿಸಬೇಕೆಂಬ ಪ್ರಯತ್ನ ಪೂರ್ವಕ ಛಲ ಇದ್ದುದರಿಂದ ಎಲ್ಲಾ ಅಡೆತಡೆಗಳನ್ನು ಎದುರಿಸಿ “ಗುರಿಯೊಂದನ್ನು ಸಿದ್ಧಗೊಳಿಸಿದಾಗ ತನ್ನೊಳಗಿನ ತುಡಿತ ಹೊರಡೋಣ,ಹೊರಡೋಣ” ಎನ್ನುತ್ತಿತ್ತು. ಇದೇ ತುಡಿತ ಗುರಿ ತಲುಪಬಹುದೇ ಎನ್ನುವ ನಿರೀಕ್ಷೆಯನ್ನಿಟ್ಟುಕೊಂಡು ಆತ್ಮವಿಶ್ವಾಸದಿಂದ ಡಿಸೆಂಬರ್ 25 2010ರಲ್ಲಿ ಮಹಾರಾಷ್ಟ್ರದ ರಾಜ್ಯಮಟ್ಟದಲ್ಲಿ ನಡೆದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಸುಮಾರು 1000 ಕ್ಕೂ ಹೆಚ್ಚು ಘಟಾನುಘಟಿ ಸ್ಪರ್ಧಿಗಳು ಒಡ್ಡಿದ ಸವಾಲುಗಳಿಗೆ ಎದೆಯುಬ್ಬಿಸಿ ನಿಂತು ಕಂಚಿನ ಪದಕವನ್ನು ತನ್ನ ಕೊರಳಿಗೇರಿಸಿಕೊಂಡು 2010ರ ಜನವರಿಯಲ್ಲಿ ರಾಷ್ಟ್ರಮಟ್ಟದಲ್ಲಿ ನಡೆಯುವ ದೇಹದಾರ್ಢ್ಯ ಸ್ಪರ್ಧೆಗೆ ಆಯ್ಕೆಯಾದ ಯುವ ಪ್ರತಿಭೆ ರಾಜೇಶ್ ಕುಲಾಲ್ ಅಭಿಮಾನಿಗಳ ಮನಃ ಪಟಲದಲ್ಲಿ ಧೃವತಾರೆಯಾಗಿ ನೆಲೆಯೂರಿಯೇ ಬಿಟ್ಟರು.
ಇವರ ಸಾಧನೆಗಳನ್ನು ಗುರುತಿಸಿ ಹಲವಾರು ಸಂಘಸಂಸ್ಥೆಗಳು ಸನ್ಮಾನದ ಹೊಳೆಯನ್ನೇ ಹರಿಸಿವೆ. ಜೀವನದಲ್ಲಿ ಯಶಸ್ಸು ಎನ್ನುವುದು ಯಾವುದೇ ಒಳ್ಳೆಯ ದಿನಾಂಕದಿಂದ ಶುರುವಾಗುವುದಿಲ್ಲ, ಒಳ್ಳೆಯ ಪೂರ್ವ ಸಿದ್ದತೆಯಿಂದ ಲಭಿಸುತ್ತದೆ ಎನ್ನುವುದಕ್ಕೆ ರಾಜೇಶ್ ಒಂದು ಸ್ಪಷ್ಟ ಉದಾಹರಣೆ. ಮುಂದೆ ತಾನು ಇನ್ನಷ್ಟು ಸಾಧನೆಗಳನ್ನು ಮಾಡಿ ಉತ್ತಮ ಸಾಧಕನೆನಿಸಿಕೊಂಡು ತನ್ನ ಕನಸುಗಳನ್ನು ನನಸು ಮಾಡಿ ಅದನ್ನು ಸಾಕಾರಗೊಳಿಸಿ ಯಶಸ್ಸನ್ನು ತನ್ನದಾಗಿಸಿಕೊಳ್ಳಬೇಕೆಂಬ ಹಂಬಲ ರಾಜೇಶ್ರವರದ್ದು. ಪ್ರಸ್ತುತ ಅವರು `ಶೌರ್ಯ ಮೂಲ್ಯ’ ಎಂಬ ಹೆಸರಿನಲ್ಲಿ `ಶ್ರೀ ಚಕ್ರ’ ಎಂಬ ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದು, ಚಿತ್ರ ಇನ್ನಷ್ಟೇ ತೆರೆ ಕಾಣಬೇಕಿದೆ.
ಇವರಿಗೆ ತನ್ನಲ್ಲಿ ಆತ್ಮವಿಶ್ವಾಸ, ಪ್ರಯತ್ನ, ಸಾಧಿಸಬೇಕೆನ್ನುವ ಛಲ ಇದ್ದರೂ ಆರ್ಥಿಕವಾಗಿ ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಯಾವನೇ ವ್ಯಕ್ತಿಯ ಪ್ರಯತ್ನ ಪೂರ್ವಕ ಶ್ರಮದ ಹಿಂದೆ ಧನವು ಅತೀ ಮುಖ್ಯ ಪಾತ್ರವಹಿಸುತ್ತದೆ. ಅದೇ ಇಲ್ಲದ ಮೇಲೆ ವ್ಯಕ್ತಿಯ ಸಾಧನೆಗೆಲ್ಲಿವೆ ಬೆಲೆ! ಪ್ರತಿಯೊಂದು ಸ್ಪರ್ಧೆಯಲ್ಲಿ ಸ್ಪರ್ಧಿಸಲು ಬಹಳಷ್ಟು ಖರ್ಚು ವೆಚ್ಚಗಳು ಇರುವುದರಿಂದ ಇವರ ಕಠಿಣ ಪರಿಶ್ರಮದ ಹಿಂದೆ ಇವರಿಗೆ ಪ್ರಾಯೋಜಕತ್ವದ ಅಗತ್ಯ ಖಂಡಿತಾ ಬೇಕಾಗಿದೆ.
ಇಂತಹ ಮಹಾನ್ ಸಾಧಕನಿಗೆ ಪ್ರಸ್ತುತ ಬೇಕಾಗಿರುವುದು ಆರ್ಥಿಕ ಸಹಾಯ, ಸಹಕಾರ, ಸಲಹೆ ಮತ್ತು ಪ್ರೋತ್ಸಾಹ. ಇವೆಲ್ಲವುಗಳಿದ್ದರೆ ಮುಂದೊಂದು ದಿನ ಈ “ರಾಜೇಶ್ ಕುಲಾಲ್” ಎನ್ನುವ “ಮುಂಡ್ಕೂರಿನ ಮುತ್ತು” ಸಾಧನೆಯ ಹಾದಿಯಲ್ಲಿ ಯಶಸ್ಸಿನ ತುತ್ತ ತುದಿಗೇರಿ ದೇಶಕ್ಕೇ ಮಾದರಿಯಾಗಬಲ್ಲರು ಎನ್ನುವುದರಲ್ಲಿ ಸಂದೇಹವಿಲ್ಲ.
ಬರಹ : ಅರುಣ್ ಕುಲಾಲ್

ಸಾಧನೆಗಳ ಸರದಾರ ಮುಂಡ್ಕೂರಿನ ರಾಜೇಶ್ ಕುಲಾಲ್
talents
4 Mins Read





