ಚಿಕ್ಕಂದಿನಿಂದಲೇ ಚಿಗುರೊಡೆದ ಹವ್ಯಾಸವು ಬೆಳೆಯುತ್ತ ಬೆಳೆಯುತ್ತ ಗುರಿಯಾಗಿ, ಬದುಕಿನ ದಾರಿಯಾಗಿ ಬದಲಾಗುವುದುಂಟು. ನಮ್ಮಲ್ಲಿ ಅಡಗಿದ ಪ್ರತಿಭೆಗೆ ಪ್ರಯತ್ನವೆಂಬ ನೀರೆರೆದಾಗ ಸಾಧನೆ ಗರಿಯೊಂದಿಗೆ ಗುರಿ ಮುಟ್ಟುವ ಮಟ್ಟಕ್ಕೆ ಹೋಗಬಹುದು. ವಿದ್ಯಾರ್ಥಿ ದೆಸೆಯಿಂದಲೇ ಕಲೆಯನ್ನು ಕರಗತ ಮಾಡಿಕೊಂಡು ಗುರಿಯತ್ತ ಗಟ್ಟಿ ಹೆಜ್ಜೆ ಇಡುತ್ತಿರುವ ಕಲಾವಿದರಲ್ಲಿ ವೈ. ಯಲ್ಲಪ್ಪ ಕುಂಬಾರ ಕೂಡಾ ಒಬ್ಬರು.
ಸಾಹಿತ್ಯವಾಕ್ಯದಲ್ಲಿ ವ್ಯಕ್ತವಾಗುವಂತೆ ತನ್ನ ಮಕ್ಕಳ ಕೆನ್ನೆಯನ್ನೇ ತಮ್ಮ ಕಲೆಗೆ ಮುಡಿಪಾಗಿಸಿ, ಪ್ರಮುಖ ದಿನಾಚರಣೆಗಳಲ್ಲಿ ಅಂದಿನ ವಿಶೇಷತೆಗಳನ್ನು ಕೆನ್ನೆ ಚಿತ್ರದ ಮೂಲಕ ಜನ ಮನಕೆ ಮುಟ್ಟಿಸುವ ಕಲೆಯನ್ನು ಯಲ್ಲಪ್ಪ ಕುಂಬಾರ ಕರಗತ ಮಾಡಿಕೊಂಡಿದ್ದಾರೆ.
ರೋಣ ತಾಲೂಕಿನ ಗಜೇಂದ್ರಗಡದ ಕುಂಬಾರ ಜನಾಂಗದ ಯಮುನಪ್ಪ-ನೀಲಮ್ಮ ದಂಪತಿಗಳ ಸುಪುತ್ರನಾಗಿ ಜುಲೈ ೧, ೧೯೭೩ರಲ್ಲಿ ಜನಿಸಿದ ಯಲ್ಲಪ್ಪ ವಿದ್ಯಾರ್ಥಿ ದೆಸೆಯಿಂದಲೇ ಕಲೆಯನ್ನು ಕರಗತ ಮಾಡಿಕೊಂಡಿದ್ದರು. ಈ ದೆಸೆಯಲ್ಲಿ ಎಸ್ಸೆಸ್ಸೆಲ್ಸಿ ತೇರ್ಗಡೆಯಾದ ಬಳಿಕ ಕಲಾ ಶಿಕ್ಷಕರ ತರಬೇತಿ ಹಾಗೂ ಎಎಂಜಿಡಿ ತರಬೇತಿಯನ್ನು ಮುಗಿಸಿ ತೈಲ ಹಾಗೂ ಜಲವರ್ಣ ಕಲೆಯಲ್ಲಿ ನಿಪುಣತೆ ಸಾಧಿಸಿದರು. ಜೊತೆಗೆ ರೇಖಾಚಿತ್ರವನ್ನು ಬಿಡಿಸುವಲ್ಲಿ ಸಿದ್ಧಹಸ್ತರಾದರು. ಬಾಲ್ಯದಿಂದಲೂ ಬಡತನದ ಬೇಗೆಯಲ್ಲಿ ಬೆಂದ ಯಲ್ಲಪ್ಪ ಅವರಿಗೆ ಕಲಿಕೆಯಲ್ಲಿ ಆಪತ್ಭಾಂಧವನಾಗಿ ನೆರವಾದವರು ವಿನೋದ್ ಜಾಫಲ್ ಎಂಬವರು. ಯಲ್ಲಪ್ಪ ಅವರ ಕಲಾ ಶಿಕ್ಷಣದ ವೆಚ್ಚವನ್ನು ಭರಿಸಿದ ವಿನೋದ್ ಅವರನ್ನು ಹೃದಯಪೂರ್ವಕವಾಗಿ ನೆನೆಸಿಕೊಳ್ಳುತ್ತಾರೆ.
ಯಲ್ಲಪ್ಪ ಅವರ ಕಲೆಯಲ್ಲಿ ಪ್ರಕೃತಿಯ ಸೌಂದರ್ಯ, ವ್ಯಕ್ತಿಚಿತ್ರ, ವಿವಿಧ ಕಲಾತ್ಮಕತೆಯನ್ನು ಚಿತ್ರಿಸುವ ಮೂಲಕ ನೋಡುಗರ ಮನಸ್ಸಿಗೆ ಆಹ್ಲಾದವನ್ನು ಉಂಟು ಮಾಡುತ್ತಾರೆ. ನಿಷ್ಪ್ರಯೋಜಕ ವಸ್ತುಗಳನ್ನು ಬಳಸಿ ಕಲಾತ್ಮಕ ಚಿತ್ರವನ್ನು ಬಿಡಿಸುವ ಯಲ್ಲಪ್ಪ, ಅವುಗಳನ್ನು ಸ್ಥಳೀಯ ಅಂಗನವಾಡಿಗೆ ನೀಡಿ ರಾಜ್ಯ, ರಾಷ್ಟ್ರ ಮನ್ನಣೆ ಗಳಿಸುವಂತೆ ಮಾಡಿ ಗಮನಸೆಳೆದಿದ್ದಾರೆ.
ಅನೇಕ ಕಲಾ ಸ್ಪರ್ಧೆಗಳಲ್ಲಿ ಇವರಿಗೆ ಉತ್ತಮ ಕಲಾಕೃತಿ ಪುರಸ್ಕಾರ ಲಭಿಸಿದೆ. ಇಳಕಲ್-ಗದಗ ಜಿಲ್ಲೆಯ ಕುಂಬಾರ ಸಮ್ಮೇಳನದಲ್ಲಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ನೀಡಿ, ಸನ್ಮಾನಿತರಾಗಿದ್ದಾರೆ. ಅಪ್ಪಟ ಕನ್ನಡಪ್ರೇಮಿಯಾಗಿರುವ ಯಲ್ಲಪ್ಪ ಅವರು ಕುವೆಂಪು, ಬೇಂದ್ರೆ, ರಾಜ್ ಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್ ಮುಂತಾದವರ ಚಿತ್ರವನ್ನು ತಮ್ಮ ಮಕ್ಕಳ ಗಲ್ಲದ ಮೇಲೆ ಚಿತ್ರಿಸಿ ಅಭಿಮಾನ ಮೆರೆಯುತ್ತಾರೆ. ರಾಷ್ಟ್ರೀಯ ಹಬ್ಬಗಳಲ್ಲಿ ತ್ರಿವರ್ಣ ಧ್ವಜ, ಪ್ರಮುಖ ಲಾಂಛನ, ಗಾಂಧೀ, ನೆಹರೂಜಿಯಂಥ ಮಹಾನ್ ವ್ಯಕ್ತಿಗಳ ಚಿತ್ರವನ್ನು ಕ್ಷಣಮಾತ್ರದಲ್ಲಿ ಚಿತ್ರಿಸುವ ಕಲೆ ಇವರಿಗೆ ಕರಗತವಾಗಿದೆ. ಈ ಎಲ್ಲಾ ಕಾರಣಗಳಿಂದ ಅವರನ್ನು ಎಲ್ಲರೂ `ಕೆನ್ನೆ ಕಲಾವಿದ’ ಎಂದೇ ಕರೆಯುತ್ತಾರೆ.
ಯಲ್ಲಪ್ಪ ಅವರ ಕಲಾಪ್ರೇಮಕ್ಕೆ ಪತ್ನಿ ಗೌರಮ್ಮ, ಪುತ್ರಿಯರಾದ ವಿಜಯಲಕ್ಷ್ಮಿ ಮತ್ತು ಪಲ್ಲವಿ ಸದಾ ಪ್ರೋತ್ಸಾಹ ನೀಡುತ್ತಿದ್ದಾರೆ. ಪುತ್ರಿಯರ ಕೆನ್ನೆಗಳಿಗಂತೂ ಸದಾ ಬಿಡುವಿಲ್ಲ, ಅವು ಸದಾ ವರ್ಣರಂಜಿತವಾಗಿರುತ್ತವೆ. ಕೆನ್ನೆ ಚಿತ್ರದ ಮೂಲಕವೇ ಯಲ್ಲಪ್ಪ ಅವರನ್ನು ಎಲ್ಲರೂ ಗುರುತಿಸುತ್ತಾರೆ. ಉದರ ಪೋಷಣೆಗಾಗಿ ಕಲೆಯನ್ನೇ ನಂಬಿರುವ ಅವರು ಪ್ರಸ್ತುತ ಗಜಶ್ರೀ ಗ್ಲಾಸ್ ಕಂಪೆನಿಯಲ್ಲಿ ಆರ್ಟಿಸ್ಟ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕಲೆಯಿಂದ ಜೀವನ ರೂಪಿಸಿಕೊಳ್ಳುವ ಕನಸುಕಂಡ ಅವರ ಮುಂದಿನ ಕಲಾ ಭವಿಷ್ಯ ಉಜ್ವಲವಾಗಲೆಂದು `ಕುಲಾಲ್ ವರ್ಲ್ಡ್ ಡಾಟ್ ಕಾಮ್’ ನ ಹಾರೈಕೆ . ಅವರ ಚಿತ್ರ ಕಲೆ ನೋಡಿ ನಿಮಗೆ ಇಷ್ಟವಾದಲ್ಲಿ 775862552 / 9845519185 ನಂಬರಿಗೆ ಕರೆ ಮಾಡಿ ಅಭಿನಂದಿಸಿ.