ಕುಲಾಲ್ ವರ್ಲ್ಡ್ ಡಾಟ್ ಕಾಮ್ : ಹವ್ಯಾಸಿ ಕಲಾವಿದನಾಗಿ ಕಿರೀಟ ತೊಟ್ಟು ತನ್ನ ಪ್ರತಿಭೆಯನ್ನು ಪ್ರಕಟಿಸುತ್ತಲೇ ಯಕ್ಷರಂಗಕ್ಕೆ ಪಾದಾರ್ಪಣೆ ಮಾಡಿ, ಇಂದು ವೃತ್ತಿಪರ ಕಲಾವಿದನಾಗಿ ತನ್ನದೇ ಛಾಪು ಮೂಡಿಸಿದವರಲ್ಲಿ ಶಂಭು ಕುಮಾರ್ ಚಂದ್ರಮಂಡಲ ಅವರು ಕೂಡಾ ಒಬ್ಬರು.
ವೇಷಭೂಷಣ, ಅಭಿನಯ ಹಾಗೂ ಮಾತುಗಾರಿಕೆಯಲ್ಲೇ ಅದ್ಭುತಲೋಕ ಸೃಷ್ಟಿಸುವ ಕಲಾವಿದರಾಗಿರುವ ಶಂಭು ಕುಮಾರ್ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಯಕ್ಷಗಾನ ಕಲಾ ಮಂಡಳಿಯ ಒಂದನೇ ಮೇಳದ ಪ್ರಮುಖ ವೇಷಧಾರಿ. ಇವರು ಕಟೀಲು ನಾಲ್ಕನೇ ಮೇಳದ ಪ್ರಮುಖ ವೇಷಧಾರಿಯಾಗಿರುವ ಗಣೇಶ್ ಚಂದ್ರಮಂಡಲ ಅವರ ಕಿರಿಯ ಸೋದರರಾಗಿದ್ದಾರೆ.
ಕಿನ್ನಿಗೋಳಿ ಸಮೀಪದ ಕೊಡೆತ್ತೂರು ಗ್ರಾಮದ ಚಂದ್ರಮಂಡಲ ಕೋಟಿ ಮೂಲ್ಯ- ಕಮಲ ಅವರ ಸುಪುತ್ರನಾಗಿ 1977ನೇ ಇಸವಿಯ ಮೇ 20ರಂದು ಜನಿಸಿದ ಶಂಭುಕುಮಾರ್ ಹವ್ಯಾಸಿ ಕಲಾವಿದನಾಗಿ ಮೆರೆದು , ತನ್ನ ಪ್ರತಿಭೆ ಮತ್ತು ಪ್ರಯತ್ನಗಳಿಂದ ಯಕ್ಷಾಭಿಮಾನಿಗಳ ಪ್ರೀತಿಗೆ ಪಾತ್ರರಾಗಿ ಮುಂದೆ ಉತ್ತಮ ಕಲಾವಿದನಾಗಬಲ್ಲೆ ಎಂಬ ಸೂಚನೆಯನ್ನು ನೀಡಿದವರು. ಕಿನ್ನಿಗೋಳಿಯಂಥ ಪರಿಸರದಲ್ಲಿ ಬಾಲ್ಯದಲ್ಲೇ ಯಕ್ಷಗಾನದ ಮಾಯಾಲೋಕವನ್ನು ಕಂಡು ಬೆರಗಾಗಿ, ಅದರ ಹುಚ್ಚು ತಲೆಗೇರಿಸಿಕೊಂಡು ತಾನು ಬಯಸದೇ ಅನಿವಾರ್ಯವಾಗಿ ಯಕ್ಷಗಾನವನ್ನೇ ವೃತ್ತಿಯನ್ನಾಗಿ ಸ್ವೀಕರಿಸಿಕೊಂಡ ಅಪ್ಪಟ ಕಲಾವಿದ.
ಪ್ರಾಥಮಿಕ ಶಿಕ್ಷಣವನ್ನು ಸಂತ ಮೇರೀಸ್ ಶಾಲೆ ಕಿನ್ನಿಗೋಳಿ, ಪದವಿಪೂರ್ವ ಶಿಕ್ಷಣವನ್ನು ಐಕಳ ಪೊಂಪೈ ಕಾಲೇಜಿನಲ್ಲಿ ನಡೆಸಿ, ಸುರತ್ಕಲ್ ನಲ್ಲಿ ಐಟಿಐ ಮುಗಿಸಿದ್ದರು. ಆ ಬಳಿಕ ಕಿನ್ನಿಗೋಳಿಯಲ್ಲಿ ಸಿ.ಡಿ ಅಂಗಡಿಯನ್ನು ತೆರೆದು ತಕ್ಕಮಟ್ಟಿಗೆ ಬಾಳ ಬಂಡಿಯನ್ನು ಮುನ್ನಡೆಸುತ್ತಾ ಸುಂದರ ಭವಿಷ್ಯದ ಕನಸು ಕಂಡಿದ್ದರು. ಶಂಭು ಕುಮಾರ್ ಯಕ್ಷಗಾನ ಲೋಕಕ್ಕೆ ಪಾದಾರ್ಪಣೆ ಮಾಡಿದ್ದು ಅಚಾನಕ್ ಆದ ಸನ್ನಿವೇಶವೊಂದರಲ್ಲಿ. ಕಿನ್ನಿಗೋಳಿಯ ಯುಗಪುರುಷ ಯಕ್ಷಗಾನ ಕೇಂದ್ರಕ್ಕೆ ಇವರ ಸ್ನೇಹಿತನೊಬ್ಬ ಯಕ್ಷಗಾನ ನಾಟ್ಯ ತರಬೇತಿಗೆ ಸೇರಿಕೊಂಡಿದ್ದರು. ಆತನ ಜೊತೆ ಕುತೂಹಲಕ್ಕೆಂದು ನೋಡಲು ತೆರಳಿದ್ದ ಶಂಭು ಅವರಿಗೆ ಈ ಕ್ಷೇತ್ರದಲ್ಲಿ ಆಸಕ್ತಿ ಮೂಡಿದ್ದು, ಇಂದು ಕಲೆಯೇ ಕಾಯಕ, ಅನ್ನದ ದಿಕ್ಕು- ಬದುಕಿನ ದಾರಿಯಾಗಿದೆ.
ಯುಗಪುರುಷದಲ್ಲಿ ನಾಟ್ಯ ಗುರುಗಳಾದ ದಿ. ಚಿದಾನಂದ ಕಟೀಲ್ ಹಾಗೂ ಕೃಷ್ಣಪ್ಪ ಮೂಲ್ಯ ಗಿಡಿಗೆರೆ ಅವರಿಂದ ಯಕ್ಷಗಾನದ ಪ್ರಾಥಮಿಕ ಹೆಜ್ಜೆಗಳನ್ನು ಕಲಿತ ಶಂಭು, ಯಕ್ಷಗಾನ ಲೋಕದ ಸರ್ವಾಂಗಶುದ್ಧತೆಯನ್ನು ತಿಳಿಯಬೇಕೆನ್ನುವ ಕುತೂಹಲದಿಂದ – ನಿರಂತರ ಪರಿಶ್ರಮದಿಂದ ಉತ್ತಮ ಕಲಾವಿದನಾಗಿ ಬೆಳೆದು ನಿಂತರು. ಮಾರಡ್ಕ ದಲ್ಲಿ ನಡೆದ `ವೀರಮಣಿ ಕಾಳಗ’ ಪ್ರಸಂಗದಲ್ಲಿ ವೀರಮಣಿಯಾಗಿ ಮೊತ್ತ ಮೊದಲು ಬಣ್ಣಹಚ್ಚಿದ ಶಂಭು ಕುಮಾರ್, ಹವ್ಯಾಸಿ ಕಲಾವಿದನಾಗಿ ಹೇಳಿಕೆಯ ಮೇರೆಗೆ ಕರೆದಲ್ಲಿ ಭಾಗವಹಿಸುತ್ತಾ ಕಲಾಭಿಮಾನಿಗಳಿಗೆ ಆನಂದವನ್ನು ಕೊಡುತ್ತಾ ಮುನ್ನಡೆಯುತ್ತಿದ್ದವರು. ಕನ್ನಡ ಮತ್ತು ತುಳುವಿನ ತಾಳ ಮದ್ದಳೆ ಅರ್ಥಧಾರಿಯಾಗಿ ಬಹುಮುಖಿ ವ್ಯಕ್ತಿತ್ವ ಹೊಂದಿದ ಇವರು ಸಿದ್ಧಿ ಮತ್ತು ಪ್ರಸಿದ್ಧಿಯ ನೆಲೆಯಲ್ಲಿ ಗುರುತಿಸಲ್ಪಟ್ಟವರು.
ಅರುಣಾಸುರ, ಮಧು, ಭಂಡಾಸುರ, ರಕ್ತಬೀಜಾಸುರ, ಆಂಜನೇಯ, ವಿದ್ಯುನ್ಮಾಲಿ, ದೇವೇಂದ್ರ, ಅರ್ಜುನ, ಕೋಟಿ ಚೆನ್ನಯ, ಗುಳಿಗ, ದಾರಿಕಾಸುರ, ದೇವು ಪೂಂಜಾ, ಬೂದಬಾರೆ ಮುಂತಾದ ಪಾತ್ರಗಳಿಗೆ ಜೀವ ತುಂಬುವ ಶಂಭು ಅವರ ಪಾತ್ರಗಳು ಜನಮನ್ನಣೆ ಗಳಿಸಿವೆ. ಪ್ರಸಂಗ ಸಾಹಿತ್ಯದ ಸದಾಶಯವನ್ನು ಬಿಡದೆ ಪ್ರತಿಪಾದಿಸಿ ಸುಲಿಲಿತವಾಗಿ ಪ್ರೇಕ್ಷಕರಿಗೆ ದಾಟಿಸುವ ಚಾಕಚಕ್ಯತೆ, ಆಕರ್ಷಕವಾದ ನಿರೂಪಣೆ, ವಿಷಯ ಸಂಪತ್ತು ಶಂಭು ಅವರ ಹೆಚ್ಚುಗಾರಿಕೆ. ಅವರ ವೇಷಗಾರಿಕೆಯ ಸೊಬಗು ಹಾಗೂ ಮಾತುಗಾರಿಕೆಯ ಮೋಡಿಯೂ ಅಷ್ಟೇ ಸೊಗಸು. ರಸಭಾವಗಳ ಪರಿಪೂರ್ಣ ಪೋಷಣೆಯಲ್ಲಿ ಅವರು ತೋರಿಸುವ ಅಸಾಧಾರಣ ಪ್ರತಿಭೆ ನಿಜಕ್ಕೂ ಪ್ರಶಂಸಾರ್ಹ. ಕರ್ನಾಟಕವಲ್ಲದೇ
ಮಹಾರಾಷ್ಟದಂಥ ಹೊರರಾಜ್ಯಗಳಲ್ಲೂ ತನ್ನ ಹಲವು ಬಾರಿ ಪ್ರದರ್ಶನ ನೀಡಿ ತಮ್ಮ ಕಲಾಕೌಶಲ್ಯ ಮೆರೆದು ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ.
ಯಕ್ಷಗಾನ ಕ್ಯಾಸೆಟ್, ಸಿಡಿ, ಟಿಕೇಟು ಆಟಗಳ ಸಂಘಟನೆ, ಯಕ್ಷಗಾನ ಮೇಳ ಹೀಗೆ ತನ್ನ ಜೀವದ ಗೆಳೆಯ ದಿವಂಗತ ಅಶೋಕ ಕೊಲೆಕಾಡಿ ಜೊತೆಗೂಡಿ ಮಾಡಿದ ಪ್ರಯತ್ನಗಳು ಹಲವು. ಮಳೆಗಾಲ ಆರಂಭವಾಗುತ್ತಿದ್ದಂತೆ ಚಿಕ್ಕಮೇಳವನ್ನು ಹುಟ್ಟುಹಾಕಿ ಎರಡು ತಂಡಗಳಲ್ಲಿ ಸಂಜೆ ಹೊತ್ತು ಮನೆಮನೆಗೆ ಮೇಳ ಕರೆದೊಯ್ಯುತ್ತಿದ್ದ ಇವರು ದೀಪಾವಳಿಯ ಹೊತ್ತಿಗೆ ಅಂದರೆ ಇತರ ಮೇಳಗಳು ಹೊರಡುವ ಹೊತ್ತಿಗೆ ಚಿಕ್ಕಮೇಳದ ಪ್ರದರ್ಶನ ನಿಲ್ಲಿಸುತ್ತಿದ್ದರು.
ಒಂದೇ ಮೇಳವನ್ನು ನೆಚ್ಚಿ, ಅದನ್ನೇ ಕಚ್ಚಿ ಹಿಡಿಯದೇ ತನ್ನ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದಾಗ ಎದ್ದು ನಡೆಯುವ ಜಾಯಮಾನ ಇವರದ್ದು. ಮುಂಡ್ಕೂರು ಮೇಳ, ತಳಕಳ ಮೇಳ, ಪುತ್ತೂರು ಮಹಾಲಿಂಗೇಶ್ವರ ಮೇಳ, ಎಡನೀರು ಮೇಳ, ಮಂಗಳಾದೇವಿ ಮೇಳಗಳಲ್ಲಿ ತಿರುಗಾಟ ಸಲ್ಲಿಸಿ ಅನುಭವಿಯಾಗಿರುವ ಶಂಭು ಕುಮಾರ್ ಹಗಲು ವ್ಯವಹಾರದಲ್ಲಿ ಮಿತಬಾಷಿ, ದಾಕ್ಷಿಣ್ಯ ಸ್ವಭಾವದವರಾದ ಇವರು ಮಿತ ಸಂಸಾರಿ. ಪತ್ನಿ ಕವಿತಾ, ಮಗ ಸಿದ್ಧಾರ್ಥ್ ಜೊತೆ ಸಂತೃಪ್ತ ಜೀವನ ನಡೆಸುತ್ತಿರುವ ಶಂಭುಕುಮಾರ್ ಅವರ ಕಲಾ ಜೀವನ ಇನ್ನಷ್ಟು ಉಜ್ವಲವಾಗಲಿ ಎಂದು `ಕುಲಾಲ್ ವರ್ಲ್ಡ್ ಡಾಟ್ ಕಾಮ್’ ಹಾರೈಸುತ್ತದೆ.
ಚಿತ್ರ-ಮಾಹಿತಿ: ಹೇಮಂತ್ ಕುಮಾರ್, ಕಿನ್ನಿಗೋಳಿ