ಕುಲಾಲ್ ವರ್ಲ್ಡ್ ಡಾಟ್ ಕಾಮ್ : “ಟಿ.ವಿ, ಸಿನಿಮಾಗಳ ಜನಪ್ರಿಯತೆಯಿಂದ ಯಕ್ಷಗಾನ ಕಲೆ ಇಂದು ಹತ್ತು ಹಲವು ಎಡರು-ತೊಡರುಗಳನ್ನು ಎದುರಿಸುತ್ತಿದೆ. ಯಕ್ಷಗಾನವನ್ನು ತನ್ನ ಪಾರಂಪರಿಕ ಚೌಕಟ್ಟಿನಲ್ಲಿರಿಸುತ್ತಲೇ ಹೊಸ ಪ್ರೇಕ್ಷಕ ವರ್ಗವನ್ನು ಸೃಷ್ಟಿಸಬೇಕಾದಲ್ಲಿ ಯಕ್ಷಗಾನ ಸಂಘಟಕ-ಕಲಾವಿದರ ಜವಾಬ್ದಾರಿ ನಿರ್ಣಾಯಕವಾದದ್ದು” ಎನ್ನುತ್ತಾರೆ ಯಕ್ಷಲೋಕದ ಭರವಸೆಯ ಕಲಾವಿದ ಗಣೇಶ್ ಚಂದ್ರಮಂಡಲ.
ಯಕ್ಷಗಾನ ಪ್ರಸಂಗ ಜ್ಞಾನ, ಗಮನ ಸೆಳೆಯುವ ವೇಷಭೂಷಣ, ಹಿತಮಿತ ಕುಣಿತ, ಹದವರಿತ ಮಾತು, ಗತ್ತುಗಾರಿಕೆ, ರಂಗಪ್ರಜ್ಞೆಯ ಜೊತೆಗೆ ಚೌಕಿಯಿಂದ ರಂಗಸ್ಥಳವರೆಗಿನ ಶಿಸ್ತು ವಿನಯತೆಯಿಂದ ಎಲ್ಲರೂ ಮೆಚ್ಚಿ ಕೊಂಡಾಡುವ ಕಲಾವಿದ ಗಣೇಶ್ ಅವರು. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಯಕ್ಷಗಾನ ಕಲಾ ಮಂಡಳಿಯ ನಾಲ್ಕನೇ ಮೇಳದ ಪ್ರಮುಖ ವೇಷಧಾರಿಯಾಗಿರುವ ಗಣೇಶ್ ಅವರು ಕಿನ್ನಿಗೋಳಿ ಸಮೀಪದ ಕೊಡೆತ್ತೂರು ಗ್ರಾಮದ ಚಂದ್ರಮಂಡಲ ಮನೆತನದವರು. ತಂದೆ ಕೋಟಿ ಮೂಲ್ಯ, ತಾಯಿ ಕಮಲ ಮೂಲ್ಯ. ಇವರದು ಕೃಷಿ ಕುಟುಂಬ. ಮೂಲ್ಯ ದಂಪತಿಗಳ ಏಳು ಮಂದಿ ಮಕ್ಕಳಲ್ಲಿ ಹಿರಿಯವರಾದ ಗಣೇಶ್ ಅವರು ತನ್ನ ಪ್ರಾಥಮಿಕ ಶಿಕ್ಷಣವನ್ನು ಸಂತ ಮೇರೀಸ್ ಶಾಲೆ ಕಿನ್ನಿಗೋಳಿ ಮತ್ತು ಪದವಿಪೂರ್ವ ವಿದ್ಯಾಭ್ಯಾಸ ಕಟೀಲು ದುರ್ಗಾಪರಮೇಶ್ವರಿ ದೇವಳದ ವಿದ್ಯಾ ಸಂಸ್ಥೆಗಳಲ್ಲಿ ಮುಗಿಸಿದರು.
ಕಟೀಲು ದೇವಸ್ಥಾನ ಯಕ್ಷ ಪರಿಸರ, ಶಿಕ್ಷಕ ಕೊರ್ಗಿ ವೆಂಕಟೇಶ್ ಉಪಾಧ್ಯಾಯರ ಗುರುತನ, ತಂದೆ ಕೋಟಿ ಮೂಲ್ಯರ ಪ್ರೋತ್ಸಾಹ, ಪ್ರೇರಣೆಯೇ ಗಣೇಶ್ ಚಂದ್ರಮಂಡಲ ಯಕ್ಷಗಾನ ಲೋಕಕ್ಕೆ ಪಾದಾರ್ಪಣೆಗೈಯಲು ಕಾರಣವಾಯಿತು. ತನ್ನ ಹದಿನೇಳನೇ ವಯಸ್ಸಿನಲ್ಲಿ `ಸುಧನ್ವ ಕಾಳಗದ’ ಸುಧನ್ವ ಪಾತ್ರದ ಮೂಲಕ ಪ್ರಥಮ ಬಾರಿ ಕಾಲಿಗೆ ಗೆಜ್ಜೆಕಟ್ಟಿದ ಗಣೇಶ್, ಪ್ರಾರಂಭದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ವಾರ್ಷಿಕೋತ್ಸವ, ಶಾಲಾ ವರ್ಧಂತ್ಯುತ್ಸವಗಳಲ್ಲಿ ವೇಷ ಮಾಡುತ್ತಾ ಸ್ಥಳೀಯವಾಗಿ ಗಮನಸೆಳೆದು ಪ್ರಸಿದ್ಧಿಗೆ ಬಂದರು.
1988ರಲ್ಲಿ ಉದರ ಪೋಷಣೆಗಾಗಿ ಮಾಯಾನಗರಿ ಮುಂಬಯಿಯತ್ತ ಪ್ರಯಾಣ ಬೆಳೆಸಿದ ಗಣೇಶ್ ಅವರ ಯಕ್ಷಗಾನ ಅಭಿರುಚಿಗೆ ನೀರೆರೆದು ಪೋಷಿಸಿದ್ದು ಅಲ್ಲಿಯ ಗುರುನಾರಾಯಣ ಯಕ್ಷಗಾನ ಕಲಾ ಮಂಡಳಿ. ಹೋಟೆಲ್ ಕಾರ್ಮಿಕನಾಗಿ ದುಡಿಯುತ್ತಿದ್ದ ಗಣೇಶರನ್ನು ಸಹೃದಯಿ ಮಿತ್ರ ಕೃಷ್ಣ ಶೆಟ್ಟಿ ಅವರು ಗುರುನಾರಾಯಣ ಯಕ್ಷಗಾನ ಕಲಾ ಮಂಡಳಿಗೆ ಕರೆತಂದರು. ದಿನವಿಡೀ ಹೋಟೆಲಿನಲ್ಲಿ ದುಡಿಯುತ್ತಾ ವಾರಾಂತ್ಯದ ರಾತ್ರಿಯಲ್ಲಿ ಝಗಮಗಿಸುವ ವೇದಿಕೆಗಳಲ್ಲಿ ಸುಧನ್ವ, ಅತಿಕಾಯ, ಭಸ್ಮಾಸುರ, ಕಂಸ, ರಕ್ತಬೀಜಾಸುರ, ಅರ್ಜುನ.. ಇವೇ ಮುಂತಾದ ಪ್ರಮುಖ ಪಾತ್ರಗಳಿಗೆ ಜೀವ ತುಂಬುತ್ತಾ ಮಿಂಚುತ್ತಿದ್ದ ಗಣೇಶರನ್ನು ಮುಂಬಯಿಯ ಪ್ರೇಕ್ಷಕ ವರ್ಗ ಗುರುತಿಸಿದ್ದಾರೆ. ನಿರಂತರ ಇಪ್ಪತ್ತು ವರ್ಷ, ಅಂದರೆ 2008ರವರೆಗೆ ಮುಂಬಯಿಯಲ್ಲಿ ಕಲಾ ಸೇವೆ ಮಾಡಿ, ತವರೂರಿಗೆ ಹಿಂದಿರುಗಿದ ಗಣೇಶ್, ಬಪ್ಪನಾಡು ಯಕ್ಷಗಾನ ಮೇಳಕ್ಕೆ ಸೇರಿಕೊಂಡರು. ಅಲ್ಲಿ ಮೂರು ವರ್ಷ ತಿರುಗಾಟ ನಡೆಸಿದ ಬಳಿಕ 2011ರಲ್ಲಿ ಕಟೀಲು ಮೇಳಕ್ಕೆ ಸೇರ್ಪಡೆಗೊಂಡು ಪ್ರಧಾನ ವೇಷಧಾರಿಯಾಗಿ ಕಲಾದೇವಿಯ ಆರಾಧನೆಯಲ್ಲಿ ತಮ್ಮನ್ನು ಸಮರ್ಪಿಸಿ ಕೊಂಡಿದ್ದಾರೆ.
ಕನ್ನಡ ಪೌರಾಣಿಕ ಪ್ರಸಂಗಗಳಲ್ಲಿ ಕರ್ಣ, ಸುಧನ್ವ, ಅತಿಕಾಯ, ಅರುಣಾಸುರ, ರಕ್ತಬೀಜ, ತಾಮ್ರಧ್ವಜ, ಇಂದ್ರಜಿತು, ಹಿರಣ್ಯಾಕ್ಷ, ಹಿರಣ್ಯಕಶ್ಯಪ, ಅರ್ಜುನ, ವಾಲಿ, ತುಳು ಪ್ರಸಂಗಗಳಲ್ಲಿ ಕೋಟಿ-ಚೆನ್ನಯ, ಚಂದುಗಿಡಿ, ಕಾಂತಬಾರೆ-ಬೂದಬಾರೆ, ದೇವುಪೂಂಜ, ದುಗ್ಗಣ್ಣ ಕೊಂಡೆ, ಕೊಡ್ಲಳ ಆಳ್ವ, ಕಾಡ ಮಲ್ಲಿಗೆಯ ಬೀರಣ್ಣ, ತುಳುನಾಡ ಸಿರಿಯ ಕಾಂತುಪೂಂಜ, ಕೋರ್ದಬ್ಬು ಬಾರಗೆಯ ಕೋರ್ದಬ್ಬು ಮುಂತಾದ ಪಾತ್ರಗಳು ಗಣೇಶ್ ಅವರ ಅಚ್ಚುಮೆಚ್ಚಿನ ಪಾತ್ರಗಳಾಗಿದ್ದು, ಹೆಚ್ಚಿನ ಪ್ರಸಿದ್ಧಿ ತಂದುಕೊಟ್ಟಿವೆ.
ಸಹೃದಯಿ, ಭಾವಜೀವಿ, ಎಲ್ಲಕ್ಕಿಂತ ಮುಖ್ಯವಾಗಿ ಕೊಟ್ಟ ಪಾತ್ರವನ್ನು ಅತ್ಯಂತ ಚೊಕ್ಕದಾಗಿ ನಿರ್ವಹಿಸುವ ಪ್ರಾಮಾಣಿಕರಾದ ಗಣೇಶ್ ಅವರು ಕರ್ನಾಟಕವಲ್ಲದೇ ಮಹಾರಾಷ್ಟ್ರ, ಗುಜರಾತ್ ಕೊಲ್ಲಿ ರಾಷ್ಟ್ರವಾದ ಬೆಹರೈನ್ ನಲ್ಲೂ ಹಲವು ಬಾರಿ ಪ್ರದರ್ಶನ ನೀಡಿ ತಮ್ಮ ಕಲಾಪ್ರೌಢಿಮೆ ಮೆರೆದಿದ್ದಾರೆ.
ರಸಾತ್ಮಕ ಪಾತ್ರ ಪೋಷಣೆ, ನಿರೂಪಣೆ ಮತ್ತು ವೇಷ ಭೂಷಣಗಳಲ್ಲಿ ಮೇಲ್ನೋಟಕ್ಕೆ ಖ್ಯಾತ ವೇಷಧಾರಿ ಅರುವ ಕೊರಗಪ್ಪ ಶೆಟ್ಟಿ ಅವರನ್ನು ಹೋಲುವ ಗಣೇಶ್ ಅವರು ಮುಂಬಯಿಯಲ್ಲಿ `ಜೂನಿಯರ್ ಕೊರಗಪ್ಪ ಶೆಟ್ಟಿ’ ಎಂದೇ ಪ್ರಸಿದ್ಧರಾಗಿದ್ದರು. 2014ರಲ್ಲಿ `ಯಕ್ಷಗಾನ ಕಲಾರಂಗ’ ಪ್ರಶಸ್ತಿ , 2009ರಲ್ಲಿ ಆಳ್ವಾಸ್ ಕಾಲೇಜಲ್ಲಿ ನಡೆದ ಯಕ್ಷಗಾನ ಸ್ಪರ್ಧೆಯಲ್ಲಿ ಕಿರೀಟ ವೇಷಕ್ಕೆ ಪ್ರಥಮ ಬಹುಮಾನ ಸೇರಿದಂತೆ ಅವರ ಪ್ರತಿಭೆಯನ್ನು ಗುರುತಿಸಿ ಅನೇಕ ಸಂಘ-ಸಂಸ್ಥೆಗಳು ಸನ್ಮಾನ ಮಾಡಿ ಪ್ರೋತ್ಸಾಹಿಸಿದೆ.
ಕಲಾಸೇವೆಯ ಜೊತೆ ಪತ್ನಿ ಭಾನುಮತಿ, ಮಕ್ಕಳಾದ ಸೃಷ್ಟಿ, ಸೃಜನ್ ಜೊತೆ ಸಾಂಸಾರಿಕವಾಗಿಯೂ ಸಂತೃಪ್ತರಾಗಿರುವ ಗಣೇಶ್ ಚಂದ್ರಮಂಡಲ ಅವರು ಯಕ್ಷಗಾನ ಕ್ಷೇತ್ರದಲ್ಲಿ ಇನ್ನಷ್ಟು ಸಾಧಿಸಲಿ. ಉತ್ತಮ ಹೆಸರನ್ನು ಗಳಿಸಿ ಅಭಿವೃದ್ಧಿಯನ್ನು ಸಾಧಿಸಲಿ. ವೈಯಕ್ತಿಕ ಬದುಕು ಹಾಗೂ ಕಲಾಬದುಕು ಎರಡೂ ಕೂಡ ಉಜ್ವಲವಾಗಲಿ ಎಂಬುದು `ಕುಲಾಲ್ ವರ್ಲ್ಡ್ ಡಾಟ್ ಕಾಮ್’ ನ ಶುಭ ಹಾರೈಕೆಗಳು.
ಅಪ್ಪನಂತೆ ಪುಟ್ಟ ಮಗನೂ ಯಕ್ಷಪ್ರೇಮಿ!
ಗಣೇಶ್ ಚಂದ್ರಮಂಡಲ ಅವರ ಕಿರಿ ಸಹೋದರ ಶಂಭು ಕುಮಾರ್ ಅವರೂ ಕಟೀಲು ಮೇಳದ ಕಲಾವಿದ(ಇವರ ಕುರಿತು ಪ್ರತ್ಯೇಕ ಲೇಖನವಿದೆ). ಇದೀಗ ಗಣೇಶ್ ಅವರ ಕಿರಿ ಮಗ ಸೃಜನ್ ಗೀಗ ಏಳರ ಹರೆಯ. ಈತನೂ ಯಕ್ಷ ಕಲಾವಿದನಾಗುವ ಎಲ್ಲಾ ಲಕ್ಷಣಗಳನ್ನೂ ತೋರ್ಪಡಿಸಿದ್ದಾನೆ. ಎಳೆಯ ಪ್ರಾಯದಲ್ಲೇ ಯಕ್ಷಗಾನಕ್ಕೆ ಆಕರ್ಷಿತನಾಗಿರುವ ಸೃಜನ್ ಈಗಾಗಲೇ ಅಪ್ಪನ ಮೇಳದಲ್ಲಿ ಗೆಜ್ಜೆ ಕಟ್ಟಿ ಕುಣಿದಿದ್ದಾನೆ. ತಂದೆಯ ಯಕ್ಷಗಾನ ವೀಕ್ಷಿಸುತ್ತ ಈ ಕಲೆಯಲ್ಲಿ ವಿಪರೀತ ಆಸಕ್ತಿ ಹೊಂದಿರುವ ಸೃಜನ್ ಮೂರುಕಾವೇರಿ ರೋಟರಿ ಇಂಗ್ಲಿಷ್ ಮೀಡಿಯಂ ಶಾಲೆಯ 3ನೇ ತರಗತಿ ವಿದ್ಯಾರ್ಥಿ. ವೃತ್ತಿಪರ ಕಲಾವಿದರ ಜೊತೆ ಪಾತ್ರನಿರ್ವಹಿಸಿ ಹಿರಿಯ ಕಲಾವಿದರ ಬಾಯಿಯಿಂದ ‘ಭೇಷ್’ಎನಿಸಿಕೊಂಡ ಈ ಪುಟಾಣಿ, ಇದೇ ರೀತಿಯಲ್ಲಿ ಮಿಂಚಿ ಕರಾವಳಿ ಹೆಸರನ್ನು ರಾಜ್ಯ,ರಾಷ್ಟ್ರಮಟ್ಟದಲ್ಲಿ ಎತ್ತಿ ತೋರಿಸಲಿ ಎಂದು ಹಾರೈಸೋಣ.
ಚಿತ್ರ/ಮಾಹಿತಿ : ಹೇಮಂತ್ ಕುಮಾರ್, ಕಿನ್ನಿಗೋಳಿ