ಕುಲಾಲ ಸಮಾಜದ ಕ್ರೀಯಾಶೀಲ ಫೋಟೋಗ್ರಾಫರ್, ತಮ್ಮ ಹವ್ಯಾಸವನ್ನೇ ವೃತ್ತಿಯಾಗಿಸಿಕೊಂಡ ರಾಕೇಶ್ ಕೊಣಾಜೆ ಅವರು ತಮ್ಮ ವೃತ್ತಿ ಬದುಕಿನ ಕುರಿತು “ಮಾನಸ” ಮಾಸಿಕ ಪತ್ರಿಕೆಗಾಗಿ ಬರೆದ ಬರಹವನ್ನು ಯಥಾವತ್ತಾಗಿ ಇಲ್ಲಿ ಪ್ರಕಟಿಸಿದ್ದೇವೆ..
ಛಾಯಾಗ್ರಹಣ ಹಾಗೂ ಕಲೆಯಲ್ಲಿನ ಸೆಳೆತ ನನಗೆ ಬಾಲ್ಯದಿಂದಲೇ ಇತ್ತು. ನಾನು ನಾಲ್ಕನೇ ತರಗತಿಯಲ್ಲಿ ಓದುತ್ತಿರುವಾಗ ನಮ್ಮೂರಿನ ದಿನಪತ್ರಿಕೆಯೊಂದರಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಕ್ಲಿಕ್ಕಿಸಿದ್ದ ಒಂದೊಂದು ಛಾಯಾಚಿತ್ರಗಳನ್ನು ಪ್ರತಿ ಭಾನುವಾರ ಪ್ರಕಟಿಸುತ್ತಿದ್ದರು. ಅಂದು ಆ ಛಾಯಾಚಿತ್ರಗಳನ್ನು ಕಂಡು ಅವುಗಳ ಸಂಗ್ರಹವನ್ನು ಮಾಡುತ್ತಿದ್ದೆ. ನಮ್ಮ ಮನೆಗೆ ದಿನಪತ್ರಿಕೆ ಬಾರದೇ ಇದ್ದುದರಿಂದ ಪಕ್ಕದ ಅಂಗಡಿಯಲ್ಲಿ ದಿನಪತ್ರಿಕೆಗಳನ್ನು ಓದುತ್ತಿದ್ದೆವು. ಅಲ್ಲಿ ಹಳೆ ದಿನಪತ್ರಿಕೆಗಳನ್ನು ಸಾಮಾನುಗಳನ್ನು ಕಟ್ಟಲು ಉಪಯೋಗಿಸುತ್ತಿದ್ದರಿಂದ ಅವರು ಪ್ರತಿ ದಿನಪತ್ರಿಕೆಗಳನ್ನೂ ಜೋಪಾನವಾಗಿರುಸುತ್ತಿದ್ದರು. ಆದರೆ ಭಾನುವಾರ ಬಂತೆಂದರೆ ಮಾನ್ಯ ಹೆಗ್ಗಡೆಯವರ ಛಾಯಾಚಿತ್ರ ಪ್ರಕಟವಾಗಿದ್ದ ಪುಟವನ್ನು ಅಂಗಡಿಯವರಿಗೆ ಗೊತ್ತಾಗದಂತೆ ನಾನು ಮನೆಗೆ ತರುತ್ತಿದ್ದೆ. ನಂತರ ಆ ಚಿತ್ರವನ್ನು ಕತ್ತರಿಸಿ ನನ್ನ ಶಾಲಾ ನೋಟ್ ಬುಕ್ ನೊಳಗಿರಿಸುತ್ತಿದ್ದೆ.
ಒಮ್ಮೆ ನೋಟ್ ಬುಕ್ ಗಳನ್ನು ಪರಿಶೀಲಿಸುವಾಗ ನಮ್ಮ ಶಿಕ್ಷಕಿಯಾಗಿದ್ದ ಡೋರತಿ ಸೋನ್ಸ್ ಎಂಬುವವರಿಗೆ ಈ ಛಾಯಾಚಿತ್ರಗಳು ದೊರಕಿದವು. ಅವರು ಗದರಿಸುತ್ತಾರೇನೋ ಎಂದು ಹೆದರಿದ್ದ ನನಗೆ ಅವರು, ಆ ಬಗ್ಗೆ ನನ್ನಲ್ಲಿ ಕೇಳಿ ಶಾಲೆಯ ಕಛೇರಿಗೆ ತೆರಳಿ ಹಳೆಯದಾದ ಒಂದು ಪುಸ್ತಕ ಮತ್ತು ಸ್ವಲ್ಪ ಅಂಟನ್ನು ನನ್ನ ಕೈಗಿತ್ತು ಇನ್ನು ಮುಂದೆ ಈ ಪುಸ್ತಕದಲ್ಲಿ ಆ ಚಿತ್ರಗಳನ್ನು ಅಂಟಿಸು ಎಂದರು. ಆ ನಂತರ ನಾನು ಯಾವುದೇ ನನಗಿಷ್ಟವಾದ ಚಿತ್ರ ಕಂಡರೆ ಅವುಗಳನ್ನು ಪುಸ್ತಕದಲ್ಲಿ ಅಂಟಿಸುತ್ತಿದ್ದೆ. ಪೂರ್ತಿ ಪುಸ್ತಕದಲ್ಲಿ ಛಾಯಾಚಿತ್ರಗಳನ್ನು ಅಂಟಿಸಿದ ನಂತರ ಅದನ್ನು ಶಿಕ್ಷಕರಿಗೆ ತೋರಿಸಿ ಖುಷಿ ಪಟ್ಟಿದ್ದೆ. ಅದೇ ಸಂದರ್ಭದಲ್ಲಿ ನನ್ನ ಸಹಪಾಠಿಯೊಬ್ಬ ಪುಟ್ಟದಾದ ಕೊಡಾಕ್ ಕ್ಯಾಮರಾವನ್ನು ಶಾಲೆಗೆ ತಂದಿದ್ದ. ಕ್ಯಾಮರಾ ಹೇಗಿದೆ ಎಂದು ಕಂಡರಿಯದ ನನಗೆ ಅದನ್ನು ನೋಡುವ ಆಸೆಯಾಗಿ ಆತನ ಬಳಿ ಕೇಳಿದಾಗ ಕೊಡಲಾಗುವುದಿಲ್ಲ ಎಂಬ ಉತ್ತರವು ನನ್ನನ್ನು ನಿರಾಸೆ ಮಾಡಿದ್ದರೂ ಆ ಕ್ಷಣದಲ್ಲಿಯೇ ಮುಂದೊಂದು ದಿನ ನಾನೂ ಕ್ಯಾಮರಾ ಕೊಳ್ಳುತ್ತೇನೆ ಎಂದು ಮನಸ್ಸಿನಲ್ಲಿಯೇ ಅಂದುಕೊಂಡಿದ್ದೆ.
ವಿದ್ಯಾಭ್ಯಾಸ ಮುಗಿಸಿ ಕರ್ನಾಟಕ ಸರ್ಕಾರದ ಅಗ್ನಿಶಾಮಕ ಇಲಾಖೆಯಲ್ಲಿ ಉದ್ಯೋಗಕ್ಕೆ ಸೇರಿದ ನಾನು ಬೆಂಗಳೂರಿನಲ್ಲಿ ತರಬೇತಿಯಲ್ಲಿದ್ದಾಗ ನಮ್ಮ ಜತೆಗಿದ್ದ ಗೆಳೆಯನೊಬ್ಬನ ಕ್ಯಾಮರಾದಿಂದ ನಮ್ಮ ತರಬೇತಿಯ ಚಿತ್ರಗಳನ್ನು ಸೆರೆ ಹಿಡಿದಿದ್ದೆ. ಇದೇ ನಾನು ನನ್ನ ಕೈಯಲ್ಲಿ ಹಿಡಿದ ಮೊದಲ ಕ್ಯಾಮರಾವಾಗಿತ್ತು. ತರಬೇತಿ ಮುಗಿಸಿ ಮಂಗಳೂರಿನಲ್ಲಿ ಉದ್ಯೋಗಕ್ಕೆ ಸೇರಿದ ನಂತರ ಧರ್ಮಸ್ಥಳದಲ್ಲಿ ನಡೆದ ವಿಶ್ವ ತುಳು ಸಮ್ಮೇಳನದಲ್ಲಿ ತುಳುನಾಡಿಗೆ ಸಂಬಂಧಪಟ್ಟ ಹಲವು ವಿಷಯಗಳು ಇದ್ದರೂ ಅದನ್ನು ಸಂಗ್ರಹಿಸಲು ನನ್ನ ಬಳಿ ಕ್ಯಾಮರಾ ಇರುತ್ತಿದ್ದರೆ ಚೆನ್ನಾಗಿತ್ತು ಎಂದು ನನಗೆ ನಾನೇ ಅಂದುಕೊಂಡಿದ್ದೆ.
ಅಲ್ಲಿಂದ ವಾಪಾಸು ಬಂದ ಕೂಡಲೇ ಮಂಗಳೂರಿನ ಮಳಿಗೆಯೊಂದಕ್ಕೆ ತೆರಳಿ ಕ್ಯಾಮರಾದ ಬಗೆಗೆ ವಿಚಾರಿಸಿದೆ. ಒಂದು ಸಾಧಾರಣ ಉತ್ತಮ ಕ್ಯಾಮರಾಕ್ಕೆ ಇಪ್ಪತ್ತು ಸಾವಿರ ರೂಪಾಯಿ ಬೆಲೆಯಿದೆ ಎಂದು ನನಗೆ ತಿಳಿಯಿತು. ಮಳಿಗೆಯವರು ಪ್ರತಿ ತಿಂಗಳ ಕಂತುಗಳಲ್ಲಿ ಕ್ಯಾಮರಾವನ್ನು ಕೊಡಲಾಗುವುದು ಎಂದು ಹೇಳಿದರು . ಆದರೆ ಮೊದಲಿಗೆ ಹತ್ತು ಸಾವಿರ ರೂಪಾಯಿ ಡೌನ್ ಪೇಮೆಂಟ್ ಕಟ್ಟಿ ನಂತರ ಎರಡು ಸಾವಿರದಂತೆ ಆರು ತಿಂಗಳುಗಳವರೆಗೆ ಕಟ್ಟಬೇಕು ಎಂದು ಹೇಳಿದ್ದರು. ನನ್ನಲ್ಲಿ ಹತ್ತು ಸಾವಿರ ರೂಪಾಯಿ ಹೊಂದಿಸುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಯೋಚಿಸಿದಾಗ ನನ್ನ ಎಲ್ ಐಸಿ ಪಾಲಿಸಿಯಲ್ಲಿ ಲೋನ್ ಸಿಗುವ ಬಗ್ಗೆ ನನಗೆ ತಿಳಿಯಿತು. ತಡಮಾಡದೆ ಎಲ್ ಐಸಿ ಕಛೇರಿಗೆ ತೆರಳಿ ನನ್ನ ಪಾಲಿಸಿಯನ್ನಿರಿಸಿ ಎಂಟು ಸಾವಿರದ ಏಳುನೂರ ಐವತ್ತು ರೂಪಾಯಿ ಲೋನ್ ಪಡೆದೆ. ಆ ಹಣವನ್ನು ಡೌನ್ ಪೇಮೆಂಟ್ ಆಗಿ ನೀಡಿ ನನ್ನ ಮೊದಲ ಕ್ಯಾಮರಾ ನಿಕಾನ್ ಪಿ100 ಖರೀದಿಸಿದ್ದೆ.
ಇದರಲ್ಲಿ ಸಿಕ್ಕಿದೆಲ್ಲವನ್ನೂ ಆಟೊಮೋಡ್ ನಲ್ಲಿ ಕ್ಲಿಕ್ಕಿಸುತ್ತಾ ಖುಷಿ ಪಡುತ್ತಿದ್ದ ನನಗೆ ಕ್ಯಾಮರಾದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ತುಡಿತವಿತ್ತು. ಇದೇ ಸಂದರ್ಭದಲ್ಲಿ ಪತ್ರಿಕೆಯೊಂದರ ಯುಗಾದಿ ವಿಶೇಷಾಂಕದಲ್ಲಿ ಇಬ್ಬರು ಮಕ್ಕಳು ಆಡುತ್ತಿದ್ದ ಅದ್ಬುತ ಚಿತ್ರ ನನ್ನನ್ನು ಸೆಳೆಯಿತು. ಬದಿಯಲ್ಲಿಯೇ ಇದ್ದ ಛಾಯಾಗ್ರಾಹಕರ ಹೆಸರನ್ನು ಓದಿ ತಡ ಮಾಡದೆ ಅಂದು ಪ್ರಚಲಿತದಲ್ಲಿದ್ದ ಆರ್ಕುಟ್ ನಲ್ಲಿ ಅವರನ್ನು ಹುಡುಕಿದೆ.
ಅಂದು ನನಗೆ ಪರಿಚವಾದವರೇ ಖ್ಯಾತ ಛಾಯಾಗ್ರಾಹಕರಾದ ಶಿವು ಕೆ. ಅವರಲ್ಲಿ ಅವರ ಸಂಪರ್ಕ ಸಂಖ್ಯೆಯನ್ನು ಪಡೆದುಕೊಂಡು ಹಿಂಜರಿಯುತ್ತಲೇ ಫೋನ್ ಮಾಡಿದ ನನಗೆ ನನಗೆ ಕ್ಯಾಮರಾದ ಬಗ್ಗೆ ಇದ್ದ ಹಲವು ಸಂದೇಹಗಳನ್ನು ಸುಲಭವಾಗಿ ಅವರು ಅಂದು ನಿವಾರಿಸಿದ್ದರು. ನಂತರ ಕ್ಯಾಮರಾದ ಬಗ್ಗೆ ಇಂಟರ್ನೆಟ್ ಹಾಗೂ ಇನ್ನಿತರ ಮಾದ್ಯಮಗಳಿಂದ ತಿಳಿದುಕೊಂಡು ನಾನೂ ಒಂದು ಡಿಎಸ್ಎಲ್ಆರ್ ಕ್ಯಾಮರಾ ಖರೀದಿಸಬೇಕು ಎಂದು ಮನಸ್ಸಾಯಿತು. ನನ್ನ ಆಸಕ್ತಿಯನ್ನು ಕಂಡು ತಂದೆ ಸ್ವಲ್ಪ ಮೊತ್ತವನ್ನು ಈ ಬಾರಿ ನನಗೆ ನೀಡಿದ್ದರು. ಅದಕ್ಕೆ ಇನ್ನೂ ಜಾಸ್ತಿ ಹಣ ಬೇಕಾಗಿತ್ತು. ನನ್ನ ಸಂಗ್ರಹದಲ್ಲಿನ ಹಣವನ್ನು ಕೂಡಿಸಿ ಉಳಿದುದನ್ನು ಸ್ನೇಹಿತರ ಬಳಿ ಸಾಲ ಪಡೆದು ಕೆನಾನ್ ಕಂಪನಿಯ 550 ಡಿ ಕ್ಯಾಮರಾ ಖರೀದಿಸಿದೆ.
ಅಗ್ನಿಶಾಮಕ ಇಲಾಖೆಯಲ್ಲಿನ ಹಲವು ವಿಚಾರಗಳು ನನಗೆ ಇಷ್ಟವಾಗದೇ ಇದ್ದುದರಿಂದ ಪ್ರಾರಂಭದಿಂದಲೂ ನನ್ನ ಮನಸ್ಸಿನಲ್ಲಿ ಇಲಾಖೆಯನ್ನು ತೊರೆಯುವ ಇಚ್ಚೆಯಿತ್ತು. ಇದಕ್ಕೆ ಪೂರಕವಾಗಿ ಒಂದು ದಿನ ಆರೋಗ್ಯದಲ್ಲಿ ಏರುಪೇರಾದಾಗ ಅಧಿಕಾರಿ ನನ್ನ ಬಗ್ಗೆ ತೋರಿದ ವರ್ತನೆಯಿಂದ ಜರ್ಜರಿತನಾಗಿ ಅಂದೇ ಇಲಾಖೆಗೆ ಗುಡ್ ಬೈ ಹೇಳಲು ನಿರ್ಧರಿಸಿ ಮನೆಗೆ ಬಂದು ಹೆತ್ತವರಲ್ಲಿ ನನ್ನ ಮನದಿಂಗಿತವನ್ನು ಹೇಳಿದ್ದೆ. ಹಾಗೂ ಹವ್ಯಾಸವಾಗಿದ್ದ ಛಾಯಾಗ್ರಹಣ ಕ್ಷೇತ್ರವನ್ನೇ ತುತ್ತಿನ ಚೀಲ ತುಂಬಿಸುವ ಉದ್ಯೋಗವನ್ನಾಗಿಸುತ್ತೇನೆ ಎಂದಾಗ ನನಗೆ ಬೆಂಬಲವಾಗಿ ನಿಂತಿದ್ದು ನನ್ನ ಹೆತ್ತವರು ಹಾಗೂ ನನ್ನ ಕ್ಯಾಮರಾ ಮಾತ್ರ. ನಮ್ಮೂರಿನ ಪ್ರತಿಯೊಬ್ಬರೂ ನನಗೆ ಸರ್ಕಾರಿ ನೌಕರಿ ಬಿಟ್ಟ ಹುಚ್ಚ ಎಂದು ಆಡಿಕೊಳ್ಳುತ್ತಿದ್ದರೆ ನಾನು ಮಾತ್ರ ಛಾಯಾಗ್ರಹಣ ಕ್ಷೇತ್ರವು ನನ್ನನ್ನು ಕೈಬಿಡಲಾರದು ಎಂಬ ದೃಢತೆಯನ್ನು ಹೊಂದಿದ್ದೆ.
ಅದರಂತೆಯೇ ನಾನು ಕೆಲಸ ಬಿಟ್ಟು ಒಂದು ವಾರ ಮನೆಯಲ್ಲಿದ್ದೆ. ನಂತರ ನನ್ನ ಗೆಳೆಯನೊಬ್ಬರ ಸಹಕಾರದಿಂದ ಮಾಧ್ಯಮ ಕ್ಷೇತ್ರವು ನನಗೆ ಆಸರೆಯನ್ನು ನೀಡಿತ್ತು. ಮಂಗಳೂರಿನಲ್ಲಿನ ಮಂಗಳೂರು ಇನ್ ಫಾರ್ಮೇಶನ್ ಡಾಟ್ ಕಾಮ್ ಎಂಬ ವೆಬ್ ಸೈಟಿಗೆ ಆರು ಸಾವಿರ ರೂಪಾಯಿಯ ತಿಂಗಳ ಸಂಬಳದಲ್ಲಿ ಫೊಟೊಜರ್ನಲಿಸ್ಟ್ ಹಾಗೂ ವರದಿಗಾರನಾಗಿ ನಿಯುಕ್ತಿಗೊಂಡೆ. ಅಂದು ಪ್ರಾರಂಭವಾದ ನನ್ನ ಛಾಯಾಗ್ರಹಣದ ಒಡನಾಟವು ಒಂದು ವರ್ಷದಲ್ಲಿ 17 ಸಾವಿರ ರೂಪಾಯಿ ಸಂಬಳದ ಉದ್ಯೋಗದವರೆಗೆ ನನ್ನನ್ನು ಬೆಳೆಸಿತ್ತು.
ಇನ್ನೊಬ್ಬರ ಕೈಕೆಳಗೆ ದುಡಿಯವುದಕ್ಕಿಂತ ನನ್ನದೇ ಏನಾದರೂ ಮಾಡಬೇಕು ಎಂದು ಯೋಚಿಸಿದ ನಾನು ಮಾಧ್ಯಮ ರಂಗದಿಂದ ಹೊರಬರುವ ನಿರ್ಧಾರ ಮಾಡಿ ಮದುವೆ ಫೊಟೊಗ್ರಫಿಯಲ್ಲಿ ನನ್ನ ಜೀವನವನ್ನು ಮುಂದುವರಿಸಲು ನಿರ್ಧರಿಸಿದೆ. ಅದಕ್ಕೆ ತಕ್ಕುದಾದ ಕೆನಾನ್ 5ಡಿ ಮಾರ್ಕ್ 2 ಕ್ಯಾಮರಾವನ್ನು ಖರೀದಿಸಿ ಮುಂದೆ ಸಾಗಿದೆ. ಆ ನಂತರ ಗುರುಗಳಾದ ಶಿವು ಕೆಯವರ ಮಾರ್ಗದರ್ಶನದಂತೆ ಕಲಾತ್ಮಕ ಛಾಯಾಗ್ರಹಣದಲ್ಲಿಯೂ ನನ್ನನ್ನು ನಾನು ತೊಡಗಿಸಿಕೊಂಡೆ. ಸಾಕಷ್ಟು ವಿಷಯಗಳನ್ನು ಅರಿತ ನಂತರ ಸ್ಪರ್ಧೆಗಳಿಗೆ ಚಿತ್ರಗಳನ್ನು ಕಳಿಸತೊಡಗಿದೆ. ಕಲಾತ್ಮಕ ಛಾಯಾಗ್ರಹಣದಲ್ಲಿ ನಾಲ್ಕು ರಾಷ್ಟ್ರಮಟ್ಟದ ಪ್ರಶಸ್ತಿಯನ್ನೂ, ಒಂದು ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನೂ ಇತ್ತೀಚೆಗೆ ಪಡೆದಿದ್ದೇನೆ.
ಮನಸ್ಸಿನ ಖುಷಿಗಾಗಿ ಕಲಾತ್ಮಕ ಛಾಯಾಗ್ರಹಣ ಹಾಗೂ ಬದುಕಿಗಾಗಿ ಮದುವೆ ಛಾಯಾಗ್ರಹಣ ಮಾಡಿಕೊಂಡಿದ್ದ ನಾನು ಇತ್ತೀಚೆಗೆ ನಮ್ಮೂರಿನಲ್ಲಿ ಪುಟ್ಟದಾದ ಒಂದು ಸ್ಟುಡಿಯೋವನ್ನೂ ಸ್ಥಾಪಿಸಿರುವುದು ನನ್ನ ಜೀವನದ ಇನ್ನೊಂದು ಮೈಲುಗಲ್ಲು. ಆಸಕ್ತಿ ಹಾಗೂ ಗುರಿಯೆಡೆಗೆ ಸಾಗಲು ಬೇಕಾಗುವ ಹಾರ್ಡ್ ವರ್ಕ್ ಮಾಡುವ ಮನೋಚ್ಚೆ ಇದ್ದಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದು ನನ್ನ ನಂಬಿಕೆ ಆ ನಿಟ್ಟಿನಲ್ಲಿ ಮುಂದೆ ಸಾಗುತ್ತಿದ್ದೇನೆ.
ಇದೀಗ ನನ್ನ ಬಳಿ ಕೆನಾನ್ 5ಡಿ ಮಾರ್ಕ್ 2, ಕೆನಾನ್ 60ಡಿ, ಕೆನಾನ್550ಡಿ, 90ಎಂಎಂ ಮ್ಯಾಕ್ರೊ ಲೆನ್ಸ್, 50ಎಂಎಂ ಲೆನ್ಸ, 55-250ಎಂಎಂ ಲೆನ್ಸ್, 70-200ಎಂಎಂ ಎಫ್ 2.8 ಲೆನ್ಸ್, ಹಾಗೂ 18-135 ಲೆನ್ಸ್ ಗಳು ಇವೆ. ಮುಂದಿನ ದಿನಗಳಲ್ಲಿ ಈ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆಗಳನ್ನು ಮಾಡಬೇಕು ಹಾಗೂ ನನಗೆ ಗೊತ್ತಿರದ ಹಲವು ವಿಷಯಗಳನ್ನು ಕಲಿಯಬೇಕು ಎಂಬುದು ನನ್ನ ಉದ್ದೇಶ.