ಸಿದ್ಧಾಪುರ: ಇತ್ತೀಚೆಗಷ್ಟೆ ಬಿಡುಗಡೆಯಾದ ಕುಂದಾಪುರ ಕನ್ನಡದ ಕಲಾತ್ಮಕ ಚಿತ್ರ ‘ಅಣ್ಣು’ ಆಯ್ದ ಸ್ಥಳಗಳಲ್ಲಿ ಯಶಸ್ವಿ ಪ್ರದರ್ಶನವನ್ನು ಕಂಡು ಜನ ಮೆಚ್ಚುಗೆ ಗಳಿಸುತ್ತಿದೆ. ಕರಾವಳಿಯ ಕೃಷಿ ಸಂಸ್ಕøತಿಯ ನೋವು ನಲಿವುಗಳನ್ನು ಡಾಳಾಗಿ ತೆರೆದಿಟ್ಟ ಅಣ್ಣು ಕಲಾತ್ಮಕ ಸಿನಿಮಾವನ್ನು ನೋಡಿದ ನಾಡಿನ ಹಿರಿಯ ವಿಮರ್ಶಕರು, ಕಲಾತ್ಮಕ ಸಿನಿಮಾ ನಿರ್ದೇಶಕರು ಈ ಸಿನಿಮಾದ ಮೂಲ ಕಥಾ ವಸ್ತುವಿನ ಕುರಿತು ಒಳ್ಳೆಯ ಮಾತುಗಳನ್ನು ಆಡುತ್ತಿದ್ದಾರೆ. ಹಾಗಾದರೆ ಈ ಅಣ್ಣು ಸಿನಿಮಾದ ಮೂಲಕಥೆಗಾರರು ಯಾರು ಎಂದು ಹುಡುಕುತ್ತಾ ಹೋದರೆ ನಮಗೆ ಸಿಗುವುದು ತೀರಾ ಗ್ರಾಮೀಣ ಪರಿಸರದ ಹುಟ್ಟಿ ಬೆಳೆದ ಬಹುಮುಖ ಪ್ರತಿಭೆಯ ಒರ್ವ ಯುವ ಬರಹಗಾರ; ಅವರೇ ಮಂಜುನಾಥ್ ಹಿಲಿಯಾಣ.
ಹೌದು. ಗೋಳಿಯಂಗಡಿ ಸಮೀಪದ ಹಿಲಿಯಾಣ ಗೋಪಾಡಿಯ ದಿ.ಬಚ್ಚು ಕುಲಾಲ್ ಮತ್ತು ಸೀತಾ ಕುಲಾಲ್ತಿಯವರ ಮಗನಾಗಿ ಜನಿಸಿದ ಇಪ್ಪತ್ತಾರರ ಹರೆಯದ ಮಂಜುನಾಥ್ ಅವರು ಕಡು ಬಡತನದಲ್ಲೂ ಅರಳಿ ನಿಂತ ಬಹುಮುಖ ಪ್ರತಿಭೆ. ಯುವ ತಲೆಮಾರಿನ ಬರವಸೆಯ ಕಥೆಗಾರರಾಗಿ, ಕಾರ್ಯಕ್ರಮ ನಿರೂಪಕರಾಗಿ, , ಯುವ ವಾಗ್ಮಿಯಾಗಿ, ಕಥಾ ನಿರೂಪಕರಾಗಿ, ಸಮುದಾಯ ಸಂಘಟಕರಾಗಿ, ಮಂಜುನಾಥ್ ಮುಂಚೂಣಿಯಲ್ಲಿ ನಿಲ್ಲುತ್ತಾರೆ.
ಕಥೆಗಾರರಾಗಿ ಎಲ್ಲೆಡೆ ಪರಿಚಿತರು:
ಮಂಜುನಾಥ್ ಹಿಲಿಯಾಣ ಅವರು ಪ್ರಸ್ತುತ ಕಥೆಗಾರರಾಗಿ ಹೆಚ್ಚು ಪ್ರಸಿದ್ದರು. ಸುಮಾರು ಇಪ್ಪತೈದಕ್ಕೂ ಅಧಿಕ ಕಥೆಗಳು ಈಗಾಗಲೇ ಕನ್ನಡದ ಪ್ರಸಿದ್ದ ದಿನ ಪತ್ರಿಕೆ, ವಾರಪತ್ರಿಕೆ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇವರು ಬರೆದ ಅಣ್ಣು, ಪಾರೋತಿ, ಐತು, ತಾನೊಂದು ಬಗೆದರೆ, ಪಾತ್ರಿ ಎಂಬಿತ್ಯಾದಿ ನೀಳ್ಗತೆಗಳು ಓದುಗರ ಮನವನ್ನು ಗಾಡವಾಗಿ ಮಿಡಿದಿವೆ. ತೀರಾ ಬಡಕುಟುಂಬದ ಹಳ್ಳಿ ಪಾತ್ರಗಳನ್ನೆ ಜಾಸ್ತಿಯಾಗಿ ಬರೆಯುವ ಹಿಲಿಯಾಣರು ಪಾತ್ರಗಳನ್ನು ತೀರಾ ಗಾಡವಾಗಿ, ಸಾಹಿತ್ಯ ಪೂರ್ಣವಾಗಿ ಸೃಜಿಸುತ್ತಾರೆ.
ಇವರು ಬರೆದ ‘ಅಣ್ಣು’ ಎಂಬ ಕಥೆಗೆ ಅನೇಕ ಪ್ರಶಸ್ತಿಗಳು ಸಿಕ್ಕಿ ಈಗಾಗಲೇ ಶ್ರೇಷ್ಟ ಕಲಾತ್ಮಕ ಸಿನಿಮಾವಾಗಿ ರೂಪುಗೊಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಶ್ರೇಷ್ಟ ಕತೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಅಲ್ಲದೆ ಇವರು ಬರೆದ ‘ಪಾತ್ರಿ’ ಎಂಬ ನೀಳ್ಗಥೆಯನ್ನು ಆಧರಿಸಿ ಇನ್ನೊಂದು ಕಲಾತ್ಮಕ ಸಿನಿಮವೂ ರೂಪುಗೊಳ್ಳುವ ತಯಾರಿಯಲ್ಲಿದೆ.
ಈಗಾಗಲೇ ಇವರ ಕಥಾ ಬರೆಹದ ಆಸಕ್ತಿಯನ್ನು ಗುರುತಿಸಿ ಪ್ರತಿಷ್ಟಿತ ಪುಟ್ಟಣ್ಣ ಕುಲಾಲ್ ಕಥಾ ಪ್ರಶಸ್ತಿ, ಸನ್ಮಾರ್ಗ ಕಥಾ ಪ್ರಶಸ್ತಿ, ಯುವ ಬಿಂದು ಕಥಾ ಪ್ರಶಸ್ತಿ ಇನ್ನಿತರ ಪ್ರಶಸ್ತಿ ಮತ್ತು ಅನೇಕ ಬಹುಮಾನಗಳು ಇವರಿಗೆ ಸಿಕ್ಕಿದೆ.
ಒಳ್ಳೆಯ ನುಡಿಚಿತ್ರ ಬರೆಹಗಾರರಾಗಿ, ಪ್ರಚಲಿತ ಸಾಮಾಜಿಕ, ರಾಜಕೀಯ ವಿದ್ಯಮಾನಗಳಿಗೂ ಸ್ಪಂದಿಸುವ ಯುವ ಲೇಖಕರಾಗಿಯೂ ಗುರುತಿಸಿಕೊಂಡಿದ್ದಾರೆ.
ಬಡ ಕುಟುಂಬದಲ್ಲಿ ಅರಳಿದ ಪ್ರತಿಭೆ:
ಹಿಲಿಯಾಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತನ್ನ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ ಗೋಳಿಯಂಗಡಿಯಲ್ಲಿ ಪ್ರೌಡ ಶಿಕ್ಷಣದತ್ತ ಕಾಲಿಡುವಾಗಲೇ ತಂದೆಯನ್ನು ಕಳೆದುಕೊಂಡ ಮಂಜುನಾಥ್ ಹಿಲಿಯಾಣ ಅವರು ತಾಯಿ ಮನೆಯ ಜವಬ್ದಾರಿಯನ್ನು ಚಿಕ್ಕ ಪ್ರಾಯದಲ್ಲೆ ಹೊತ್ತವರು. ಕೃಷಿ ಕೆಲಸ, ಶಾಮಿಯಾನ ಕೆಲಸ, ಕೂಲಿ ಕಾರ್ಮಿಕರಾಗಿ ದುಡಿಯುತ್ತಲೆ ಪ್ರೌಡ ಮತ್ತು ಪಿಯುಸಿ ಶಿಕ್ಷಣವನ್ನು ಮುಗಿಸಿದವರು. ಕುಂದಾಪುರದ ಹೊಟೇಲ್ ಗಳಲ್ಲಿ ಪಾರ್ಟ ಟೈಂ ಕೆಲಸ ಮಾಡಿಕೊಂಡು ಕೋಡಿಯ ಬ್ಯಾರೀಸ್ ಕಾಲೇಜಿನಲ್ಲಿ ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದವರು. ನಂತರ ಮೈಸೂರು ವಿಶ್ವ ವಿದ್ಯಾನಿಲಯದಿಂದ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದು ಇದೀಗ ಮಣಿಪಾಲ ವಿಶ್ವವಿದ್ಯಾನಿಲಯದಲ್ಲಿ ಉದ್ಯೋಗಿಯಾಗಿ ಒಳ್ಳೆಯ ಕೆಲಸದಲ್ಲಿದ್ದಾರೆ.
ನಿರೂಪಕರಾಗಿ ಜನಮೆಚ್ಚುಗೆ ಗಳಿಸಿದವರು:
ಮಂಜುನಾಥ್ ಹಿಲಿಯಾಣ ಅವರು ನಿರೂಪಕರಾಗಿ ಎಲ್ಲೆಡೆಗೆ ಪ್ರಸಿದ್ದರು. ಸ್ಪಷ್ಟ, ಸಾಹಿತ್ಯಪೂರ್ಣ, ಸುಲಲಿತವಾಗಿ ಕನ್ನಡವನ್ನು ಮಾತನಾಡುವ ಇವರ ನಿರೂಪಣೆಗೆ ರಾಜ್ಯದಾದ್ಯಂತ ಬೇಡಿಕೆ ಇದೆ. ಸಾಮಾಜಿಕ, ಧಾರ್ಮಿಕ, ಸಾಹಿತ್ಯ ಎಲ್ಲ ತೆರನಾದ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ, ಶಿಸ್ತಿನಿಂದ ನಿರೂಪಿಸುವ ಇವರು ಬೇಡಿಕೆಯ ಯುವ ಕಾರ್ಯಕ್ರಮ ನಿರೂಪಕರಾಗಿ ಮುಂಚೂಣಿಯಲ್ಲಿದ್ದಾರೆ. ಅತ್ಯುತ್ತಮ ನಿರೂಪಣೆಗೆ ಸಂಬಂಧಿಸಿಯೂ ಅನೇಕ ಜಿಲ್ಲಾ ರಾಜ್ಯ ಮಟ್ಟದ ಬಹುಮಾನಗಳು ಇವರಿಗೆ ಸಿಕ್ಕಿವೆ.
ಕಥಾ ನಿರೂಪಕರಾಗಿ ಮತ್ತು ಯುವ ವಾಗ್ಮಿಯಾಗಿ
ಮಂಜುನಾಥ್ ಹಿಲಿಯಾಣ ಅವರು ಕಥಾ ವಾಚನ ಪ್ರಸ್ತುತಿಗೂ ಪ್ರಸಿದ್ದರು. ಕೇಳುಗರ ಮನವನ್ನು ತಟ್ಟುವ-ಮುಟ್ಟುವ ರೀತಿಯಲ್ಲಿ ಅತ್ಯಂತ ಹೃದ್ಯವಾಗಿ ಕಥೆಗಳನ್ನು ವಾಚಿಸುವ ಇವರು ಹಲವು ಕಥಾಗೋಷಿ, ಕಥಾ ಕಮ್ಮಟ, ಮಂಗಳೂರು ಆಕಾಶವಾಣಿಯ ಯುವ ವಾಣಿ ವಿಭಾಗದ ಕಥಾ ವಾಚನದಲ್ಲೂ ಅನೇಕ ಬಾರಿ ಪಾಲ್ಗೊಂಡಿದ್ದಾರೆ. ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇವರ ಅತ್ಯುತ್ತಮ ಕಥಾ ವಾಚನಕ್ಕಾಗಿ ಪ್ರಶಸ್ತಿ ಪತ್ರ ನೀಡಿ ಗೌರವಿಸಿದೆ.
ಯುವ ವಾಗ್ಮಿಯಾಗಿಯೂ ಹಿಲಿಯಾಣರು ಎಲ್ಲೆಡೆಗೆ ಪರಿಚಿತರು. ಜಿಲ್ಲಾ, ರಾಜ್ಯ ಮಟ್ಟದ ಅನೇಕ ಭಾಷಣ ಸ್ಪರ್ಧೆಯಲ್ಲಿ ಹಲವು ಬಹುಮಾನಗಳು ಇವರಿಗೆ ಸಿಕ್ಕಿವೆ. ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ರಾಜ್ಯಮಟ್ಟದ ‘ಯುವ ಪ್ರತಿಭೆ’ ಎಂಬ ಪ್ರಶಸ್ತಿ ನೀಡಿ ಇವರನ್ನು ಗೌರವಿಸಿದೆ.
ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಇನ್ನೂ ಗಂಬೀರವಾಗಿ ತೊಡಗಿಸಿಕೊಳ್ಳುವ ಬಯಕೆ ಇವರದ್ದು, ಸಂಶೋಧ£ ಮತ್ತುಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯದ ಬಗ್ಗೆ ಗಂಬೀರ ಅಧ್ಯಯನದಲ್ಲಿ ತೊಡಗಿರುವ ಇವರು ಕನ್ನಡದ ಭರವಸೆಯ ಬರಹಗಾರರಾಗಿ ಬೆಳೆಯುದರಲ್ಲಿ ಎರಡು ಮಾತಿಲ್ಲ.
ಮಂಜುನಾಥ್ ಏನೆನ್ನುತ್ತಾರೆ?
‘ನಾನೊಬ್ಬ ಸಾಹಿತ್ಯ-ಸಾಂಸ್ಕೃತಿಕ ಕ್ಷೇತ್ರದಲ್ಲಿ ಅರಳುತ್ತಿರುವ ಮೊಗ್ಗಷ್ಟೆ. ಹೊಸ ಹೊಸ ವಿಷಯಗಳ ಬಗ್ಗೆ ತಿಳಿಯುವ ಆಸಕ್ತಿಯಿದೆ. ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಇನ್ನೂ ಗಂಬೀರವಾದ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವುದು ನನ್ನ ಕನಸು. ಸಮಾಜಮುಖಿ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳುವ ಆಸೆಯಿದೆ. ಎಲ್ಲರ ಬೆಂಬಲ ಪ್ರೋತ್ಸಾಹ ನಿರೀಕ್ಷಿಸುತ್ತೇನೆ.’
ಹಿಲಿಯಾಣರನ್ನು ಗುರುತಿಸುವ ಕೆಲಸ ನಡೆದಿಲ್ಲ:
ಶಿಕ್ಷಣ ಮತ್ತು ಸಾಹಿತ್ಯದಲ್ಲಿ ಗಮನಾರ್ಹ ಕೆಲಸ ಮಾಡುತ್ತಿರುವ ಈ ಯುವ ಸಾಧಕನನ್ನು ಇದುವರೆಗೆ ಯಾವುದೇ ಸಂಘ ಸಂಸ್ಥೆಗಳು ಗುರುತಿಸಿದಂತಿಲ್ಲ. ತೀರಾ ಕಡುಬಡತನದ ನಡುವೆಯೂ ಸ್ವ ಪ್ರಯತ್ನ-ಕಠಿಣ ಪರಿಶ್ರಮದಿಂದ ಅರಳಿದ ಯುವ ಪ್ರತಿಭೆ ಇವರು. ಸೌಮ್ಯ ಸ್ವಭಾವದ ಇವರನ್ನು ಇದುವರೆಗೆ ಯಾವುದೇ ಸಂಘ-ಸಂಸ್ಥೆಗಳಾಗಿ, ಸಮುದಾಯದ ಸಂಘಟನೆಗಳಾಗಲಿ, ಯುವ ವೇದಿಕೆಗಳಾಗಲಿ ಗುರುತಿಸಿಲ್ಲ; ಗೌರವಿಸಿಲ್ಲ.
ಆದರೂ ಸಾಧಿಸುವ ಛಲ, ಸ್ವ ಪ್ರಯತ್ನ, ಕಠಿಣ ಪರಿಶ್ರಮವಿದ್ದರೆ ಹಳ್ಳಿಗಾಡಿನ ಮಕ್ಕಳು ಉನ್ನತವಾದುದ್ದನ್ನು ಸಾಧಿಸಬಹುದು ಎನ್ನುವುದಕ್ಕೆ ಯುವ ಸಾದಕ ಮಂಜುನಾಥ್ ಹಿಲಿಯಾಣ ಅವರು ಒಂದು ಉದಾಹರಣೆ. ಇವರಿಗೆ ಆಲ್ ದ ಬೆಸ್ಟ್ ಹೇಳೋಣ. ಇವರ ಸಂಪರ್ಕ ಸಂಖ್ಯೆ-8722579119