ಕಾಸರಗೋಡು(ಅ. ೨೧): ಭೂತಾರಾಧನೆ, ದೈವಾರಾಧನೆ, ಪ್ರೇತ ಭೂತಗಳ ನಂಬಿಕೆಯಿಂದಲೇ ಮನೆ ಮಾತಾಗಿರುವ ಕರಾವಳಿ ಭಾಗದ ಇನ್ನೊಂದು ವಿಶೇಷ ಎಂದರೆ ‘ಪ್ರೇತಗಳ ಮದುವೆ’. ಪ್ರತಿ ವರ್ಷದ ಆಷಾಢ ಮಾಸದಲ್ಲಿ ಇಲ್ಲಿ ಪ್ರೇತಗಳಿಗೆ ಮದುವೆ ಮಾಡುತ್ತಾರೆ. ಮದುವೆಯಾಗದೇ ಸತ್ತವರು ಅತೃಪ್ತ ಆತ್ಮಗಳಾಗಿ ತಿರುಗುತ್ತಿರುತ್ತಾರೆ ಎಂಬುದು ಆ ಭಾಗದ ನಂಬಿಕೆ. ಹೆಣ್ಣು ಅಥವಾ ಗಂಡು ಯಾರೇ ಇರಬಹುದು.
ಚಿಕ್ಕ ವಯಸ್ಸಿನಲ್ಲೇ ಮೃತಪಟ್ಟರೆ ಅವರ ಆತ್ಮ ಪ್ರೇತವಾಗಿ ಅಲೆಯುತ್ತಿರುತ್ತದೆ. ಅಲ್ಲದೇ ಆ ಪ್ರೇತ ಮದುವೆ ವಯಸ್ಸಿಗೆ ಬಂದಾಗ ಮನೆಯವರಿಗೆ ತೊಂದರೆ ಕೊಡಲು ಆರಂಭಿಸುತ್ತದೆ. ಅದರಲ್ಲೂ ಆ ಪ್ರೇತಾತ್ಮದ ಅಣ್ಣನೋ, ತಂಗಿಯೋ ಮದುವೆಯಾಗುವ ಸಂದರ್ಭದಲ್ಲಿ ಈ ಪ್ರೇತದ ಕಿರುಕುಳ ಅಧಿಕವಾಗುತ್ತದೆ. ಆಗ ಮನೆಯವರು ವಾಡಿಕೆಯಲ್ಲಿರುವಂತೆ ಜೋತಿಷಿ ಅಥವಾ ಮಂತ್ರವಾದಿಗಳ ಬಳಿಗೆ ಹೋಗುತ್ತಾರೆ. ಆ ಮೂಲಕ ಅವರ ಮನೆಯಲ್ಲಿ ಸತ್ತ ಆತ್ಮವೊಂದು ಶಾಂತಿ ಸಿಗದೆ ಅಲೆದಾಡುತ್ತಿದೆ.
ಅದಕ್ಕೆ ಮದುವೆ ಮಾಡಿಸಿ ಅತೃಪ್ತ ಆತ್ಮವನ್ನು ತೃಪ್ತಿಗೊಳಿಸಬೇಕು ಎಂಬ ಹುಟ್ಟುಗತಿ(ಅಂಶ) ತಿಳಿದು ಬರುತ್ತದೆ. ಆಗ ಆ ಪ್ರೇತಕ್ಕೆ ಮದುವೆ ಮಾಡಿಸಿ ಸದ್ಗತಿ ಕಾಣಿಸುತ್ತಾರೆ.ತಮ್ಮ ಮನೆಯಲ್ಲಿ ನಡೆಯುವ ಶುಭ ಕಾರ್ಯಕ್ಕಾಗಲಿ ಅಥವಾ ತಮ್ಮ ಕುಟುಂಬದ ಮುಂದಿನ ಪೀಳಿಗೆಗಾಗಲಿ ಯಾವುದೇ ತೊಂದರೆ ಬಾರದಿರಲಿ ಎಂಬುದು ಪ್ರೇತ ಮದುವೆಯ ಮೂಲ ಉದ್ದೇಶ. ಮದುವೆ ಮಾಡಿಸಿದ ಮೇಲೆ ಅತೃಪ್ತ ಆತ್ಮ ಸಂತೃಪ್ತವಾಗುವ ಮೂಲಕ ಮನೆಯವರಿಗೆ ಉಪದ್ರವ ನೀಡುವುದು ನಿಲ್ಲಿಸುತ್ತದೆ.
ಪ್ರೇತದ ಮದುವೆಗೆ ಸಾಮಾನ್ಯವಾಗಿ ಸಂಬಂಧಿಕರಲ್ಲೇ ಗಂಡು ಹೆಣ್ಣು ಹುಡುಕುತ್ತಾರೆ. ಸಿಗದಿದ್ದ ಪಕ್ಷದಲ್ಲಿ ದಲ್ಲಾಳಿಗಳೋ, ಜೋತಿಷಿ, ಮಂತ್ರವಾದಿಗಳಿಗೆ ತಿಳಿದಿರುವ ಪ್ರೇತದಲ್ಲೇ ತಮ್ಮ ಜಾತಿಯ ಪ್ರೇತವನ್ನು ಹುಡುಕಿ ಆ ಪ್ರೇತದ ಮನೆಯವರೊಂದಿಗೆ ಹೊಸ ಸಂಬಂಧವನ್ನು ಕುದುರಿಸುತ್ತಾರೆ.
ಸಂಬಂಧ ನಿಗದಿಯಾದ ಮೇಲೆ ಹುಡುಗನ ಮನೆಯವರು ಹುಡುಗಿ ಮನೆಗೆ ಬಂದು ಗೋತ್ರ, ನಕ್ಷತ್ರ ಹೊಂದಾಣಿಕೆ ಮಾಡುವ ಮೂಲಕ ಮದುವೆ ದಿನಾಂಕ ನಿಶ್ಚಯ ಮಾಡಿಕೊಂಡು ಹೋಗುತ್ತಾರೆ. ಜೀವಂತ ಮದುವೆಗಳಂತೆ ಇಲ್ಲಿಯೂ ಕುಲ, ಗೋತ್ರ ಜಾತಿ ಎಲ್ಲವನ್ನು ಪರಿಗಣಿಸಿ ಶಾಸ್ತ್ರ ಪ್ರಕಾರವಾಗಿ ಮದುವೆ ಮಾಡಿಸುತ್ತಾರೆ.
ಕಾಸರಗೋಡಿನ ವರ್ಕಾಡಿ ಸಮೀಪದ ಪೊಯ್ಯತ್ತಬೈಲುನಲ್ಲಿ ಬುಧವಾರ ರಾತ್ರಿ ಅಪರೂಪದ ಪ್ರೇತ ಮದುವೆ ನಡೆಯಿತು. ಬಗಂಬಿಲ ಆನಂದ ಕುಲಾಲರ ಪುತ್ರ ಅಶೋಕ ಮತ್ತು ವರ್ಕಾಡಿ ಪೊಯ್ಯತ್ತಬೈಲಿನ ಆನಂದ ಮೂಲ್ಯರ ಪುತ್ರಿ ವಸಂತಿ ಇಲ್ಲಿ ವರ-ವಧು.
ಆದರೆ ಮದುಮಕ್ಕಳು ಜೀವಂತವಾಗಿ ಹಸೆಮಣೆಯಲ್ಲಿರಲಿಲ್ಲ. ಬದಲಿಗೆ ಅವರ ಪ್ರೇತಾತ್ಮಗಳಿಗೆ ವಿವಾಹ ಮಾಡಿಸಲಾಯಿತು! ಪೊಯ್ಯತ್ತಬೈಲಿನ ಆನಂದ ಮೂಲ್ಯರ ಮನೆಯ ಕೆಲ ಸಮಸ್ಯೆಗಳಿಗೆ ಕುಟುಂಬದಲ್ಲಿ ಈ ಹಿಂದೆ ನಿಧನ ಹೊಂದಿದ್ದ ಬಾಲಕಿಯ ಅವಕೃಪೆ ಕಾರಣವೆಂದು ತಿಳಿದು ಪ್ರೇತ ವಿವಾಹಕ್ಕೆ ಸಂಕಲ್ಪಿಸಲಾಗಿತ್ತು. ಬಗಂಬಿಲದ ಕುಟುಂಬದ ಬಾಲಕ ಮೃತಪಟ್ಟು ಇಂತದ್ದೇ ಸಮಸ್ಯೆ ಉಂಟಾಗಿರುವುದು ಗಮನಕ್ಕೆ ಬಂತು. ಅವರನ್ನು ಭೇಟಿಯಾಗಿ ವಿಧಿವಿಧಾನ ದಂತೆ ವಧುವಿನ ಮನೆ ಭೇಟಿ, ವಿವಾಹ ನಿಶ್ಚಯ, ಮದರಂಗಿ ಶಾಸ್ತ್ರಗಳನ್ನು ನಡೆಸಲಾಯಿತು. ಬುಧವಾರ ರಾತ್ರಿ ವಿವಾಹ ಸಮಾರಂಭದಲ್ಲಿ ಅಕ್ಷತೆ ಹಾಕಿದ ಬಳಿಕ ವಧು-ವರರಿಗೆ ಆರತಿ ಬೆಳಗಿ, ಚಪ್ಪಲಿ ಹಾಕಿ, ಕೊಡೆ ಹಿಡಿದು ಅಂಗಳಕ್ಕೆ ಇಳಿಯುವ ಸಂಪ್ರದಾಯ ನಡೆಯಿತು. ವಿವಾಹ ಕಾರ್ಯಕ್ರಮದ ಬಳಿಕ ಔತಣ ಬಡಿಸಿ, ಇನ್ನು ಮುಂದೆ ಕುಟುಂಬದವರಿಗೆ ಯಾವುದೇ ತೊಂದರೆ ನೀಡದಂತೆ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಬೀಗರಿಗೆ, ಮದುವೆಗೆ ಬಂದ ಅತಿಥಿಗಳಿಗೆ ಔತಣ, ಊಟದ ಬಳಿಕ ವಧುವಿನ ಕಡೆಯವರು ಹೆಣ್ಣಿನ ವಸ್ತ್ರ, ಆಭರಣ, ಕೊಡೆ ಮೊದಲಾದವುಗಳೊಂದಿಗೆ ಮನೆಗೆ ತೆರಳಿದರು.