ಯಕ್ಷಗಾನದಲ್ಲಿ ಅದೆಷ್ಟೋ ಅದ್ಭುತ ಪ್ರತಿಭೆಯ ಕಲಾವಿದರಿದ್ದಾರೆ. ಆದರೆ ಎಲ್ಲರೂ ಗುರುತಿಸಲ್ಪಡದಿರುವುದು ವಿಷಾದದ ಸಂಗತಿ. ಸಿದ್ಧಿ ಇದ್ದರೂ ಪ್ರಸಿದ್ಧಿ ಹೊಂದದ ಅದೆಷ್ಟೋ ಕಲಾವಿದರಿದ್ದಾರೆ. ಅಂಥವರಲ್ಲಿ ಓರ್ವರು ಕೈರಂಗಳ ಕೃಷ್ಣ ಮೂಲ್ಯರು. ಉತ್ತಮ ನಾಟ್ಯ, ಆಕರ್ಷಕ ಮಾತುಗಾರಿಕೆ, ಭಾವಯುಕ್ತವಾದ ಅಭಿನಯ, ಅಪಾರ ಪುರಾಣ ಪಾಂಡಿತ್ಯ, ಪ್ರಸಂಗಗಳ ನಡೆಯ ಕುರಿತಾದ ಖಚಿತ ಜ್ಞಾನ ಎಲ್ಲವೂ ಮೇಳೈಸಿದ, ಪ್ರಸ್ತುತ ಕಟೀಲಿನ ಮೂರನೇ ಮೇಳದ ಪ್ರಧಾನ ಕಲಾವಿದ ಕೈರಂಗಳ ಕೃಷ್ಣ ಮೂಲ್ಯರು.
ಫೆಬ್ರವರಿ 13, 1954ರಲ್ಲಿ ಬಂಟ್ವಾಳ ತಾಲೂಕಿನ ಕೈರಂಗಳ ಗ್ರಾಮದ ಆನೆಗುಂಡಿ ಎಂಬಲ್ಲಿ ಕೃಷ್ಣ ಮೂಲ್ಯರು ಜನಿಸಿದರು. ಹುಟ್ಟೂರಿನ ಸುತ್ತಮುತ್ತ ನಡೆಯುತ್ತಿದ್ದ ಯಕ್ಷಗಾನ ಪ್ರದರ್ಶನಗಳನ್ನು ನೋಡಿ ತಾನೂ ಓರ್ವ ಕಲಾವಿದನಾಗಬೇಕು ಎಂಬ ಆಶೆ ಪುಟ್ಟ ಬಾಲಕನಾದ ಕೃಷ್ಣನಲ್ಲಿ ಬೆಳೆಯಿತು. ಆ ಕಾಲದಲ್ಲಿ, 1967ರಲ್ಲೇ ಕೈರಂಗಳದಲ್ಲಿ ಗೋಪಾಲಕೃಷ್ಣ ಯಕ್ಷಗಾನ ಸಂಘ ಇತ್ತು. ಅಲ್ಲಿ ಆಸಕ್ತರಿಗೆ ನಾಟ್ಯಾಭ್ಯಾಸ ಕಲಿಸುವ ವ್ಯವಸ್ಥೆಯಿತ್ತು. ಪುಟ್ಟ ಬಾಲಕ ಕೃಷ್ಣ ಆ ಸಂಘ ಸೇರಿಕೊಂಡ. ಅಲ್ಲಿ ಗುರುಗಳಾಗಿದ್ದ ಹೊಸಹಿತ್ಲು ಮಹಾಲಿಂಗ ಭಟ್ಟರ ಗುರುತ್ವದಲ್ಲಿ ಕೃಷ್ಣ ಮೂಲ್ಯ ಪಳಗಿದರು.
ಮುಂದೆ, ಹಲವಾರು ಮೇಳಗಳಲ್ಲಿ ತಿರುಗಾಟ ನಡೆಸಿ 1980ರಲ್ಲಿ ಕಟೀಲು ಮೇಳ ಸೇರಿದರು. ಕಟೀಲು ಮೇಳವು ಮೂಲ್ಯರಿಗೆ ತಮ್ಮ ಪ್ರತಿಭೆ ಪ್ರದರ್ಶಿಸುವ ವೇದಿಕೆ ಯಾಯಿತು. ಪೌರಾಣಿಕ ಪ್ರಸಂಗಗಳ ಆಳವಾದ ಜ್ಞಾನ ಲಭಿಸಿತು. ಪ್ರಸಿದ್ಧ ಹಾಗೂ ಅನುಭವಿ ಕಲಾವಿದರ ಸಂಪರ್ಕ ದೊರಕಿತು. ಏನಾದರೂ ಸಾಧಿಸಬೇಕೆಂಬ ಛಲವಿದ್ದ ಕೃಷ್ಣ ಮೂಲ್ಯರು ಹಿರಿಯ ಕಲಾವಿದರ ಒಡನಾಟದಿಂದ ಪರಿಪೂರ್ಣ ಕಲಾವಿದರಾಗಿ ಮೂಡಿಬಂದರು. ಕಟೀಲು ಮೇಳದಲ್ಲಿಯೇ ಅವರಿಗೆ ಪ್ರಧಾನ ಭಾಗವತರಾದ ಕುರಿಯ ಗಣಪತಿ ಶಾಸ್ತ್ರಿಗಳ ಸಂಸರ್ಗವಾಯಿತು. ಕುರಿಯ ಶಾಸ್ತ್ರಿಗಳು ಭಾಗವತರು ಮಾತ್ರವಲ್ಲ, ಉತ್ತಮ ರಂಗನಿರ್ದೇಶಕರು ಹಾಗೂ ದೂರದೃಷ್ಟಿಯುಳ್ಳವರು. ಕೈರಂಗಳರ ಪ್ರತಿಭೆ ಗುರುತಿಸಿ, ಉತ್ತಮ ಕಲಾವಿದನಾಗಿ ರೂಪುಗೊಳ್ಳಲು ಕಾರಣರಾದರು. ಸುಪ್ರಸಿದ್ಧ ಚೆಂಡೆವಾದಕರಾದ ನೆಡ್ಲೆ ನರಸಿಂಹ ಭಟ್ಟರೂ ಕೈರಂಗಳರನ್ನು ತಿದ್ದುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಶ್ರೀ ದೇವಿಮಹಾತೆಯ ವಿಷ್ಣು, ವಿವಿಧ ಆಖ್ಯಾನಧಿಗಳ ಶ್ರೀಕೃಷ್ಣ, ಶ್ರೀರಾಮ, ಭೀಷ್ಮ, ದೇವವ್ರತ, ಹನೂಮಂತ, ಚಿತ್ರಕೇತು, ಮಾರ್ತಾಂಡತೇಜ, ವಿಶ್ವಾಮಿತ್ರ, ದ್ರೋಣ, ಜಮದಗ್ನಿ, ಕಟೀಲು ಕ್ಷೇತ್ರ ಮಹಾತೆಯ ಜಾಬಾಲಿ ಮುಂತಾದ ಪಾತ್ರಗಳಲ್ಲಿ ಕೈರಂಗಳರ ನಿರ್ವಹಣೆ ತುಂಬಾ ಹೆಸರು ಗಳಿಸಿದೆ. ಕೈರಂಗಳರ ಪ್ರಸ್ತುತಿ ತುಂಬಾ ಸೊಗಸು. ನೇರವಾಗಿ ಪ್ರೇಕ್ಷಕರನ್ನು ಮುಟ್ಟುವಂತಹುದು. ನಿರಂತರ 36 ವರ್ಷಗಳಿಂದ ಕಟೀಲು ಮೇಳದಲ್ಲೇ ತಿರುಗಾಟ ನಡೆಸುತ್ತಿದ್ದಾರೆ.
ಪತ್ನಿ ಲೀಲಾವತಿ, ಕಿರಣ್ ರಾಜ್, ಕಿಶನ್ ರಾಜ್ ಹಾಗೂ ದೇವಿಕಲಾ ಎಂಬ ಮೂವರು ಮಕ್ಕಳನ್ನು ಹೊಂದಿದ ಕೈರಂಗಳರು ವಿನಯಶೀಲರು. ಮಿತಭಾಷಿಗಳಾದರೂ ಕಲಾವಿದರೊಂದಿಗೆ ಹಾಗೂ ಯಕ್ಷಗಾನ ಅಭಿಮಾನಿಗಳೊಂದಿಗೆ ಸದಾ ಸ್ನೇಹಿಯಾಗಿಯೇ ಇರುವವರು.
ಯಕ್ಷಗಾನ ಸಂಬಂಧಿ ಕಲಾ ಚಟುವಟಿಕೆಗಳಿಂದ ಗಮನ ಸೆಳೆಯುತ್ತಿರುವ ಮಂಗಳೂರಿನ ಉರ್ವದ ಯಕ್ಷಾರಾಧನಾ ಕಲಾ ಕೇಂದ್ರ ಸಂಸ್ಥೆಯ ವತಿಯಿಂದ ಕೃಷ್ಣ ಮೂಲ್ಯ ಅವರ ಸೇವೆಯನ್ನು ಪರಿಗಣಿಸಿ ಇತ್ತೀಚೆಗೆ `ಯಕ್ಷಕಲಾರಾಧಕ’ ಪ್ರಶಸ್ತಿ ನೀಡಿ ಗೌರವಿಸಿತು. ಇದಕ್ಕೂ ಮುನ್ನ ವಿಟ್ಲ ಜೋಷಿ ಪುರಸ್ಕಾರಕ್ಕೂ ಮೂಲ್ಯ ಭಾಜನರಾಗಿದ್ದರು.
ಎಂ. ಶಾಂತರಾಮ ಕುಡ್ವ, ಮೂಡಬಿದಿರೆ
(ಕೃಪೆ :ಉದಯವಾಣಿ)