ವಿದ್ಯಾಭರಣ್.., ರ್ಯಾಂಪ್ ಮೇಲೆ ಹೆಜ್ಜೆ ಹಾಕುತ್ತ, ಹಿರಿತೆರೆಗೆ ಸಾಗಿದ ಉದಯೋನ್ಮುಖ ಕಲಾವಿದ. ನಟನಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಮಾಡೆಲಿಂಗ್ ಒಂದು ಪ್ರವೇಶದ್ವಾರವಿದ್ದಂತೆ. ಮಾಡೆಲ್ಗಳೇ ತಾರೆಯರಾಗುತ್ತಿರುವುದು ಇದೇ ಟ್ರೆಂಡ್ನಿಂದ. ಈ ಪಟ್ಟಿಯಲ್ಲೀಗ ಸೇರ್ಪಡೆಯಾದ ಹೆಸರು ವಿದ್ಯಾಭರಣ.
ವಿದ್ಯಾಭರಣ ಅವರು ಕರ್ನಾಟಕ ರಾಜ್ಯ ಕುಂಬಾರ ಸಂಘದ ಅಧ್ಯಕ್ಷರಾದ ಶಿವಕುಮಾರ್ ಚೌಡ ಶೆಟ್ಟಿ ಹಾಗು ಶಶಿಕಲಾ ದಂಪತಿಗಳ ಸುಪುತ್ರ. ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ನಾಲ್ಕನೇ ಸೆಮಿಸ್ಟರ್ ವಿದ್ಯಾರ್ಥಿ. ಬದುಕಿನ ಪ್ರತಿ ಹೆಜ್ಜೆಯಲ್ಲೂ ಹೊಸತನ ಹುಡುಕುತ್ತಿರುವ ಭರಣರನ್ನು ಆಭರಣದಂತೆ ಸೆಳೆದದ್ದು ಮಾಡೆಲಿಂಗ್ ಕ್ಷೇತ್ರ. ಆ ಸೆಳೆತಕ್ಕೂ ಒಂದು ಕಾರಣ ಇದೆ. ಮಾಡೆಲಿಂಗ್ ಹಾಗೂ ನಟನೆ ಅವರ ಬಾಲ್ಯದ ಕನಸು. ರ್ಯಾಂಪ್ ಮೇಲೆ ನಡೆಯಬೇಕು, ನಟನೆಯಲ್ಲಿ ಮಿಂಚಬೇಕು ಎನ್ನುವ ತೀಕ್ಷ್ಣ ಆಸೆ. ಈ ಎಲ್ಲ ಆಸೆಗಳು ಕೈಗೂಡಿದ್ದು ಅವರ ಅದೃಷ್ಟ ಎನ್ನುತ್ತಾರೆ. ಕಾರಣ ರ್ಯಾಂಪ್ ಮೇಲೆ ಹೆಜ್ಜೆ ಹಾಕುತ್ತಲೇ ಮೂರು ಚಿತ್ರಗಳಲ್ಲಿ ನಾಯಕನ ಪಾತ್ರವಹಿಸಿದ್ದಾರೆ. ‘ನಾನು ಜ್ಞಾನಾರ್ಜನೆಗಾಗಿ ಓದುತ್ತಿದ್ದೇನೆ. ವೃತ್ತಿಗಾಗಿ ಅಲ್ಲ’ ಎನ್ನುವ ವಿದ್ಯಾಭರಣ, ಮಾಡೆಲಿಂಗ್ ಹಾಗೂ ಸಿನಿಮಾ ಅನುಭವವನ್ನು ಇಲ್ಲಿ ಹಂಚಿಕೊಂಡಿದ್ದಾರೆ.
ಮಾಡೆಲಿಂಗ್ ಕ್ಷೇತ್ರ ಆಯ್ಕೆಗೆ ಕಾರಣ?
ಮಾಡೆಲಿಂಗ್ ನನ್ನ ಬಾಲ್ಯದ ಕನಸು. ಟೀವಿ, ಪತ್ರಿಕೆಗಳ ಜಾಹೀರಾತುಗಳಲ್ಲಿ ಮಾಡೆಲ್ಗಳನ್ನು ನೋಡಿ ನಾನು ಅವರಂತೆ ಆಗಬೇಕು ಎಂಬ ಕನಸು ಕಾಣುತ್ತಿದ್ದೆ. ಅದಕ್ಕೆ ಪೂರಕವಾಗಿ ಶಾಲಾ ದಿನಗಳಲ್ಲೇ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೆ. ಈ ಪಾಲ್ಗೊಳ್ಳುವಿಕೆ ನನಗೆ ಹೆಚ್ಚು ಸಹಕಾರಿಯಾಯಿತು.
ಮನೆಯವರ ಸಹಕಾರ ಹೇಗಿತ್ತು?
ಮಾಡೆಲಿಂಗ್ ಕನಸು ನನ್ನಲ್ಲಿ ಮೂಡಲು ಕಾರಣ ನಮ್ಮ ಮನೆಯವರೇ. ಅದರಲ್ಲೂ ಮುಖ್ಯವಾಗಿ ನಮ್ಮ ಅಪ್ಪ ಹಾಗೂ ಅವರ ಸ್ನೇಹಿತರು. ‘ನೋಡಲು ಚೆನ್ನಾಗಿದ್ದಿಯಾ ನೀನು ಏಕೆ ನಟನೆಗೆ ಪ್ರಯತ್ನಿಸಬಾರದು’ ಎನ್ನುತ್ತಿದ್ದರು. ತಂದೆ ಕೂಡ ಪ್ರೋತ್ಸಾಹ ನೀಡುತ್ತಿದ್ದರು. ಇಂದಿಗೂ ಮನೆಯವರ ಪೂರ್ಣ ಸಹಕಾರ ನನಗಿದೆ.
ಮಾಡೆಲಿಂಗ್ ಕ್ಷೇತ್ರದ ಅನುಭವ ಹೇಳಿ?
ನಾನು ಮೊದಲಿನಿಂದಲೂ ಮಾಡೆಲಿಂಗ್ ಕನವರಿಕೆಯಲ್ಲಿ ಬೆಳೆದವನು. ನನಗೆ ಕ್ಷೇತ್ರ ಹೊಸತು ಎನ್ನಿಸಲಿಲ್ಲ. ಕಾಲೇಜು ದಿನಗಳಲ್ಲಿ ಅನೇಕ ಫ್ಯಾಷನ್ ಷೋ ಗಳಲ್ಲಿ ಭಾಗವಹಿಸುತ್ತಿದ್ದೆ. ನನ್ನ ಮಾಡೆಲಿಂಗ್ ಹಾಗೂ ನಟನಾ ಬದುಕಿಗೊಂದು ಭದ್ರ ಬುನಾದಿ ದೊರಕಿದ್ದು ‘ಸಿಲ್ವರ್ ಸ್ಟಾರ್’ ಆಯೋಜಿಸಿದ್ದ ‘ಮಿಸ್ಟರ್ ಅಂಡ್ ಮಿಸ್ ಸೌತ್ ಇಂಡಿಯಾ’ ಮೂಲಕ.
‘ಮಿಸ್ಟರ್ ಅಂಡ್ ಮಿಸ್ ಸೌತ್ ಇಂಡಿಯಾ’ದಲ್ಲಿ ಭಾಗವಹಿಸಿದ ಅನುಭವ ಹೇಗಿತ್ತು?
ನಾನು ಈ ಕಾರ್ಯಕ್ರಮದ ಕುರಿತು ಟೀವಿ ಹಾಗೂ ಪತ್ರಿಕೆಗಳಲ್ಲಿ ಜಾಹೀರಾತು ನೋಡಿ ತಿಳಿದೆ. ಸಿಲ್ವರ್ ಸ್ಟಾರ್ ನಿಜಕ್ಕೂ ಬದುಕಿಗೊಂದು ತಿರುವು ನೀಡಿತ್ತು. ನನಗೆ ಗೆಲ್ಲಲೇಬೇಕು ಎಂಬ ಛಲವಿತ್ತು. ‘ಸಿಲ್ವರ್ ಸ್ಟಾರ್’ನಲ್ಲಿ ಕೊರಿಯೋಗ್ರಾಫರ್ ಆಗಿದ್ದ ವಂದಿತಾ ಹಾಗೂ ಆಯೋಜಕರಾದ ರವಿ ಹಾಸನ್ ಅವರ ಬೆಂಬಲ ಸ್ಫೂರ್ತಿಯಾಯಿತು. ‘ಮಿಸ್ಟರ್ ಇಂಡಿಯಾ’ ದಲ್ಲಿ ಗೆಲುವು ಕಂಡಾಗ ನನಗೆ 12 ಚಿತ್ರಗಳಲ್ಲಿ ನಟಿಸಲು ಅವಕಾಶ ಬಂದಿತ್ತು.
ನಟನೆ ಬಗ್ಗೆ ನಿಮ್ಮ ಮಾತು?
ಮಾಡೆಲಿಂಗ್ನಂತೆ ನಟನೆ ಕೂಡ ನನ್ನ ಕನಸಿನ ಭಾಗ. ನನಗೆ ಜನರಿಗೆ ಮನರಂಜನೆ ನೀಡುವ ಚಿತ್ರಗಳಲ್ಲಿ ನಟಿಸುವುದು ಮುಖ್ಯ. ಆ ಕಾರಣಕ್ಕಾಗಿ ಚಿತ್ರಗಳ ಆಯ್ಕೆಯಲ್ಲಿ ಚೂಸಿಯಾದೆ. ಸದ್ಯ ಕನ್ನಡದ ಎರಡು ಹಾಗೂ ತೆಲುಗಿನ ಒಂದು ಚಿತ್ರದಲ್ಲಿ ನಟಿಸುತ್ತಿದ್ದೇನೆ.
ಯಾವ ಚಿತ್ರಗಳಲ್ಲಿ ನಟಿಸುತ್ತಿದ್ದೀರಿ?
ಕನ್ನಡದ ‘ಮಸ್ತ್ ಮಜಾ ಮಾಡಿ 2’, ಅಗ್ನಿ ಶ್ರೀಧರ್ ಬ್ಯಾನರ್ ಅಡಿಯಲ್ಲಿ ಬರುತ್ತಿರುವ ಹೆಸರಿಡದ ಚಿತ್ರ ಹಾಗೂ ತೆಲುಗಿನ ಹಾರರ್ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದೇನೆ. ಈ ಮೂರು ಚಿತ್ರಗಳಲ್ಲೂ ಭಿನ್ನ ಪಾತ್ರವಿದೆ.
ಸಿನಿಮಾ ಮತ್ತು ರ್ಯಾಂಪ್ ಯಾವುದು ಹೆಚ್ಚು ಸವಾಲು ಒಡ್ಡುತ್ತದೆ?
ರ್ಯಾಂಪ್ ಮೇಲೆ ಹೆಜ್ಜೆ ಹಾಕುವುದಕ್ಕಿಂತ ಸಿನಿಮಾಗಳಲ್ಲಿ ಅಭಿನಯಿಸುವುದೇ ತುಂಬಾ ಸವಾಲು ಎನ್ನಿಸುತ್ತದೆ. ನಟನೆ, ಫೈಟಿಂಗ್, ಡ್ಯಾನ್ಸ್ ಎಲ್ಲವುಗಳ ಸಮ್ಮಿಶ್ರಣ ನಟನೆ. ನಟನೆ ನನಗೆ ಸವಾಲು ಎನ್ನಿಸಿತ್ತು.
ಭವಿಷ್ಯದ ಕನಸುಗಳೇನು?
ಮಾಡೆಲಿಂಗ್ ನನಗೆ ನಟನಾ ಬದುಕಿಗೆ ದಾರಿ ತೋರಿದೆ. ಮಾಡೆಲಿಂಗ್ ಕ್ಷೇತ್ರವನ್ನು ಯಾವುದೇ ಕಾರಣಕ್ಕೂ ಬಿಟ್ಟು ಹೋಗುವುದಿಲ್ಲ. ಅದರ ಜೊತೆಗೆ ಸಿನಿಮಾಗಳಲ್ಲೂ ನಟಿಸುತ್ತೇನೆ. ನನಗೆ ಕೌಟುಂಬಿಕ ಹಾಗೂ ಮನರಂಜನಾ ಚಿತ್ರಗಳಲ್ಲಿ ನಟಿಸುವ ಆಸೆಯಿದೆ.