ಪ್ರತಿಭಾವಂತರಾದ ಅನೇಕ ಕಲಾವಿದರು ಇನ್ನೂ ಅವಕಾಶಗಳಿಗಾಗಿ ಹುಡುಕಾಡುತ್ತಿದ್ದಾರೆ. ಆದರೆ ಪ್ರತಿಭೆಯ ಜೊತೆಗೆ ಒಂದಿಷ್ಟು ಅದೃಷ್ಟವಿದ್ದರೆ ಕಲಾವಿದನೊಬ್ಬ ಚಿತ್ರರಂಗದಲ್ಲಿ ಮಿಂಚಬಲ್ಲ ಎಂಬುದಕ್ಕೆ ನಟ ಕಾರ್ತಿಕ್ ಬಂಜನ್ ಅತ್ತಾವರ ಉತ್ತಮ ಉದಾಹರಣೆ. ಸಿನಿಮಾ ಯಾವುದೇ ಹಿನ್ನೆಲೆಯಿಲ್ಲದ ಕುಟುಂಬದಿಂದ ಬಂದಿದ್ದರೂ ತನ್ನ ಸ್ವ ಪ್ರತಿಭೆಯಿಂದಲೇ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಾ ಬಂದಿದ್ದಾರೆ. ನಟನೆಯಲ್ಲಿ ಆಸಕ್ತಿಯಿದ್ದ ಇವರಿಗೆ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ತಾನಾಗಿ ಒಲಿದು ಬಂದಿತ್ತು.
ಮಂಗಳೂರಿನ ಸ್ಥಳೀಯ ಕಂಪೆನಿಯೊಂದರಲ್ಲಿ ಕಾರ್ತಿಕ್ ಬಂಜನ್ ಅವರು ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ನೌಕರನಾಗಿ ಜನ ಕೊಡುವ ಮರ್ಯಾದೆಗಿಂತ ವ್ಯಕ್ತಿತ್ವಕ್ಕೆ ಒಂದು ಐಡೆಂಟಿಟಿ ಸೃಷ್ಟಿಸಿಕೊಳ್ಳಬೇಕು ಎಂಬ ಧೋರಣೆ ಅವರ ಮನದಲ್ಲಿತ್ತು. ಅದಕ್ಕೆ ಪೂರಕವಾಗಿ ಸಾಫ್ಟ್ ವೇರ್ ಕಂಪೆನಿಯಲ್ಲಿ ಸಹೋದ್ಯೋಗಿಯಾಗಿದ್ದ ಸಂತೋಷ್ ಕುಮಾರ್ ಕೊಂಚಾಡಿ ಎಂಬವರ ಮೂಲಕ ಸಿನಿಮಾದಲ್ಲಿ ಅಭಿನಯಿಸುವ ಸದವಕಾಶ ಸಿಕ್ಕಿತು.
ಸಂತೋಷ ಅವರ ಸಹೋದರ ಪ್ರವೀಣ್ ಕುಮಾರ್ ಕೊಂಚಾಡಿ `ರಿಕ್ಷಾ ಡ್ರೈವರ್’ ಚಿತ್ರದ ನಿರ್ಮಾಪಕರು. ಇವರೇ ಸಿನೆಮಾಕ್ಕೆ ಕತೆ, ಚಿತ್ರಕತೆ, ಸಂಭಾಷಣೆ ಬರೆದವರು. ಈ ಚಿತ್ರಕ್ಕೆ ನಾಯಕನ ಹುಡುಕಾಟದಲ್ಲಿದ್ದಾಗ ಸಂತೋಷ್ ಅವರ ಕಣ್ಣಿಗೆ ಬಿದ್ದಿದ್ದು ಕಾರ್ತಿಕ್. ಚಿತ್ರದ ಪಾತ್ರಕ್ಕೆ ಸ್ನೇಹಿತನೇ ಫಿಟ್ ಎಂದು ಅವರ ಮನಸ್ಸಿಗೆ ಬಂದಿದ್ದೇ `ಈ ಸಿನೆಮಾದಲ್ಲಿ ನೀನೆ ಯಾಕೆ ಅಭಿನಯಿಸಬಾರದು’ ಎಂದು ಸ್ನೇಹಿತನನ್ನು ಹುರಿದುಂಬಿಸಿದರು. ಮೊದಲೇ ಮಾಡೆಲಿಂಗ್, ಆಕ್ಟಿಂಗ್ ನಲ್ಲಿ ಆಸಕ್ತಿಯಿದ್ದ ಕಾರ್ತಿಕ್ ಗೆ ಯಾವುದಾದರೊಂದು ಚಿತ್ರದಲ್ಲಿ ಅ ಭಿನಯಿಸಬೇಕು ಎಂಬ ಮಹದಾಸೆ ಮನದಲ್ಲಿ ಇತ್ತು. ಇಲ್ಲಿ ಸಿನೆಮಾದ ಹೀರೊ ಆಗುವ ಅವಕಾಶ ತಾನಾಗಿ ಕಾಲಬುಡಕ್ಕೆ ಬಂದಾಗ ಬೇಡವೆನ್ನುವರೇ ? ಇದೇ ಸೂಕ್ತ ಅವಕಾಶವೆಂದುಕೊಂಡು ಮುಂದಡಿಯಿಟ್ಟರು. ಇದಕ್ಕೂ ಮುನ್ನ `ಚೆಲ್ಲಾಪಿಲ್ಲಿ’ ಕನ್ನಡ ಚಿತ್ರದಲ್ಲಿ ಚಿಕ್ಕದೊಂದು ಪಾತ್ರ ಮಾಡಿದ್ದು ಬಿಟ್ಟರೆ ಕಾರ್ತಿಕ್ ಗೆ ಅಭಿನಯದ ಅನುಭವವಿರಲಿಲ್ಲ. ಚೊಚ್ಚಲ ಸಿನಿಮಾ `ರಿಕ್ಷಾ ಡ್ರೈವರ್ ‘ ನಲ್ಲಿ ತನ್ನ ಅಭಿನಯ ಸಾಮರ್ಥ್ಯವನ್ನು ಸಾಬೀತುಪಡಿಸಿದ ಕಾರ್ತಿಕ್ , ಪ್ರೇಕ್ಷಕರನ್ನು ಆಕರ್ಷಿಸಿದ್ದರು. ರಿಕ್ಷಾ ಡ್ರೈವರ್ ಮೂಲಕ ಕಾರ್ತಿಕ್ ಭರವಸೆಯ ನಟ ಎಂಬುದನ್ನು ಸಾಬೀತುಪಡಿಸಿದ್ದಾರೆ.
ನಿರ್ದೇಶಕ ಹ.ಸೂ. ರಾಜಶೇಖರ್ ನಿರ್ದೇಶನದ `ರಿಕ್ಷಾ ಡ್ರೈವರ್’ ತುಳು ಸಿನಿಮಾಕ್ಕೆ 2013ರ ಸಾಲಿನ ಉತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಮತ್ತು ತುಳು ಸಿನೆಮೋತ್ಸವದಲ್ಲಿ ರಿಕ್ಷಾ ಡ್ರೈವರ್ 2012-13ನೇ ಸಾಲಿನ ಅತ್ಯುತ್ತಮ ಚಿತ್ರ ಪುರಸ್ಕಾರಗಳನ್ನು ಪಡೆದುಕೊಂಡಿದೆ. ತುಳು ಚಿತ್ರರಂಗದಲ್ಲೇ ಬಹಳ ಅದ್ದೂರಿ ಚಲನಚಿತ್ರ ಇದಾಗಿದ್ದು, ಕಾರ್ತಿಕ್ ಈ ಚಿತ್ರದಲ್ಲಿ ಅನುಭವಿಯಂತೆ ಮಿಂಚಿದ್ದಾರೆ.
ರಿಕ್ಷಾ ಡ್ರೈವರ್ ಹಿಟ್ ಸಿನಿಮಾ ಬಳಿಕ “ಜುಗಾರಿ’ ಎಂಬ ಮತ್ತೊಂದು ತುಳು ಚಿತ್ರದಲ್ಲಿ ಕಾರ್ತಿಕ್ ಅಭಿನಯಿಸಿದ್ದಾರೆ. ಆರ್.ಧನರಾಜ್ ಮತ್ತು ಪಮ್ಮಿ ಕೋಡಿಯಾಲ್ ಬೈಲ್ ನಿರ್ಮಾಪಕತ್ವದ ಈ ಚಿತ್ರದ ಆನಂದ್ ಪಿ.ರಾಜ್ ಈ ಚಿತ್ರಕ್ಕೆ ನಿರ್ದೇಶಕರಾಗಿದ್ದು ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಡಾನ್ಸಿಂಗ್ ಸ್ಟಾರ್ ೨ ನಲ್ಲೂ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದ ಕಾರ್ತಿಕ್, ಕಲರ್ಸ್ ಕನ್ನಡದ `ಯಶೋದೆ’ ಧಾರಾವಾಹಿಯ ಮೂಲಕ ಮನೆ ಮಾತಾದವರು.
ಮಂಗಳೂರು ಅತ್ತಾವರದ ಕೃಷ್ಣ- ಸರಸ್ವತಿ ದಂಪತಿಯ ಸುಪುತ್ರನಾದ ಕಾರ್ತಿಕ್ ಬಂಜನ್ ಕುಲಾಲ ಸಮಾಜದ ಹೆಮ್ಮೆಯ ಕಲಾವಿದ. ಸಮುದಾಯದಲ್ಲಿ ಸಿನಿಮಾ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಪ್ರಪ್ರಥಮ ಬಾರಿಗೆ ಚಿತ್ರವೊಂದರಲ್ಲಿ ನಾಯಕ ನಟನಾಗಿ ಅಭಿನಯಿಸುವ ಮೂಲಕ ಸಮಾಜಕ್ಕೆ ಹೆಮ್ಮೆ ತಂದವರು. ಇವರ ಕುಟುಂಬ ಕುಲಾಲ ಸಂಘದ ಸಕ್ರಿಯ ಕಾರ್ಯಕರ್ತರಾಗಿದ್ದು, ಕಾರ್ತಿಕ್ ಕೂಡ ಸಂಘದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಯುವಕರಿಗೆ ಸ್ಫೂರ್ತಿ ತುಂಬಿದ್ದಾರೆ. ಬಣ್ಣದ ಲೋಕದ ಬದುಕಲ್ಲಿ ಇವರು ಇನ್ನಷ್ಟು ಉತ್ತುಂಗಕ್ಕೇರಲಿ ಎಂಬುದು `ಕುಲಾಲ್ ವರ್ಲ್ಡ್ ಡಾಟ್ ಕಾಂ’ನ ಹಾರೈಕೆ.
ಕುಲಾಲ ಸಮಾಜದ ಪ್ರಥಮ ನಾಯಕ ನಟ ಕಾರ್ತಿಕ್ ಬಂಜನ್ ಅತ್ತಾವರ
cinema /yakshagana
2 Mins Read