ಮಂಗಳೂರು ಬಜ್ಪೆ ಸಮೀಪದ ಅದ್ಯಪಾಡಿಯಲ್ಲಿ ಜನಿಸಿದ ಪಿ.ಕೆ. ಸಾಲ್ಯಾನ್ (ಪದ್ಮನಾಭ ಕೃಷ್ಣಪ್ಪ ಸಾಲ್ಯಾನ್ ) 1950 ರ ತನ್ನ ಎಳೆಯ ಪ್ರಾಯದಲ್ಲೇ ಬದುಕು ಕಟ್ಟಿಕೊಳ್ಳಲು ದೂರದ ಮುಂಬಯಿ ಸೇರಿದರು. ಅಲ್ಲಿ ಸಾಲ್ಯಾನರು ಮುದ್ರಣ ಕೆಲಸಕ್ಕೆ ಸೇರಿ ರಾತ್ರಿ ಶಾಲೆಯಲ್ಲಿ ಓದಿದರು. ಯಂಗ್ ಮೆನ್ಸ್ ರಾತ್ರಿ ಶಾಲೆಯಲ್ಲಿ ಹತ್ತನೆಯ ತರಗತಿಯನ್ನು ಮುಗಿಸಿ ಮುಂದೆ ತನ್ನದೇ ಆದ ಆರತಿ ಪ್ರಿಂಟರ್ಸ್ ನ್ನು ಪ್ರಾರಂಭಿಸಿ ಕನ್ನಡಿಗರ ಗಮನ ಸೆಳೆದರು.
1993 ರಿಂದ 2013 ರವರೆಗೆ ಸುಮಾರು 20 ವರ್ಷ ಮುಂಬೈ ಕುಲಾಲ ಸಂಘವನ್ನ ಮುನ್ನೆಡೆಸಿದ ಸಾಲ್ಯಾನ್ ರವರ ಸೇವೆ ಅನನ್ಯವಾದದ್ದು. ಅವರ ಕುಟುಂಬದ ತ್ಯಾಗ ಶ್ರೇಷ್ಠ ವಾದದ್ದು. ಕುಲಾಲ ಸಮಾಜದ ಸೇವೆಯನ್ನು ಮಾಡುತ್ತಾ ಮುಂಬಯಿಯಲ್ಲಿ ಕುಲಾಲ ಭವನ ನಿರ್ಮಾಣಕ್ಕಾಗಿ ಉಪನಗರ ಥಾಣೆಯಲ್ಲಿ ಕುಲಾಲ ಸಮಾಜಕ್ಕೆ ತನ್ನದೇ ಆದ ಸ್ವಂಥ ಜಾಗವನ್ನು ಪಡೆದು ಅದರಲ್ಲಿ ಮುಂದೆ ಕುಲಾಲ ಭವನ ನಿರ್ಮಾಣ ಮಾಡುವುದು ಅವರ ಕನಸಾಗಿತ್ತು. ಅದಕ್ಕೆ ಮುನ್ನ ಮಂಗಳೂರಿನಲ್ಲಿ ಕುಲಾಲ ಭವನ ನಿರ್ಮಾಣಗೊಳ್ಳುತ್ತಿದ್ದು ಅದರ ಕಾರ್ಯವು ತೀರ್ವಗತಿಯಲ್ಲಿ ಸಾಗುತ್ತಿದೆ. ಇದೆಲ್ಲರ ಹಿಂದಿರುವ ಒಂದು ಶಕ್ತಿ ಪಿ. ಕೆ. ಸಾಲ್ಯಾನ್. ಇವರು ಅಪರೂಪದ ವ್ಯಕ್ತಿತ್ವವನ್ನು ಹೊಂದಿರುವ ಗಣ್ಯ ವ್ಯಕ್ತಿ.
ಮುಂಬಯಿ ಮಹಾನಗರ ಹಾಗೂ ಉಪನಗರಗಳಲ್ಲಿ ಕನ್ನಡಿಗರ ಯಾವುದೇ ಕಾರ್ಯಕ್ರಮಗಳು ಯಾ ಸಮಾರಂಭಗಳಿದ್ದಲ್ಲಿ ಪ್ರಥಮ ಸಾಲಲ್ಲಿ ಕಾಣುತ್ತಿರುವ ನಗುಮುಖದ ವ್ಯಕ್ತಿತ್ವ ಪಿ. ಕೆ. ಸಾಲ್ಯಾನ್.
ಕನ್ನಡ, ತುಳು ಹಾಗೂ ಜಾತೀಯ ಸಂಘಟನೆಗಳೊಂದಿಗೆ ಸ್ನೇಹ ಸಂಬಂಧವನ್ನು ಬೆಳೆಸಿ, ತುಳು ಕನ್ನಡಿಗರೆಲ್ಲರ ಪ್ರೀತಿಗೆ ಪಾತ್ರರಾದ ಪಿ. ಕೆ. ಸಾಲ್ಯಾನ್ ಅನಾರೋಗ್ಯದಿಂದಾಗಿ 2016, ಜುಲೈ20ರಂದು ಸ್ವರ್ಗಸ್ಥರಾದರು.
——————————————————————————————————————-
ಪಿ. ಕೆ. ಸಾಲ್ಯಾನ್ ಅವರು ನಿಧನರಾದಾಗ ಡಾ| ದಿನೇಶ್ ಶೆಟ್ಟಿ ರೆಂಜಾಳ ಅವರು `ಉದಯವಾಣಿ’ಗೆ ಬರೆದ ನುಡಿ ನಮನವನ್ನು ಇಲ್ಲಿ ಪ್ರಕಟಿಸಲಾಗಿದೆ.
——————————————————————————————————————-
ಆರಿ ಹೋಯಿತು ಕುಲಾಲ “ದೀಪ’ ಪಿ. ಕೆ. ಸಾಲ್ಯಾನ್
ಹಣೆಯಲ್ಲಿ ಹರೆಯದ ನೆರಿಗೆ ಕಾಣುತ್ತಿಲ್ಲ. ತಲೆಯಲ್ಲಿ ಬೆಳ್ಳಿಗೆರೆ ಮಿಂಚುತ್ತಿಲ್ಲ. ಮೊಗದ ಕಿರುನಗೆ ಕಣ್ಮರೆಯಾಗಿಲ್ಲ. ಕಣ್ಣುಗಳ ಕಾಂತಿ ಕುಗ್ಗಿ ಹೋಗಿಲ್ಲ, ಮೊನ್ನೆ ಮೊನ್ನೆಯವರೆಗೆ ಅತ್ತಿತ್ತ ಓಡಾಡಿ, ಪರಿಚಿತರನ್ನು ಕಂಡು ಮುಗುಳ್ನಗೆ ಬೀರಿ, ಮಕ್ಕಳು-ಹಿರಿಯರು ಎಂಬ ಭೇದ-ಭಾವವಿಲ್ಲದೆ, ಹತ್ತಿರ ಬಂದು ಯೋಗಕ್ಷೇಮ ವಿಚಾರಿಸಿ, ಸದಾ ಸಫಾರಿಯ ಠಾಕುಠೀಕು ಧಿರಿಸಿನಲ್ಲಿ ಕಂಡು ಬರುತ್ತಿದ್ದ ಪಿ. ಕೆ. ಸಾಲ್ಯಾನ್ ಅವರು ಇನ್ನು ನೆನಪು ಮಾತ್ರ. ಇಂದು ಬೆಳ್ಳಂಬೆಳಗ್ಗೆ ಮೊಬೈಲ್ ಕರೆಯಲ್ಲಿ ಮಿತ್ರರೊಬ್ಬರು ಪಿ. ಕೆ. ಸಾಲ್ಯಾನ್ ಇನ್ನಿಲ್ಲ ಎಂದಾಕ್ಷಣ ತನ್ನಿಂದ ತಾನಾಗೆ ಕಣ್ಣಂಚಿನಿಂದ ಹನಿಯೊಂದು ಜಾರಿ ಬಿತ್ತು.
ಕುಲಾಲ ಸಂಘದ ವತಿಯಿಂದ ಮಂಗಳೂರಿನಲ್ಲಿ ನಿರ್ಮಾಣವಾಗುತ್ತಿರುವ ಕುಲಾಲ ಭವನವನ್ನು ಸಮಾಜಕ್ಕೆ ಅರ್ಪಿಸಬೇಕು ಎಂದು ಬೆಟ್ಟದಷ್ಟು ಆಸೆ, ಆಕಾಂಕ್ಷೆಯನ್ನು ಇಟ್ಟುಕೊಂಡಿದ್ದ ಅವರು ಕೊನೆಗೂ ಕಾಲನ ಕರೆಗೆ ಓಗೊಟ್ಟು ಬಾರದ ಲೋಕಕ್ಕೆ ಪಯಣಿಸಿದ್ದಾರೆ. ನಿಜ ಕಣ್ಣ್ರೀ , ಮಾನವನ ಜೀವನ ನೀರ ಮೇಲಿನ ಗುಳ್ಳೆಯಂತೆ ನಶ್ವರವಾದುದು. ಹುಟ್ಟಿದ ಮನುಷ್ಯನಿಗೆ ಎಂದಾದರೊಂದು ದಿನ ಮರಣ ತಪ್ಪದು. ಈ ಪ್ರಪಂಚದಲ್ಲಿ ಹುಟ್ಟಿ ಬೆಳೆದು, ಈ ಜೀವನವನ್ನು ರೂಪಿಸಿಕೊಳ್ಳಲು ಅದೆಷ್ಟು ಕಷ್ಟ ಪಟ್ಟರೂ ಮರಣ ಎಂಬುವುದು ಕಟ್ಟಿಟ್ಟ ಬುತ್ತಿ. ಅದು ನಮ್ಮನ್ನು ಬಿಟ್ಟು ಹೋಗುವುದಿಲ್ಲ. ಹಾಗಾದರೆ ಈ ಬದುಕಿಗೆ ಅರ್ಥವೇನು?, ಸಾರ್ಥಕ್ಯ ಪಡೆಯುವ ಬಗೆ ಹೇಗೆ? ಎಂಬ ಜಿಜ್ಞಾಸೆಗಳು ನಮ್ಮನ್ನು ಕಾಡುತ್ತಿರುತ್ತವೆ. ಈ ಎಲ್ಲ ಪ್ರಶ್ನೆಗಳಿಗೆ ಉತ್ತಮ ನಿದರ್ಶನ ಎಂದರೆ ಇಹಲೋಕವನ್ನು ತ್ಯಜಿಸಿದ ಕುಲಾಲ ಸಂಘ ಮುಂಬಯಿ ಇದರ ಗೌರವಾಧ್ಯಕ್ಷ ಸಾಲ್ಯಾನ್ ಅವರು.
ಮುಂಬಯಿಯಲ್ಲಿ ಮನೆಮಾತಾಗಿರುವ ಪಿ. ಕೆ. ಸಾಲ್ಯಾನ್ ಅವರೋರ್ವ ಅಪರೂಪದ ವ್ಯಕ್ತಿಗಳಲ್ಲಿ ಅಪರೂಪ. ಅಮೂಲ್ಯ ಸಾಧಕ. ನಗರದ ಬೇಗುದಿ ಮತ್ತು ತರಾತುರಿಯ ಜೀವನದಲ್ಲಿ ಶ್ರೀಮಂತ ಸಹೃದಯ, ಸರಳ, ಸಜ್ಜನ, ಶಾಂತ ಸ್ವಭಾವದ, ಉನ್ನತ ಮೌಲ್ಯಗಳನ್ನು ಮೈಗೂಡಿಸಿಕೊಂಡ ವ್ಯಕ್ತಿಯಾಗಿ, ತುಳು-ಕನ್ನಡಿಗರ ಶಕ್ತಿಯಾಗಿ ಕಂಗೊಳಿಸುವ ಪಿ. ಕೆ. ಸಾಲ್ಯಾನ್ ಅವರು ಇನ್ನು ಮುಂದೆ ನೆನಪು ಮಾತ್ರ ಎಂಬುದನ್ನು ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ.
“ಬದುಕು ಬರೀ ತಿನ್ನಲಿಕ್ಕಲ್ಲ. ದೇಹ ಕೇವಲ ಸುಖೀಸಲಿಕ್ಕಲ್ಲ
ಉಂಡುಟ್ಟು ನಲಿಯದೇ ಬಾಳುವೆಯ ಗುರಿಯಲ್ಲ
ಮುಡಿಪಾಗಲಿ ನಿನ್ನ ಜೀವನದ ಸರ್ವರ ಸೇವೆಗೆ
ಜೀವಿತ ಚಂದನವಾದರೆ ಸಾರ್ಥಕ -ಮಣ್ಣಿನ ಮಗ’
ಎಂದು ಕವಿ ದೊಡ್ಡರಂಗೇ ಗೌಡ ಹೇಳಿದ ತತ್ವವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡವರು ಪಿ. ಕೆ. ಸಾಲ್ಯಾನ್. ಸಂಘಟಕರಾಗಿ, ಸಮಾಜ ಸೇವಕರಾಗಿ, ಯಶಸ್ವಿ ಉದ್ಯಮಿಯಾಗಿ, ಸಾಹಿತ್ಯಾಭಿಮಾನಿಯಾಗಿ, ಕಲಾಪೋಷಕರಾಗಿದ್ದ 77ರ ಸಾಲ್ಯಾನ್ ಅವರು ಎಲ್ಲಿಯೂ ಸಲ್ಲುವವರು. ಜನ ಮೆಚ್ಚುವಂತೆ ಅಥವಾ ನಾಲ್ಕು ಮಂದಿಗೆ ಪ್ರಯೋಜನವಾಗುವಂತೆ ಸ್ವಲ್ಪ ಕಾಲ ಬಾಳಿದರೂ ಆ ಬದುಕು ಸಾರ್ಥಕವಾಗುತ್ತದೆ. ಅದೇ ಸರ್ವರು ಮೆಚ್ಚುವಂತೆ ಸುದೀರ್ಘ ಕಾಲ ಬಾಳಿ-ಬದುಕಿದರೆ ಈ ಬದುಕು ಪರಮ ಸಾರ್ಥಕವಾಗುತ್ತದೆ. ಅಂತಹ ಸಾರ್ಥಕ ಬಾಳನ್ನು ಕಂಡವರು ಪಿ. ಕೆ. ಸಾಲ್ಯಾನ್.
1939ರಲ್ಲಿ ಬಜ್ಪೆಯ ಆದ್ಯಪಾಡಿಯಲ್ಲಿ ಜನಿಸಿದ ಅವರು ಮಂಗಳೂರಿನ ಬೊಕ್ಕಪಟ್ಣದ ಮಹಾನಗರ ಪಾಲಿಕೆಯ ಶಾಲೆಯಲ್ಲಿ ಪ್ರಾರಂಭದ ಶಿಕ್ಷಣವನ್ನು ಪೂರೈಸಿದರು. 1950 ರಲ್ಲಿ ಮುಂಬಯಿಗೆ ಆಗಮಿಸಿ ಪ್ರಸ್ಕ್ಲಬ್ನಲ್ಲಿ ಕಾರ್ಯ ನಿರ್ವಹಿಸಿ ಯಂಗ್ಮೆನ್ಸ್ ರಾತ್ರಿ ಶಾಲೆಯಲ್ಲಿ ಎಸ್ಎಸ್ಸಿ ಪೂರೈಸಿ, ಹಲವು ರೀತಿಯ ಏಳು-ಬೀಳುಗಳನ್ನು ಕಂಡು ಆರತಿ ಪ್ರಿಂಟರ್ ಎಂಬ ಪ್ರಿಂಟಿಂಗ್ ಉದ್ಯಮವನ್ನು ಆರಂಭಿಸಿದರು.
“ಜನ ಮೆಚ್ಚಿ ನಡಕೊಂಡರೇನುಂಟು ಜಗದೊಳಗೆ
ಮನಮೆಚ್ಚಿ ನಡಕೊಂಬುವುದು’
ಎಂಬ ವಚನವಾಣಿಯಲ್ಲಿ ಪಿ. ಕೆ. ಸಾಲ್ಯಾನ್ ಅವರಿಗೆ ಅಪಾರ ನಂಬಿಕೆಯಿತ್ತು ಎಂಬುದು ಅವರು ಮೈಗೂಡಿಸಿಕೊಂಡಿರುವ ಆದರ್ಶಗಳಿಂದ ತಿಳಿದು ಬರುತ್ತದೆ. ನೇರ ನಡೆ-ನುಡಿಗೆ ಹೆಸರಾದ ಅವರ ಹೃದಯ ಮಾತ್ರ ಅಷ್ಟೆ ಮೃದು. ಬದುಕಿರುವಾಗ ಸಾಧ್ಯವಾದಷ್ಟು ಪರರಿಗೆ ಸಹಾಯ ಮಾಡಿ ಜೀವನ ಪಾವನಗೊಳಿಸಬೇಕು ಎಂಬ ಜೀವನಮಂತ್ರ ಅವರದ್ದಾಗಿತ್ತು. ಕನ್ನಡಿಗರೊಬ್ಬನ ಮುದ್ರಣ ಪ್ರೀತಿ ಮುಂದೆ ಸಂಸ್ಕೃತಿಯ ಪರಿಚಾರಿಕೆಯಾಯಿತು ಎಂಬುದನ್ನು ಅವರಿಂದ ತಿಳಿಯಬಹುದು. ಕೈಗೆ ಸಾಕಷ್ಟು ದುಡ್ಡು ಬಾರದಿದ್ದರೂ ಭಾಷೆ-ಸಂಸ್ಕೃತಿಯ ಪ್ರೀತಿ ಬೆಳೆಯುತ್ತಾ ಹೋಯಿತು. ವಿಶೇಷವೆಂದರೆ ಎಪ್ಪತ್ತು-ಎಂಭತ್ತರ ದಶಕದಲ್ಲಿ ಸಚೇತನ, ಪ್ರೇಕ್ಷಕ ಪತ್ರಿಕೆಗಳನ್ನು ಮುದ್ರಿಸಿದ ಹೆಗ್ಗಳಿಕೆ ಸಾಲ್ಯಾನ್ ಅವರಿಗೆ ಸಲ್ಲುತ್ತದೆ. ಆಧುನಿಕ ತಂತ್ರಜ್ಞಾನ, ಗುಣಮಟ್ಟ, ಸಮಯ ಪರಿಪಾಲನೆ, ವ್ಯಾವಹಾರಿಕ ಚತುರತೆ ಅವರ ಯಶಸ್ಸಿನ ಗುಟ್ಟಾಗಿತ್ತು. ಅಕ್ಷಯ, ಮೊಗವೀರ, ನೇಸರು, ಸ್ನೇಹ ಸಂಬಂಧ, ಗುರುತು, ತೀಯಾಜ್ಯೋತಿ, ಕುಲಾಲ ಸಂಘದ ಅಮೂಲ್ಯ, ಸಾಫಲ್ಯ ಪತ್ರಿಕೆಗಳು ಇಂದಿಗೆ ಕೂಡ ಆರತಿ ಪ್ರಿಂಟರ್ ಮೂಲಕ ಬೆಳಕು ಕಾಣುತ್ತಿರುವುದು ಹೆಮ್ಮೆಯ ವಿಷಯವಾಗಿದೆ.
ನಾಯಕತ್ವದ ಗುಣಗಳನ್ನು ಯಾವ ತರಬೇತಿ ಶಿಬಿರಗಳಿಂದಲೂ ಕಲಿಯದ ಅವರು, ಬದುಕೆಂಬ ಅನುಭವ ಶಾಲೆಯಲ್ಲಿ ಕಲಿತರು. ಸ್ವಜಾತೀಯ ಕುಲಾಲ ಸಂಘದಲ್ಲಿ ಸಕ್ರಿಯರಾದರು. ಸೇವಾದಳದಲ್ಲಿ ಸದಸ್ಯರಾಗಿ, ಕೋಶಾಧಿಕಾರಿಯಾಗಿ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ, ಉಪಾಧ್ಯಕ್ಷರಾಗಿ, 1993ರಿಂದ ಮೊನ್ನೆ ಮೊನ್ನೆಯವರೆಗೆ ಅಧ್ಯಕ್ಷರಾಗಿ, ಗೌರವಾಧ್ಯಕ್ಷರಾಗಿದ್ದುಕೊಂಡು ಸಮಾಜ ಬಾಂಧವರ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸುತ್ತಿದ್ದ ಅವರು ನಿಜವಾಗಿಯೂ ಕುಲಾಲ ಕಣ್ಮಣಿಯಾಗಿದ್ದಾರೆ.
ನಗರದ ಎಲ್ಲ ಸಂಘಟನೆಗಳೊಂದಿಗೆ ನಿಕಟ ಸಂಪರ್ಕವನ್ನು ಹೊಂದಿ ಮುಂಬಯಿಯಲ್ಲಿ ಬಹು ದೀರ್ಘಕಾಲದಿಂದ ಕನ್ನಡಪರ ಕೆಲಸಗಳನ್ನು ಮಾಡುತ್ತಾ, ಬಂದಿರುವ ಮುದ್ರಣಾಲಯದ ಮಾಲಕರು ಎಂಬ ಪ್ರಸಿದ್ಧಿಯನ್ನು ಪಡೆದಿದ್ದಾರೆ. ಸಂಘಟನಾ ಕೌಶಲ, ಸಹಕಾರ ಮನೋಭಾವ, ಸೌಜನ್ಯ ಹಾಗೂ ಸ್ನೇಹಜೀವಿಯಾಗಿ, ತಾನು ಕಂಡುಂಡ ಕಷ್ಟಗಳನ್ನು ಅನುಭವನ್ನಾಗಿ ಅರಗಿಸಿಕೊಂಡು, ಬಾಳಿಗೊಂದು ನಿರ್ದಿಷ್ಟ ಗುರಿಯನ್ನಿಟ್ಟುಕೊಂಡು, ಎಳ್ಳಷ್ಟು ಅಹಂ ಇಲ್ಲದೆ, ಪ್ರಾಮಾಣಿಕತೆ, ಶ್ರದ್ಧೆಯೊಂದಿಗೆ ಎಲ್ಲರೊಳಗೊಂದಾಗಿ ಜೀವನ ಕಟ್ಟಿದ ಅವರು, ಕನ್ನಡದ ಕೆಲವು ಮಹತ್ವದ ಕೃತಿಗಳನ್ನು ಮುದ್ರಿಸುವುದರೊಂದಿಗೆ ಯುವ ಬರಹಗಾರರ ಕೃತಿಗಳನ್ನು ರಿಯಾಯಿತಿ ದರದಲ್ಲಿ ಮುದ್ರಿಸಿಕೊಡುವ ಮೂಲಕ ತಮ್ಮ ಕನ್ನಡಾಭಿಮಾನವನ್ನು ತೋರಿಸಿಕೊಟ್ಟಿದ್ದಾರೆ.
“ಒಳಿತೊಂದು ಶಾಶ್ವತವೂ ಉಳಿದೆಲ್ಲವಳಿಯುವುದೋ
ಅಳುವ ನಿನೊರಸಿದುದು ನಗುವ ನಗಿಸಿದುದು
ಒಲಿದು ನೀಂ ನೀಡಿದುದು ನಲವ ನೀನೆಸಗಿದುದು
ನೆಲಸುವುವು ಬೊಮ್ಮನಲಿ-ಮರಳ ಮುನಿಯ’
ಎಂಬ ಡಿವಿಜಿ ಅವರ ಮಾತಿನಂತೆ ಈ ಪ್ರಪಂಚದಲ್ಲಿ ಶಾಶ್ವತವಾಗಿ ಉಳಿಯುವುದು ನಾವು ಜೀವನದುದ್ದಕ್ಕೂ ಮಾಡುವ ಒಳ್ಳೆಯ ಕೆಲಸ ಕಾರ್ಯಗಳು ಮಾತ್ರ. ಉಳಿದುದೆಲ್ಲವೂ ನಾಶವಾಗುವಂಥದ್ದು. ಇತರರ ದುಃಖವನ್ನು ದೂರಮಾಡಿ, ತಾವೂ ನಕ್ಕು, ಇತರರನ್ನೂ ನಗಿಸಿದ್ದು, ಪ್ರೀತಿಯಿಂದ ಇತರರಿಗೆ ನೀಡಿ ಸಂತೋಷವನ್ನುಂಟುಮಾಡಿರುವುದು ಇವು ಗಳೆಲ್ಲವೂ ಪರಬ್ರಹ್ಮನಲ್ಲಿ ಶಾಶ್ವತವಾಗಿ ನೆಲೆಸುವಂಥದ್ದು. ಈ ಮಾತಿಗೆ ಪೂರಕವಾಗುವಂತೆ ಸಾಲ್ಯಾನ್ ಬದುಕಿ ಬಾಳಿ ಬಾನಂಚಿನಲ್ಲಿ ನಕ್ಷತ್ರವಾಗಿ ಮಿನುಗುತ್ತಿದ್ದಾರೆ. ಅವರ ಆದರ್ಶಗಳು ಇಂದಿನ ಯುವಪೀಳಿಗೆಗೆ ಮಾದರಿಯಾದಾಗ ಮಾತ್ರ ಅವರಿಗೆ ನಾವು ಬಹುದೊಡ್ಡ ಶ್ರದ್ಧಾಂಜಲಿ ಸಲ್ಲಿಸಿದಂತಾಗುತ್ತದೆ.
——————



