ಹಿಂದೊಂದು ಕಾಲವಿತ್ತು ತಮ್ಮ ಹಳ್ಳಿಗಳ ಪಕ್ಕದ ಗ್ರಾಮಗಳಲ್ಲಿ ಎಲ್ಲಿಯಾದರೂ ಯಕ್ಷಗಾನ ಪ್ರದರ್ಶನವಾಗುತ್ತಿದೆ ಎಂದರೆ ಎತ್ತಿನ ಗಾಡಿಗಳಲ್ಲಿ ಅಥವಾ ಕಾಲ್ನಡಿಗೆಯಲ್ಲಿ ಮೈಲುಗಟ್ಟಲೆ ದೂರ ತಮ್ಮ ಕುಟುಂಬ ಸಮೇತ ಹೋಗಿ ಯಕ್ಷಗಾನ ವೀಕ್ಷಿಸುವ ಸಂದರ್ಭ ಆಗಿತ್ತು. ಆದರೆ ಕಾಲನಂತರದಲ್ಲಿ ಇಂಥ ಯಕ್ಷಗಾನ ಪ್ರದರ್ಶನಗಳು ಮರೆಯಾಗಿ ಕೇವಲ ಧಾರವಾಹಿ, ಸಿನಿಮಾ, ಕಂಪ್ಯೂಟರ್ಗಳಿಗೆ ಈಗಿನ ಜನರು ಮಾರುಹೋಗಿ ರಂಗಭೂಮಿಯನ್ನೇ ಮರೆತು ಕುಳಿತಿದ್ದಾರೆ. ಇಂತಹ ಸಂದರ್ಭದಲ್ಲೂ ಕೂಡ ಕಲೆಯೇ ನನ್ನ ಉಸಿರು. ರಂಗಭೂಮಿಯೇ ನನ್ನ ಜೀವನ ಎಂದು ತಮ್ಮ ಜೀವನವನ್ನು ಸಮರ್ಪಿಸಿಕೊಂಡು ಅನೇಕ ಏಳು ಬೀಳುಗಳನ್ನು ಕಂಡರೂ ಕೂಡ ರಂಗಭೂಮಿಯನ್ನು ಬಿಡದೇ ಅದರಲ್ಲೇ ಯಶಸ್ಸನ್ನು ಕಂಡವರು ಅನೇಕರಿದ್ದಾರೆ. ಇಂಥವರಲ್ಲಿ ಕಿದೂರು ಜಯೇಂದ್ರ ಕುಲಾಲ್ ಕೂಡ ಒಬ್ಬರು. ತನ್ನ ೨೦ನೇ ವಯಸ್ಸಿನಲ್ಲಿ ಹವ್ಯಾಸಕ್ಕೆಂದು ಯಕ್ಷಗಾನಕ್ಕೆ ಬಣ್ಣ ಹಚ್ಚಿದ ಇವರು ಇಂದು ಕಲೆಯನ್ನೇ ಉಸಿರಾಗಿಸಿದ್ದಾರೆ.
ಕಾಸರಗೋಡಿನ ಕಿದೂರು ಗ್ರಾಮದ ತಂಜರಕಟ್ಟೆಯಲ್ಲಿ ಏಪ್ರಿಲ್ 24, 1972ರಂದು ಪಕೀರ ಮೂಲ್ಯ – ಲಕ್ಷ್ಮಿದಂಪತಿಯ ಮಗನಾಗಿ ಜನಿಸಿದ ಜಯೇಂದ್ರ ಕುಲಾಲ್, ಕುಂಬಳೆ ಇಚ್ಲಂಪಾಡಿ ಶಾಲೆಯಲ್ಲಿ 7ನೇ ತರಗತಿ ವಿದ್ಯಾಭ್ಯಾಸ ಮುಗಿಸಿಡಾ ಬಳಿಕ ಯಕ್ಷಗಾನದಲ್ಲಿ ಆಸಕ್ತಿ ಬೆಳೆಸಿಕೊಂಡರು. ಕಿದೂರು ಶ್ರೀ ಮಹಾದೇವ ಕ್ಷೇತ್ರದಲ್ಲಿ ನಾಟ್ಯ ಗುರು ಶ್ರೀ ಉಂಡೆಮನೆ ಶ್ರೀ ಕೃಷ್ಣ ಭಟ್ ಇವರಿಂದ ನಾಟ್ಯ ಕಲಿತು 20 ನೇ ವಯಸ್ಸಿನಲ್ಲಿ ಕು಼ಂಬಳೆ ಶೆಷಪ್ಪನವರ ಭಗವತಿ ಮೇಳದಲ್ಲಿ ಕೃಷ್ಣ ಲೀಲೆಯ ವಿಜಯನಾಗಿ ರಂಗ ಪ್ರವೇಶಗೈದರು. ಆ ಬಳಿಕ ಪೂರ್ಣಕಾಲಿಕ ಕೆಲಾವಿದರಾಗಿ ಇದೇ ಮೇಳದಲ್ಲಿ ಎರಡು ವರ್ಷ ತಿರುಗಾಟ ನಡೆಸಿದರು. ಇದರ ಜೊತೆಗೇ ಹವ್ಯಾಸಿ ಸಂಘಗಳ್ಲಲೂ ದುಡಿಯತೊಡಗಿದರು.
ಮದುವೆಯಾದ ಬಳಿಕ ತನ್ನ 24ನೇ ವಯಸ್ಸಿನಲ್ಲಿ ಬಪ್ಪನಾಡು ಮೇಳಕ್ಕೆ ಸೇರಿಕೊಂಡ ಜಯೇಂದ್ರ ಅವರು, ಆ ಮೇಳದಲ್ಲಿ ಸತತ 6 ವರುಷ ತಿರುಗಾಟ ನಡೆಸಿದರು. ತಂದೆಯನ್ನು ಕಳೆದುಕೊಂಡ ಬಳಿಕ ಮನೆಯ ಜವಾಬ್ದಾರಿ ಇವರ ಮೇಲೆ ಬಿತ್ತು. ಯಕ್ಷಗಾನವನ್ನೇ ನಂಬಿ ಜೀವನ ನಿರ್ವಹಿಸುತ್ತಿದ್ದ ಅವರು ಅರುವ ಕೊರಗ್ಗಪ್ಪ ಶೆಟ್ಟಿಯವರ ಅಪ್ಪಟ ಅಭಿಮಾನಿಯಾಗಿದ್ದಾರೆ. ಶೆಟ್ಟಿ ಅವರ ಜೊತೆಯಲ್ಲಿ ಕೋಟಿ-ಚೆನ್ನಯದ ಪಯ್ಯ ಬೈದ್ಯ ಪಾತ್ರ ಮೆಚ್ಚುಗೆ ಗಳಿಸಿದೆ. ಕೊಳ್ತಿಗೆ, ಸರಪ್ಪಾಡಿ ಮತ್ತಿತರ ಹಿರಿಯ ಕಲಾವಿದರ ಜೊತೆ ಬಣ್ಣ ಹಚ್ಚಿದ ಹಿರಿಮೆ ಹೊಂದಿರುವ ಜಯೇಂದ್ರ ಅವರ ಕಲಾ ಸೇವೆಗೆ ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನಿತರಾಗಿದ್ದಾರೆ . ಇವರ ಕೆಳ್ಗೆ ಬೆಂಬಲವಾಗಿ ಕುಲಾಲ ಸಂಘವು `ಕಿದೂರ್ದ ಮುತ್ತು’ ಎಂಬ ಬಿರುದನ್ನು ನೀಡಿ ಸನ್ಮಾನಿಸಿದೆ.
`ಇತ್ತೀಚೆಗೆ ಎಲ್ಲಾ ಹಿರಿಯ ಕಲಾವಿದರ ಪರಿಚಯ, ಅವರ ಜೊತೆಯಲ್ಲಿ ವೇಷ ಮಾಡುವ ಅವಕಾಶ ದೊರೆತಿರುವುದು ಹರ್ಷ ತಂದಿದೆ. ವಿಜಯ, ಪಯ್ಯ , ಅಬ್ಬು, ಸೇಕ್ಕು, ಉಸ್ಮಾನ್, ಪಾಪಣ್ಣ ಮುಂತಾದ ನಾನು ಮಾಡಿದ ಪಾತ್ರಗಳು ಜನ ಮೆಚ್ಚುಗೆ ಪಡೆದಿವೆ” ಎನ್ನುವ ಕುಲಾಲ್, ಯಕ್ಷಗಾನವೇ ಮುಖ್ಯ ಆದಾಯದ ಮೂಲವಾದರೂ ವರ್ಷ ಪೂರ್ತಿ ಗಳಿಕೆ ಇಲ್ಲದೆ ಇರುವ ಕಾರಣ ಗಾರೆ ಕೆಲಸದ ಮೇಸ್ತ್ರಿಯಾಗಿಯೂ ದುಡಿದು ಕುಟುಂಬ ಸಲಹುತ್ತಿದ್ದೇನೆ ಎನ್ನುತ್ತಾರೆ.
ಜಯೇಂದ್ರ ಅವರು ಶೀ ಮಹಾದೇವ ಶಾಸ್ತಾರ ಯಕ್ಷಗಾನ ಕಲಾ ಸಂಘದ ಅಧ್ಯಕ್ಷರಾಗಿ ಕಲೆ ಹಾಗೂ ಕಲಾವಿದರಿಗೆ ನಿರಂತರ ಪ್ರೋತ್ಸಾಹ ನೀಡುತ್ತಿದ್ದಾರೆ. ನಾಟಕಗಳ್ಲಲೂ ಬಣ್ಣ ಹಚ್ಚಿ ಸೈ ಎನಿಸಿರುವ ಅವರ ಕಲಾ ಸೇವೆ ನಿರಂತರವಾಗಿದೆ.