ಮಡಕೆಯ ಹಲವು ಆಯ್ಕೆಗಳು ಗ್ರಾಹಕರಿಗೆ ಇವೆ. ಆದರೆ, ಹಸನಾದ ಮಡಕೆ ಹೇಗಿರುತ್ತದೆ ಎಂದು ಪತ್ತೆಹಚ್ಚುವುದು ಅನೇಕರಿಗೆ ಗೊತ್ತಿರಲಿಕ್ಕಿಲ್ಲ. ಚೆಂದದ ಮಡಕೆ ಕೊಳ್ಳುವುದು ಹೇಗೆ ಎನ್ನುವುದನ್ನು ಹೇಳುವ ಲೇಖನವಿದು.
ಬೇಸಿಗೆ ಧಗೆಗೆ ಬಾಯಾರಿಕೆ ಹೆಚ್ಚು. ಸೂರ್ಯನ ಝಳಕ್ಕೆ ಒತ್ತರಿಸಿ ಬರುವ ಬೆವರು ದೇಹದಲ್ಲಿನ ನೀರಿನಂಶವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಬೇಸಿಗೆಯಲ್ಲಿ ದೇಹ ಹೆಚ್ಚು ಹೆಚ್ಚು ನೀರನ್ನು ಬೇಡುತ್ತದೆ. ಕೆಲವರಿಗೆ ಫ್ರಿಡ್ಜ್ ನೀರು ಒಗ್ಗದು. ತಂಪೆನಿಸುವ ನೀರು ಮಾತ್ರ ದಾಹ ತೀರಿಸಬಲ್ಲುದು ಎನ್ನುವ ಕಾರಣಕ್ಕೆ ಅನೇಕರು ಬೇಸಿಗೆ ಕಾಲದಲ್ಲಿ ಮಣ್ಣಿನ ಮಡಕೆಗಳಿಗೆ ಮನಸೋಲುತ್ತಾರೆ.
ದಿನಕಳೆದಂತೆ ಮಾರುಕಟ್ಟೆಗೆ ತರಹೇವಾರಿ ಮಣ್ಣಿನ ಮಡಕೆಗಳು ಬರುತ್ತಿವೆ. ಗಾತ್ರ, ವಿನ್ಯಾಸ, ಚೆಂದ, ವೈವಿಧ್ಯದ ಮಡಕೆಗಳಿಗೆ ಈ ಕಾಲದಲ್ಲಿ ಬೇಡಿಕೆಯೂ ಹೆಚ್ಚು. ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿಗೆಂದಷ್ಟೇ ಅಲ್ಲ, ಅಡುಗೆ ಪದಾರ್ಥಗಳು ಹಾಳಾಗದಂತೆ ಇಡುವ ಸಲುವಾಗಿಯೂ ಅನೇಕರು ಮಡಕೆಯನ್ನು ಬಳಸುತ್ತಾರೆ. ಮಡಕೆಯಲ್ಲಿ ಮಾಡುವ ಅಡುಗೆ ರುಚಿಕರವೂ ಹೌದು.
ಮೊಸರು ಹುಳಿಯಾಗದಂತೆ ಹಾಗೂ ತಂಪಾಗಿ ಇರಲು ಮಡಕೆ ಬಳಕೆ ಉತ್ತಮ ದಾರಿ. ನೀರು ಕುಡಿಯುವ ವಿವಿಧ ವಿನ್ಯಾಸದ ಲೋಟಗಳೂ ಲಭ್ಯ. ಪಾಟರಿ ಟೌನ್ನಲ್ಲಿರುವ ಕರಕುಶಲ ಕೈಗಾರಿಕೆ ಸಹಕಾರ ಸಂಘದ ಅಧ್ಯಕ್ಷರಾದ ಎಂ. ಚಿನ್ನಸ್ವಾಮಿ ಅವರು ಮಡಕೆ ಆಯ್ಕೆ ಹೇಗೆ ಎಂಬುದನ್ನು ಇಲ್ಲಿ ವಿವರಿಸಿದ್ದಾರೆ.
‘ಮೊದಲಿನ ಕಾಲದ ಮಡಕೆಗಳಿಗೂ ಇಂದಿನ ಮಡಕೆಗಳಿಗೂ ಹೋಲಿಕೆ ಮಾಡುವಂತೆಯೇ ಇಲ್ಲ. ಯಾಕೆಂದರೆ ಅಂದಿನ ಮಣ್ಣಿನ ಗುಣಮಟ್ಟ ಉತ್ತಮವಾಗಿತ್ತು. ಮಡಕೆಗೆ ಅತ್ಯವಶ್ಯಕವಾದ ಉತ್ತಮವಾದ ಜೇಡಿಮಣ್ಣಿನ ಕೊರತೆ ಇದೆ. ಕೆರೆಗಳು ಇಲ್ಲ, ಇರುವ ಕೆರೆಗಳಲ್ಲಿ ನೀರು ಬತ್ತಿದೆ. ಮೊದಲು ಕೆರೆಯ ಮಧ್ಯದಿಂದ ಜೇಡಿಮಣ್ಣು ಸಂಗ್ರಹ ಮಾಡಿ ಮಡಕೆ ಮಾಡುತ್ತಿದ್ದರು.
ಈಗ ಕೆರೆಯ ಬದಿಗೆ ಇರುವ ಮಣ್ಣನ್ನೇ ಅವಲಂಬಿಸಬೇಕಾದ ಸ್ಥಿತಿ ಇದೆ. ಅವುಗಳಲ್ಲಿ ಕೇವಲ ಜೇಡಿಮಣ್ಣು ಬಿಟ್ಟು ಮರಳು, ಕಲ್ಲು, ಇತರೆ ಮಣ್ಣುಗಳೂ ಸೇರಿರುತ್ತವೆ. ಅವುಗಳಲ್ಲೇ ಆದಷ್ಟು ಶುದ್ಧಗೊಳಿಸಿ ಮಡಕೆ ತಯಾರಿಸಲಾಗುತ್ತದೆ. ಗೃಹೋಪಯೋಗಿ ಮಡಕೆಗಳಿಗೆ ಉತ್ತಮ ಮಣ್ಣು ಬೇಕು. ಉಳಿಕೆ ಮಣ್ಣನ್ನು ಹೂಕುಂಡಗಳನ್ನು ಮಾಡಲು ಬಳಸಲಾಗುತ್ತದೆ’ ಎಂದು ಅವರು ಮಾಹಿತಿ ನೀಡುತ್ತಾರೆ.
ಶಬ್ದವೇ ಮಾನದಂಡ
ಮಡಕೆ ಚೆನ್ನಾಗಿದೆಯೇ ಇಲ್ಲವೇ ಎಂದು ನೋಡಲು ಅದನ್ನು ನಿಧಾನವಾಗಿ ಬಡಿದು ನೋಡುವುದೊಂದೇ ಉಪಾಯ ಎನ್ನುತ್ತಾರೆ ಅವರು. ಪೊಳ್ಳು ಅಥವಾ ಒಡೆದಿದೆ ಎಂದಾದರೆ ಆಗ ಬರುವ ಶಬ್ದವೇ ಬೇರೆ. ಬೆರಳಿನಿಂದ ಬಡಿದು ನೋಡಿದಾಗ ಕಂಚಿನ ಪಾತ್ರೆಯಂತೆ ಟಣ್ ಎನ್ನುವ ಶಬ್ದ ಬಂದರೆ ಮಡಕೆ ಚೆನ್ನಾಗಿದೆ ಎಂದು ಅರ್ಥ. ಶಬ್ದದಲ್ಲಿ ತುಸು ವ್ಯತ್ಯಾಸವಾದರೂ ಸಮಸ್ಯೆ ಇದೆ ಎಂದುಕೊಳ್ಳಬಹುದು. ಶಬ್ದ ಕೇಳಿ ಮಡಕೆ ಚೆನ್ನಾಗಿದೆಯೇ ಎಂದು ತಿಳಿದುಕೊಳ್ಳಲು ಸಾಧ್ಯವಾಗದಿದ್ದರೆ ನೀರು ತುಂಬಿಸಿಯೂ ಪರೀಕ್ಷಿಸಿಕೊಳ್ಳಬಹುದು.
ಕುಡಿಯುವ ನೀರನ್ನು ತುಂಬಿಸಿಡಲು ಹೂಜಿ, ಜಾಡಿ, ಫಿಲ್ಟರ್ ಹೂಜಿಗಳು ಸಿಗುತ್ತವೆ. ಅವುಗಳಲ್ಲಿ ಅತ್ಯುತ್ತಮವಾದುದು ಹೂಜಿ ಎನ್ನುತ್ತಾರೆ ಚಿನ್ನರಾಜು. ಸಂದರ್ಭಕ್ಕನುಗುಣವಾಗಿ ಮಣ್ಣಿನಿಂದ ಮಾಡಿದ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚು. ದೀಪಾವಳಿಯಲ್ಲಿ ದೀಪ, ಮಳೆಗಾಲದಲ್ಲಿ ಹೂಕುಂಡ, ಬೇಸಿಗೆಯಲ್ಲಿ ನೀರು ಶೇಖರಿಸುವ ಮಡಕೆಗಳನ್ನು ಜನರು ಹೆಚ್ಚಾಗಿ ಖರೀದಿಸುತ್ತಾರೆ.
‘ಕಳೆದ ಹತ್ತು ವರ್ಷಗಳ ಹಿಂದೆ ಮಡಕೆ ತಯಾರಿಸುತ್ತಿದ್ದೆ. ಈಗ ಒಳ್ಳೆಯ ಮಣ್ಣು ಸಿಗುವುದಿಲ್ಲ. ಹೀಗಾಗಿ ತಮಿಳುನಾಡು, ಕಮಲಾಪುರ, ದೊಡ್ಡಬಳ್ಳಾಪುರದಿಂದ ಮಡಕೆಯನ್ನು ಖರೀದಿಸಿ ಮಾರುತ್ತೇನೆ. ನನ್ನ ಅನುಭವದ ಪ್ರಕಾರ ತಮಿಳುನಾಡಿನ ಮಡಕೆ ಚೆನ್ನಾಗಿರುತ್ತದೆ. ಅಡುಗೆ ಮಾಡುವುದಕ್ಕೂ ಅನೇಕರು ಅದನ್ನೇ ಬಳಸುತ್ತಾರೆ. ಮಡಕೆ ಕಪ್ಪಾಗಿದ್ದರೆ ಬಾಳಿಕೆ ಜಾಸ್ತಿ. ಇತ್ತೀಚಿನವರು ಮಡಕೆಗಳತ್ತ ವ್ಯಾಮೋಹ ಬೆಳೆಸಿಕೊಳ್ಳುತ್ತಿರುವುದರ ಬಗ್ಗೆ ಖುಷಿ ಇದೆ’ ಎನ್ನುತ್ತಾರೆ ಮಡಕೆಗಳ ಮೇಲೆ ವಿನ್ಯಾಸವನ್ನೂ ಮೂಡಿಸುವ, ಗಣೇಶ ಹಬ್ಬದಲ್ಲಿ ಮಣ್ಣಿಗೆ ಗಣೇಶನ ರೂಪವನ್ನೂ ಕೊಡುವ ಲಕ್ಷ್ಮಿ.
‘ಮಡಕೆ ತಯಾರಿಸುವುದು ನಮ್ಮ ಕುಲಕಸುಬು. ಮಾಲೂರಿನಿಂದ ಮಣ್ಣು ತರಿಸಿ ಮಡಕೆ ಮಾಡುತ್ತೇವೆ. ಕಾಸರಹಳ್ಳಿ ಬಳಿ ಸೋಪ್ ಫ್ಯಾಕ್ಟರಿ ಬಂದ ನಂತರ ಅಲ್ಲಿಯ ಮಣ್ಣು ಕೆಟ್ಟುಹೋಗಿದೆ. ಹೀಗಾಗಿ ಮಾಲೂರನ್ನು ನಂಬಿಕೊಂಡೆವು. ಮಡಕೆ ಆಯ್ಕೆಗೆ ಅದರಿಂದ ಬರುವ ಶಬ್ದವೊಂದೇ ಮಾಪನ. ಅದು ಹೊಮ್ಮಿಸುವ ಶಬ್ದದಲ್ಲೇ ಬಿರುಕಿದೆಯೇ ಎಂದು ಅರ್ಥವಾಗಿಬಿಡುತ್ತದೆ. ಶುದ್ಧ ಮಣ್ಣಿನಿಂದ ಮಡಕೆ ಮಾಡಿ ಮೊದಲು ಎಂಟು ದಿನ ನೆರಳಲ್ಲಿ ಒಣಗಿಸಬೇಕಾದುದು ಕಡ್ಡಾಯ. ನಂತರ ಒಂದು ವಾರ ಬಿಸಿಲಲ್ಲಿ ಒಣಗಿಸಬೇಕು. ಆನಂತರ ಎಂಟು ಗಂಟೆ ಸುಡಬೇಕು. ಇದೇ ರೀತಿಯಲ್ಲಿ ತಯಾರಾದ ಮಡಕೆ ಚೆನ್ನಾಗಿ ಬಾಳಿಕೆ ಬರುತ್ತದೆ. ಅಲ್ಲದೆ ಮಣ್ಣನ್ನು ಮಿಶ್ರಣ ಮಾಡುವುದರಲ್ಲಿ ತುಸು ಹೆಚ್ಚು ಕಡಮೆ ಆದರೂ ಮಡಕೆಯ ತಾಳಿಕೆ ಬಾಳಿಕೆಯಲ್ಲೂ ವ್ಯತ್ಯಾಸ ಉಂಟಾಗುತ್ತದೆ’ ಎಂದು ಮಾಹಿತಿ ನೀಡುತ್ತಾರೆ ಎಂ.ಭೋಜರಾಜನ್ ಅಂಗಡಿಯ ಮಾಲೀಕರಾದ ಕವಿತಾ.
ಮಾಲ್ ಸಂಸ್ಕೃತಿ ಬಂದ ನಂತರ ಬೆಲೆ ಹೆಚ್ಚಿದ್ದರೆ ಗುಣಮಟ್ಟವೂ ಚೆನ್ನಾಗಿದೆ ಎನ್ನುವ ಕಲ್ಪನೆ ಅನೇಕರಿಗಿದೆ. ಹೀಗಾಗಿಯೇ ಹೆಚ್ಚು ಹೆಚ್ಚು ದುಡ್ಡು ಕೊಟ್ಟು ಟ್ಯಾಪ್ ಇರುವ ಮಡಕೆಯನ್ನು ಕೊಂಡುಕೊಳ್ಳುತ್ತಿದ್ದಾರೆ. ಆದರೆ ಈ ವ್ಯಾಪಾರಿಗಳ ಪ್ರಕಾರ ಸಾಧಾರಣ ಮಡಕೆಯೇ ನೀರು ತುಂಬಿಡಲು ಅತ್ಯುತ್ತಮ. ಟ್ಯಾಪ್ ಹಾಕುವಾಗ ಮಡಕೆಗೆ ತೂತು ಕೊರೆಯಬೇಕು, ಟ್ಯಾಪ್ ಅನ್ನು ಎಂಸೀಲ್ ಹಾಕಿ ಜೋಡಿಸಬೇಕು. ಇವುಗಳಿಗೆ ಸಮಯವೂ ಹೆಚ್ಚು ಬೇಕು. ಹಾಗೆಯೇ ಮಡಕೆಯಲ್ಲಿ ಬಿರುಕು ಉಂಟಾಗುವ ಸಾಧ್ಯತೆಯೂ ಇರುತ್ತದೆ.
ಮಡಕೆ ಬಳಕೆ ನಿಯಮ
ಮಡಕೆಯಲ್ಲಿ ಶೇಖರಿಸಿದ ನೀರು ಕೆಲವೊಮ್ಮೆ ಮಣ್ಣಿನ ಕಂಪಾಗುತ್ತದೆ ಎಂಬ ಆರೋಪವೂ ಇದೆ. ಅದಕ್ಕೆ ಮಡಕೆ ನಿರ್ವಹಣೆ ಮಾಡುವ ವಿಧಾನ ತಪ್ಪಾಗಿರುತ್ತದೆಯೇ ಹೊರತು ಮಡಕೆಯಲ್ಲಿ ದೋಷವಿರುವುದಿಲ್ಲ ಎನ್ನುವುದೂ ಮಡಕೆ ವ್ಯಾಪಾರಿಗಳ ಅನುಭವ. ಮಡಕೆ ಖರೀದಿಸಿದ ನಂತರ ಒಂದು ದಿನ ಅದರಲ್ಲಿ ಪೂರ್ತಿಯಾಗಿ ನೀರುತುಂಬಿ ಹಾಗೆಯೇ ಬಿಡಬೇಕು. ಮರುದಿನ ನೀರನ್ನು ಚೆಲ್ಲಿ ಮಡಕೆಯನ್ನು ಬಿಸಿಲಿನಲ್ಲಿ ಒಣಗಿಸಬೇಕು.
ಆಮೇಲೆ ಅದರಲ್ಲಿ ನೀರನ್ನು ಶೇಖರಿಸಿ ಕುಡಿಯಲು ಬಳಸಿಕೊಳ್ಳಬೇಕು. ಮಡಕೆ ಸ್ವಚ್ಛಗೊಳಿಸಲು ಸ್ಟೀಲ್ ನಾರು, ಸೋಪ್ಗಳನ್ನು ಬಳಸಲೇಬಾರದು. ತೆಂಗಿನ ನಾರು ಅಥವಾ ಪ್ಲಾಸ್ಟಿಕ್ ನಾರಿನಿಂದ ನಿಧಾನವಾಗಿ ಅದರ ಒಳಮೈಯನ್ನು ಸ್ವಚ್ಛ ಮಾಡಬೇಕು. ಇದೇ ವಿಧಾನವನ್ನು ಅನುಸರಿಸಿದರೆ ಮಣ್ಣಿನ ವಾಸನೆಯೂ ಬರುವುದಿಲ್ಲ, ಮಡಕೆಯ ಬಾಳಿಕೆಯೂ ಚೆನ್ನಾಗಿರುತ್ತದೆ. ನೀರು ತಂಪಾಗಿರುತ್ತದೆ. ಆಹಾರ ಪದಾರ್ಥಗಳೂ ಕೆಡುವುದಿಲ್ಲ.
ಆರೋಗ್ಯದ ಮೇಲೂ ಒಳ್ಳೆಯ ಪರಿಣಾಮ ಬೀರಬಲ್ಲ ಮಡಕೆಗಳು ವಿನ್ಯಾಸಕ್ಕನುಗುಣವಾಗಿ ಬೆಲೆಯಲ್ಲಿ ಏರಿಕೆ ಕಾಣುತ್ತವೆ. ₹80ರಿಂದ ₹300ವರೆಗೆ ಕುಡಿಯುವ ನೀರಿನ ಮಡಕೆಗಳು ಲಭ್ಯ. ಇನ್ನು ಕೆಲವು ವ್ಯಾಪಾರಿಗಳು ತುಸು ಬಿರುಕು ಬಂದ ಮಡಕೆಗಳಿಗೆ ಎಂಸೀಲ್ ಅಥವಾ ತೇಪೆ ಹಚ್ಚಿ ಮಾರಾಟ ಮಾಡುವುದೂ ಇದೆ. ಹೀಗಾಗಿ ಆಯ್ಕೆ ವೇಳೆ ಸಾಕಷ್ಟು ಮುತುವರ್ಜಿ ವಹಿಸಿ ಖರೀದಿಸಿ.
ಬರಹ : ಸುರೇಖಾ ಹೆಗಡೆ




