ಮಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್) : ಭಾರತೀಯ ವೈದ್ಯಕೀಯ ಸಂಘ (IMA) ಮಂಗಳೂರು ಶಾಖೆಯ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಪ್ರತಿಷ್ಠಿತ “ಡಾ. ಕುಳಾಯಿ ರಾಘವೇಂದ್ರ ಕಿಣಿ (ಡಾ. ಕೆ. ಆರ್. ಕಿಣಿ) ದತ್ತಿ ಉಪನ್ಯಾಸ ಕಾರ್ಯಕ್ರಮ”ದಲ್ಲಿ ನಾಡಿನ ಖ್ಯಾತ ಕುಟುಂಬ ವೈದ್ಯ, ನೋವು ಹಾಗೂ ಉಪಶಾಮಕ ವೈದ್ಯಕೀಯ ತಜ್ಞ, ಸಾಹಿತಿ ಮತ್ತು ಸಂಘಟಕ ಡಾ. ಎಂ. ಅಣ್ಣಯ್ಯ ಕುಲಾಲ್ ಉಳ್ತೂರು ಅವರು ವಿಶೇಷ ದತ್ತಿ ಉಪನ್ಯಾಸ ನೀಡಿ ಗೌರವಿಸಲ್ಪಟ್ಟರು.
ಕುಟುಂಬ ವೈದ್ಯರೇ ಆರೋಗ್ಯ ಸೇವೆಯ ಕೇಂದ್ರ ಬಿಂದು:
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಡಾ. ಅಣ್ಣಯ್ಯ ಕುಲಾಲ್, “ಇಡೀ ವಿಶ್ವದ ಆರೋಗ್ಯ ಸೇವೆಯ ಕೇಂದ್ರ ಬಿಂದುವೇ ಕುಟುಂಬ ವೈದ್ಯರು (Family Doctors). ಅವರ ತ್ಯಾಗ, ಸೇವೆ ಮತ್ತು ಸಮಯೋಚಿತ ಸ್ಪಂದನೆಯ ಆಧಾರದ ಮೇಲೆ ದ್ವಿತೀಯ ಹಾಗೂ ತೃತೀಯ ಹಂತದ ವೈದ್ಯಕೀಯ ಸೇವೆಗಳು ರೂಪುಗೊಳ್ಳುತ್ತವೆ. ಇತ್ತೀಚಿನ ದಿನಗಳಲ್ಲಿ ಎಂಬಿಬಿಎಸ್ ವೈದ್ಯರು ಕೊಂಚ ಹಿನ್ನಡೆ ಕಂಡಂತೆ ಭಾಸವಾದರೂ, ಮುಂದಿನ ದಿನಗಳಲ್ಲಿ ಪುನಃ ಕುಟುಂಬ ವೈದ್ಯರ ವ್ಯವಸ್ಥೆಯೇ ಮೇಲುಗೈ ಸಾಧಿಸಲಿದೆ,” ಎಂದು ಪ್ರತಿಪಾದಿಸಿದರು.
“ಇಂದು ಸಮಾಜದಲ್ಲಿ ಎಂಬಿಬಿಎಸ್ ವೈದ್ಯರೆಂದರೆ ಏನೂ ಅಲ್ಲ, ಎಂಡಿ ಅಥವಾ ಡಿಎಂ ನಂತಹ ಉನ್ನತ ಪದವಿಗಳೇ ಬೇಕು ಎಂಬ ಭ್ರಮೆ ಸೃಷ್ಟಿಯಾಗಿದೆ. ಇದರಿಂದಾಗಿ ಕುಟುಂಬ ವೈದ್ಯರನ್ನು ಕಡೆಗಣಿಸಲಾಗಿದ್ದು, ವೈದ್ಯಕೀಯ ಸೇವಾ ಶುಲ್ಕ ದುಪ್ಪಟ್ಟಾಗಲು ಇದುವೇ ಮುಖ್ಯ ಕಾರಣವಾಗಿದೆ. ವಿದೇಶಗಳಲ್ಲಿ ಇರುವಂತೆ ನಮ್ಮಲ್ಲೂ ಮತ್ತೆ ಕುಟುಂಬ ವೈದ್ಯರ ಅನಿವಾರ್ಯತೆ ಎದುರಾಗುವ ಕಾಲ ಸನ್ನಿಹಿತವಾಗಿದೆ. ಈ ನಿಟ್ಟಿನಲ್ಲಿ ವೈದ್ಯಕೀಯ ಕಾಲೇಜುಗಳಲ್ಲಿ ಯುವ ವೈದ್ಯರನ್ನು ಸಮಾಜಮುಖಿ ಸೇವೆಗೆ ಪ್ರೇರೇಪಿಸಿ ಸಜ್ಜುಗೊಳಿಸಬೇಕಿದೆ,” ಎಂದು ಅವರು ಕರೆ ನೀಡಿದರು.
ಡಾ. ಕೆ. ಆರ್. ಕಿಣಿ ಅವರ ಸೇವೆ ಸ್ಮರಣೀಯ:
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ (ಕಾಸರಗೋಡು, ಮಂಗಳೂರು, ಉಡುಪಿ, ಕುಂದಾಪುರ, ಪುತ್ತೂರು, ಬೆಳ್ತಂಗಡಿ, ಸುಳ್ಯ, ಬಂಟ್ವಾಳ) ಪ್ರಥಮ ಎಂಬಿಬಿಎಸ್ ವೈದ್ಯರಾಗಿದ್ದ ಡಾ. ಕುಳಾಯಿ ರಾಘವೇಂದ್ರ ಕಿಣಿ ಅವರು ಸುಮಾರು ನೂರು ವರ್ಷಗಳ ಹಿಂದೆಯೇ (1920 ರ ಸುಮಾರಿಗೆ) ಮದ್ರಾಸ್ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪೂರೈಸಿದ್ದರು. ಮಂಗಳೂರಿನಲ್ಲಿ ಕುಟುಂಬ ವೈದ್ಯರಾಗಿ ಕುದುರೆ ಗಾಡಿಯಲ್ಲಿ ಮನೆ ಮನೆಗೆ ತೆರಳಿ ರೋಗಿಗಳನ್ನು ಉಪಚರಿಸುತ್ತಿದ್ದ ಅವರು, ಮಂಗಳೂರಿನಲ್ಲಿ ವೈದ್ಯರ ಸಂಘವನ್ನು ಹುಟ್ಟುಹಾಕಿದ ಧೀಮಂತ ನಾಯಕರಾಗಿದ್ದರು. ಒಬ್ಬ ಎಂಬಿಬಿಎಸ್ ವೈದ್ಯ ಎಲ್ಲಾ ವರ್ಗದ ರೋಗಿಗಳಿಗೆ ಪರಿಣಾಮಕಾರಿ ಚಿಕಿತ್ಸೆ ನೀಡಬಲ್ಲ ಎಂಬುದಕ್ಕೆ ಡಾ. ಕಿಣಿ ಅವರೇ ಸಾರ್ವಕಾಲಿಕ ಮಾದರಿ ಎಂದು ಡಾ. ಕುಲಾಲ್ ಬಣ್ಣಿಸಿದರು.
ಕೃತಜ್ಞತೆ ಸಲ್ಲಿಕೆ:
“ವೈದ್ಯಕೀಯ ರಂಗವನ್ನು ನೂರು ವರ್ಷಗಳ ಹಿಂದೆಯೇ ಸಂಘಟಿಸಿ ಬೆಳೆಸಿದ ಮಹಾನ್ ವೈದ್ಯ ಡಾ. ಕೆ. ಆರ್. ಕಿಣಿ ಅವರ ಹೆಸರಿನ ದತ್ತಿ ಉಪನ್ಯಾಸಕ್ಕೆ ನನ್ನನ್ನು ಆಯ್ಕೆ ಮಾಡಿ ಗೌರವಿಸಿರುವುದು ನನ್ನ ವೈದ್ಯಕೀಯ ವೃತ್ತಿ, ಸಂಘಟನೆ ಹಾಗೂ ನಾಯಕತ್ವ ಸೇವೆಗೆ ಸಿಕ್ಕ ಅತಿದೊಡ್ಡ ಗೌರವ. ಈ ಗೌರವಕ್ಕೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರು ಕಾರಣಕರ್ತರು,” ಎಂದು ಡಾ. ಅಣ್ಣಯ್ಯ ಕುಲಾಲ್ ಕೃತಜ್ಞತೆ ಸಲ್ಲಿಸಿದರು.

