ಉಪ್ಪಿನಂಗಡಿ(ಕುಲಾಲ ವರ್ಲ್ಡ್ ಡಾಟ್ ಕಾಮ್) : ಊರು ಅಭಿವೃದ್ಧಿಯಾಗಬೇಕಾದರೆ ಅಲ್ಲಿ ಉದ್ಯಮಗಳು ಬೆಳೆಯಬೇಕು. ಉದ್ಯೋಗದ ಸೃಷ್ಟಿಯೂ ಆಗಬೇಕು. ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘವು ಬ್ಯಾಂಕ್ನೊಂದಿಗೆ ಸಮುದಾಯದ ಕುಲಕಸುಬನ್ನು ಬೆಳೆಸುವುದರೊಂದಿಗೆ ಉದ್ಯಮದೊಂದಿಗೆ ಬ್ಯಾಂಕಿಂಗ್ ಸೇವೆಯನ್ನು ನೀಡುವ ಮೂಲಕವೂ ಊರಿನ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.
ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ನಿಯಮಿತ ಪುತ್ತೂರು ಇದರ ಉಪ್ಪಿನಂಗಡಿ ಶಾಖೆಯು ಗಾಂಧಿಪಾರ್ಕ್ನ ರಾಮ ಗೋಪಾಲ್ ಕಾಂಪ್ಲೆಕ್ಸ್ಗೆ ಸ್ಥಳಾಂತರಗೊಂಡಿದ್ದು, ಮಾ.1ರಂದು ನಡೆದ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಿ ಅವರು ಮಾತನಾಡಿದರು.
ಸಂಘವು ಕುಂಬಾರರ ಮೂಲ ಕಸುಬಾದ ಕುಂಬಾರಿಕೆಯನ್ನು ಪ್ರೋತ್ಸಾಹಿಸುವ ಮೂಲಕ ಉದ್ಯೋಗ ಸೃಷ್ಟಿ ಮಾಡುತ್ತಿರುವುದಲ್ಲದೆ, ಹಿಂದಿನ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ. ಈ ಸಂಘದ ಅಭಿವೃದ್ದಿಗೆ ಬಿ.ಎಸ್. ಕುಲಾಲ್ ಅವರಂತಹ ಹಿರಿಯರ ಶ್ರಮ ಅಪಾರವಿದೆ ಎಂದರಲ್ಲದೆ, ಸಂಘವು ಅಭಿವೃದ್ಧಿ ಹೊಂದುವುದರೊಂದಿಗೆ ಊರಿನ ಅಭಿವೃದ್ಧಿಯೂ ಆಗಲಿ ಎಂದು ಹಾರೈಸಿದರು.
ಶಾಖೆ ಉದ್ಘಾಟಿಸಿ, ದೀಪ ಪ್ರಜ್ವಲನೆ ಮಾಡಿದ ಶಾಲಿವಾಹನ ಫ್ಯುಯೆಲ್ಸ್ನ ಮಾಲಕರಾದ ಚಂದ್ರಶೇಖರ ತಾಳ್ತಜೆ ಮಾತನಾಡಿ, ಹಿರಿಯರು ಹಾಕಿಕೊಟ್ಟ ಭದ್ರ ಬುನಾದಿ ಹಾಗೂ ಈಗಿನ ಅಧ್ಯಕ್ಷರ ಧನಾತ್ಮಕ ಚಿಂತನೆಯೇ ಈ ಸಂಘದ ಅಭಿವೃದ್ಧಿಗೆ ಕಾರಣವಾಗಿದೆ. ಹೆಚ್ಚಾಗಿ ಸಮುದಾಯದ ಸಹಕಾರ ಸಂಘದಲ್ಲಿ ಆ ಸಮುದಾಯದವರೇ ತೊಡಗಿಸಿಕೊಳ್ಳುವುದು ಹೆಚ್ಚು. ಆದರೆ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದಲ್ಲಿ ಇತರ ಸಮುದಾಯದವರ ವ್ಯವಹಾರವೇ ಹೆಚ್ಚಿದೆ. ಇದು ಸಂಘವು ನೀಡುತ್ತಿರುವ ಉತ್ತಮ ಸೇವೆಗೆ ಸಾಕ್ಷಿ ಎಂದರು.
ಮಾರಾಟ ಮಳಿಗೆ ಉದ್ಘಾಟಿಸಿ ಮಾತನಾಡಿದ ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್ ಮಾತನಾಡಿ, ಬದಲಾಗುತ್ತಿರುವ ಕಾನೂನುಗಳು ಸೇರಿದಂತೆ ಈ ಸ್ಫರ್ಧಾತ್ಮಕ ಯುಗದಲ್ಲಿ ಸಹಕಾರ ಸಂಘಗಳಿಗೆ ಇಂದು ಹಲವು ಸವಾಲುಗಳಿವೆ. ಆದರೆ ಅದೆಲ್ಲವನ್ನೂ ದಾಟಿ ಈ ಸಂಘವು ಇಷ್ಟೊಂದು ಬೆಳೆದು ನಿಂತಿದೆ ಎಂದರೆ ಅದು ನೀಡುತ್ತಿರುವ ಉತ್ತಮ ಸೇವೆ ಕಾರಣವಾಗಿದೆ. ಇದು ಇನ್ನಷ್ಟು ಶಾಖೆಗಳನ್ನು ವಿಸ್ತರಿಸಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಭದ್ರತಾ ಕೊಠಡಿ ಉದ್ಘಾಟಿಸಿ ಮಾತನಾಡಿದ ವಕೀಲ ನರಸಿಂಹ ಪ್ರಸಾದ್, ಕುಂಬಾರರು ಭೂಮಿಯನ್ನು ಅವಲಂಬಿಸಿಕೊಂಡಿದ್ದು, ಈ ಸಮುದಾಯವು ಇನ್ನಷ್ಟು ಬೆಳೆಯಬೇಕು. ಅಧ್ಯಕ್ಷರು, ಆಡಳಿತ ಮಂಡಳಿಯವರು, ಸಿಬ್ಬಂದಿ ಹಾಗೂ ಸದಸ್ಯರು ಒಂದೇ ಹಿತಚಿಂತನೆಯಲ್ಲಿ ಒಂದಾಗಿ ದುಡಿದಾಗ ಮಾತ್ರ ಸಹಕಾರ ಸಂಘವೊಂದು ಬೆಳೆಯಲು ಸಾಧ್ಯ. ಅದು ಇಲ್ಲಿ ಸಾಧ್ಯವಾಗಿದೆ ಎಂದರು.
ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲ ವಸಂತ ಮೂಲ್ಯ ಪಿ. ಮಾತನಾಡಿ, ಕುಲಾಲ, ಮೂಲ್ಯ, ಕುಂಬಾರ ಹೀಗೆ ಜಾತಿಯ ಹೆಸರಲ್ಲಿ ಗುರುತಿಸಿಕೊಳ್ಳಲು ಯಾವುದೇ ಹಿಂಜರಿಕೆ ಬೇಡ. ಮೂಲ್ಯ ಸಮುದಾಯವೆಂದರೆ ತಾಳ್ಮೆ, ನಿಷ್ಠೆ ಇರುವ ಸಮುದಾಯವಾಗಿದ್ದು, ದೈವ- ದೇವರ ಚಾಕರಿಯಲ್ಲಿಯೂ ನಮ್ಮ ಸಮುದಾಯಕ್ಕೆ ಪ್ರಮುಖ ಸ್ಥಾನವಿದೆ. ಮಕ್ಕಳಿಗೆ ನಮ್ಮ ಸಮುದಾಯದ ಆಚಾರ- ವಿಚಾರವನ್ನು ತಿಳಿಸುವ ಕೆಲಸವಾಗಬೇಕು. ಮಕ್ಕಳಿಗೆ ಏನೂ ಬೇಕಾದರೂ ಕೊಡಿ. ಆದರೆ ಅವರ ಕೈಗಳಿಗೆ ಮೊಬೈಲ್ ಕೊಡಬೇಡಿ. ವಿದ್ಯಾರ್ಥಿ ವೇತನವನ್ನು ಪಡೆದ ಮಕ್ಕಳು ಅದನ್ನು ಕಲಿಕೆಗಾಗಿ ಮಾತ್ರ ಸದುಪಯೋಗಪಡಿಸಿಕೊಳ್ಳಿ. ಸಂಘದ ಮೇಲಿನ ಬಾಂಧವ್ಯವನ್ನು ಉಳಿಸಿಕೊಳ್ಳಿ ಎಂದರು.
ಪುತ್ತೂರು ಸಹಕಾರಿ ಅಭಿವೃದ್ಧಿ ಅಧಿಕಾರಿ ಶೋಭಾ ಎನ್.ಎಸ್. ಮಾತನಾಡಿ, ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘವು ವಿಭಿನ್ನವಾದ ಸಹಕಾರ ಸಂಘವಾಗಿದ್ದು, ಇದು ಕೈಗಾರಿಕಾ ಸಹಕಾರ ಸಂಘಗಳ ಪಟ್ಟಿಗೆ ಸೇರುತ್ತದೆ. ಪುತ್ತೂರು ಉಪವಿಭಾಗದಲ್ಲಿ ಒಟ್ಟು 398 ಸಹಕಾರ ಸಂಘಗಳಿವೆ. ಆದರೆ ಕೈಗಾರಿಕಾ ಸಹಕಾರ ಸಂಘವಿರುವುದು ಎರಡೇ. ಈ ಸಂಘದ ಶಾಖೆಗಳು ರಾಜ್ಯ ಮಟ್ಟದ ಕಾರ್ಯವ್ಯಾಪ್ತಿ ಹೊಂದಲಿ ಎಂದು ಶುಭಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ವಕೀಲ ಭಾಸ್ಕರ ಎಂ. ಪೆರುವಾಯಿ ಮಾತನಾಡಿ, ನಮ್ಮ ಸಂಘವು ಸ್ಥಾಪನೆಯಾಗಿ 68 ವರ್ಷವಾಗಿದ್ದು, ದ.ಕ. ಜಿಲ್ಲೆಯ ವಿವಿಧೆಡೆ 18 ಶಾಖೆಗಳನ್ನು ಹೊಂದಿದೆ. 39 ಸಾವಿರಷ್ಟು ಸದಸ್ಯರನ್ನು ಹೊಂದಿದ್ದು, ಉತ್ತಮ ಲಾಭದಲ್ಲಿ ಮುನ್ನಡೆಯುತ್ತಿದೆ. ಇದರ ಅಭಿವೃದ್ಧಿಗೆ ಸಂಘಕ್ಕೆ ಅಡಿಪಾಯ ಹಾಕಿದ ಹಿರಿಯರು, ಆಡಳಿತ ಮಂಡಳಿ, ನೌಕರ ವರ್ಗ, ಸದಸ್ಯರು, ಗ್ರಾಹಕರು ಕಾರಣ. ಇನ್ನಷ್ಟು ಸಂಘವನ್ನು ಅಭಿವೃದ್ಧಿ ಪಡಿಸುವ ಯೋಚನೆಯಿದ್ದು, ಅದಕ್ಕಾಗಿ ಹಲವು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದರು.
ಸಿದ್ಧಕಟ್ಟೆ ಜನೌಷಧಿ ಕೇಂದ್ರದ ಮಾಲಕ ಮನೋಜ್ ಕುಲಾಲ್, ವರ್ಕಾಡಿ ಪಂಚಾಯತ್ ಸದಸ್ಯ ಗೋಪಾಲಕೃಷ್ಣ ಪಜ್ಜ, ಕಟ್ಟಡದ ಮಾಲಕ ಕೆ. ರಾಜೇಶ್ ನಾಯಕ್ ಮಾತನಾಡಿ ಶುಭ ಹಾರೈಸಿದರು. ವೇದಿಕೆಯಲ್ಲಿ ವಕೀಲ ಉಮಾಕರ ಬಂಗೇರ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷರಾದ ದಾಮೋದರ ಕುಲಾಲ್, ನಿರ್ದೇಶಕರಾದ ಬಿ.ಎಸ್. ಕುಲಾಲ್, ಗಣೇಶ್ ಪಿ., ಪದ್ಮಕುಮಾರ್ ಎಚ್., ಪೂವಪ್ಪ ಕುಂಬಾರ, ಸೇಸಪ್ಪ ಕುಲಾಲ್, ಪ್ರಶಾಂತ್ ಬಂಜನ್, ರೇಖಾ ದಿನೇಶ್, ರಂಜಿತ, ಶಾಖಾ ವ್ಯವಸ್ಥಾಪಕಿ ಭವಾನಿ ಹಾಗೂ ಸಿಬ್ಬಂದಿ ವರ್ಗದವರು, ಸದಸ್ಯರು, ಗ್ರಾಹಕರು ಉಪಸ್ಥಿತರಿದ್ದರು.
ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಜನಾರ್ದನ ಮೂಲ್ಯ ಸ್ವಾಗತಿಸಿದರು. ಯಶಸ್ವಿನಿ ಪ್ರಾರ್ಥಿಸಿದರು. ನಿರ್ದೇಶಕ ನಾಗೇಶ್ ಕುಲಾಲ್ ವಂದಿಸಿದರು. ಪ್ರವೀಣ್ ಬಸ್ತಿ ಕಾರ್ಯಕ್ರಮ ನಿರೂಪಿಸಿದರು.

