ವಯನಾಡ್ (ಕುಲಾಲ ವರ್ಲ್ಡ್ ಡಾಟ್ ಕಾಮ್) ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿ ಹಾಗೂ ವಯನಾಡಿನ ಸಂಸತ್ ಸದಸ್ಯೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕೇರಳ ಮಲಪ್ಪುರಂ ನಿಲಂಬೂರಿನಲ್ಲಿರುವ ಕುಂಬಾರಿಕಾ ಗ್ರಾಮಕ್ಕೆ ಭೇಟಿ ನೀಡಿ ಕುಂಬಾರ ಕುಟುಂಬಗಳ ಕಷ್ಟ ಸುಖ ಆಲಿಸಿದರು. ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ವೀಡಿವೊಂದನ್ನು ಕೂಡಾ ಹಂಚಿಕೊಂಡಿದ್ದಾರೆ . ಅದರಲ್ಲಿ ಪ್ರಿಯಾಂಕಾ ಅವರು ಕುಂಬಾರರ ಪಾರಂಪರಿಕ ವೃತ್ತಿ ಮತ್ತು ಕುಶಲಕರ್ಮಿಗಳ ಕೌಶಲ್ಯತೆ ಹಾಗೂ ಕುಂಬಾರಿಕೆ ಉತ್ಪನ್ನಗಳನ್ನು ಮಾರಾಟ ಮಾಡುವ ಕುರಿತಾಗಿ ಮಾತನಾಡುವುದನ್ನು ಕೇಳಬಹುದು. ನಿಲಂಬೂರಿನ ಶತಮಾನಗಳಷ್ಟು ಹಳೆಯ ಕುಂಬಾರ ಹಳ್ಳಿಯಂತೆ ವಯನಾಡಿನಲ್ಲಿಯೂ ಅನೇಕ ಅಮೂಲ್ಯ ವಿಶೇಷತೆಗಳು ಇವೆ ಎಂದು ಅವರು ಹೇಳಿದ್ದಾರೆ. “ಕುಂಬಾರರ ಕರಕುಶಲತೆಯ ಗುಣಮಟ್ಟ, ತಲೆಮಾರುಗಳ ಕಲಿಕೆ ಮತ್ತು ಪರಂಪರೆಗೆ ಅಪಾರ ಮೌಲ್ಯಯುತವಾದ ಕೌಶಲ್ಯಗಳಿಗೆ ಸಾಕ್ಷಿಯಾಗಿದೆ. ಸಾಂಪ್ರದಾಯಿಕ ಮಣ್ಣಿನ ಪಾತ್ರೆಗಳಿಂದ ಹಿಡಿದು ಫೋನ್ಗಳಿಗೆ ಸ್ಪೀಕರ್ಗಳು ಮತ್ತು ಭಾವಚಿತ್ರ ತಯಾರಿಕೆಯಂತಹ ನಾವೀನ್ಯತೆಗಳವರೆಗೆ, ಅವರ ವಿಶಿಷ್ಟ ಹಾಗೂ ಆಕರ್ಷಕ ಸೃಜನಶೀಲತೆಯನ್ನು ವೀಕ್ಷಿಸುವುದು ಮನಸ್ಸಿಗೆ ಮುದ ನೀಡಿದೆ. ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ಕುಂಬಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸುವುದು ನನಗೆ ಬಹಳ ಮುಖ್ಯವಾಗಿತ್ತು. ಅವರ ಅಮೂಲಾಗ್ರ ಉನ್ನತಿಯ ದೃಷ್ಟಿಯಲ್ಲಿ ತಾನು ಕೆಲಸ ಮಾಡುವುದಾಗಿ ಅವರು ಭರವಸೆ ನೀಡಿದ್ದಾರೆ.

