ಬೆಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್) : ಕುಂಬಾರ/ಕುಲಾಲ ಸಮುದಾಯದ (Kumbara community) ಹಿತದೃಷ್ಟಿಯಿಂದ ಕುಂಬಾರ ಅಭಿವೃದ್ಧಿ ನಿಗಮ ಸ್ಥಾಪಿನೆ ಮಾಡುವುದಾಗಿ ಬಜೆಟಿನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಘೋಷಣೆ ಮಾಡಿದ್ದಾರೆ. ಕುಂಬಾರ ನಿಗಮದೊಂದಿಗೆ
ಕೊಡವ, ತಿಗಳ, ಗಾಣಿಗ, ಉಪ್ಪಾರ, ಈಡಿಗ,ಕಾಡುಗೊಲ್ಲ ಸಮುದಾಯಗಳ ಪ್ರತ್ಯೇಕ ನಿಗಮಗಳನ್ನು ಸ್ಥಾಪಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ. ಶುಕ್ರವಾರ ವಿಧಾನಸೌಧದಲ್ಲಿ ನಡೆದ ಬಜೆಟ್ ಭಾಷಣ ಮಾಡಿದ ಅವರು, ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯಗಳಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಲು 30 ಕೋಟಿ ರೂ.ಗಳನ್ನು ಒದಗಿಸಲಾಗುವುದು. ಸ್ವಂತ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದ್ಯಾರ್ಥಿನಿಲಯಗಳ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳಲು 50 ಕೋಟಿ ರೂ. ಒದಗಿಸಲಾಗುವುದು ಎಂದರು.
ರಾಜ್ಯದಲ್ಲಿ ಕುಂಬಾರ ಸಮುದಾಯ ಸುಮಾರು 28 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿದ್ದು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಹಿಂದುಳಿದ ಹಾಗೂ ಶೋಷಿತ ಸಮುದಾಯವಾಗಿದೆ. ಕುಂಬಾರ ವೃತ್ತಿಯನ್ನೇ ನಂಬಿಕೊಂಡಿರುವ ಈ ಸಮುದಾಯವು ಹೊಟ್ಟೆಪಾಡಿಗಾಗಿ ಊರು ಬಿಡುತ್ತಿದ್ದಾರೆ. ಇದರು ಈ ಸಮುದಾಯದ ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ಕುಂಬಾರ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯಗಳು ಕೇಳಿಬಂದಿದ್ದವು. ಈ ಹಿಂದಿನ ಬಸವರಾಜ ಬೊಮ್ಮಾಯಿ ಸರಕಾರ ಚುನಾವಣೆ ಪೂರ್ವದಲ್ಲಿ ಕುಂಬಾರ ಅಭಿವೃದ್ಧಿ ನಿಗಮ ಸ್ಥಾಪನೆಯ ಆದೇಶ ನೀಡಿತ್ತಾದರೂ ಆ ಬಳಿಕ ಅಧಿಕಾರ ಕಳೆದುಕೊಂಡ ಪರಿಣಾಮ ಅದು ನೆನೆಗುದಿಗೆ ಬಿದ್ದಿತ್ತು.

