ಕೆಲಸಕ್ಕೆ ಹೊಸ ಅರ್ಥವನ್ನು ಕೊಟ್ಟು ಕೀಳು ಕಸುಬು ಕಾಯಕವಾಗಿ, ಕಾಯಕ ಕೈಲಾಸವಾಗಿ ಮೋಚಿ, ಮಡಿವಾಳ, ಬಡಗಿ, ಅಕ್ಕಸಾಲಿಗ, ನೇಕಾರ, ಕುಂಬಾರ ಹಾರವ ಎಲ್ಲರೂ ಒಂದೇ ಎಂಬ ಹೊಸ ಸೊಲ್ನುಡಿ ಬಸವ ಕಟ್ಟಿದ ಬೀದರ್ ಜಿಲ್ಲೆಯ ಬಸವಕಲ್ಯಾಣ ಅನುಭವ ಮಂಟಪದಿಂದ ಹೊರಸೂಸಿ, ವಿಶ್ವದ ಧಾರ್ಮಿಕ ಇತಿಹಾಸದಲ್ಲಿಯೇ ಅದ್ಭುತ ಕ್ರಾಂತಿ ಉಂಟಾಯಿತು. ಅದೇ ಪುಣ್ಯ ಭೂಮಿ ಬೀದರ್ ಜಿಲ್ಲೆಯ ಭಾಲ್ಕಿಯೇ ಶಿವಭಕ್ತ ಕುಂಬಾರ ಗುಂಡಯ್ಯನ ಜನ್ಮಸ್ಥಳ ಕೂಡ. ಶಾಸನಗಳ ಪ್ರಕಾರ ಭಲ್ಲೂ ನಗರ, ಭಲ್ಲುಂಕ, ಭಾಲಿಕ, ಭಾಲಕ ಎಂದು ಕರೆಯಲ್ಪಟ್ಟಿದೆ. ಮರಡೀಪುರ ಶಾಸನದಲ್ಲಿ ಗುಂಡಯ್ಯನ ಬಗ್ಗೆ ಉಲ್ಲೇಖವಿದೆ. ಅಬ್ಬಲೂರು ಸೋಮೇಶ್ವರ ದೇವಾಲಯದಲ್ಲಿ “ಕುಂಬಾರ ಗುಂಡನ ಮುಂದೆ ಬಂದಾಡಿದ ನಮ್ಮ ಶಿವನು” ಎಂಬ ಬರಹವಿದ್ದು , ಅದರ ಕೆಳಗೆ ಗಡಿಗೆ ಬಾರಿಸುತ್ತ ಕುಳಿತ ಗುಂಡಯ್ಯನ ವಿಗ್ರಹವನ್ನು ಕೆತ್ತಲಾಗಿದೆ.
ಕುಂಬಾರ ಗುಂಡಯ್ಯನ ಬಗೆಗೆ ಚಾರಿತ್ರಿಕ ಅಂಶಗಳು ಅಷ್ಟೊಂದು ಲಭ್ಯವಾಗಿಲ್ಲ. ಈತನು ಬಸವಣ್ಣನ ಕಾಲದವನೋ, ಬಸವಪೂರ್ವ ಯುಗದವನೋ ಎಂಬುದೂ ಖಚಿತವಾಗಿ ತಿಳಿದು ಬರುತ್ತಿಲ್ಲ. ಹೆಚ್ಚಿನ ವಿದ್ವಾಂಸರು ಕುಂಬಾರ ಗುಂಡಯ್ಯ ಬಸವಪೂರ್ವ ಯುಗದವನು ಎಂದು ಹೇಳುತ್ತಾರೆ. ರಗಳೆ ಕವಿ ಹರಿಹರನು ಕುಂಬಾರ ಗುಂಡಯ್ಯನ ಶಿವಭಕ್ತಿಯನ್ನು ಕೊಂಡಾಡಿ ಬರೆದುದರಿಂದ ಹರಿಹರನಿಗಿಂತ ಹಿಂದಿನವನೆಂದು ಊಹಿಸಬಹುದಾಗಿದೆ.
ಕುಂಬಾರ ಗುಂಡಯ್ಯನ ತಂದೆ ಸತ್ಯಣ್ಣ, ತಾಯಿ ಸಂಗಮ್ಮ. ಆತನಿಗೊಬ್ಬಳು ಸಹೋದರಿ ಇದ್ದಳು. ಆಕೆಯೇ ನೀಲಲೋಚನೆ. ಕುಂಬಾರ ಗುಂಡಯ್ಯನ ಮಡದಿ ಶರಣೆ ಕೇತಲದೇವಿ. ಏಕೆ ಬ್ರಹ್ಮಯ್ಯನ ತಂಗಿ, ಬ್ರಹ್ಮಯ್ಯ ಗುಂಡಯ್ಯ ನೆಂಟರು. ಬ್ರಹ್ಮಯ್ಯನ ತಂಗಿಯನ್ನು ಗುಂಡಯ್ಯ ಹಾಗು ಗುಂಡಯ್ಯನ ತಂಗಿಯನ್ನು ಬ್ರಹ್ಮಯ್ಯನು ಮದುವೆಯಾಗಿದ್ದನು. ಗುಂಡಯ್ಯ ಬರೆದ ವಚನಗಳು ಇದುವರೆಗೆ ಲಭ್ಯವಾಗಿಲ್ಲ. ಈ ದಿಶೆಯಲ್ಲಿ ಸಂಶೋಧನೆ ಆಗಬೇಕಿದೆ.
ಕುಂಬಾರ ಗುಂಡಯ್ಯನು ನಿಷ್ಠೆಯಿಂದ ಕಾಯಕ ಮಾಡುತ್ತಾ ಅದರ ಮೂಲಕ ಶಿವಾರ್ಚನೆ ಸಲ್ಲಿಸುವುದು ಆತನ ದಿನಚರಿಯಾಗಿತ್ತು. ಹೊರಗೆ ಘಟಕಾಯಕ, ಶಿವ ಸೇವಾ ಕಾಯಕ ಎರಡನ್ನೂ ಏಕಕಾಲಕ್ಕೆ ನಡೆಸಿಕೊಂಡು ಬಂದಿದ್ದ. ಹೀಗಿರುವಾಗ ಒಂದು ದಿನ ಶಿವಪ್ರೆರಣೆಯಿಂದ ಶಿವಾಲಯಕ್ಕೆ ಬಂದು ಪೂಜಾಲಂಕ್ರತವಾದ ಶಿವನನ್ನು ಕಂಡು ಮೈಮರೆತು ಪುಳಕ ತುಂಬಿದ ಕೈಗಳಿಂದ ಪಾದೋದಕ ಸ್ವೀಕರಿಸಿ ಧೀರ್ಘದಂಡ ಪ್ರಣಾಮಗೈದು, ಮನದಲ್ಲಿ ಶಿವನ ನೆನಹನ್ನು, ಕಣ್ಣಲ್ಲಿ ಶಿವನ ಮೂರ್ತಿಯನ್ನು ತುಂಬಿಕೊಂಡು ಮನೆಗೆ ಬಂದು ಶಿವಭಾವದಲ್ಲಿ ಲೀನನಾದ ಅವನಿಗೆ ಊಟ ನಿದ್ರೆಗಳ ಪರಿವೇ ಇರಲಿಲ್ಲ. ಕಾಯಕದಲ್ಲಿ ನಿರತನಾಗಿ ಹೊಸ ಹೊಸ ಪರಿಯ ಗಡಿಗಳನ್ನು ಸಿದ್ಧಗೊಳಿಸಿದ. ಶಿವನಾಮ ಸ್ತುತಿಸುತ್ತ ಗಡಿಗೆ
ಬಾರಿಸುತ್ತ ಕುಣಿಯತೊಡಗಿದ. ಹೊರಗೆ ಅವನ ತನು ಅಲ್ಲಾಡಿದರೆ, ಒಳಗೆ ಶಿವಲಿಂಗ ಅಲ್ಲಾಡುತ್ತಿತ್ತು. ಅಂತರಂಗದಲ್ಲಿ ಶಿವ ನಲಿಯುವುದನ್ನು ಕಂಡು ಅವನ ಸಂತೋಷ ಮೇರೆ ಮೀರಿತು. ಉತ್ಸಾಹ ಹೆಚ್ಚಿತು. ಸುತ್ತುತ್ತ, ತುಳಿಯುತ್ತ, ಉಬ್ಬುತ್ತ, ಕೊಬ್ಬುತ್ತ ,ಪುಳಕಗೊಳ್ಳುತ್ತ ಇಡೀ ರಾತ್ರಿ ಗಡಿಗೆ ಬಾರಿಸತೊಡಗಿದ. ಅವನ ಕರುನದೊಳಗೆ ಹರನು ಆಡತೊಡಗಿದ. ಮನದಣಿಯೇ ಬಾರಿಸುತ್ತ ಒಳಗಣ ಶಿವನಾಟಕ್ಕೆ ಎಡೆ ಮಾಡುತ್ತಾ ಇದೆ ನೇಮವೆಂದು ಗುಂಡಯ್ಯನು ಮುನ್ನಡೆದ.
ಒಂದು ದಿನಶಿವ ಕೈಲಾಸದಲ್ಲಿ ಪಾರ್ವತಿ ಸಮೇತನಾಗಿ ಕುಳಿತಾಗ ಗುಂಡಯ್ಯ ಗಡಿಗೆ ಬಾರಿಸಲು ಪ್ರಾರಂಭಿಸಿದ. ಸಿವನು ಅದರ ನಾದಕ್ಕೆ ಮೈಮರೆತು ಬಳಿಯಿದ್ದ ಗಿರಿಜೆಯನ್ನು ಗುಂಡಯ್ಯನೆಂದು ಭಾವಿಸಿ ತಾನು ಓಲಗದಲ್ಲಿದ್ದೇನೆ ಎನ್ನುವುದನ್ನು ಮೇಟು ನರ್ತಿಸತೊಡಗಿದ. ಅದನ್ನು ಕಂಡು ಗಿರಿಜೆ “ಹೀಗೇಕೆ? ಇಂದಿನ ನಿಮ್ಮ ರೀತಿ ಹೊಸ ಪರಿಯಾಗಿದೆ” ಎಂದು ಕೇಳಿದಳು. ಶಿವನು ಒಮ್ಮೆಲೇ ಎಚ್ಚೆತ್ತು ನಡೆದ ಸಂಗತಿಯನ್ನು ವಿವರಿಸಿದ. “ ಗುಂಡಯ್ಯನೆಂಬ ಭಕ್ತನ ಹೃದಯದಲ್ಲಿ ಆಡುತ್ತಿದ್ದೆ. ಅದನ್ನು ಕೇಳಿದ ಗಿರಿಜೆ ಕೌತುಕಗೊಂಡು ನಿಮ್ಮನ್ನು ಆಡಿಸಿದ ಆ ಶಿವ ಭಕ್ತನನ್ನು ತಾನು ನೋಡಬೇಕೆಂಬ ಬಯಕೆ ವ್ಯಕ್ತಪಡಿಸಿದಳು. “ಆಗ ಶಿವನು ಆಗಲಿ ಬಾ ತೋರಿಸುವೆ” ಎಂದು ಕರೆ ತಂದನು. ಗಗನ ಮಧ್ಯದಲ್ಲಿ ಅವಳನ್ನು ಇರಿಸಿ ತಾನು ಗುಂಡಯ್ಯನ ಮನೆಯ ಮುಂದೆ ಇಳಿದ.
ಗುಂಡಯ್ಯ ಶಿವ ಬಂದಿದ್ದಾನೆಂದು ಪರಿವೆಯಿಲ್ಲದೆ ಮೈಮರೆತು ಗಡಿಗೆ ಬಾರಿಸುತ್ತಲೇ ಇರುತ್ತಾನೆ. ಅವನ ನಿಷ್ಠೆಯನ್ನು ಕಂಡು ಶಿವನು ಮೆಚ್ಚಿ ಆತನನ್ನು ಎಚ್ಚರಿಸಬೇಕೆಂದು ಅವನೊಳಗಾಡುವ ಶಿವಲಿಂಗವನ್ನು ತನ್ನತ್ತ ಆಕರ್ಷಿಸುತ್ತಾನೆ. ಆಗ ಲಿಂಗದೊಡನೆ ಗುಂಡಯ್ಯ ಕಣ್ದೆರೆದು ಮುಂದಿದ್ದ ಶಿವನನ್ನು ಕಂಡು ಹರ್ಷ ಪುಳಕಿತನಾಗಿ ಮತ್ತಷ್ಟು ಹುರುಪಿನಿಂದ ಬಾರಿಸತೊಡಗಿದ. ಶಿವ ಅವನ ಒಳಗಾಡಿದಂತೆ ಹೊರಗೂ ಆಡಿ ತೋರಿಸಬೇಕೆಂದು ತನ್ನ ವಿರಾಟ್ ಸ್ವರೂಪ ತಾಳಿ ಅವನ ಮುಂದೆ ಕುಣಿಯತೊಡಗಿದ. ಸುರಲೋಕ ವಾದ್ಯಗಳು ಬರಲು ಅವೆಲ್ಲ ಬೇಡವೆಂದು ಮಡಿಕೆಯ ನಾದವೇ ಸಾಕೆಂದು ನುಡಿದು ಕಳಿಸಿದ. ಶಿವನ ಕುಣಿತವನ್ನು ನೋಡಿದ ಗುಂಡಯ್ಯ, ಗುಂಡಯ್ಯನ ಕುಣಿತ ನೋಡಿದ ಶಿವ, ಅವರಿಬ್ಬರ ಕುಣಿತವನ್ನು ನೋಡಿದ ಗಣಪತಿ ಸಕಲ ಸ್ಥಾವರ ಜಂಗಮವೆಲ್ಲ ಕುಣಿಯತೊಡಗಿದವು. ಗಡಿಗೆಯ ನಾದ ದಿಗಂತವನ್ನೆಲ್ಲ ತುಂಬಿತು. ಪಾರ್ವತಿ ಅದನ್ನು ಕೇಳಿ ಶಿವನ ತಾಂಡವ ನೃತ್ಯವನ್ನು ನೋಡಿ ಇದರಿಂದ ನರಲೋಕಕ್ಕೆ ಕೇಡಾಗಕೂಡದೆಂದು ಬಗೆದು ಶಿವನನ್ನು ಶಾಂತಗೊಳಿಸಬೇಕೆಂದು, ಅವನನ್ನು ಸ್ತುತಿಸುತ್ತ ಕೆಳಗಿಳಿದು ಬಂದಳು. ಶಿವನು ತನ್ನ ವಿರಾಟ್ ಸ್ವರೂಪವನ್ನು ಶಮನಗೊಳಿಸಿ, ಮುದ್ನೆ ಕುಣಿಯುತ್ತಾ ನಿಂತ ಗುಂಡಯ್ಯ ನನ್ನು ನೋಡಿ ಆನಂದದಿಂದ ಮುದ್ದಾಡಿದ. ಅವನ ಭಕ್ತಿಯನ್ನು ಜಗತ್ತಿಗೆಲ್ಲ ತೋರ್ಪಡಿಸಿ ಕೈಲಾಸಕ್ಕೆ ಕರೆದೊಯ್ದು ಗಣ ಪದವಿಯನ್ನಿತ್ತು ಕಾಪಾಡಿದನು.
“ಜಗವೆಲ್ಲವ ಆಡಿಸುವ ಶಿವನನ್ನು
ಗುಂಡಯ್ಯ ಮಡಿಕೆಯ ದನಿಯಿಂದ ಆಡಿಸಿದ” ಎನ್ನುವ ಹರಿಹರನ ನುಡಿ, ಗುಂಡಯ್ಯನಿಗೆ ಕಾಯಕದ ಮೇಲಿದ್ದ ನಿಷ್ಠೆ ಶಿವನ ಮೇಲಿದ್ದ ಭಕ್ತಿಯನ್ನು ತೋರಿಸುವುದು ಮಹಾಕವಿಯು ಗುರುತಿಸಿದ ಮಹೋನ್ನತಿಗೆ ಮುಟ್ಟಿದ್ದಾನೆ.


