ಬೆಂಗಳೂರು : ಯಕ್ಷಗಾನ ಭಾಗವತಿಗೆಯಲ್ಲಿ ಮಿಂಚುತ್ತಿರುವ ಕುಲಾಲ ಸಮಾಜದ ಉದಯೋನ್ಮುಖ ಯುವ ಕಲಾವಿದ ಯಕ್ಷ ಸ್ವರಸಿಂಧು, ಮಲೆನಾಡ ಕೋಗಿಲೆ ಬಿರುದಾಂಕಿತ ನಾಗೇಶ ಕುಲಾಲ ನಾಗರಕೊಡಿಗೆ ಅವರು ಇದೇ ಪ್ರಥಮ ಬಾರಿಗೆ ಯಕ್ಷಗಾನ ಲೋಕದಲ್ಲಿ ಹೊಸ ಅಲೆಯನ್ನೇ ಸೃಷ್ಟಿ ಮಾಡಿರುವ,ದೇಶ ವಿದೇಶಗಳಲ್ಲಿ ತಮ್ಮ ಸುಮಧುರ ಕಂಠದ ಗಾಯನದ ಮೂಲಕ ಪ್ರಖ್ಯಾತರಾಗಿರುವ ಪಟ್ಲ ಸತೀಶ್ ಶೆಟ್ಟಿ ಹಾಗೂ ರಾಘವೇಂದ್ರ ಮಯ್ಯ ಹಾಲಾಡಿ ಜೊತೆಯಾಗಿ `ತ್ರಿವಳಿ ಗಾನ ವೈವಿಧ್ಯ’ ಕಾರ್ಯಕ್ರಮದಲ್ಲಿ ಮಿಂಚಲಿದ್ದಾರೆ.
ಜೂನ್ ೨೦, ಸೋಮವಾರದಂದು ರಾತ್ರಿ ಬೆ೦ಗಳೂರು ರವೀ೦ದ್ರ ಕಲಾಕ್ಷೇತ್ರದಲ್ಲಿ ಅಂಪಾರು ರತ್ನಾಕರ ಶೆಟ್ಟಿಯವರ ಸಂಯೋಜನೆಯಲ್ಲಿ ಈ ಮೂವರು ತೆಂಕು ಬಡಗಿನ ದಿಗ್ಗಜರು ೨ ಗಂಟೆಗಳ ಕಾಲ ಯಕ್ಷ ಪ್ರೇಮಿಗಳನ್ನು ರಂಜಿಸಲಿದ್ದಾರೆ. ಅದೇ ದಿನ ಸಾಲಿಗ್ರಾಮ ಮೇಳದವರಿಂದ `ಕುಶಲವ’ ಹಾಗೂ `ಧರ್ಮ ಸಂಕ್ರಾಂತಿ’ ಯಕ್ಷಗಾನವೂ ನಡೆಯಲಿದೆ.
ನಾಗರಕೊಡಿಗೆ, ಕಮಲಶಿಲೆ, ಬಗ್ವಾಡಿ, ಹಾಲಾಡಿ, ಮಂದಾರ್ತಿ ಮೇಳಗಳಲ್ಲಿ ಸೇರಿದಂತೆ ೨೯ ವರ್ಷಗಳ ಕಲಾ ವ್ಯವಸಾಯ ನಡೆಸಿದ ಹಿರಿಮೆ ನಾಗೇಶ ಕುಲಾಲ್ ರದ್ದು. ಪ್ರಸ್ತುತ ಪ್ರಸಿದ್ಧ ಮೇಳಗಳಲ್ಲಿ ಒಂದಾದ ಮಂದಾರ್ತಿ ಮೇಳದ ಪ್ರಧಾನ ಭಾಗತರಾಗಿ ಸೇವೆ ಸಲ್ಲಿಸುತ್ತಿದ್ದು, ಜನಮನ್ನಣೆಯನ್ನು ಪಡೆಯುತ್ತಿದ್ದಾರೆ. ಹೆರಂಜಾಲು ಗೋಪಾಲ ಗಾಣಿಗ, ಸುಬ್ರಹ್ಮಣ್ಯ ಆಚಾರ್ಯ, ಕೆ. ಪಿ ಹೆಗಡೆ ಮೊದಲಾದ ಖ್ಯಾತ ಭಾಗವತರೊಂದಿಗೆ ಹಾಗೂ ಯಕ್ಷ ದಿಗ್ಗಜರಾದ ದಿ. ಮೊಳಹಳ್ಳಿ ಹೆರಿಯ ನಾಯ್ಕ, ನಾರಾಡಿ ಭೋಜರಾಜ ಶೆಟ್ಟಿ, ಕೊಂಡದಕುಳಿ ರಾಮಚಂದ್ರ ಹೆಗಡೆ, ಎಂ. ಎ ನಾಯ್ಕ, ಉಪ್ಪುಂದ ನಾಗೇಂದ್ರ ರಾವ್ ಮೊದಲಾದವರೊಂದಿಗೆ ರಂಗ ಒಡನಾಟವನ್ನು ಇಟ್ಟುಕೊಂಡು ಭಾಗವತರಾಗಿ ರೂಪುಗೊಂಡಿದ್ದಾರೆ.