ಮನಸ್ಸಲ್ಲಿ ಮೂಡಿದ ವಿಷಯಕ್ಕೆ ಕುಂಚದ ಮೂಲಕ ಚಿತ್ರರೂಪ ಕೊಡುವುದು ಕಷ್ಟದ ಕೆಲಸ. ಆದರೂ ಆ ಕಷ್ಟದ ಕೆಲಸಕ್ಕೆ ಇಷ್ಟದ ಲೇಪನ ಕೊಟ್ಟು ಕುಂಚದಲ್ಲೇ ಮನಸೂರೆಗೊಳಿಸುವ ಚಿತ್ರಗಳನ್ನು ಬಿಡಿಸುತ್ತಾರೆ ಬೀದರ್ನ ನಾರಾಯಣ ಎಸ್. ಕುಂಬಾರ ((ಎನ್ ಎಸ್ ಕುಂಬಾರ್). ಹೌದು, ನಾರಾಯಣರಿಗೆ ಬಾಲ್ಯದಿಂದಲೂ ಚಿತ್ರಕಲೆಯಲ್ಲಿ ಎಲ್ಲಿಲ್ಲದ ಆಸಕ್ತಿ. ಶಾಲೆಯಲ್ಲಿ ಗೆಳೆಯರೆಲ್ಲ ನೋಟ್ಬುಕ್ನಲ್ಲಿ ಏನೇನೋ ಬರೆಯುತ್ತಿದ್ದರೆ, ಇವರು ಮಾತ್ರ ಸ್ಕೆಚ್ಪೆನ್ ಹಿಡಿದು ಚಿತ್ರ ಬಿಡಿಸುತ್ತಿದ್ದರಂತೆ.
ಕುಂಚದ ಜೊತೆಗಿನ ಸರಸವೇ ಅವರನ್ನು ಪ್ರತಿಭಾವಂತ ಚಿತ್ರಕಲಾವಿದನನ್ನಾಗಿಸಿದೆ. ತಮಗೆ ಒಲಿದಿರುವ ಆ ಕಲೆಯನ್ನು ಇತರರಿಗೂ ಧಾರೆಯೆರೆಯುವ ಉದ್ದೇಶದಿಂದ ಮಕ್ಕಳಿಗೂ ಚಿತ್ರಕಲೆ ಹೇಳಿಕೊಡುತ್ತಿದ್ದು, ತಮ್ಮ ಕಲೆಯನ್ನು ಸಾರ್ಥಕಗೊಳಿಸಿದ್ದಾರೆ.
ಮನಸೂರೆಗೊಂಡ ಚಿತ್ರಕಲಾ ಪ್ರದರ್ಶನ
ಮಕ್ಕಳಿಗೆ ಚಿತ್ರಕಲೆಯ ಪಾಠದ ಜೊತೆಗೆ ಹಲವು ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ನಾರಾಯಣ, ಸ್ವತಃ ಚಿತ್ರಕಲಾ ಪ್ರದರ್ಶನಗಳನ್ನು ಏರ್ಪಡಿಸಿದ್ದಾರೆ. 2005ರಲ್ಲಿ ಬೀದರ್ನ ರಂಗಮಂದಿರ, 2008-09ರಲ್ಲಿ ಬೀದರ್ನ ಡಾ.ಎಸ್.ಎಂ. ಪಂಡಿತ್ ಫೈನ್ ಆರ್ಟ್ಸ್ ಕಾಲೇಜ್, 2010ರಲ್ಲಿ ಬೀದರ್ ಕೋಟೆ ಹಾಗೂ 2010ರ ಬೀದರ್ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರದರ್ಶನಗಳನ್ನು ಏರ್ಪಡಿಸಿ ಹಲವು ಪ್ರತಿಭೆಗಳಿಗೆ ಸ್ಪೂರ್ತಿ ನೀಡಿದ್ದಾರೆ.
ಪ್ರತಿಭೆಗೆ ಸಂದ ಗೌರವ
ನಾರಾಯಣ ಅವರಿಗೆ ಹತ್ತು ಹಲವು ಪ್ರಶಸ್ತಿಗಳು ಲಭಿಸಿವೆ. 2008ರಲ್ಲಿ ಕಲಬುರಗಿಯಲ್ಲಿ ಇಂಡಿಯನ್ ರಾಯಲ್ ಅಕಾಡೆಮಿ ಆಫ್ ಆರ್ಟ್ಸ್ ಆಂಡ್ ಕಲ್ಚರ್ ಸಂಸ್ಥೆ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಬಂಗಾರದ ಪದಕ ಗಳಿಸಿದ್ದಾರೆ. ದೆಹಲಿಯಲ್ಲಿ 2013ರಲ್ಲಿ ಆಯೋಜಿಸಿದ್ದ ಆಲ್ ಇಂಡಿಯಾ ನ್ಯಾಷನಲ್ ಆರ್ಟ್ಸ್ ಕಾಂಪಿಟೇಷನ್ನಲ್ಲಿ ಚಿನ್ನದ ಪದಕ, ಕಲಬುರಗಿ ಮತ್ತು ಬೆಂಗಳೂರು ವಿವಿ ಯುವಜನೋತ್ಸವದಲ್ಲೂ ಚಿನ್ನದ ಪದಕ ಗೆದ್ದ ಕೀರ್ತಿ ನಾರಾಯಣ ಅವರದ್ದು. ತಾಲೂಕು ಮತ್ತು ಜಿಲ್ಲಾಮಟ್ಟದಲ್ಲಿ ಗೆದ್ದ ಪ್ರಶಸ್ತಿಗಳಿಗೆ ಲೆಕ್ಕವೇ ಇಲ್ಲ.
ವಿವಿಧ ವಿಭಾಗಗಳಲ್ಲಿ ಪರಿಣತಿ
ನಾರಾಯಣ ಅವರು ಚಿತ್ರಕಲೆಯ ಹಲವು ವಿಭಾಗಗಳಲ್ಲಿ ಪರಿಣತಿ ಸಾಧಿಸಿದ್ದಾರೆ. ಸೆಮಿ ರಿಯಾಲಿಸ್ಟಿಕ್ ಪೇಂಟಿಂಗ್ಸ್, ಅಬ್ಸ್ಟ್ರ್ಯಾಕ್ಟ್ ಪೇಂಟಿಂಗ್, ಮಾಡರ್ನ್ ಪೇಂಟಿಂಗ್, ರಿಯಲಿಸ್ಟಿಕ್ ಪೋಟ್ರೖೆಟ್ಸ್ (ಭಾವಚಿತ್ರ) ಸೇರಿದಂತೆ ವಿವಿಧ ವಿಭಾಗಗಳಲ್ಲಿ ಹಿಡಿತ ಸಾಧಿಸಿ ಸೈ ಎನಿಸಿಕೊಂಡಿದ್ದಾರೆ. ಗಾಂಧೀಜಿಯವರ ಬದುಕು-ಹೋರಾಟದಿಂದ ಸ್ಪೂರ್ತಿಗೊಂಡ ನಾರಾಯಣ, ಗಾಂಧೀಜಿ ಜೀವನದ ಪ್ರಮುಖ ಘಟನಾವಳಿಗಳ ಚಿತ್ರಗಳನ್ನು ಬಿಡಿಸಿ ಚಿತ್ರಕಲಾ ಪ್ರದರ್ಶನವನ್ನು ಏರ್ಪಡಿಸಿದ್ದರು. ನಾರಾಯಣ್ ಪ್ರಸ್ತುತ ಕಲಬುರಗಿ ವಿವಿ ವಿಷುವಲ್ ಆರ್ಟ್ಸ್ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದಾರೆ. ಅವರಿಗೆ ಶುಭ ಹಾರೈಸಲು 9972349124ಗೆ ಕರೆ ಮಾಡಬಹುದು.
* ಸೋಮಶೇಖರ್ ಸುರಪುರ











