ಇವರು ಮಾಡಿದ್ದು ಡ್ರಾಫ್ಟ್ಮನ್ ಮೆಕ್ಯಾನಿಕ್ ಕೋರ್ಸ್. ವೃತ್ತಿ ಕುಂಬಾರಿಕೆ. ಪ್ರವೃತ್ತಿ ಮಾತ್ರ ಸಾಹಿತ್ಯ, ಸಂಶೋಧನೆ, ಜಾನಪದ, ಹಸ್ತಪ್ರತಿ ನಾಣ್ಯಗಳ ಸಂಗ್ರಹ, ಶಿಲಾಶಾಸನ ಓದುವಿಕೆ, ವಿಗ್ರಹ ನಿರ್ಮಾಣ, ಮರದಲ್ಲಿ ಕಲಾಕೃತಿಗಳ ನಿರ್ಮಾಣ, ಕವಿತೆ ರಚನೆ ಮತ್ತು ನಾಟಿ ವೈದ್ಯ ಸೇವೆ!
ಹರಿಹರದ ಗುಂಡಾಭಕ್ತರ ಗೂಳಪ್ಪ- ಬಸಮ್ಮ ಹಿತ್ತಲಮನಿ ದಂಪತಿಗೆ ಜನಿಸಿದ ದುಂಡ್ಯಪ್ಪ, ಹಿ.ಗೂ. ದುಂಡ್ಯಪ್ಪ ಎಂದೇ ಜನಜನಿತ. ಹರಿಹರದ ಸೋನಾಲ್ಕರ ಕಾರ್ಖಾನೆಯಲ್ಲಿ ಹಲವು ವರ್ಷ ಬಾಲಕಾರ್ಮಿಕರಾಗಿ, ಕಾರ್ಖಾನೆ ಬಂದ್ ಆದ ನಂತರ ಉಪಜೀವನಕ್ಕಾಗಿ ಮನೆತನದ ಕುಂಬಾರಿಕೆಗೆ ಶರಣಾದರು. ಈಗಲೂ ಚಿಕ್ಕ ಮನೆಯಲ್ಲಿ ವಾಸವಾಗಿರುವ ಇವರು ಭಾವನಾ ಜೀವಿ. ಬಡತನದಲ್ಲಿ ಪತ್ನಿ ಗಿರಿಜಾದೇವಿ ಮತ್ತು ಮಕ್ಕಳೊಂದಿಗೆ ತೃಪ್ತ ಜೀವನ ಸಾಗಿಸುತ್ತಿರುವರು.
ಮಡಿಕೆ ಮಾಡಲು ಹದಗೊಂಡ ಮಣ್ಣಿನಂತೆ ಅವರ ಮನಸ್ಸು ಸದಾ ಹೊಸ ಹೊಸ ಸಾಹಿತ್ಯ ರಚನೆ, ಸಂಶೋಧನೆಗಳತ್ತ ಹವಣಿಸುತ್ತದೆ. ಹೊಸ ಸಾಹಿತ್ಯ ಶೈಲಿಯಲ್ಲಿ ರೂಪುಗೊಂಡ ಕುಂಬಾರನ ಹಾಡುಗಳು (1977), ಒಲವಿನ 800 ಶಾಯಿರಿಗಳು (1991), ಗ್ರಾಮದೇವತೆಗಳ ಐತಿಹ್ಯ ಸಾರುವ 66 ಹಳ್ಳಿ ಒಡತಿ ಊರಮ್ಮನ ಚರಿತ್ರೆ (1993), ಮಕ್ಕಳ ಸಾಹಿತ್ಯ ಲೋಕದ ಗರಿ ಕರುಳ ಕುಡಿ (2000) ಇವರ ಪ್ರಕಟಿತ ಕೃತಿಗಳು. ಇವರ ಕಾವ್ಯನಾಮ ಕುರುವತ್ತಿ ಬಸವೇಶ್ವರ. ಶರಣ ಮಂದಾರ ಮತ್ತು ಕುಂಭಕಲೆ ಸ್ಮರಣ ಸಂಚಿಕೆಗಳನ್ನು ಸಂಪಾದಿಸಿದ್ದಾರೆ.
ನರಪಿಳ್ಳೆ (ಪರಿಸರ ಗೀತೆಗಳು), ಲಾಲಿ, ನನ್ನ ತುಂಟ (ಮಕ್ಕಳ ಗೀತೆಗಳು), ಅಭಿನವ ಪುಣ್ಯಕ್ಷೇತ್ರ ಬಿದರಹಳ್ಳಿ ಚರಿತ್ರೆ (ಕ್ಷೇತ್ರ ದರ್ಶನ), 1108 ಕುರುವತ್ತಿ ಬಸವೇಶ್ವರನ ವಚನಗಳು, ಊರಮ್ಮನ ಜಾನಪದ ಹಾಡುಗಳು, ಕುಲದೀಪಕರು ಪ್ರಕಟವಾಗಬೇಕಾಗಿರುವ ಕೃತಿಗಳು.
ಶಿಲಾಶಾಸನ ಪತ್ತೆ
ಬ್ರಿಟಿಷರ ಕಾಲದ ಹರಿಹರದ ಕುಮಾರಪಟ್ಟಣಂ ಹಳೇ ಸೇತುವೆ ಕೆಳಗೆ ರಾಷ್ಟ್ರಕೂಟರ ಶೈಲಿಯ ಗಜಲಕ್ಷ್ಮಿಯ ಉಬ್ಬುಶಿಲ್ಪವನ್ನು 2013 ಜನವರಿಯಲ್ಲಿ ಪತ್ತೆ ಹಚ್ಚಿದ್ದಾರೆ. 2013 ಫೆಬ್ರವರಿಯಲ್ಲಿ ಹರಿಹರ ಸಮೀಪ ಶೇರಾಪುರದ ಬಳಿ ಕ್ರಿ.ಪೂ. 4000- 1600 ವರ್ಷಗಳ ಮಧ್ಯದ ಅವಧಿಯ ನೂತನ ಶಿಲಾಯುಗದ ಶಿಲಾಯುಧವನ್ನು ಪತ್ತೆ ಹಚ್ಚಿದ್ದಾರೆ.
ಹರಿಹರದಲ್ಲಿ 12ನೇ ಶತಮಾನದಲ್ಲಿ ಮಾರ್ಕಂಡೇಶ್ವರ ದೇಗುಲವಿದ್ದ ಶಿಲಾಶಾಸನ ದಾಖಲೆ ಪತ್ತೆ ಹಚ್ಚಿದ್ದೂ ಇವರೇ. ಬಿಳಿಹಾಳೆ, ಪೆನ್ಸಿಲ್ ಕಾರ್ಬನ್ನಿಂದ ಶಾಸನ ಪ್ರತಿ ಮಾಡುವ ಸರಳ ವಿಧಾನವನ್ನು ಈ ರೀತಿ ಹೇಳುತ್ತಾರೆ. ಶಿಲಾಶಾಸನವಾಗಲಿ, ತಾಮ್ರ ಶಾಸನವಾಗಲಿ, ನಕಲು ಮಾಡುವ ಮುನ್ನ ಅವುಗಳಿಗೆ ಅಂಟಿದ ಮಣ್ಣು, ಎಣ್ಣೆ, ಜಿಡ್ಡು ಇವುಗಳನ್ನು ಸೋಪಿನಿಂದ ತೊಳೆದು ಅದರ ಮೇಲೆ ಬಿಳಿಹಾಳೆಯನ್ನು ಇಟ್ಟು ತುದಿಗಳಲ್ಲಿ ಪ್ಲಾಸ್ಟಿಕ್ ಟೇಪಿನಿಂದ ಅಂಟಿಸಿ, ಅದರ ಮೇಲೆ ಕಾರ್ಬನ್ ಹಾಳೆಯನ್ನು ಬೋರಲು ಹಾಕಿ ಮೃದುವಾಗಿ ಬಟ್ಟೆಯಿಂದ ಉಜ್ಜುತ್ತ ಹೋದಾಗ ಶಾಸನದ ಅಕ್ಷರಗಳು ಮೂಡುತ್ತದೆ ಎನ್ನುತ್ತಾರೆ.
ಆವಿಷ್ಕಾರ
2005ರಲ್ಲಿ ಧೂಳು ತಡೆಯುವ ಉಪಕರಣ ಆವಿಷ್ಕರಿಸಿದರು. ಈ ಸಾಧನದಲ್ಲಿ ಮೂಗಿಗೆ ಧೂಳು ಶೋಧಿಸುವ ಬಟ್ಟೆಯ ಪರದೆಯ ಸಂಸ್ಕರಣ ಜರಡಿಗಳಿವೆ. ಇದರಿಂದ ಧೂಳು ತಡೆದು ಶುದ್ಧ ಗಾಳಿ ದೊರೆಯುತ್ತದೆ. 45 ವರ್ಷಗಳಿಂದ ಸರ್ಪಹುಣ್ಣಿಗೆ ಉಚಿತವಾಗಿ ನಾಟಿ ಚಿಕಿತ್ಸೆ ಕೊಡುವರು. ಸರ್ಪಹುಣ್ಣು ಆದವರಿಗೆ ಗುಳ್ಳೆಗಳ ಸಮೂಹ ಇಲ್ಲದ ಸ್ಥಳಗಳ ಸುತ್ತಲೂ ಆ ಗುಳ್ಳೆಗಳಿಗೆ ಎದುರುಮುಖವಾಗಿ ಗರುಡ ರೇಖೆಗಳನ್ನು ಬರೆಯುತ್ತಾರೆ. ಗರುಡನ ಧ್ಯಾನದಿಂದ ಸಂಕಲ್ಪ, ಏಕಾಗ್ರತೆಯಿಂದ ಹೊರಟ ವಿಶ್ವಶಕ್ತಿ ಬೆರಳುಗಳ ಮತ್ತು ನೋಟದ ಮುಖಾಂತರ ಗರುಡ ರೇಖೆಯ ರೂಪವಾಗಿ ಚಲಿಸಿ ಸರ್ಪಹುಣ್ಣಿನ ಪ್ರಭಾವವನ್ನು ತಗ್ಗಿಸುತ್ತದಂತೆ. ಫೋಟೋ ಥೆರಪಿ ಇದ್ದಂತೆ ದೂರದ ಊರಿನವರಿಗೆ ಇಲ್ಲಿಂದಲೇ ಮತ್ತೆ ಮತ್ತೆ ಬರೆಯುತ್ತೇನೆ ಎನ್ನುತ್ತಾರೆ. ಸಂಕಲ್ಪ ಶಕ್ತಿಯ ದುಂಡ್ಯಪ್ಪ ಈ ವಿಷಯದಲ್ಲಿ ಅವರ ಗುರುಗಳಾದ ಹರಿಹರ ಹಳ್ಳದಕೆರೆಯ ಚಿತ್ರಕಾರ ದಿ. ಜೋಗಪ್ಪರ ಪತಿಯಪ್ಪರನ್ನು ಸ್ಮರಿಸುತ್ತಾರೆ.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕುಂಬಾರ ಸಮ್ಮೇಳನ, ಮಕ್ಕಳ ಸಾಹಿತ್ಯ ಸಮ್ಮೇಳನ, ಪಾರಂಪರಿಕ ವೈದ್ಯ ಪರಿಷತ್ತಿನಿಂದ ಸನ್ಮಾನಿತರು. 64ರ ಇಳಿವಯಸ್ಸಿನಲ್ಲಿ ಸೈಕಲ್ ಸಂಚಾರಿಗಳಾಗಿ ಹರಿಹರದಲ್ಲಿ ಕಾಣಸಿಗುತ್ತಾರೆ. ‘ಹರಿಹರ ಶ್ರೀ’ ಪ್ರಶಸ್ತಿಯೊಂದಿಗೆ ಪ್ರತಿ ವರ್ಷ ಒಂದು ಉತ್ತಮ ಕಾವ್ಯ ಕೃತಿಯನ್ನು ವಿದ್ವಾಂಸರಿಂದ ಗುರುತಿಸಿ ರು. 5000 ಪುರಸ್ಕಾರ ಕೊಡುತ್ತಾರೆ. ಇಂಥ ಅಪರೂಪದ ವ್ಯಕ್ತಿತ್ವದ ಹಿ.ಗೂ. ದುಂಡ್ಯಪ್ಪ ಪ್ರಚಾರ ಬಯಸದೇ ಕನ್ನಡದ ಸೇವೆ ಮಾಡುತ್ತಿದ್ದಾರೆ.