ಗುಜರಾತ್ ಮೂಲದ ಪ್ರಜಾಪತಿ ಅವರದ್ದು ವಿಶಿಷ್ಟ ಸಾಧನೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಂತೆ ಪ್ರಜಾಪತಿ ಕೂಡ ಟೀ ಮಾರಿಕೊಂಡು ಬೆಳೆದವರು. ಮುಂದೆ ‘ಜೇಡಿಮಣ್ಣಿನ ಫ್ರಿಡ್ಜ್’ ತಯಾರಿಸುವ ಮೂಲಕ ದೇಶದ ಗಮನ ಸೆಳೆದಿದ್ದಾರೆ. ಪ್ರಜಾಪತಿ ತಂದೆ ಕುಂಬಾರಿಕೆ ಮಾಡುತ್ತಿದ್ದರು. ಅಪ್ಪ ಮಾಡುತ್ತಿದ್ದ ಮಡಿಕೆ ಕುಡಿಕೆಗಳನ್ನು ನೋಡಿ ಬೆಳೆದ ಅವರಿಗೆ ಅದ್ಯಾಕೋ ವಿದ್ಯೆ ತಲೆಗೆ ಹತ್ತಲಿಲ್ಲ.
ಹತ್ತನೇ ಕ್ಲಾಸ್ ಓದಲಾರದೇ ಪಟ್ಟಣ ಸೇರಿದರು. ಅಲ್ಲಿ ಟೀ ಅಂಗಡಿ ಹಾಕಿಕೊಂಡು ಹತ್ತು ವರ್ಷ ಜೀವನ ನಡೆಸಿದರು. ಪ್ರಜಾಪತಿ ಟೀ ಮಾರುತ್ತಿದ್ದರಿಂದ ಸಂಬಂಧಿಗಳು ತಾತ್ಸಾರದಿಂದ ನೋಡುತ್ತಿದ್ದರು. ಹಾಗಾಗಿ ಏನಾದರೂ ಸಾಧನೆ ಮಾಡಲೇಬೇಕು ಎಂಬ ಛಲ ಪ್ರಜಾಪತಿ ಮನದಲ್ಲಿ ಮೂಡಿತು. ಟೀ ಅಂಗಡಿ ಮುಚ್ಚಿ ಊರಿಗೆ ಮರಳಿ ಅಪ್ಪನ ಕಾಯಕ ವೃತ್ತಿಯನ್ನು ಮುಂದುವರೆಸಿದರು.
ಈ ಹಂತದಲ್ಲಿ ಅವರು ತಯಾರಿಸಿದ್ದು ಜೇಡಿಮಣ್ಣಿನ ಫ್ರಿಡ್ಜ್. ಮಾರುಕಟ್ಟೆಯಲ್ಲಿ ಎಲೆಕ್ಟ್ರಾನಿಕ್ ಫ್ರಿಡ್ಜ್ಗೆ ಸುಮಾರು 10 ಸಾವಿರ ರೂಪಾಯಿ ಬೆಲೆ ಇದೆ. ಆದರೆ ಈ ಫ್ರಿಡ್ಜ್ಗೆ ಕೇವಲ ಮೂರು ಸಾವಿರ ರೂಪಾಯಿ. ನೀರಿದ್ದರೆ ಸಾಕು ಈ ಫ್ರಿಡ್ಜ್ ಯಾವಾಗಲೂ ತಂಪಾಗಿರುತ್ತದೆ. ಹಾಲು ಮತ್ತು ತರಕಾರಿಗಳನ್ನು ಮೂರು ದಿನಗಳವರೆಗೆ ತಾಜಾ ಆಗಿ ಇಡಬಹುದು. ಇಂತಹ ಫ್ರಿಡ್ಜ್ಗಳನ್ನು ತಯಾರಿಸುವ ಸಲುವಾಗಿಯೇ ‘ಮಿಟ್ಟಿಕೂಲ್’ ಎಂಬ ಕಂಪೆನಿ ಆರಂಭಿಸಿದ್ದಾರೆ.
ಭಾರತ ಸೇರಿದಂತೆ ವಿದೇಶಗಳಲ್ಲೂ ಈ ಫ್ರಿಡ್ಜ್ಗೆ ಬೇಡಿಕೆ ಇದೆ. ದುಬೈ ಮತ್ತು ದಕ್ಷಿಣಆಫ್ರಿಕಾಗೆ ಒಟ್ಟು ಎರಡು ಸಾವಿರ ಫ್ರಿಡ್ಜ್ಗಳನ್ನು ರಫ್ತು ಮಾಡಲಾಗಿದೆ. ಪ್ರತಿ ವರ್ಷ 10 ಸಾವಿರ ಫ್ರಿಡ್ಜ್ಗಳನ್ನು ತಯಾರಿಸಲಾಗುತ್ತಿದೆ. ಇದರಿಂದ ವಾರ್ಷಿಕ 45 ಲಕ್ಷ ರೂಪಾಯಿ ಆದಾಯ ಬರುತ್ತಿದೆ. 35 ಜನರಿಗೆ ಉದ್ಯೋಗ ನೀಡಿರುವ ಪ್ರಜಾಪತಿ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ. ಅಂದು ನನ್ನನ್ನು ಮೂದಲಿಸುತ್ತಿದ್ದ ಸಂಬಂಧಿಕರು ಮತ್ತು ಗೆಳೆಯರು ಇಂದು ಗೌರವಿಸುತ್ತಿದ್ದಾರೆ ಎನ್ನುತ್ತಾರೆ ಪ್ರಜಾಪತಿ.