(ಕುಲಾಲ್ ವರ್ಲ್ಡ್ ಡಾಟ್ ಕಾಮ್)
ಕರಾವಳಿಯ ಉದ್ದಗಲಗಳಲ್ಲಿಯೂ ಮನೆಮಾತಾಗಿರುವ ಯಕ್ಷಗಾನವು ದೇಶ-ವಿದೇಶಗಳಲ್ಲಿಯೂ ತನ್ನ ಕಂಪನ್ನು ಪಸರಿಸಿದೆ ಎಂದರೆ, ಕಲಾಪ್ರಕಾರದ ವೈಶಿಷ್ಠ್ಯತೆಯಿಂದಲೇ ಸಾಧ್ಯವಾಗಿದೆ. ಇಲ್ಲಿ ಕಲಾವಿದನ ನೈಪುಣ್ಯತೆ, ಹಿಮ್ಮೇಳ-ಮುಮ್ಮೇಳಗಳ ಯಶಸ್ವಿ ಮೇಳೈಕೆಗಳಿಂದಲೇ ಕಲೆಯು ಸಾರ್ಥಕವಾಗಿ ಅನಾವರಣಗೊಳ್ಳುವುದು. ಯಕ್ಷಗಾನವನ್ನು ವೃತ್ತಿ, ಪ್ರವೃತ್ತಿಯಾಗಿಸಿಕೊಂಡು ಮೇರು ಕಲಾವಿದರಾಗಿ ವಿಜೃಂಭಿಸಿದ-ವಿಜೃಂಭಿಸುತ್ತಿರುವ ಕಲಾಭಿಮಾನಿಗಳ ಕಣ್ಮಣಿಗಳು; ಯಕ್ಷ ಕೃಷಿಯಲ್ಲಿ ಸಾಧನೆಯ ಉತ್ತುಂಗಕ್ಕೇರಿದ ಸಾಧಕರು ನಮ್ಮ ನಾಡಿನ ಹೆಮ್ಮೆಯ ಕಲೆಗೆ ಕಿರೀಟಪ್ರಾಯರು. ಇಂದು ಯಕ್ಷಗಾನವು ಜನಜನಿತ ಕಲೆಯಾಗಿ ಕನ್ನಡದ ನೆಲದಲ್ಲಿ ಹೊರಹೊಮ್ಮುತ್ತಿದೆ. ಅಷ್ಟೇಕೆ, ಅನ್ಯಭಾಷಿಗರು,ಅನ್ಯದೇಶಿಗರು ಒಲವು ತೋರಿ ಕಲಿಯುತ್ತಿದ್ದಾರೆ. ಈ ಕಲಾಪ್ರಸಾರಕ್ಕೆ ಶ್ರಮಿಸುವ ಕಲಾಕೃಷಿಕರ ಶ್ರಮವಿಲ್ಲಿ ಅಗ್ರಮಾನ್ಯವಾದುದು. ಯಕ್ಷಕಲಾ ಸೇವೆಯನ್ನು ತಮ್ಮ ವೃತ್ತಿಯಾಗಿಸಿಕೊಂಡು ಸಾಗುತ್ತಿರುವ ಅದೆಷ್ಟೋ ಕಲಾವಿದರಲ್ಲಿ ಐರೋಡಿ ಮಂಜುನಾಥ ಕುಲಾಲರು ಒಬ್ಬರು. ಯಕ್ಷಗುರುವಾಗಿ, ಕಲಾವಿದರಾಗಿ ಹದಿನಾರು ವರುಷಗಳ ಕಲಾ ವೃತ್ತಿ ಮುನ್ನಡೆ ಇವರದು.
ಮೂಲತಃ ಸಾಸ್ತಾನದವರಾದ ಐರೋಡಿ ಮಂಜುನಾಥ ಕುಲಾಲರು ಚಿಕ್ಕಂದಿನಿಂದಲೇ ಯಕ್ಷಗಾನವನ್ನು ನೋಡ-ನೋಡುತ್ತಾ ಕಲಾಸಕ್ತಿಯನ್ನು ತನ್ನಲ್ಲಿ ಅಂಕುರಿಸಿಕೊಂಡವರು. ಏಳನೇ ತರಗತಿಯಲ್ಲಿರುವಾಗ ಕೋಟ ಗೋವಿಂದ ಉರಾಳರ ತರಬೇತಿಯಲ್ಲಿ ‘ರಾಣಿ ಶಶಿಪ್ರಭೆ’ ಪ್ರಸಂಗದ ‘ಶಶಿಪ್ರಭೆ’ ಪಾತ್ರದೊಂದಿಗೆ ಯಕ್ಷರಂಗಕ್ಕೆ ಪಾದಾರ್ಪಣೆ ಮಾಡಿದರು. ಹತ್ತನೇ ತರಗತಿಯಲ್ಲಿ ಕಲಿಯುತ್ತಿರುವಾಗ ತೋನ್ಸೆ ಜಯಂತ ಕುಮಾರ್ ಅವರ ಮಾರ್ಗದರ್ಶನದಲ್ಲಿ ‘ರುಕ್ಮಿಣಿ ಸ್ವಯಂವರ’ದ ಭೀಷ್ಮಕ ಮತ್ತು ಬಲರಾಮ ಪಾತ್ರಗಳನ್ನು ನಿರ್ವಹಿಸಿ ತಮ್ಮಲ್ಲಿ ಕಲೋನ್ನತಿಯ ಭರವಸೆ ಮೂಡಿಸಿಕೊಂಡರು. ಮುಂದೆ, 1997-98ರ ಶೈಕ್ಷಣಿಕ ವರ್ಷದಲ್ಲಿ ಉಡುಪಿ ಯಕ್ಷಗಾನ ಕೇಂದ್ರಕ್ಕೆ ಸೇರ್ಪಡೆಗೊಳ್ಳುವುದರ ಮೂಲಕ ಯಕ್ಷಗಾನದ ಎಲ್ಲ ಆಯಾಮಗಳನ್ನು ಅರ್ಥೈಸಿಕೊಂಡು ಮುನ್ನಡೆಯಲು ಅನುವಾಯಿತು.
ಗುರುಗಳಾದ ನೀಲಾವರ ಲಕ್ಷ್ಮೀನಾರಯಣ ರಾವ್(ಭಜನೆ, ಗಮಕ),ಗೋರ್ಪಾಡಿ ವಿಠ್ಠಲ ಪಾಟೀಲ್(ಹಳೆ ಸಂಪ್ರದಾಯದ ರಂಗನಡೆ), ಸಂಜೀವ ಸುವರ್ಣ(ನಾಟ್ಯ, ಅಭಿನಯ), ದೇವದಾಸ ರಾವ್ ಕೂಡ್ಲಿ ಹಾಗೂ ಸತೀಶ್ ಕೆದ್ಲಾಯ ಹಾರ್ಯಾಡಿ(ಮೂಲ ತಾಳಗಳು, ಸಭಾ ಲಕ್ಷಣಗಳು), ಕೃಷ್ಣಮೂರ್ತಿ ಭಟ್ ಬಗ್ವಾಡಿ(ಮದ್ದಲೆ), ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿ ಮೊದಲಾದವರಿಂದ ಕೇಂದ್ರದಲ್ಲಿ ತರಬೇತಿ ಪಡೆದರು. ಪ್ರಥಮ ವರ್ಷ ಸಭಾಲಕ್ಷಣ, ಹಲವು ಬಗೆಯ ಒಡ್ಡೋಲಗ, ನೃತ್ಯವೈವಿಧ್ಯತೆ ಕಲಿತು, ದ್ವಿತೀಯ ವರ್ಷ ಮದ್ದಲೆ ತರಬೇತಿ ಪಡೆದರು. 1999ರಿಂದ2015ರ ಎಪ್ರಿಲ್ ವರೆಗೆ ಯಕ್ಷರಂಗದ ಕಲಾವಿದರಾಗಿ ಯಕ್ಷಗಾನ ಕೇಂದ್ರದ ಸಾಹಿತ್ಯ ಗುರುವಾಗಿ ಹವ್ಯಾಸಿಗಳಿಗೆ ಮಂಜುನಾಥ ಕುಲಾಲ್ ಅವರೇ ಸ್ವತಃ ತರಬೇತಿ ನೀಡಿರುವುದು ಕಲಾಪರಿಪೂರ್ಣತೆಗೆ ಇನ್ನಷ್ಟು ಸ್ಪುಟ ನೀಡಿತು. ಈ ಅವಧಿಯಲ್ಲಿ ನಾಟ್ಯದಲ್ಲಿ ವಿಶೇಷ ತರಬೇತಿಗಾಗಿ ಕೇಂದ್ರ ಸರಕಾರದ ಎರಡು ವರ್ಷದ ವಿದ್ಯಾರ್ಥಿ ವೇತನಕ್ಕೆ ಮಂಜುನಾಥರು ಅರ್ಹತೆ ಪಡೆದಿರುವುದು ಇವರ ಕಲಾ ನಿಪುಣತೆಗೆ ಸಂದ ಗೌರವವಾಗಿದೆ.
ಯಕ್ಷಗಾನ ಪ್ರಸಾರಕ್ಕೆ ಮಂಜುನಾಥರು ನೀಡಿದ ಕೊಡುಗೆ ಗಣನೀಯವಾದುದು. ಯಕ್ಷಗಾನವನ್ನು ವೃತ್ತಿಯಾಗಿಸಿಕೊಂಡು ಉಡುಪಿ ಜಿಲ್ಲೆಯಾದ್ಯಂತ ಮೂವತ್ತಕ್ಕೂ ಹೆಚ್ಚು ಶಾಲೆಗಳು, ಮಹಿಳಾ ಸಂಘಗಳು, ಯುವಕ ಮಂಡಲಗಳು, ಹವ್ಯಾಸಿ ಯಕ್ಷಗಾನ ತಂಡಗಳಿಗೆ ಇವರು ತರಬೇತಿ ನೀಡಿ ಪ್ರದರ್ಶನ ನೀಡುವಲ್ಲಿ ಸಮರ್ಥರಾಗಿಸಿರುವುದು ಇವರ ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿಯಾಗಿದೆ. ಬೊಂಬಾಯಿಯ ಸೈನ್ ನಲ್ಲಿ ಕಲಾ ಆಸಕ್ತರಿಗೆ ತರಬೇತಿಯೊಂದಿಗೆ ಕಲಾಪ್ರದರ್ಶನ; ಬೆಂಗಳೂರಿನ ‘ಕಲಾದರ್ಶನಿ’ಯವರು ಆಯೋಜಿಸಿರುವ ಕಲಾ ತರಬೇತಿಯ ಗುರುವಾಗಿ ಆದಿಚುಂಚನಗಿರಿ, ಇಸ್ಕಾನ್ ಮೊದಲಾದೆಡೆ ಕಲಾಪ್ರದರ್ಶನ; ಬೆಂಗಳೂರಿನ ಹಲವಾರು ಕಡೆಗಳಲ್ಲಿ ಆಸಕ್ತರಿಗೆ ಯಕ್ಷಗಾನ ಕಲಿಸಿ ಪ್ರಸಂಗದ ಪ್ರದರ್ಶನದ ಮುನ್ನಡೆ; ಸಾಸ್ತಾನದ ಸೇವಾಸಂಗಮದ ‘ಶಿಶುಮಂದಿರ’ದ ಮಕ್ಕಳಿಗೆ ಕಲಿಸಿ ‘ಸೂರ್ಯರತ್ನ’ ಆಖ್ಯಾನವನ್ನು ಪ್ರದರ್ಶಿಸಿರುವುದು; ಯಕ್ಷಗಾನದ ಗಂಧಗಾಳಿಯೂ ಅರಿಯದ ಶಾಲಾ ವಸತಿಗೃಹದಲ್ಲಿದ್ದು ಕಲಿಯುತ್ತಿರುವ ಬಿಜಾಪುರ, ಹಾಸನ, ಬಾಗಲಕೋಟೆ, ಚಿತ್ರದುರ್ಗದ ಕಡೆಗಳಲ್ಲಿನ ವಿದ್ಯಾರ್ಥಿಗಳಿಗೂ ಯಕ್ಷ ತರಬೇತಿ ನೀಡಿ ಸಾರ್ಥಕವಾಗಿಸಿರುವುದು ; ಸರಕಾರದ ‘ಯಕ್ಷ ಶಿಕ್ಷಣ ಟ್ರಸ್ಟ್’ ಮೂಲಕ ನೀಡುವ ಯಕ್ಷ ತರಬೇತಿಯ ಗುರುವಾಗಿ ಸುಮಾರು ಹದಿನೈದಕ್ಕಿಂತಲೂ ಹೆಚ್ಚು ಶಾಲೆಗಳಲ್ಲಿ ತರಬೇತಿ; ಶೃಂಗೇರಿ, ಉಡುಪಿ, ಮಂಗಳೂರು, ನಾಗರಕೊಡಿಗೆ ಮೊದಲಾದೆಡೆ ತರಬೇತಿಯ ವಿಸ್ತಾರ…. ಇವೆಲ್ಲ ಇವರ ಮುಮ್ಮೇಳ ತರಬೇತಿಯ ಮೈಲುಗಲ್ಲುಗಳು.
ಸ್ವತಃ ಕಲಾವಿದರಾಗಿಯೂ ತಮ್ಮ ಯಕ್ಷ ಪ್ರತಿಭೆಯನ್ನು ಮೆರೆದವರಿವರು. 1998ರ ಎಪ್ರಿಲ್ ನಲ್ಲಿ ಮಂದರ್ತಿ ’ಬಿ’ ಮೇಳದಲ್ಲಿ ಒಂದು ತಿಂಗಳು ಬಾಲಗೋಪಾಲ ಮತ್ತು ಒಡ್ಡೋಲಗ ವೇಷಧಾರಿಯಾಗಿ; ಗೋಳಿಗರಡಿ, ಮಾರಣಕಟ್ಟೆ, ಹಾಲಾಡಿ, ಅಮೃತೇಶ್ವರಿ ಮೇಳಗಳಲ್ಲಿ ಅತಿಥಿ ಕಲಾವಿದರಾಗಿ; ದಕ್ಷಿಣೋತ್ತರ ಜಿಲ್ಲೆಗಳ ಸುಪ್ರಸಿದ್ಧ ಕಲಾವಿದರೊಂದಿಗೆ ಅನೇಕ ಯಕ್ಷ ಸಂದರ್ಭಗಳಲ್ಲಿ ರಾಜವೇಷ, ಪುಂಡುವೇಷ,ಕಿರಾತವೇಷ, ಗಂಡುಬಣ್ಣ, ಹೆಣ್ಣುಬಣ್ಣ ಹಾಸ್ಯ, ಸ್ತ್ರೀವೇಷ, ನಂದಿ ಹೀಗೆ ತಮ್ಮ ಕಲಾನೈಪುಣ್ಯತೆಯನ್ನು ತೋರಿದವರು. ಇವರ ಸುಧನ್ವ, ಅರ್ಜುನ ವೇಷಗಳು ಜನಮನ್ನಣೆ ಪಡೆದ ವೇಷಗಳಾಗಿದ್ದು, ಶತ್ರುಘ್ನ, ಬಬ್ರುವಾಹನ, ಶಶಿಪ್ರಭೆ, ಬಲರಾಮ, ಕಿರಾತ, ಸಾಲ್ವ, ಜಾಂಬವ, ನಾರದ, ಶೂರ್ಪನಖಿ, ಅಜಮುಖಿ, ರಾವಣ, ಕಂಸ ಮೊದಲಾದವು ಇವರು ನಿರ್ವಹಿಸಿದ ಪಾತ್ರಗಳು.ಅಜಪುರ ಸಂಘದ ಕಲಾವಿದರಾಗಿ ಲಂಡನ್ ಯಕ್ಷಗಾನ ಸ್ಪರ್ಧೆಯಲ್ಲಿ ತಂಡವು ಪ್ರಥಮ ಸ್ಥಾನ ಪಡೆದು ಮುಂದಿನ ಸುತ್ತಿಗೆ ಆಯ್ಕೆ, ಕರಂಬಳ್ಳಿ ಯಕ್ಷಸ್ಪರ್ಧೆಯಲ್ಲಿ ತಂಡವು ತೃತೀಯ ಹಾಗೂ ತೊಟ್ಟಂ ಯಕ್ಷ ಸ್ಪರ್ಧೆಯಲ್ಲಿ ತಂಡವು ದ್ವಿತೀಯ ಹಾಗೂ ಸ್ವತಃ ಮಂಜುನಾಥರು ಪುಂಡುವೇಷದ ಗಂಡುಗಲಿಯಾಗಿ ದ್ವಿತೀಯ ಸ್ಥಾನ ಪಡೆದಿರುವುದು ಮತ್ತು ಇವರ ತರಬೇತಿ-ಮಾರ್ಗದರ್ಶನದಿಂದ ಲಂಡನ್ ಯಕ್ಷಗಾನ ಸ್ಪರ್ಧೆಯಲ್ಲಿ ಭಾಗವಹಿಸಿದ ‘ಯಕ್ಷ ಕಲಾವಲ್ಲರಿ’ ಮಹಿಳಾ ಯಕ್ಷಗಾನ ತಂಡ, ಹಳ್ಳಿಹೊಳೆಯು ಎರಡು ಸುತ್ತುಗಳ ಸ್ಪರ್ಧೆಯಲ್ಲಿ ಜಯ ಗಳಿಸಿ ಮುಂದಿನ ಸುತ್ತಿನ ಸ್ಪರ್ಧೆಗೆ ಆಯ್ಕೆ ಆಗಿರುವುದು ಹಾಗೂ ಕರಂಬಳ್ಳಿ ಯಕ್ಷ ಸ್ಪರ್ಧೆಯಲ್ಲಿ ‘ಪೆರ್ಣಂಕಿಲ ಮಹಿಳಾ ಯಕ್ಷ ತಂಡ’ವು ದ್ವಿತೀಯ ಸ್ಥಾನ ಪಡೆದಿರುವುದು ಉಲ್ಲೇಖನೀಯ. ಪ್ರಸ್ತುತ ಯಕ್ಷಾಂತರಂಗ(ವ್ಯವಸಾಯಿ ಯಕ್ಷ ತಂಡ)ದ ವೃತ್ತಿ ಕಲಾವಿದರಾಗಿಯೂ ದುಡಿಯುತ್ತಿದ್ದಾರೆ. ತವರು ಜಿಲ್ಲೆ, ಕನ್ನಡ ರಾಜ್ಯದಲ್ಲಲ್ಲದೇ ಯಕ್ಷರಂಗದ ಮೂಲಕ ಅಸ್ಸಾಂ, ಸಿಕ್ಕಿಂ, ಮಣಿಪುರ, ಗುವಾಹಟಿ, ಗುಜರಾತ್, ತಮಿಳ್ನಾಡು ಹೀಗೆ ದೇಶದ ಹಲವೆಡೆ ಹಾಗೂ ಸಿಂಗಾಪುರ, ಆಸ್ಟ್ರೇಲಿಯಾ, ಬಾಂಗ್ಲಾದೇಶ ಮೊದಲಾದ ವಿದೇಶಿ ನೆಲದಲ್ಲಿಯೂ ಯಕ್ಷಪ್ರದರ್ಶನವನ್ನು ನೀಡಿರುತ್ತಾರೆ.
ಯಕ್ಷ ಕಲಾಕ್ಷೇತ್ರದ ಐರೋಡಿ ಗೋವಿಂದಪ್ಪ, ಮೊಳಹಳ್ಳಿ ಹೆರಿಯ ನಾಯ್ಕ, ನೀಲಾವರ ಮಹಾಬಲ ಶೆಟ್ಟಿ, ಬಳ್ಕೂರು ಕೃಷ್ಣಯಾಜಿ, ವಿದ್ಯಾಧರ ಜಲವಳ್ಳಿ, ಕೊಳಲಿ ಕೃಷ್ಣ, ಕಣ್ಣೀಮನೆ ಗಣಪತಿ ಹೆಗಡೆ, ಗೋಪಾಲ ಆಚಾರಿ ತೀರ್ಥಹಳ್ಳಿ, ಮುಗ್ವಗಣೇಶ್ ನಾಯಕ್, ಉಮೇಶ್ ಉಪ್ಪಿನಕೋಟೆ ಮೊದಲಾದವರು ಹಾಗೂ ಯಕ್ಷ ಕಲಾರಂಗದ ಹಿರಿಯ ಕಲಾವಿಧರ ಪ್ರಭಾವ ಇವರ ಯಕ್ಷಯಾತ್ರೆಯಲ್ಲಿ ಸ್ಮರಣೀಯವಾದ್ದು. ಯಕ್ಷಗಾನ ಕೇಂದ್ರದಲ್ಲಿ ತಮ್ಮ ತರಬೇತಿಯ ಅವಧಿಯಲ್ಲಿ ಸಹಪಾಠಿಗಳಾಗಿದ್ದ ಜನ್ಸಾಲ್ ರಾಘವೇಂದ್ರ ಆಚಾರಿ, ಪ್ರಸಾದ್ ಕುಮಾರ್ ಮೊಗಬೆಟ್ಟು, ಶಂಕರ ಬಾಳ್ಕುದ್ರು, ಶ್ಯಾಮಣ್ಣ ಗೌಡ, ಈಶ್ವರ ಮಹಾಬಲೇಶ್ವರ ಭಟ್, ರಾಘವೇಂದ್ರ ರಾವ್, ನಾರಾಯಣ ಬಿ.ಎ.ಮೊದಲಾದವರ ಸಹಕಾರವನ್ನು ತಮ್ಮ ಇಂದಿನ ಶಿಕ್ಷಣದ ಮೇಲ್ಮೆಯಲ್ಲಿ ನೆನೆಯುತ್ತಾರೆ.
ಸಾಸ್ತಾನದ ದಾರು ಕುಲಾಲ-ನೀಲು ದಂಪತಿಗಳ ಪ್ರಥಮ ಪುತ್ರರಿವರು. 1982ರ ಜನವರಿ 1ರಂದು ಜನಿಸಿದ ಮಂಜುನಾಥರು ಹತ್ತನೇ ತರಗತಿವರೆಗಿನ ಶಾಲಾ ಶಿಕ್ಷಣವನ್ನು ಪಡೆದಿರುತ್ತಾರೆ. ಪತ್ನಿ ಸರಸ್ವತಿ, ಮಗ ಸಚಿನ್ ಹಾಗೂ ಮಗಳು ನಮನ. ಮಂಜುನಾಥರ ಯಕ್ಷಶಿಕ್ಷಣದ ಶ್ರೇಷ್ಠತೆಗಾಗಿ ಹಲವಾರು ಕಲಾಸಂಘಗಳು ಸನ್ಮಾನಿಸಿ ಗೌರವವನ್ನು ನೀಡಿವೆ. ತಮ್ಮ ಸ್ವಂತ ನೆಲೆಯಲ್ಲಿ ‘ಯಕ್ಷ ಶಿಕ್ಷಣ’ವನ್ನು ವೃತ್ತಿಯಾಗಿಸಿಕೊಂಡು ಜಲ್ಲೆಯೆಲ್ಲೆಡೆ ‘ಗುರು’ವಾಗಿ ಯಕ್ಷ ತರಬೇತಿಯನ್ನು ನೀಡುತ್ತಿರುವುದರಲ್ಲಿ ನೆಮ್ಮದಿ ಕಾಣುತ್ತಿದ್ದಾರೆ. ಪಧವೀಧರರು, ಉಪನ್ಯಾಸಕರು,ವೈದ್ಯರು, ಇಂಜಿನೀಯರ್, ವಕೀಲರು, ಡಾಕ್ಟರೇಟ್ ಪದವಿವೇತ್ತರು,ಪತ್ರಕರ್ತರು,ಟಿ.ವಿ.ಮಾಧ್ಯಮದವರು ಹೀಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲದೇ ಸಮಾಜದ ವಿವಿಧ ಉದ್ಯೋಗಾರ್ಥಿಗಳಿಗೂ ಯಕ್ಷಗಾನ ಕಲಿಸಿದ ಸಂತಸ, ಸಮಾಧಾನ ಇವರಿಗೆ. ಅದೆಷ್ಟೋ ವಿದ್ಯಾರ್ಥಿ, ಮಹಿಳಾ-ಪುರುಷ ಗುಂಪಗಳು ಇವರಿಂದ ಯಕ್ಷ ಶಿಕ್ಷಣ ಪಡೆದು ಇಂದು ಸ್ವತಃ ಆತ್ಮವಿಶ್ವಾಸದಿಂದ ಪ್ರದರ್ಶನ ನೀಡುವಲ್ಲಿ ಸಮರ್ಥವಾಗಿರುವುದು; ಹಲವಾರು ವಿದ್ಯಾರ್ಥಿಗಳು ಅನೇಕ ವೃತ್ತಿ ಮೇಳಗಳಲ್ಲಿ ಕಲಾವಿದರಾಗಿ ದುಡಿಯುತ್ತಿರುವುದು ಇವರ ಗುಣಮಟ್ಟದ ಶಿಕ್ಷಣಕ್ಕೆ ಹಿಡಿದ ಕನ್ನಡಿಯಾಗಿದೆ. ಯಕ್ಷಗಾನದ ಪೌರಾಣಿಕ ಕಥಾಹಂದರಗಳ ಜ್ಞಾನ, ಸಾಂಪ್ರದಾಯಿಕ ಶೈಲಿಗೆ ಒತ್ತು ನೀಡಿಕೆ, ತಮ್ಮ ವಿದ್ಯಾರ್ಥಿಗಳಿಂದ ಯಶಸ್ವಿ ಪ್ರದರ್ಶನ ಮೊದಲಾದವುಗಳನ್ನು ಅವಲೋಕಿಸಿದಾಗ… ಸರಕಾರವೇ ಶಾಲಾ-ಕಾಲೇಜುಗಳಲ್ಲಿ ‘ಯಕ್ಷಗುರು’ಗಳ ನೇಮಕಾತಿಗೆ ಮಹತ್ವ ನೀಡಿದಲ್ಲಿ ಇಂತಹ ಹಲವಾರು ‘ಯಕ್ಷಗುರು’ಗಳಿಗೆ ‘ವೃತ್ತಿ ಭದ್ರತೆ’ ನೀಡಿದಂತಾಗುವುದು. ಸರಕಾರದಿಂದ ಯಕ್ಷಗಾನದ ಪ್ರಸಾರಕ್ಕೆ ಪ್ರೋತ್ಸಾಹವೂ ದೊರೆಯುವುದು. ನಿಜರ್ಥದಲ್ಲಿ ಕನ್ನಡದ ಪೋಷಣೆಯು ಸಾಧ್ಯವಾಗುವುದು.