ಕೆಲವರ ಮಾತುಗಳು ಒಂದೊಂದು ಸಾರಿ ಮನಸ್ಸನ್ನು ಘಾಸಿಗೊಳಿಸುವ ಕಾರಣ ಮೌನದ ಮೊರೆ ಹೋಗುತ್ತಾ, ಮಾತಿನ ಸೊಗಡಿರುವ ಪುಸ್ತಕಗಳೊಡನೆ ಸಂವಾದ ಮಾಡುವ ಸೂಕ್ಷ್ಮ ಸಂವೇದನೆಯ ಕಲ್ಲೇಶ್ ಕುಂಬಾರ್ ಕತೆ, ಕವಿತೆ, ವಿಮರ್ಶೆಯ ಜೊತೆಜೊತೆಗೆ ಆಗಾಗ ಒಂದಿಷ್ಟು ರೇಖಾಚಿತ್ರಗಳನ್ನು ಬರೆವ ಹವ್ಯಾಸ ಇರಿಸಿಕೊಂಡಿದ್ದಾರೆ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಇವರ ರೇಖಾ ಚಿತ್ರಗಳು ಈಗಾಗಲೇ ಪ್ರಕಟಗೊಂಡಿವೆ.
ಪ್ಲೂಟಾರ್ಕರು ಒಂದಡೆ ಹೀಗೆ ಬರೆಯುತ್ತಾರೆ ಚಿತ್ರವೆಂಬುದು ನಿಶ್ಶಬ್ದ ಕವಿತೆ, ಕವಿತೆ ಎಂದರೆ ಮಾತನಾಡುವ ಚಿತ್ರ ಕವಿತೆ ಮತ್ತು ಚಿತ್ರ ಎರಡರಲ್ಲೂ ಹಿಡಿತ ಹೊಂದಿರುವ ಕಲ್ಲೇಶ್ ಕುಂಬಾರ್ ಅಪರೂಪದ ಬರಹಗಾರರು. ಸಮಾಜಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ಪ್ರಸ್ತುತ ಗ್ರಂಥಪಾಲಕರಾಗಿ ಕಾರ್ಯನಿರ್ವಹಿಸುವುದರೊಡನೆ, ಚಿತ್ರಕಲಾ ಬಳಗದವರ ಒಡನಾಟದಿಂದ ಬಣ್ಣ ಮತ್ತು ರೇಖೆಗಳೊಡನೆ ಅನುಸಂಧಾನ ಮಾಡುತ್ತಾ ಅರ್ಥಪೂರ್ಣವಾದ ಅಮೂರ್ತ ಶೈಲಿಯ ಚಿತ್ರಗಳನ್ನು ಬಿಡಿಸುವ ರೂಢಿಯನ್ನು ಕರಗತ ಮಾಡಿಕೊಂಡಿದ್ದಾರೆ.
‘ಪುರುಷ ದಾರಿಯ ಮೇಲೆ’ ಕವನ ಸಂಕಲನ ಹಾಗೂ ‘ಉರಿಯ ನಾಲಿಗೆಯ ಮೇಲೆ’ ಕಥಾ ಸಂಕಲನ ಈ ಎರಡು ಪ್ರಕಟಿತ ಕೃತಿಗಳ ಜೊತೆಗೆ ನಾಡಿನ ಪ್ರಮುಖ ಸಾಹಿತ್ಯಿಕ ಪ್ರಶಸ್ತಿ, ಪುರಸ್ಕಾರಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಅಂತರಂಗದ ಆನಂದಕ್ಕಾಗಿ ಆಕ್ರಿಲಿಕ್ ಮತ್ತು ಮಿಶ್ರಬಣ್ಣಗಳೊಡನೆ ಆಟವಾಡುವ ಇವರ ರೀತಿ ತುಂಬಾ ಅದ್ಭುತವಾದದು. ಬಾಹ್ಯವಾಗಿ ನೋಡಿದರೆ ಕಲ್ಲೇಶ್ ಒರ್ವ ಕವಿಯಾಗಿ, ಆಂತರಿಕವಾಗಿ ಗಮನಿಸಿದರೆ ಅವರೊಳಗಿನ ಸೂಕ್ಷ್ಮ ಕಲಾವಿದ ಎಲ್ಲರಿಗೂ ಗೋಚರಿಸುತ್ತಾನೆ. ಸಾಹಿತ್ಯಿಕ ಕ್ಷೇತ್ರದಲ್ಲಿ ಗಟ್ಟಿಯಾಗಿ ಹೆಜ್ಜೆ ಉರುತ್ತಿರುವ ಇವರು ಚಿತ್ರಕಲಾ ಲೋಕದಲ್ಲೂಂದಿಷ್ಟು ಸಕ್ರಿಯವಾಗಿ ತೊಡಗಿಸಿಕೊಳ್ಳಲೆಂಬುದೆ ಕಲಾಸಕ್ತರ ಆಶಯ.
ಚಿತ್ರ-ಬರಹ : ಕೆ.ಬಿ.ವೀರಲಿಂಗನಗೌಡ್ರ. ಸಿದ್ದಾಪುರ.