(ಕುಲಾಲ್ ವರ್ಲ್ಡ್ ಡಾಟ್ ಕಾಮ್)
ಭಾಗವತನೆಂದರೆ ಯಕ್ಷಗಾನದ ಮುಖ್ಯ ಸೂತ್ರಧಾರಿ. ಸಮಸ್ತ ಪ್ರಸಂಗ ಇವರ ನೇತೃತ್ವದಲ್ಲೇ ನಡೆಯುವುದು. ಯಕ್ಷಗಾನ ಪದ್ಯವನ್ನು ರಾಗ ಸಮೇತ ಹಾಡುವುದು ಇವರ ಕೆಲಸ. ಯಕ್ಷಗಾನದಲ್ಲಿ ಭಾಗವತರ ಕಾರ್ಯ ಇಷ್ಟಕ್ಕೇ ಸೀಮಿತಗೊಳ್ಳುವುದಿಲ್ಲ. ಒಬ್ಬ ಅರ್ಥಧಾರಿ, ಪದ್ಯದ ಅರ್ಥವನ್ನು ಸಮರ್ಥವಾಗಿ ವ್ಯಾಖ್ಯಾನಿಸಲು ತಡವರಿಸಿದಲ್ಲಿ ಆತನನ್ನು ಆಪತ್ತಿನಿಂದ ಪಾರು ಮಾಡುವುದೇ ಭಾಗವತರು. ಯಕ್ಷಗಾನದ ಭಾಗವತಿಗೆ ಚೆನ್ನಾಗಿರದಿದ್ದರೆ ಇಡೀ ಯಕ್ಷಗಾನವೇ ಸಪ್ಪೆಯಾದ೦ತೆ. ನಮ್ಮ ಕುಲಾಲ ಸಮಾಜದಲ್ಲಿ ಯಕ್ಷಗಾನ ಕಲಾವಿದರು ಅನೇಕರಿದ್ದರೂ ಭಾಗವತಿಗೆಯಲ್ಲಿ ಮಿಂಚಿದವರು ಬಹಳ ವಿರಳ. ಆದರೆ ಇಲ್ಲೊಬ್ಬರಿದ್ದಾರೆ, ತಮ್ಮ ಮಧುರ ಕಂಠ ಸಿರಿಯಿಂದ ಯಕ್ಷಗಾನ ಅಭಿಮಾನಿಗಳ ಮನ ಗೆದ್ದಿರುವ ಯುವ ಭಾಗವತ ನಾಗೇಶ್ ಕುಲಾಲ್ ನಾಗರಕೊಡಿಗೆ.
ಬಡಗುತಿಟ್ಟು ಯಕ್ಷಗಾನ ರಂಗದಲ್ಲಿ ಶ್ರವಳ ಮಂಜುಳ ಶಾರೀರದಲ್ಲಿ ಸ್ವಂತಿಕೆಯ ಛಾಪು ಮೂಡಿಸುವ ಯುವ ಗಾನಕೋಗಿಲೆ ನಾಗೇಶ್ ಕುಲಾಲ್ ನಾಗರಕೊಡಿಗೆ. ಯಕ್ಷಪ್ರಿಯರ ತವರು ಮಲೆನಾಡಿನ ನಾಗರಕೊಡಿಗೆ ನಾಗೇಶರ ಹುಟ್ಟೂರು. ೧೯೭೩ನೇ ಇಸವಿಯಲ್ಲಿ ಶಂಕರ ಕುಲಾಲ- ಬಚ್ಚಮ್ಮ ದಂಪತಿಯ ಸುಪುತ್ರನಾಗಿ ಜನಿಸಿದ ನಾಗೇಶ್ ಕುಲಾಲರು ಏಳನೆಯ ತರಗತಿಯ ಬಳಿಕ ಅಕ್ಷರಾಭ್ಯಾಸಕ್ಕೆ ಮಂಗಳ ಹಾಡಿ ಬಣ್ಣದ ಬದುಕಿಗೆ ಶ್ರೀಕಾರ ಹಾಕಿದರು.
ನಾಗರಕೊಡಿಗೆ ರಾಮಕೃಷ್ಣಯ್ಯ ಅವರು ನಾಗೇಶರಿಗೆ ಪ್ರಾಥಮಿಕ ಕಲಾ ಶಿಕ್ಷಣ ನೀಡಿ ರಂಗಾಧ್ಯಯನವನ್ನು ಧಾರೆಯೆರೆದು ತಮ್ಮ ಮೇಳದ ಗರಡಿಯಲ್ಲಿ ಪಳಗಿಸಿದರು. ಆ ನಂತರ ಕುಲಾಲರು ಯಕ್ಷಗಾನ ರಂಗದಲ್ಲಿ ಭಾಗವತಿಗೆಯ ಛಾಪು ಮೂಡಿಸಿದ್ದು, ಅಲ್ಲದೆ ಹಿರಿಯ ಭಾಗವತ ಕೆಂಪ ಹೆಗಡೆ ಅವರ ಶಿಷ್ಯರಾಗಿ ಸಮರ್ಪಕ ಭಾಗವತಿಗೆಯ ಶಿಕ್ಷಣವನ್ನು ಪಡೆದರು. ಉತ್ತಮ ರಂಗ ತಂತ್ರ, ಸುಖವಾದ ಸ್ವರತ್ರಾಣ ಕಥಾನಕ ಶಾಕೋಪಶಾಖೆಗಳಲ್ಲಿ ವಿಹರಿಸಬಲ್ಲ ಗಾನ ಸಾಮರ್ಥ್ಯದಿಂದ ಯಶಸ್ವೀ ಭಾಗವತರಾಗಿ ಗುರುತಿಸಿಕೊಂಡ ನಾಗೇಶ ಕುಲಾಲ್ ರಂಗನಟನ ಕ್ರೀಯಾಶೀಲ ಕಲಾಭಿವ್ಯಕ್ತಿಗೆ ಸುಯೋಗ ಗಾನ ಸಾರಥಿಯಾಗಿ ಉತ್ತೇಜನ ನೀಡುವ ಭಾಗವತರು.
ನಾರಕೊಡಿಗೆ, ಕಮಲಶಿಲೆ, ಬಗ್ವಾಡಿ, ಹಾಲಾಡಿ, ಮಂದಾರ್ತಿ ಮೇಳಗಳಲ್ಲಿ ಸೇರಿದಂತೆ ೨೯ ವರ್ಷಗಳ ಕಲಾ ವ್ಯವಸಾಯ ನಡೆಸಿದ ಹಿರಿಮೆ ನಾಗೇಶರದ್ದು. ಪ್ರಸ್ತುತ ಪ್ರಸಿದ್ಧ ಮೇಳಗಳಲ್ಲಿ ಒಂದಾದ ಮಂದಾರ್ತಿ ಮೇಳದ ಪ್ರಧಾನ ಭಾಗತರಾಗಿ ಸೇವೆ ಸಲ್ಲಿಸುತ್ತಿದ್ದು, ಜನಮನ್ನಣೆಯನ್ನು ಪಡೆಯುತ್ತಿದ್ದಾರೆ. ಹೆರಂಜಾಲು ಗೋಪಾಲ ಗಾಣಿಗ, ಸುಬ್ರಹ್ಮಣ್ಯ ಆಚಾರ್ಯ, ಕೆ. ಪಿ ಹೆಗಡೆ ಮೊದಲಾದ ಖ್ಯಾತ ಭಾಗವತರೊಂದಿಗೆ ಹಾಗೂ ಯಕ್ಷ ದಿಗ್ಗಜರಾದ ದಿ. ಮೊಳಹಳ್ಳಿ ಹೆರಿಯ ನಾಯ್ಕ, ನಾರಾಡಿ ಭೋಜರಾಜ ಶೆಟ್ಟಿ, ಕೊಂಡದಕುಳಿ ರಾಮಚಂದ್ರ ಹೆಗಡೆ, ಎಂ. ಎ ನಾಯ್ಕ, ಉಪ್ಪುಂದ ನಾಗೇಂದ್ರ ರಾವ್ ಮೊದಲಾದವರೊಂದಿಗೆ ರಂಗ ಒಡನಾಟವನ್ನು ಇಟ್ಟುಕೊಂಡು ಭಾಗವತರಾಗಿ ರೂಪುಗೊಂಡಿದ್ದಾರೆ.
ಪತ್ನಿ ಜ್ಯೋತಿ ಹಾಗೂ ಮಕ್ಕಳಾದ ಸುಮಂತ , ಸುಚೇತ ಮಕ್ಕಳೊಂದಿಗೆ ಸಂತೃಪ್ತ ಜೀವನ ಸಾಗಿಸುತ್ತಿರುವ ವಿನಯ ಗುಣ ಸಂಪನ್ನ ನಾಗೇಶ ಕುಲಾಲರ ಜೀವನ ಯಾನ ಸುಗಮವಾಗಲಿ, ಭಾಗವತಿಕೆ ಕ್ಷೇತ್ರದಲ್ಲಿ ಇವರು ಇನ್ನೂ ಉತ್ತುಂಗಕ್ಕೆರಲಿ ಎಂಬುದು `ಕುಲಾಲ್ ವರ್ಲ್ಡ್ ಡಾಟ್ ಕಾಂ’ ನ ಹಾರೈಕೆ.
- ದಿನೇಶ್ ಇರ್ವತ್ತೂರು