ಪುತ್ತೂರು : ಹಳ್ಳಿಯಾದರೇನು ಶಿವ …….! ಇಲ್ಲಿ ಪ್ರತಿಭೆಗಳಿಗೇನೂ ಕೊರತೆ ಇಲ್ಲ. ಅದರಲ್ಲೂ ಹಳ್ಳಿ, ಸರಕಾರಿ ಶಾಲೆ ಗಳೆಂದರೆ ಮೂಗುಮುರಿಯುವವರೇ ಹೆಚ್ಚು. ಎಲ್ಲ ಮಕ್ಕಳೂ ಕಾನ್ವೆಂಟ್, ಖಾಸಗಿ ಶಾಲೆಗಳ ಭರಾಟೆಗಳಲ್ಲಿ ಅಲ್ಲೊಂದು, ಇಲ್ಲೊಂದು ಸದ್ದಿಲ್ಲದೆ ಸುದ್ದಿ ಮಾಡಿ ಬೆಳೆಯುವ ಸಿರಿ ಮೊಳಕೆಯಲ್ಲೇ ಎಂಬಂತೆ ಪುತ್ತೂರು ತಾಲೂಕಿನ ಮಾಡ್ನೂರು ಗ್ರಾಮದ ಕಾವು ಸ.ಹಿ.ಪ್ರಾ.ಶಾಲೆಯ ಹಳೆ ವಿದ್ಯಾರ್ಥಿನಿ, ಮೂಡಬಿದಿರೆಯ ಆಳ್ವಾಸ್ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿರುವ ಕಿಶೋರಿ ಸೌಮ್ಯಶ್ರೀ ಇಂದು ರಾಜ್ಯ, ರಾಷ್ಟ್ರಮಟ್ಟದಲ್ಲಿ ಗ್ರಾಮೀಣ(ಹಳ್ಳಿ) ಬೆಳಕನ್ನು ನೀಡಿದ್ದಾಳೆ.
ಯಶಸ್ಸು ಯಾವತ್ತು ನಿಧಾನವಾಗಿ ಬರುತ್ತದೆ, ಸೋಲಿದೆಯಲ್ಲ ಅದು ಯಾವಾಗ ಹೇಗೆ ಬೇಕಾದರೂ ಬರಬಹುದು. ಆಗ ಧೃತಿಗೆಡಬಾರದು. ಎಲ್ಲ ಮುಗಿದು ಹೋಯಿತು. ಅಂದಾಗ ಗಾಬರಿ ಬೀಳಬಾರದು. ಯಾಕೆಂದರೆ ಯಶಸ್ಸು ನಿಧಾನವಾಗಿ ಹೆಜ್ಜೆಹೆಜ್ಜೆ ಹಾಕಿ ಬರುತ್ತಿರುತ್ತಿದೆ. ಹುಟ್ಟುವಾಗ ಯಾರಲ್ಲಿಯೂ ಪ್ರತಿಭೆಯಿರುವುದಿಲ್ಲ. ಆದರೆ ಪ್ರತಿಭೆ ಪ್ರತಿಯೊಬ್ಬರಲ್ಲೂ ಇರುತ್ತದೆ. ಅದನ್ನು ಹೊರಗೆಡವಲು ಸೂಕ್ತ ಅವಕಾಶ ಹಾಗೂ ಪ್ರೋತ್ಸಾಹ ಸಿಕ್ಕರೆ ಸಾಧನೆಯ ಮೆಟ್ಟಿಲೇರಲು ಸಾಧ್ಯ. ಹೀಗೆ ಓದಿನ ಜೊತೆ ತನ್ನ ಪ್ರತಿಭೆಯ ಮೂಲಕ ಜಿಂಕೆಯಂತೆ ನೆಗೆದು ಹಾರಿ, ಜಿಗಿದು, ಎದುರಾಳಿಗಳನ್ನು ಸೋಲಿಸಿ ಕೆಲವೊಮ್ಮೆ ಸಮಬಲದ ಪೈಪೋಟಿ ನೀಡಿದರಾದರೂ ಅರ್ಹ ಗೆಲುವು ತನ್ನದೇ ಆಗುತ್ತಿತ್ತು.

2011-12 ಸಾಲಿನಲ್ಲಿ ಹರ್ಡಲ್ಸ್-8೦ಮೀ, ಉದ್ದ ಜಿಗಿತ, ಎತ್ತರ ಜಿಗಿತಗಳ ಸ್ಪರ್ಧೆಗಳಲ್ಲಿ ವಲಯ, ತಾಲೂಕು, ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು, ವೈಯಕ್ತಿಯ ಚಾಂಪಿಯನ್ ಪಡೆದು ಪ್ರಶಸ್ತಿಗಳನ್ನೇ ಬಾಚಿಕೊಂಡು ರಾಜ್ಯಮಟ್ಟದಲ್ಲಿ ೮೦ ಮೀ ಹರ್ಡಲ್ಸ್ನಲ್ಲಿ ಪ್ರಥಮ. ಹೀಗೆ ಪದಕ, ಪ್ರಶಸ್ತಿಗಳ ನಿರಂತರ ಬೇಟೆ ಮಾಡುತ್ತಿರುವ 14 ವರ್ಷದ ಪೋರಿ ಪಂಜಾಬಿನ ಲೂಧಿಯಾನದಲ್ಲಿ ರಾಷ್ಟ್ರಮಟ್ಟದ 8೦.ಮೀ ಹರ್ಡಲ್ಸ್, ವಲಯ ಮಟ್ಟ, ತಾಲೂಕು ಮಟ್ಟ, ಜಿಲ್ಲಾ ಮಟ್ಟಗಳಲ್ಲಿ, ಪ್ರಥಮ ಸ್ಥಾನದೊಂದಿಗೆ ವೈಯಕ್ತಿಕ ಚಾಂಪಿಯನನ್ನು ಈಗಾಗಲೇ ಗಳಿಸಿದ್ದು, ನವೆಂಬರ್ನಲ್ಲಿ ಚಿತ್ರದುರ್ಗದಲ್ಲಿ ನಡೆದ ರಾಜ್ಯಮಟ್ಟದ 8೦೦ ಮೀ. ಹರ್ಡಲ್ಸ್ನಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾಳೆ. ಪದವಿ ಪೂರ್ವ ಶಿಕ್ಷಣ ಇಲಾಖೆ ಬೆಂಗಳೂರು ಹಾಗೂ ರಾಮಕೃಷ್ಣ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ 100ಮೀ ಹರ್ಡಲ್ಸ್ನಲ್ಲಿ ಈಕೆ ದ್ವಿತೀಯ ಸ್ಥಾನ ಪಡೆದು ಮಹಾರಾಷ್ಟ್ರದ ಪುಣೆಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಗೊಂಡಿರುತ್ತಾರೆ.
ಇವರ ಸಾಧನೆಯ ಹಿಂದೆ ತರಬೇತಿ ಶಿಕ್ಷಕಿಯಾದ ವಸಂತಿಯವರ ಕ್ರೀಡಾ ಸ್ಫೂರ್ತಿಯೇ ಬೆನ್ನೆಲುಬಾಗಿದೆ. ಆಳ್ವಾಸ್ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಶಾಂತರಾಮರಲ್ಲದೆ ಇತರ ಶಿಕ್ಷಕರ ಪ್ರೋತ್ಸಾಹ, ತಂದೆ ನಾರಾಯಣ ಮೂಲ್ಯ ಮಾಣಿಯಡ್ಕ , ತಾಯಿ ಜಯಂತಿ ಇವರ ಬೆಂಬಲದಿಂದ ಮುಂದೆ ದೇಶಕ್ಕೆ ಹೆಮ್ಮೆಯ ಕ್ರೀಡಾಳುವಾಗಿ ಕೀರ್ತಿ ತರಳಿಯೆಂಬುದೇ ನಮ್ಮ ಹಾರೈಕೆ.
“ಸೌಮ್ಯಶ್ರೀ ಕಠಿಣ ಶ್ರಮಜೀವಿ ಮನೆಯಲ್ಲಿ ಕೂಲಿಯಿಂದ ಜೀವನ ನಡೆಸುತ್ತಿದ್ದರೂ ಅವರ ಸಹಕಾರದಿಂದ ಈ ಬಾಲೆ ರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ ಪದಕ ಪಡೆಯುವುದರಲ್ಲಿ ತನ್ನ ಹಿರಿಮೆ ಸಾರುತ್ತಾಳೆಂಬ ನಂಬಿಕೆ ಇದೆ. ನಮ್ಮ ಶಾಲೆಯಲ್ಲಿ ಹರ್ಡಲ್ಸ್ನ ಯಾವುದೇ ಕ್ರೀಡಾ ಸಲಕರಣೆ ಇಲ್ಲದ ಪ್ರಾರಂಭದಲ್ಲಿ ಕೋಲನ್ನು ಹಿಡಿದು ಕಲಿಸಿ ನಂತರ ಪಿ.ವಿ.ಸಿ. ಪೈಪ್ಗಳಲ್ಲಿ ಸ್ಟ್ಯಾಂಡಗಳಂತೆ ಮಾಡಿ ಅದರಲ್ಲಿ ಅಭ್ಯಾಸ ಮಾಡಿದ್ದಾಳೆ” ಎನ್ನುತ್ತಾರೆ ಕ್ರೀಡಾ ಶಿಕ್ಷಕಿ ವಸಂತಿ.
ಮುಖ್ಯೋಪಾದ್ಯಯರು, ಶಿಕ್ಷಕರು, ಊರವರ ಸಹಕಾರ ಈ ಹಳ್ಳಿ ಹುಡುಗಿಯ ಸಾಧನೆಯನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ. ಇನ್ನಷ್ಟು ಕ್ರೀಡಾಸಕ್ತರು ಸಾಧನೆಗೆ ನೆರವಾದಲ್ಲಿ ಊರಿಗೆ ನಾಡಿಗೆ ಬೆಳಕಾಗಬಹುದು.


