ಪುತ್ತೂರು : ಇವರು ನಿತ್ಯ ಸಂಚಾರಿ. ಇವರ ವೃತ್ತಿಯೇ ಅದು. ಸಿದ್ಧ ಉಡುಪುಗಳನ್ನು ಗ್ರಾಹಕರಿಗೆ ತಲುಪಿಸುವ ಲೆ„ನ್ ಸೇಲ್ಸ್ ಮೆನ್. ಕೈಯಲ್ಲಿ ಒಂದು ದೊಡ್ಡ ಬ್ಯಾಗ್ ಅದರಲ್ಲಿ ರೆಡಿಮೇಡ್ ಅಂಗಿಗಳು. ಇವರು ವಿಟ್ಲ ಸಮೀಪದ ಸಾಲೆತ್ತೂರಿನ ರಾಧಾಕೃಷ್ಣ ಮೂಲ್ಯ. ಕಳೆದ 16 ವರ್ಷಗಳಿಂದ ಈ ದೊಡ್ಡ ಮೂಟೆಯನ್ನು ಹೊತ್ತು ಈ ಕಾಯಕವನ್ನು ಮಾಡುತ್ತಿದ್ದಾರೆ.
ಪ್ರತಿ ವಾರಕ್ಕೆ ಒಂದು ನಿಗದಿತ ದಿನ ಅವರ ತಮ್ಮ ಚೀಲದೊಂದಿಗೆ ಆಗಮಿಸುತ್ತಾರೆ. ಇವರಿಗೆ ಶಾಶ್ವತ ಗಿರಾಕಿಗಳಿದ್ದಾರೆ. ಪ್ರಾಮಾಣಿಕ ವ್ಯವಹಾರ, ಕಡಿಮೆ ಲಾಭಾಂಶ. ಹಾಗಿದ್ದು ದಿನಕ್ಕೆ 2000ರಿಂದ 3000ರೂ.ಗಳ ವ್ಯವಹಾರ ನಡೆಸುತ್ತಾರೆ. ಕನಿಷ್ಠ 300ರಿಂದ 400 ರೂ.ಗಳ ವರೆಗೆ ಆದಾಯವನ್ನು ಪಡೆಯುತ್ತಾರೆ. ಇದೇ ಕಾಯಕ ಇವರ ಕುಟುಂಬದ ಜೀವನವನ್ನು ನಡೆಸುತ್ತಿದೆ.
ಸುಳ್ಯ, ಪುತ್ತೂರು, ಬೆಳ್ತಂಗಡಿ, ಉಜಿರೆ, ಕಾಣಿಯೂರು, ಪಂಜ ಸೇರಿದಂತೆ ಇವರು ಸುತ್ತದ ಊರಿಲ್ಲ. ಹೆಚ್ಚಾಗಿ ಸರ್ಕಾರಿ ಕಚೇರಿಗಳನ್ನು ಇವರು ಭೇಟಿ ನೀಡುತ್ತಾರೆ. ಅಲ್ಲಿನ ನೌಕರ ವರ್ಗವೇ ಇವರ ಖಾಯಂ ಗಿರಾಕಿಗಳು. ಗುಣಮಟ್ಟದ ಶರ್ಟ್ಗಳನ್ನು ಮಾತ್ರ ಇವರು ಮಾರಾಟ ಮಾಡುವುದರಿಂದ ಗಿರಾಕಿಗಳಿಗೇನು ಕಡಿಮೆ ಇಲ್ಲ. ಬೆಳಿಗ್ಗೆ ಬಂದಾಗ ಭರ್ತಿಯಾಗಿರುವ ಇವರ ದೊಡ್ಡ ಬ್ಯಾಗ್ ಸಂಜೆ ಹಿಂತಿರುಗುವ ವೇಳೆ ಖಾಲಿಯಾಗಿರುತ್ತದೆ.
ಸ್ಥಳೀಯವಾಗಿಯೇ ಇವರು ಶರ್ಟ್ಗಳನ್ನು ಖರೀದಿಸುತ್ತಾರೆ. ಸ್ವ ಉದ್ಯೋಗ ಮಾಡಿಕೊಂಡಿರುವ ಒಬ್ಬರು ಇವರಿಗೆ ಶರ್ಟ್ಗಳನ್ನು ತಯಾರಿಸಿ ನೀಡುತ್ತಾರೆ. ಇವರಲ್ಲಿ ಸಾಲದ ವ್ಯವಹಾರ ಇಲ್ಲ, ಏನಿದ್ದರೂ ನಗದು ವ್ಯವಹಾರ. ಹಾಗಾಗಿ ಸಾಲದ ತಲೆಬಿಸಿ ಇಲ್ಲ. ಇವರದು ದೊಡ್ಡ ಕುಟುಂಬ. ತಂದೆ ಜಾರಪ್ಪ ಮೂಲ್ಯರಿಗೆ 3 ಗಂಡು, 4 ಹೆಣ್ಣು ಮಕ್ಕಳು. ಇದೇ ವೃತ್ತಿ ಆದಾಯದಿಂದ ಇವರ ಸಹೋದರಿಯರ ಮದುವೆಯನ್ನು ಮಾಡಿಕೊಟ್ಟಿದ್ದಾರೆ. ರಾಧಾಕೃಷ್ಣರಿಗೆ ಮದುವೆಯಾಗಿ 2 ವರ್ಷ ಆಗಿದೆ. ಪತ್ನಿ ಅಂಗನವಾಡಿ ಕಾರ್ಯಕರ್ತೆ. ಕುಟುಂಬ ನಿರ್ವಹಣೆಗೆ ಅವರೂ ತಮ್ಮ ಕೊಡುಗೆ ನೀಡುತ್ತಾರೆ.



