ಬಂಟ್ವಾಳ(ಕುಲಾಲ ವರ್ಲ್ಡ್ ಡಾಟ್ ಕಾಮ್): ಸಮಾಜದ ಆರ್ಥಿಕವಾಗಿ ಹಿಂದುಳಿದ ಕುಟುಂಬವೊಂದರ ಸ್ವಂತ ಸೂರಿನ ಕನಸನ್ನು ಸಿದ್ದಕಟ್ಟೆ ಕುಲಾಲ ಸುಧಾರಕ ಸಂಘ ನನಸಾಗಿಸಿದೆ. ಕುಕ್ಕಿಪಾಡಿ ಗ್ರಾಮದ ಪೇಳತ್ತಬೆಟ್ಟು ನಿವಾಸಿ ಕುದ್ಕೊಳಿ ಜಯಂತಿ ಅವರ ಕುಟುಂಬಕ್ಕಾಗಿ ಸಂಘದ ಮುಂದಾಳತ್ವದಲ್ಲಿ ನಿರ್ಮಿಸಲಾದ ನೂತನ ‘ಸಮೃದ್ಧಿ ನಿಲಯ’ ಮನೆಯನ್ನು ನವೆಂಬರ್ 22ರಂದು ಅಧಿಕೃತವಾಗಿ ಹಸ್ತಾಂತರಿಸಲಾಯಿತು.
ಹಸ್ತಾಂತರದ ಪ್ರಯುಕ್ತ ಆಯೋಜಿಸಲಾಗಿದ್ದ ಸಭಾ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಪೂಂಜಾದ ಕೃಷ್ಣ ಪ್ರಸಾದ್ ಆಚಾರ್ಯ ಅಸ್ರಣ್ಣರು ಆಶೀರ್ವಚನ ನೀಡಿ, ಸಿದ್ದಕಟ್ಟೆ ಕುಲಾಲ ಸುಧಾರಕ ಸಂಘದ ಈ ನಿಸ್ವಾರ್ಥ ಸೇವಾ ಕಾರ್ಯವನ್ನು ಶ್ಲಾಘಿಸಿದರು. ಇಂತಹ ಸಮಾಜಮುಖಿ ಕಾರ್ಯಗಳಿಗೆ ಭಗವಂತನು ಇನ್ನಷ್ಟು ಶಕ್ತಿ ನೀಡಲಿ ಹಾಗೂ ನೂತನ ಮನೆಯಲ್ಲಿ ನೆಲೆಸುವ ಕುಟುಂಬಕ್ಕೆ ಸಕಲ ಸುಖ-ಸಮೃದ್ಧಿ ಕರುಣಿಸಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಬಂಟ್ವಾಳ ಶಾಸಕ ರಾಜೇಶ್ ನಾಯಕ್, ಜಾತಿ ಸಂಘಟನೆಗಳ ನೈಜ ಉದ್ದೇಶ ಸಮಾಜದ ಅಶಕ್ತರ ಉದ್ಧಾರವಾಗಬೇಕು; ಅದನ್ನು ಸಿದ್ದಕಟ್ಟೆ ಕುಲಾಲ ಸಂಘವು ತನ್ನ ಕಾರ್ಯದ ಮೂಲಕ ಸಾಬೀತುಪಡಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮನೆ ನಿರ್ಮಾಣದ ನೇತೃತ್ವ ವಹಿಸಿದ ಸಂಘದ ಅಧ್ಯಕ್ಷ ಮನೋಜ್ ಕುಲಾಲ್ ಹಾಗೂ ಸರ್ವ ಸದಸ್ಯರ ಕಾರ್ಯವೈಖರಿಯನ್ನು ಅವರು ಮುಕ್ತಕಂಠದಿಂದ ಶ್ಲಾಘಿಸಿದರು.
ಇದೇ ವೇಳೆ ಮಾತನಾಡಿದ ಜಿಲ್ಲಾ ಧಾರ್ಮಿಕ ದತ್ತಿ ಇಲಾಖೆ ಸದಸ್ಯ ದೇವಪ್ಪ ಕುಲಾಲ್ ಪಂಜಿಕಲ್ಲು, 2002-03ರಲ್ಲಿ ಸೋಮಯ್ಯ ಕುಲಾಲ್ ಸಂಗಬೆಟ್ಟು ಅವರ ಸ್ಥಾಪಕ ಅಧ್ಯಕ್ಷತೆಯಲ್ಲಿ ಆರಂಭಗೊಂಡ ಸಂಘವು ಇಂದು ಶಾಶ್ವತ ಸೇವಾ ಯೋಜನೆಯ ಮೂಲಕ ಬಡ ಕುಟುಂಬವೊಂದರ ಬದುಕಿಗೆ ಬೆಳಕಾಗಿರುವುದು ಅತ್ಯಂತ ಸಂತಸದ ವಿಚಾರ ಎಂದರು. ನೂತನ ಮನೆಯ ಕೀಲಿ ಕೈ ಸ್ವೀಕರಿಸಿದ ಜಯಂತಿ ಅವರು ಸಂಘದ ಅಧ್ಯಕ್ಷರು ಮತ್ತು ಪ್ರಮುಖರಿಗೆ ಶಾಲು ಹೊದಿಸಿ ಭಾವುಕರಾಗಿ ಕೃತಜ್ಞತೆ ಸಲ್ಲಿಸಿದರು. ಮನೆ ನಿರ್ಮಾಣಕ್ಕೆ ಕೈಜೋಡಿಸಿದ ದಾನಿಗಳು ಹಾಗೂ ಪ್ರಮುಖರನ್ನು ಗೌರವ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಮಾಜಿ ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು, ದಕ್ಷಿಣ ಕನ್ನಡ ಜಿಲ್ಲಾ ಕುಲಾಲ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಕೋಶಾಧಿಕಾರಿ ಸೋಮನಾಥ ಸಾಲ್ಯಾನ್, ಬಂಟ್ವಾಳ ಕುಲಾಲ ಸೇವಾದಳದ ದಳಪತಿ ಚಂದ್ರಶೇಖರ ಕಾಮಾಜೆ, ಬಿಜೆಪಿ ಯುವಮೋರ್ಚಾ ಅಧ್ಯಕ್ಷ ದಿನೇಶ್ ಶೆಟ್ಟಿ, ಯುವಮೋರ್ಚಾ ನಿಕಟಪೂರ್ವಾಧ್ಯಕ್ಷ ಸುದರ್ಶನ್ ಬಜ, ಯೋಗೀಶ್ ಆಚಾರ್ಯ ಕುಕ್ಕಿಪಾಡಿ, ರತ್ನಕುಮಾರ್ ಚೌಟ, ನಾಗೇಶ್ ಬಿಲಾಡಿ, ಸಂತೋಷ್ ಕಾರ್ಕಳ, ಯಶೋಧರ ಉಪ್ಪಿರ, ಚೈತ್ರ ಸೂರ್ಯ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಕುಡ್ಕೋಳಿಬೈಲು ವರ್ಷಾ ಪ್ರಾರ್ಥಿಸಿ, ಕುಮಾರಿ ಅಂಕಿತಾ ಸ್ವಾಗತಿಸಿದರು. ಸಂತೋಷ್ ಕುಲಾಲ್ ಸಿದ್ದಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

