ಮಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್) : ಕಾಲದ ಬಲುದೊಡ್ಡ ಹೊಡೆತಕ್ಕೆ ಸಿಲುಕಿ ಶಿಥಿಲಗೊಂಡು ಕುಸಿದುಬಿದ್ದ ಹಳೆಯ ಮುರುಕು ಗುಡಿಸಲಿನಲ್ಲಿ ಬದುಕು ನೂಕುತ್ತಿದ್ದ ಬಜಪೆ ಸಮೀಪದ ಕೊಳಂಬೆ ಬೈಲುಬೀಡಿನ ಮೂವರು ಅನಾಥ ಒಡಹುಟ್ಟಿದವರ ಹೊಸ ಮನೆಯ ಕನಸಿಗೆ ‘ಕುಲಾಲ್ ವರ್ಲ್ಡ್’ ವಾಟ್ಸಾಪ್ ಬಳಗ ಮತ್ತೊಮ್ಮೆ ಆಸರೆಯಾಗಿದೆ. ದಿ. ತಿಮ್ಮಪ್ಪ ಮೂಲ್ಯ-ಹೊನ್ನಮ್ಮ ದಂಪತಿಯ ಮಕ್ಕಳಾದ ವೆಂಕಮ್ಮ (49), ಜಾನಕಿ (44) ಹಾಗೂ ತುಕಾರಾಮ (42) ಅವರ ಬದುಕಿನ ಕಣ್ಣೀರು ಒರೆಸಲು ದಾನಿಗಳ ಸಹಕಾರದಿಂದ ಸಂಗ್ರಹಿಸಲಾದ ರೂ. 1,03,450/- ಗಳ ದೊಡ್ಡ ಮೊತ್ತದ ಧನಸಹಾಯವನ್ನು ಅವರ ಮನೆಗೆ ನೇರವಾಗಿ ತೆರಳಿ ಹಸ್ತಾಂತರಿಸಲಾಯಿತು.
ಹೊರಜಗತ್ತಿನ ಯಾವ ನೆರಳೂ ಸೋಕದೆ, ತಮ್ಮ ಅಳಲನ್ನು ಯಾರಲ್ಲೂ ಹೇಳಿಕೊಳ್ಳಲಾಗದೆ ಅಸಹಾಯಕರಾಗಿ ಬದುಕುತ್ತಿದ್ದ ಈ ಅನಾಥರ ದಯನೀಯ ಸ್ಥಿತಿ ಸ್ಥಳೀಯ ಸಮಾಜಸೇವಕ ಸುಧಾಕರ್ ಕೊಳಂಬೆ ಅವರ ಮನದಲ್ಲಿ ಒಂದು ಪುಟ್ಟ ನೆಲೆ ಕಲ್ಪಿಸುವ ಕನಸಿಗೆ ನಾಂದಿ ಹಾಡಿತ್ತು. ಆ ಕನಸಿಗೆ ಜೀವನಿಧಿ ಟ್ರಸ್ಟ್ ಬಜಪೆ ತಳಪಾಯ ಹಾಕಿದರೆ, ಮುಂದೆ ಭದ್ರವಾಗಿ ನಿಂತದ್ದು ‘ಕುಲಾಲ್ ವರ್ಲ್ಡ್ ಚಾರಿಟೇಬಲ್ ಟ್ರಸ್ಟ್’ ವಾಟ್ಸಾಪ್ ಬಳಗ. ಬದುಕಿಗೆ ಆಸರೆಯಾಗಿದ್ದ ಟರ್ಪಾಲ್ ಹೊದಿಕೆಯ ಜೋಪಡಿ ಕುಸಿದು ಬಿದ್ದಾಗ ಈ ಕುಟುಂಬ ಅಕ್ಷರಶಃ ಬೀದಿಗೆ ಬಿದ್ದಿತ್ತು.
ಅಡೆತಡೆಗಳ ನಡುಮೆಯೂ ಮುಂದುವರಿದ ಕರುಣೆಯ ಪಯಣ
ಕಳೆದೆರಡು ವರ್ಷಗಳಿಂದ ಈ ಕುಟುಂಬದ ಕಷ್ಟಕ್ಕೆ ನೆರಳಾಗಲು ‘ಕುಲಾಲ್ ವರ್ಲ್ಡ್’ ತಂಡ ಹಗಲಿರುಳು ಶ್ರಮಿಸಿದೆ. ಆರಂಭದಲ್ಲಿ ಸಣ್ಣದೊಂದು ಹೆಂಚಿನ ಮನೆ ಸಾಕೆಂಬ ಮಾತುಗಳು ಬಂದರೂ, “ನಾಳೆಗೆ ಆ ಮಕ್ಕಳಿಗೆ ಭದ್ರವಾದ ನೆರಳಾಗಲಿ” ಎಂದು ಗಟ್ಟಿಯಾದ ಕಾಂಕ್ರೀಟ್ ಮನೆಯ ಕನಸು ಬಿತ್ತಲಾಯಿತು. ಆದರೆ ವಿಧಿಯಾಟ ಬೇರೆಯೇ ಇತ್ತು. ಕುಡಿಯುವ ನೀರಿಲ್ಲ, ಮರಳಿನ ಕೊರತೆ, ಸಾಮಗ್ರಿ ಸಾಗಿಸಲು ಸರಿಯಾದ ದಾರಿಯಿಲ್ಲ ಹೀಗೆ ನೂರಾರು ಅಡೆತಡೆಗಳು ಎದುರಾದವು. ತಲೆಮೇಲಿದ್ದ ಹಳೆ ಸೂರೂ ಕರಗಿಹೋಗಿ, ಅರ್ಧಂಬರ್ಧ ನಿರ್ಮಾಣವಾದ ತಣ್ಣನೆಯ ಗೋಡೆಗಳ ಮಧ್ಯೆ ಆ ಹತಭಾಗ್ಯ ಕುಟುಂಬ ಬದುಕು ದೂಡಲಾರಂಭಿಸಿತು. ಕುಡಿಯುವ ನೀರಿಗೂ ಕಿಲೋಮೀಟರ್ ದೂರದ ನೆರೆಮನೆಗಳ ಹಾದಿ ಹಿಡಿಯಬೇಕಾದ ಅದೆಷ್ಟು ಕರುಣಾಜನಕ ದಿನಗಳನ್ನು ಅವರು ಎದುರಿಸಿದರು. ಕೊನೆಗೆ ಸ್ಥಳೀಯ ಪಂಚಾಯತ್ ಮೂಲಕ ಆ ಮನೆಗೆ ನೀರಿನ ಪೈಪ್ಲೈನ್ ಜೋಡಿಸಿಕೊಟ್ಟಾಗ, ಅವರ ಮುಖದಲ್ಲಿ ಮೂಡಿದ ನೆಮ್ಮದಿಯ ನಗು ತಂಡದ ಶ್ರಮಕ್ಕೆ ಸಿಕ್ಕ ಅತಿ ದೊಡ್ಡ ಫಲವಾಗಿತ್ತು. ಇದುವರೆಗೆ ಈ ಮನೆಯ ಕಾರ್ಯಕ್ಕಾಗಿ ಸುಮಾರು ಮೂರುವರೆ ಲಕ್ಷ ರೂಪಾಯಿ ವಿನಿಯೋಗವಾಗಿದ್ದು, ಮನೆ ಸಂಪೂರ್ಣ ರೂಪುಗೊಳ್ಳಲು ಇನ್ನೂ ಅಂದಾಜು ಎರಡೂವರೆ ಲಕ್ಷ ರೂಪಾಯಿಗಳ ಅವಶ್ಯಕತೆಯಿದೆ. ಈ ಮಧ್ಯೆ ದಾನಿಗಳಿಂದ ಸಂಗ್ರಹಿಸಿದ ರೂ. 1,03,450/- ಹಣವನ್ನು ಈ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ `ಕುಲಾಲ್ ವರ್ಲ್ಡ್’ ಮಹಿಳಾ ವಾಟ್ಸಾಪ್ ಬಳಗದ ಪ್ರಮುಖರಾದ ದಯಾಲಕ್ಷ್ಮಿ ಎಸ್ .ಬಂಗೇರ, ಶೃತಿ ಮೂಲ್ಯ ಹಾಗೂ `ಕುಲಾಲ್ ವರ್ಲ್ಡ್ ‘ ಸದಸ್ಯರಾದ ಕಿರಣ್ ಅಟ್ಲೂರು, ಸುಧಾಕರ ಕೊಳಂಬೆ, ಪ್ರಥ್ವಿರಾಜ್ ಕುಲಾಲ್, ಸಿದ್ಧಾರ್ಥ್ ಮೂಲ್ಯ ಉಪಸ್ಥಿತರಿದ್ದು ಶುಭ ಹಾರೈಸಿದರು.
ಕೊನೆಗೂ ಈಡೇರದ ಕನಸು ಮತ್ತು ಕಹಿಯಾದ ವಾಸ್ತವ
ಮೂವರು ಅನಾಥರ ಕರುಣಾಜನಕ ಜೀವನವನ್ನು ಕಂಡು ಮನೆ ಪೂರ್ಣಗೊಳಿಸಲು ವಿಶಾಲಹೃದಯದ ದಾನಿಗಳು ಮುಂದೆ ಬಂದಿದ್ದರೂ, ಬದುಕಿನ ಕಹಿ ಅನುಭವಗಳಿಂದ ಮಾನಸಿಕವಾಗಿ ಜರ್ಜರಿತರಾಗಿರುವ ಆ ಕುಟುಂಬ ಈಗ ಆ ಅರ್ಧಂಬರ್ಧ ಗೋಡೆಗಳ ನಡುವೆಯೇ ಬದುಕು ಕರಗಿಸಿಕೊಳ್ಳಲು ಒಗ್ಗಿಕೊಂಡಂತೆ ತೋರುತ್ತಿದೆ. ಮನೆಯ ಸಾರಣೆ ಮತ್ತು ಟೈಲ್ಸ್ ಅಳವಡಿಕೆಯಂತಹ ಅಂತಿಮ ಕೆಲಸಗಳಿಗೆ ಮನೆಯಲ್ಲಿದ್ದ ಅಲ್ಪಸ್ವಲ್ಪ ಸಾಮಗ್ರಿಗಳನ್ನು ಹೊರಗಿಟ್ಟು ಸಹಕರಿಸಲು ಅವರು ಒಪ್ಪಲಿಲ್ಲ. ಮಾನವೀಯ ಸ್ಪಂದನೆಗೆ ಆಗಮಿಸುವ ಎಲ್ಲರನ್ನೂ ಸಂಶಯದ ಕಣ್ಣಿನಿಂದ ನೋಡುವಷ್ಟು ಅವರು ಮಾನಸಿಕವಾಗಿ ಕುಸಿದುಹೋಗಿದ್ದಾರೆ. ಮನೆ ನಿರ್ಮಿಸಲು ಬಳಗ ಹೆಣಗಾಡುತ್ತಿರುವ ಮಧ್ಯೆ, ತಮ್ಮ ಪಿತ್ರಾರ್ಜಿತ ಆಸ್ತಿಯ ಒಂದು ಪಾಲನ್ನು ಸ್ಥಳೀಯ ವ್ಯಕ್ತಿಯೊಬ್ಬರ ಮೂಲಕ ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡಿರುವುದೂ ಬೆಳಕಿಗೆ ಬಂದಿದೆ. ಆದರೂ ತಮ್ಮ ಮನೆಯನ್ನು ಸುಸಜ್ಜಿತಗೊಳಿಸುವ ಗೋಜಿಗೆ ಅವರು ಹೋಗಲಿಲ್ಲ. ಈ ಎಲ್ಲ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿ, ಇದುವರೆಗೆ ಸಂಗ್ರಹವಾಗಿರುವ ಮತ್ತು ಲಭ್ಯವಿರುವ ಒಟ್ಟು ಹಣವನ್ನು ನೇರವಾಗಿ ಅವರ ಕೈಗಿಡುವುದೇ ಸೂಕ್ತ ಎಂಬ ಅಂತಿಮ ತೀರ್ಮಾನಕ್ಕೆ ತಂಡ ಬಂದಿದ್ದು, ಅದರಂತೆ ರೂ. 1,03,450/- ಆರ್ಥಿಕ ನೆರವನ್ನು ಹಸ್ತಾಂತರಿಸಲಾಗಿದೆ. ಮಾನವೀಯತೆಯ ನೆರಳಿನಲ್ಲಿ ಅನಾಥರ ಬಾಳಿಗೆ ಬೆಳಕಾಗಲು ಸಹಕರಿಸಿದ ‘ಕುಲಾಲ್ ವರ್ಲ್ಡ್’ ಬಳಗದ ಎಲ್ಲಾ ಸದ್ಯಸರಿಗೆ ಹಾಗೂ ದಾನಿಗಳಿಗೆ ತುಂಬು ಹೃದಯದ ಕೃತಜ್ಞತೆಗಳು.



