ಮಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್) : ರಾಜ್ಯ ಸರ್ಕಾರವು ‘ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರ’ದ ನಿರ್ದೇಶಕರನ್ನಾಗಿ ಮಂಗಳೂರಿನ ಬೆಂದೂರು ನಿವಾಸಿ, ಯುವ ನಾಯಕ ಹಾಗೂ ಉದ್ಯಮಿ ತೇಜಸ್ವಿರಾಜ್ ಜಿ. ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
ಕಾಲೇಜು ದಿನಗಳಿಂದಲೇ ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಂಡು ಬೆಳೆದಿರುವ ತೇಜಸ್ವಿರಾಜ್ ಅವರು, ರಾಜಕೀಯ ಕ್ಷೇತ್ರದಲ್ಲಿ ವಿವಿಧ ಜವಾಬ್ದಾರಿಯುತ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿ ಜನಮನ್ನಣೆ ಗಳಿಸಿದ್ದಾರೆ. ಮಂಗಳೂರಿನ ಯಶಸ್ವಿ ಉದ್ಯಮಿಯಾಗಿಯೂ ಗುರುತಿಸಿಕೊಂಡಿರುವ ಇವರು, ಖ್ಯಾತ ಸ್ವಾತಂತ್ರ್ಯ ಹೋರಾಟಗಾರ ಡಾ. ಅಮ್ಮೆಂಬಳ ಬಾಳಪ್ಪ ಅವರ ಮೊಮ್ಮಗ ಎಂಬುದು ವಿಶೇಷ.
ತ್ರಿಪದಿ ಕವಿ ಸರ್ವಜ್ಞರ ಜನ್ಮಸ್ಥಳವಾದ ಹಾವೇರಿ ಜಿಲ್ಲೆಯ ಅಬಲೂರು ಹಾಗೂ ಐಕ್ಯಸ್ಥಳವಾದ ಮಾಸೂರು ಸೇರಿದಂತೆ ಸರ್ವಜ್ಞರಿಗೆ ಸಂಬಂಧಿಸಿದ ಐತಿಹಾಸಿಕ ಕ್ಷೇತ್ರಗಳ ಸಮಗ್ರ ಅಭಿವೃದ್ಧಿ ಮಾಡುವುದು ಈ ಪ್ರಾಧಿಕಾರದ ಮುಖ್ಯ ಉದ್ದೇಶವಾಗಿದೆ. 2012ರಲ್ಲಿ ಘೋಷಣೆಯಾಗಿದ್ದ ಈ ಪ್ರಾಧಿಕಾರಕ್ಕೆ, 2020ರಲ್ಲಿ ‘ಸರ್ವಜ್ಞ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ’ ಜಾರಿಗೆ ಬರುವ ಮೂಲಕ ಅಧಿಕೃತ ಬಲ ಸಿಕ್ಕಿತ್ತು.ಇದೀಗ ಪ್ರಾಧಿಕಾರದ ನಿರ್ದೇಶಕರಾಗಿ ತೇಜಸ್ವಿರಾಜ್ ಜಿ. ಅವರು ನೇಮಕಗೊಂಡಿರುವುದರಿಂದ, ಸರ್ವಜ್ಞ ಕ್ಷೇತ್ರಗಳ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಕಾರ್ಯಗಳಿಗೆ ಮತ್ತಷ್ಟು ವೇಗ ಸಿಗುವ ನಿರೀಕ್ಷೆಯಿದೆ.

