ಪುಣೆ (ಅ.೧೪, ಕುಲಾಲ ವರ್ಲ್ಡ್ ಡಾಟ್ ಕಾಮ್) : ವಿಧಿ ಎಷ್ಟು ಕ್ರೂರ! ಒಂದೇ ಕುಟುಂಬದ ಇಬ್ಬರು ಹೂವಿನಂಥ ಮಕ್ಕಳನ್ನು ರಸ್ತೆ ಅಪಘಾತ ಬಲಿಪಡೆದುಕೊಂಡಿದೆ. ಇಂತಹ ದಾರುಣ ಹಾಗೂ ನೋವಿನ ಸನ್ನಿವೇಶದಲ್ಲೂ ಆ ದುಃಖತಪ್ತ ಪೋಷಕರು ತೋರಿದ ಮಾನವೀಯತೆ ಹಾಗೂ ಹೃದಯ ವೈಶಾಲ್ಯತೆ ಇಡೀ ಸಮಾಜವೇ ತಲೆಬಾಗುವಂತೆ ಮಾಡಿದೆ. ತಮ್ಮ ಮುದ್ದಿನ ಮಗಳ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಮತ್ತಷ್ಟು ಜೀವಗಳಿಗೆ ಹೊಸ ಆಶಾಕಿರಣವಾಗಿದ್ದಾರೆ.
ಮಹಾರಾಷ್ಟ್ರದ ಪುಣೆ ಜಿಲ್ಲೆಯ ಭೋಸರಿ ಪ್ರದೇಶದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಪಿಂಪ್ರಿ-ಚಿಂಚ್ವಾಡ್ ಕುಲಾಲ ಸಂಘದ ಅಧ್ಯಕ್ಷರಾದ ರವಿ ಮೂಲ್ಯ ಹಾಗೂ ಅವರ ಪತ್ನಿಯವರ ಬದುಕು ಶೂನ್ಯವಾಗಿದೆ. ರವಿ ಮೂಲ್ಯ ಅವರು ಇಂದ್ರಾಯಣಿ ನಗರದ ಮಿನಿ ಮಾರ್ಕೆಟ್ನಲ್ಲಿ ಟೈಲರ್ ಆಗಿ ಜೀವನ ಸಾಗಿಸುತ್ತಿದ್ದವರು. ಅವರ ಪ್ರೀತಿಯ ಮಕ್ಕಳಾದ ಕೌಶಿಕ್ ಮೂಲ್ಯ (21) ಮತ್ತು ರಿಷಿತಾ ಮೂಲ್ಯ (17) ಅಣ್ಣ-ತಂಗಿಯರು ಎಂದಿನಂತೆ ಜೊತೆಯಾಗಿ ಹೊರಟಿದ್ದರು.
ಕ್ಷಣಮಾತ್ರದಲ್ಲಿ ಕಸಿದುಕೊಂಡ ನಗು
ಬೋಸರಿಯ ಇಂದ್ರಾಯಣಿ ನಗರದ ನಿವಾಸಿಗಳಾದ ಈ ಅಣ್ಣ-ತಂಗಿ ಘೋರಾವೇಶ್ವರಕ್ಕೆ ತೆರಳಿ ವಾಪಸ್ ಬರುವಾಗ ಸಾವಿನ ರೂಪದಲ್ಲಿ ಬಂದ ಅತಿವೇಗದ ದ್ವಿಚಕ್ರ ವಾಹನ ಹಿಂದಿನಿಂದ ಬಂದು ಇವರ ಬೈಕಿಗೆ ಡಿಕ್ಕಿ ಹೊಡೆದಿದೆ. ಈ ಘೋರ ಅಪಘಾತದಲ್ಲಿ ಇಬ್ಬರೂ ಗಂಭೀರವಾಗಿ ಗಾಯಗೊಂಡರು. ಅಪಘಾತದಲ್ಲಿ ಗಾಯಗೊಂಡಿದ್ದ ಅಣ್ಣ ಕೌಶಿಕ್ ಅವರನ್ನು ಮೊದಲು ಯಶವಂತರಾವ್ ಚವಾಣ್ ಆಸ್ಪತ್ರೆಗೆ, ಬಳಿಕ ಇಂದ್ರಾಯಣಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ವಿಧಿಯಾಟವೇ ಬೇರೆ ಇತ್ತು; ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ರಾತ್ರಿ ಕೌಶಿಕ್ ಕೊನೆಯುಸಿರೆಳೆದರು. ಅತ್ತ ತಂಗಿ ರಿಷಿತಾ ಅವರನ್ನು ಬನೇರ್ನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಪರೀಕ್ಷಿಸಿದ ವೈದ್ಯರು ಆಕೆಯದ್ದು ‘ಬ್ರೇನ್ ಡೆಡ್’ ಆಗಿರುವುದಾಗಿ ತಿಳಿಸಿದರು.
ಮಕ್ಕಳ ಅಗಲಿಕೆಯ ಶೋಕ ಸಾಗರದಲ್ಲಿ ಮುಳುಗಿದ್ದರೂ, ರವಿ ಮೂಲ್ಯ ದಂಪತಿ ತೆಗೆದುಕೊಂಡ ಒಂದು ಮಹತ್ವದ ನಿರ್ಧಾರ ಇಂದು ಹಲವರಿಗೆ ಜೀವನದ ಹೊಸ ದರ್ಶನ ಮಾಡಿಸಿದೆ. “ನಮ್ಮ ಮಗಳು ನಮ್ಮನ್ನು ಅಗಲಿದ್ದಾಳೆ, ಆದರೆ ಅವಳ ಅಂಗಾಂಗಗಳ ಮೂಲಕ ಬೇರೆ ಯಾರದ್ದೋ ಮಗಳು, ಯಾರದ್ದೋ ತಾಯಿ ಅಥವಾ ಸಹೋದರಿ ಬದುಕಿಕೊಳ್ಳಲಿ” ಎಂದು ನಿರ್ಧರಿಸಿದ ಆ ಪೋಷಕರು, ರಿಷಿತಾಳ ಅಂಗಾಂಗಗಳನ್ನು ದಾನ ಮಾಡಲು ಒಪ್ಪಿಗೆ ಸೂಚಿಸಿದರು. ಮನೆಯ ಕಣ್ಣುಗಳಾಗಿದ್ದ ಅಣ್ಣ ಕೌಶಿಕ್ ಆಳಂದಿ ಕಾಲೇಜಿನಲ್ಲಿ ಕಂಪ್ಯೂಟರ್ ಇಂಜಿನಿಯರಿಂಗ್ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದರೆ, ತಂಗಿ ರಿಷಿತಾ 11ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಳು. ಮಕ್ಕಳ ಭವಿಷ್ಯದ ಬಗ್ಗೆ ಸಾವಿರಾರು ಕನಸುಗಳನ್ನು ಕಂಡಿದ್ದ ಆ ಹೆತ್ತವರ ಕೈಯಿಂದ ವಿಧಿ ಎಲ್ಲವನ್ನೂ ಕಿತ್ತುಕೊಂಡಿತು. ಆದರೂ, ತಮ್ಮ ನೋವನ್ನು ನುಂಗಿಕೊಂಡು ಅವರು ಮಾಡಿದ ಈ ಮಹಾನ್ ತ್ಯಾಗ ಮನುಕುಲಕ್ಕೆ ಎಂದಿಗೂ ಸ್ಫೂರ್ತಿ.

