ಮಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್) : ದಸರಾ ಮಹೋತ್ಸವ ಎಂದರೆ ಕರಾವಳಿಯಲ್ಲಿ ಬರೀ ಹಬ್ಬವಲ್ಲ, ಅದೊಂದು ಭಾವನೆ. ಕಾಲಿಗೆ ಗೆಜ್ಜೆ ಕಟ್ಟಿ, ಮೈಮೇಲೆ ಹುಲಿಯ ಬಣ್ಣ ಬಳಿದು, ತಾಸೆಯ ಪೆಟ್ಟಿಗೆ ಕುಣಿಯುವ ಕನಸು ಪ್ರತಿಯೊಬ್ಬ ಕರಾವಳಿ ಹುಡುಗನ ಕಣ್ಣಲ್ಲೂ ಇರುತ್ತದೆ. ಅಂಥದ್ದೇ ಒಂದು ಅಪಾರ ಉತ್ಸಾಹ, ಕಣ್ಣುಗಳಲ್ಲಿ ನೂರಾರು ಕನಸುಗಳನ್ನು ಹೊತ್ತು ಮಂಗಳೂರಿಗೆ ಬಂದಿದ್ದ ಬೆಳ್ತಂಗಡಿಯ 14 ವರ್ಷದ ಶ್ರೇಯಸ್ ಕುಂಬಾರ ಎಂಬ ಮುಗ್ಧ ಬಾಲಕ, ಇಂದು ಬರೀ ನೆನಪಾಗಿ ಉಳಿದುಬಿಟ್ಟಿದ್ದಾನೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಸಬಾ ಗ್ರಾಮದ ರೆಂಕೆದಗುತ್ತು ನಿವಾಸಿ ಸೇಷಪ್ಪ ಕುಂಬಾರ ಅವರ ಮುದ್ದು ಮಗ ಶ್ರೇಯಸ್ (14). ಮುಂಬರುವ ಮಂಗಳೂರು ದಸರಾದಲ್ಲಿ ಹುಲಿವೇಷ ಕುಣಿದು ಸಂಭ್ರಮಿಸಬೇಕೆಂಬ ಆಸೆಯಿಂದ, ಭಾನುವಾರ (ಅಕ್ಟೋಬರ್ 4) ಬೆಳಿಗ್ಗೆ ತನ್ನ ನಾಲ್ವರು ಬಾಲ್ಯದ ಗೆಳೆಯರೊಂದಿಗೆ ಮಂಗಳೂರಿನತ್ತ ಹೆಜ್ಜೆ ಹಾಕಿದ್ದ. ಹುಲಿ ಕುಣಿತದ ತರಬೇತಿ ಮುಗಿದ ನಂತರ, ಆ ಬಾಲಕರ ಮನಸ್ಸಿನಲ್ಲಿ ಸಾಗರವನ್ನು ನೋಡುವ ಕೌತುಕ ಮೂಡಿತ್ತು.
ಸ್ಟೇಟ್ ಬ್ಯಾಂಕ್ನಿಂದ ಹೊರಟು ಪಣಂಬೂರು ಸಮುದ್ರ ತೀರಕ್ಕೆ ತಲುಪಿದ ಆ ಚಿಣ್ಣರ ಪಡೆ, ಸಂಜೆ 4:30ರ ಹೊತ್ತಿಗೆ ಕೂಳೂರು-ಕೂರಿಕಟ್ಟ ಸಮುದ್ರದ ಬಳಿ ತಲುಪಿತು. ಸಂಜೆ 6 ಗಂಟೆಯ ಸುಮಾರಿಗೆ ಅಸ್ತಮಿಸುವ ಸೂರ್ಯನ ಬೆಳಕಿನಲ್ಲಿ, ಅಲೆಗಳ ನಡುವೆ ಶ್ರೇಯಸ್ ಮತ್ತು ಆತನ ಗೆಳೆಯರು ನಗುತ್ತಾ, ನೀರಾಟವಾಡುತ್ತಿದ್ದರು. ಆದರೆ, ಆ ಕ್ಷಣಾರ್ಧದ ನಗು, ಜೀವಮಾನದ ಕಣ್ಣೀರಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಭೋರ್ಗರೆದು ಬಂದ ಬೃಹತ್ ಅಲೆಯೊಂದು ಶ್ರೇಯಸ್ನನ್ನು ತಾಯಿಯ ಮಡಿಲಿನಿಂದ ಕಸಿದುಕೊಳ್ಳುವಂತೆ, ತನ್ನೊಡಲಿಗೆ ಎಳೆದುಕೊಂಡು ಬಿಟ್ಟಿತು. ಅಲೆಗಳ ಅಬ್ಬರಕ್ಕೆ ಗೆಳೆಯ ಕಣ್ಣೆದುರೇ ಮುಳುಗಿ ಕಣ್ಮರೆಯಾದಾಗ, ಜೊತೆಯಲ್ಲಿದ್ದ ಆ ಅಪ್ರಾಪ್ತ ಬಾಲಕರು ತೀವ್ರ ದಿಗ್ಭ್ರಮೆಗೊಳಗಾದರು. ಏನು ಮಾಡಬೇಕೆಂದು ತೋಚದೆ, ತೀವ್ರ ಭಯ ಮತ್ತು ಆಘಾತದಿಂದ ದಿಗಿಲುಬಿದ್ದು ಅಂದು ರಾತ್ರಿ ಶ್ರೇಯಸ್ನ ಪೋಷಕರಿಗೆ ವಿಷಯ ತಿಳಿಸಲಾಗದೆ ಮೌನಕ್ಕೆ ಶರಣಾದರು.
ಸೋಮವಾರ (ಅಕ್ಟೋಬರ್ 5) ಬೆಳಿಗ್ಗೆ ಶ್ರೇಯಸ್ನ ಮನೆಗೆ ತೆರಳಿ ಘಟನೆಯನ್ನು ವಿವರಿಸಿದಾಗ, ಹೆತ್ತವರ ಲೋಕವೇ ಒಮ್ಮೆಲೆ ಕತ್ತಲಾಗಿ ಹೋಯಿತು. ಮಗ ಹುಲಿವೇಷದ ಗೆಜ್ಜೆಯ ನಾದದೊಂದಿಗೆ ಮನೆಗೆ ಹಿಂತಿರುಗುತ್ತಾನೆ ಎಂದು ಕಾಯುತ್ತಿದ್ದ ತಂದೆ ಸೇಷಪ್ಪ ಅವರು, ಆಘಾತದಿಂದ ಕಣ್ಣೀರು ಹಾಕುತ್ತಾ ಪಣಂಬೂರು ಪೊಲೀಸ್ ಠಾಣೆಗೆ ಧಾವಿಸಿ ದೂರು ದಾಖಲಿಸಿದ್ದಾರೆ. ಕರಾವಳಿಯ ಹುಲಿವೇಷದ ಕೇಕೆಯ ನಡುವೆ, ಒಂದು ಸಣ್ಣ ಕನಸು ಸಮುದ್ರದ ಆಳದಲ್ಲಿ ಮೌನವಾಗಿ ನಿದ್ರಿಸಿದೆ. ಈ ಘಟನೆ ಇಡೀ ಊರನ್ನೇ ಕಣ್ಣೀರಲ್ಲಿ ಮುಳುಗಿಸಿದೆ.
ಎಲ್ಲ ಠಾಣೆಗಳಿಗೆ ತುರ್ತು ಮಾಹಿತಿ ರವಾನೆ:ಪೋಷಕರ ದೂರಿನನ್ವಯ ಪಣಂಬೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ. 127/2026, ‘ಮನುಷ್ಯ ಕಾಣೆ’ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸಮುದ್ರದಲ್ಲಿ ಮುಳುಗಿರುವ ಬಾಲಕನ ಪತ್ತೆಗಾಗಿ ಭಾರತೀಯ ಕರಾವಳಿ ಕಾವಲು ಪಡೆ , ಕರಾವಳಿ ಭದ್ರತಾ ಪಡೆ ಹಾಗೂ ಕರಾವಳಿ ವ್ಯಾಪ್ತಿಯ ಎಲ್ಲ ಪೊಲೀಸ್ ಠಾಣೆಗಳಿಗೆ ತುರ್ತು ಮಾಹಿತಿ ರವಾನಿಸಲಾಗಿದೆ.
ಲೈಫ್ಗಾರ್ಡ್ ಸಿಬ್ಬಂದಿ, ಮುಳುಗು ತಜ್ಞರು ಹಾಗೂ ಸ್ಥಳೀಯ ಸಾಂಪ್ರದಾಯಿಕ ಮೀನುಗಾರರ ನೆರವಿನೊಂದಿಗೆ ಸಮುದ್ರದಲ್ಲಿ ತೀವ್ರ ಶೋಧ ಕಾರ್ಯ ಮುಂದುವರಿದಿದೆ.

