ಕಾರ್ಕಳ(ಕುಲಾಲ ವರ್ಲ್ಡ್ ಡಾಟ್ ಕಾಮ್): ನಿಟ್ಟೆಯಲ್ಲಿ ಸಂಭವಿಸಿದ ಆ ಕರಾಳ ಘಟನೆಯು ಕೇವಲ ಒಂದು ಅಪಘಾತವಲ್ಲ, ಅದು ವಿಧಿಯ ಕ್ರೂರ ಆಟದ ಪರಮಾವಧಿ. ಒಬ್ಬ ತಂದೆ ತನ್ನ ಮಗಳ ಭವಿಷ್ಯಕ್ಕಾಗಿ ಹೆಣೆದಿದ್ದ ನೂರು ಕನಸುಗಳು, ಆ ಮಗಳು ತನ್ನ ಕಣ್ಣಲ್ಲಿ ತುಂಬಿಕೊಂಡಿದ್ದ ಬಣ್ಣ ಬಣ್ಣದ ಆಸೆಗಳು ಅಕ್ಷರಶಃ ರಸ್ತೆಯ ಮೇಲೆ ಹರಿದು ಹೋದ ರಕ್ತದೊಂದಿಗೆ ಮಣ್ಣಲ್ಲಿ ಮಣ್ಣಾಗಿ ಹೋಗಿವೆ. ಸಿಇಟಿ ಪರೀಕ್ಷೆಯನ್ನು ಮುಗಿಸಿ, ಭವಿಷ್ಯದ ದೊಡ್ಡ ಗುರಿಯತ್ತ ಹೆಜ್ಜೆ ಇಡಬೇಕಿದ್ದ ಪ್ರೇರಣಾ ಮತ್ತು ಮಗಳ ಯಶಸ್ಸಿನ ಹಾದಿಗೆ ಹೆಗಲಾಗಿದ್ದ ನವೀನ್ ಚಂದ್ರ ಮೂಲ್ಯ ಅವರ ಅಗಲಿಕೆ ಅರಗಿಸಿಕೊಳ್ಳಲಾಗದ ಸತ್ಯ.
ವರ್ಷಗಳ ಕಾಲ ಬಾಡಿಗೆ ಮನೆಯಲ್ಲಿ ಸಂಕಷ್ಟದ ದಿನಗಳನ್ನು ಕಳೆದಿದ್ದ ಬಜಕಳ ನವೀನ್ಚಂದ್ರ ಮೂಲ್ಯರ ಕುಟುಂಬ, ಜೀವಮಾನವಿಡೀ ಬೆವರನ್ನೇ ರಕ್ತದಂತೆ ಬಸಿದು ಗಳಿಸಿದ ಪ್ರತಿಯೊಂದು ಪೈಸೆಯನ್ನೂ ಒಟ್ಟುಗೂಡಿಸಿ ತಮ್ಮದೇ ಆದ ಒಂದು ಪುಟ್ಟ ಸುಂದರ ಮನೆಯನ್ನು ಕಟ್ಟಿಕೊಂಡಿತ್ತು. ಮೇ 6ರಂದು ನಡೆಯಬೇಕಿದ್ದ ಗೃಹಪ್ರವೇಶದ ಸಂಭ್ರಮಕ್ಕಾಗಿ ಮನೆ ಸಿದ್ದವಾಗಿತ್ತು, ಗೋಡೆಗಳ ಮೇಲೆ ಬಳಿದಿದ್ದ ಬಣ್ಣ ಇನ್ನೂ ಹಸಿಯಾಗಿಯೇ ಇತ್ತು. ಆದರೆ ಆ ಹೊಸ ಮನೆಯ ಹೊಸ್ತಿಲು ತುಳಿಯುವ ಮೊದಲೇ ಕಾಲಮೃತ್ಯು ಕಾರಿನ ರೂಪದಲ್ಲಿ ಬಂದು ಅಪ್ಪಳಿಸಿತು. ಮಗಳನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಬೇಕಿದ್ದ ತಂದೆ ಅರ್ಧ ಹಾದಿಯಲ್ಲೇ ಇಹಲೋಕ ತ್ಯಜಿಸಿದರೆ, ತಂದೆಯ ಮರಣದ ವಾರ್ತೆಯೂ ತಿಳಿಯದ ಮಗಳು ಐಸಿಯುನಲ್ಲಿ ಹೋರಾಡಿ ಕೊನೆಗೆ ತನ್ನ ಪ್ರೀತಿಯ ಅಪ್ಪನ ಹಾದಿಯನ್ನೇ ಹಿಡಿದಳು.
ಇಂದು ಆ ಹೊಸ ಮನೆ ಮೌನವಾಗಿ ನಿಂತಿದೆ; ಅಲ್ಲಿ ಕೆಲವೇ ದಿನಗಳಲ್ಲಿ ಸಂಭ್ರಮದ ದೀಪ ಬೆಳಗಬೇಕಿತ್ತು, ಹಬ್ಬದ ಅಡುಗೆಯ ಘಮ ಇರಬೇಕಿತ್ತು. ಆದರೆ ವಿಧಿಯ ಅಟ್ಟಹಾಸದಿಂದ ಅಲ್ಲಿಂದು ಕೇವಲ ಕಣ್ಣೀರು ಮತ್ತು ಆಕ್ರಂದನ ಮಾತ್ರ ಬಾಕಿ ಉಳಿದಿದೆ. ತನ್ನ ಬದುಕಿನ ಇಬ್ಬರು ಆಧಾರಸ್ತಂಭಗಳನ್ನು ಏಕಕಾಲದಲ್ಲಿ ಕಳೆದುಕೊಂಡ ಆ ತಾಯಿಯ ಸ್ಥಿತಿ ಹೃದಯವಿದ್ರಾವಕ. ಅಜಾಗರೂಕತೆಯ ಚಾಲನೆ ಎಂಬ ಮಹಾಪರಾಧಕ್ಕೆ ಒಂದು ಸುಂದರ ಸಂಸಾರ ಬಲಿಯಾಗಿರುವುದು ಇಡೀ ಸಮಾಜದ ಸಾಕ್ಷಿಪ್ರಜ್ಞೆಯನ್ನು ಕಲಕುತ್ತಿದೆ. ಮೋಜು ಮಸ್ತಿಯ ವಾಹನ ಚಾಲನೆಗೈದು ಸಂಸಾರವನ್ನು ಬಲಿಪಡೆದವರಿಗೆ ಕಠಿಣ ಶಿಕ್ಷೆಗೆ ಗುರಿಪಡಿಸುವ ಜೊತೆಗೆ ತಂದೆ-ಮಗಳ ಆತ್ಮಕ್ಕೆ ಚಿರಶಾಂತಿ ಸಿಗಲಿ ಮತ್ತು ಆ ದುರ್ದೈವಿ ತಾಯಿಗೆ ಈ ಮಹಾದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ನೀಡಲಿ ಎಂದು ಆಶಿಸೋಣ.



