ಬಾಗಲಕೋಟೆ(ಕುಲಾಲ ವರ್ಲ್ಡ್ ಡಾಟ್ ಕಾಮ್): ಜಿಲ್ಲೆಯ ಬಾದಾಮಿ ಪಟ್ಟಣದ ವೀರಪುಲಿಕೇಶಿ ವಿದ್ಯಾಸಂಸ್ಥೆಯ ಜಿ.ಎನ್. ಖೋತ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ ಪ್ರತಿಭಾವಂತ ವಿದ್ಯಾರ್ಥಿನಿ ಈಶ್ವರಿ ಹುಲ್ಲೂರ, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ 99.36 ಅಂಕಗಳನ್ನು ಗಳಿಸುವ ಮೂಲಕ ಇಡೀ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಹುಲ್ಲೂರ ಗ್ರಾಮದ ಹೆಮ್ಮೆಯ ಪುತ್ರಿಯಾದ ಈಶ್ವರಿ, ಬಸವರಾಜ ಕುಂಬಾರ ಹಾಗೂ ಪುಷ್ಪ ದಂಪತಿಯ ಸುಪುತ್ರಿಯಾಗಿದ್ದಾರೆ.
ಈ ಸಾಧನೆಯ ಕುರಿತು ಹರ್ಷ ವ್ಯಕ್ತಪಡಿಸಿರುವ ಈಶ್ವರಿ, “ಶಾಲೆಯಲ್ಲಿ ಶಿಕ್ಷಕರು ಹೇಳಿದ ಪಾಠಗಳನ್ನು ಏಕಾಗ್ರತೆಯಿಂದ ಆಲಿಸುತ್ತಿದ್ದೆ. ಮನೆಯಲ್ಲಿ ನಿರಂತರವಾಗಿ ಓದುತ್ತಿದ್ದೆ. ಯಾವುದೇ ಗೊಂದಲಗಳಿದ್ದರೂ ಶಿಕ್ಷಕರಿಂದ ಮಾರ್ಗದರ್ಶನ ಪಡೆಯುತ್ತಿದ್ದೆ, ಅವರು ಸದಾ ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಿದ್ದರು,” ಎಂದು ತನ್ನ ಯಶಸ್ಸಿನ ಗುಟ್ಟನ್ನು ಹಂಚಿಕೊಂಡಿದ್ದಾರೆ.
ವಿಶೇಷವೆಂದರೆ, ಯಾವುದೇ ಖಾಸಗಿ ಟ್ಯುಶನ್ ಪಡೆದುಕೊಳ್ಳದೆ, ಕೇವಲ ಶಾಲೆಯಲ್ಲಿ ಶಿಕ್ಷಕರು ನಡೆಸುತ್ತಿದ್ದ ವಿಶೇಷ ತರಗತಿಗಳ ಪ್ರಯೋಜನ ಪಡೆದು ಈ ಗರಿಷ್ಠ ಅಂಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಪುಸ್ತಕ ಪ್ರೇಮಿಯಾದ ಇವರು, ಮುಂದಿನ ದಿನಗಳಲ್ಲಿ ಪಿಯುಸಿಯಲ್ಲಿ ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಂಡು, ಭವಿಷ್ಯದಲ್ಲಿ ವೈದ್ಯೆಯಾಗಿ ಸಮಾಜ ಸೇವೆ ಮಾಡುವ ದೊಡ್ಡ ಗುರಿಯನ್ನು ಹೊಂದಿದ್ದಾರೆ.
ತಮ್ಮ ಮಗಳ ಐತಿಹಾಸಿಕ ಸಾಧನೆಯಿಂದ ಕೃಷಿ ಕೆಲಸ ಮಾಡುವ ತಂದೆ ಬಸವರಾಜ, ತಾಯಿ ಪುಷ್ಪ ಮತ್ತು ಅಜ್ಜ ಈರಪ್ಪ ಅವರು ಅತೀವ ಸಂತಸ ವ್ಯಕ್ತಪಡಿಸಿದ್ದು, “ಜಿಲ್ಲೆಗೆ ಪ್ರಥಮ ಸ್ಥಾನ ಬಂದಿರುವುದು ನಮಗೆ ಮಾತ್ರವಲ್ಲದೆ ಇಡೀ ಸಮುದಾಯಕ್ಕೆ ಹೆಮ್ಮೆಯ ವಿಷಯ” ಎಂದು ಹೆಮ್ಮೆಯಿಂದ ಹೇಳಿದ್ದಾರೆ.
ವಿದ್ಯಾರ್ಥಿನಿಯ ಸಾಧನೆಗೆ www.kulalaworld.com ವತಿಯಿಂದ ಶುಭಾಶಯಗಳು.

