ಕಲೆ ಎಂಬುದು ಎಲ್ಲರಿಗೂ ಸಿದ್ಧಿಸುವುದಿಲ್ಲ ಎಂಬುದಕ್ಕೆ ಇವರೇ ಸಾಕ್ಷಿ. ಇವರ ಚಿತ್ರಗಳನ್ನು ನೋಡಿದರೆ ಇದೇನು ಮಹಾ ನಾವು ಕೂಡ ಮಾಡುತ್ತೇವೆ ಎಂದುಕೊಳ್ಳಬಹುದು. ಆದರೆ ಅದನ್ನು ಪ್ರಯತ್ನಿಸಿದಾಗಲೇ ನಿಜಸ್ಥಿತಿ ಅರಿವಾಗುವುದು. ನಿರಂತರ ಪರಿಶ್ರಮ, ಶೃದ್ಧೆಯಿದ್ದರೆ ಮಾತ್ರ ಚಿತ್ರಕಲೆಯಲ್ಲಿ ಯಶಸ್ಸು ಗಳಿಸಬಹುದು. ತಮ್ಮ ಚಿತ್ರಗಳಲ್ಲೇ ಮೋಡಿ ಮಾಡುವ ಆ ಪ್ರತಿಭಾವಂತ ಯುವ ಚಿತ್ರಕಾರನ ಹೆಸರು ಸುರೇಶ್ ಕುಲಾಲ್.
ಸುರೇಶ್ ಕುಲಾಲ್ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಪೆಲತ್ತಿಜೆ ಎಂಬ ಸಣ್ಣ ಊರಿನಲ್ಲಿ ಅಪ್ಪು ಕುಲಾಲ್ -ಚಂದ್ರಾವತಿ ದಂಪತಿಗಳ ನಾಲ್ವರು ಮಕ್ಕಳಲ್ಲಿ ಕೊನೆಯವರು. ಇವರದು ಕಡು ಬಡತನದ ಕುಟುಂಬ. ಆದರೂ ಇವರ ಪ್ರತಿಭೆಗೆ ಇವು ಯಾವುದೂ ತೊಡಕಾಗಲಿಲ್ಲ.
ಸುರೇಶ್ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕಾನಂಗಿ ಹಾಗೂ ಹೈಸ್ಕೂಲ್ ವಿದ್ಯಾಭ್ಯಾಸವನ್ನು ಹಿರ್ಗಾನದಲ್ಲಿ ಪೂರೈಸಿ, ಉಡುಪಿಯ ಚಿತ್ರಕಲಾ ಶಾಲೆಯಲ್ಲಿ BVA (Bachelor of visual arts) ಪದವಿಯನ್ನು ಪೂರ್ಣಗೊಳಿಸಿದರು.ಇಲ್ಲಿ ಇವರು ಕ್ಯಾನ್ವಾಸ್ ಪೇಂಟಿಂಗ್, ಶೇಡಿಂಗ್, ವಾಟರ್ ಕಲರ್, ಮೈಸೂರ್ ಸ್ಟೈಲ್, ರಿಯಲಿಸ್ಟಿಕ್ ವರ್ಕ್ ,ವಾಲ್ ಪೇಂಟಿಂಗ್ ಮುಂತಾದ ಚಿತ್ರ ಕಲಾ ಪ್ರಕಾರಗಳನ್ನ ಅಭ್ಯಸಿಸಿದರು .ಇದರ ಜೊತೆಗೆ ಕ್ಲೇ ಮೋಲ್ಡ್ ನಲ್ಲಿ ಕೂಡ ಪರಿಣತಿ ಹೊಂದಿದ್ದಾರೆ.
ಸುರೇಶ್ ಕುಂಚದಲ್ಲಿ ಸುಮಾರು ಸಾವಿರದಷ್ಟು ಚಿತ್ರಗಳು ಅರಳಿವೆ. ರಾಜ್ಯದ ನಾನಾ ಕಡೆ ಚಿತ್ರಕಲಾ ಪ್ರದರ್ಶನಗಳಲ್ಲಿ ಭಾಗವಹಿಸಿ ಪ್ರತಿಭೆಯನ್ನು ಮೆರೆದಿರುವ ಅವರು, ಕುಂದಾಪುರ, ಉಡುಪಿ, ಹೈದರಾಬಾದ್, ಬೆಂಗಳೂರು, ಕಾರ್ಕಳ ಮುಂತಾದ ಕಡೆ ಪ್ರದರ್ಶನ ನಡೆಸಿರುತ್ತಾರೆ. ಕೊಂಕಣಿ ಸಾಹಿತ್ಯ ಅಕಾಡೆಮಿ ಇವರ ಪ್ರತಿಭೆಯನ್ನು ಮನಗಂಡು ಅವರ ಪಠ್ಯಪುಸ್ತಕಕ್ಕೆ ಆರ್ಟಿಸ್ಟ್ ಆಗಿ ನಿಯೋಜಿಸುವ ಮೂಲಕ ಪ್ರೋತ್ಸಾಹಿಸಿದ್ದಾರೆ . ಅಲ್ಲದೆ ಅಗ್ನಿಪಥ್ ನವದೆಹಲಿಯವರು ಮುಂಬಯಿಯಲ್ಲಿ ನಡೆಸಿದ ಸ್ಪರ್ಧೆಯಲ್ಲಿ ಕೂಡ ಸಿಲ್ವರ್ ಅವಾರ್ಡ್ ಪಡೆದಿರುತ್ತಾರೆ. ಇವರ ಕಲಾ ಪ್ರತಿಭೆಯನ್ನು ಗುರುತಿಸಿ ಜೆಸಿಐ , ಕಾರ್ಕಳ ಕುಲಾಲ ಸಂಘ ಗೌರವಿಸಿದೆ.
ಮರುಳು ಶಿಲ್ಪದಲ್ಲೂ ಪ್ರಾವಿಣ್ಯತೆ ಪಡೆದಿರುವ ಸುರೇಶ್ ಕುಲಾಲ್, ಮಲ್ಪೆ, ಮಣಿಪಾಲ್, ಕಾಪು ಮುಂತಾದ ಕಡೆ ಮರುಳು ಶಿಲ್ಪ ಪ್ರದರ್ಶನ ನೀಡಿದ್ದಾರೆ. ವೃತ್ತಿಯಲ್ಲಿ ಇವರು ಕಂಪೆನಿಯೊಂದರಲ್ಲಿ ಸೈಟ್ ಸುಪರ್ವೈಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಈ ರಂಗದಲ್ಲಿ ಪಳಗಲು ಸದಾವಕಾಶ ಹಾಗೂ ಪ್ರೋತ್ಸಾಹ ನೀಡಬೇಕಾದುದು ಕಲಾಭಿಮಾನಿಗಳಾದ ನಮ್ಮೆಲ್ಲರ ಕರ್ತವ್ಯವಾಗಿದೆ. ಹೀಗೆ ಪ್ರತಿಭಾ ರಂಗಕ್ಕೆ ತನ್ನದೇ ಆದ ಕೊಡುಗೆಗಳನ್ನು ನೀಡಲು ಶ್ರಮಿಸುವ ಸುರೇಶ್ ಕುಲಾಲ್ ಅವರ ಪ್ರಯತ್ನಗಳೆಲ್ಲವೂ ಸಫಲವಾಗಿ ಈತ ಮುಂದೆ ಕಲಾ ಸಾಧನೆಯ ಉತ್ತುಂಗದಲ್ಲಿ ಮೆರೆಯಲಿ ಎಂಬುದೇ ಈ ಅರಳು ಪ್ರತಿಭೆಗೊಂದು ನಮ್ಮ ಶುಭ ಹಾರೈಕೆ.
ಬರಹ : ಸಂತೋಷ್ ಕುಲಾಲ್ ಪದವು







