ಮಳೆಗಾಲ ಮುಗಿದು ಚಳಿಗಾಲ ಆರಂಭವಾದೊಡನೆ ಕರಾವಳಿಯ ಎಲ್ಲೆಂದರಲ್ಲಿ ಮೊಳಗುವುದು ಯಕ್ಷಗಾನದ ಪದ, ತಾಳ, ಹೆಜ್ಜೆ, ಚೆಂಡೆಯ ಸದ್ದು. ವೇಷಭೂಷಣ, ಅಭಿನಯ, ಪದ ಮಾತುಗಾರಿಕೆಯಲ್ಲೇ ಅದ್ಭುತಲೋಕ ಸೃಷ್ಟಿಸುವ ಜೊತೆಗೆ, ಕರಾವಳಿಯ ಸಂಸ್ಕೃತಿಯನ್ನು ಮಡಿಲಲ್ಲಿಟ್ಟುಕೊಂಡು ಬೆಳೆದ ಯಕ್ಷಗಾನಕ್ಕೆ ಮಾರುಹೋಗದ ಜನ ಬಹಳ ವಿರಳ. ಯಕ್ಷಗಾನದ ಸೊಬಗೇ ಅಂಥದ್ದು. ಹೀಗೆ ಚಿಕ್ಕಂದಿನಲ್ಲೇ ಅಲ್ಲಲ್ಲಿ ನಡೆಯುತ್ತಿದ್ದ ಯಕ್ಷಗಾನವನ್ನು ವೀಕ್ಷಿಸಿ ಪುಳಕಿತಗೊಂಡ ಹುಡುಗನೊಬ್ಬ ಅದರೆಡೆಗೆ ಆಕರ್ಷಿತನಾಗಿ ಇಂದು ಈ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸುತ್ತಿದ್ದಾನೆ. ಆತನೇ ತಮ್ಮ ಅಭಿಮಾನಿಗಳಿಂದ `ಯಕ್ಷಲೋಕದ ಮನ್ಮಥ’ ಎಂದು ಕರೆಸಿಕೊಳ್ಳುವ ಯುವ ಕಲಾವಿದ ಶಶಿಧರ್ ಕುಲಾಲ್ ಕನ್ಯಾನ.
ಪ್ರಸ್ತುತ ಪ್ರಸಿದ್ಧ ಎಡನೀರು ಮೇಳದಲ್ಲಿ ಪ್ರಧಾನ ವೇಷಧಾರಿಯಾಗಿರುವ ೨೯ ವರ್ಷದ ಪ್ರಾಯದ ಶಶಿಧರ್ ಕುಲಾಲ್ ಅವರು, ಬಂಟ್ವಾಳ ತಾಲೂಕಿನ ಕನ್ಯಾನ ನಂದರಬೆಟ್ಟು ಕೃಷ್ಣಪ್ಪ ಮೂಲ್ಯ- ಸುಂದರಿ ದಂಪತಿಯ ಸುಪುತ್ರ. ಪಿಯೂಸಿವರೆಗೆ ಕಲಿತು ಬಳಿಕ ಶಿಕ್ಷಣಕ್ಕೆ ಗುಡ್ ಬೈ ಹೇಳಿದ ಶಶಿ, ಪ್ರಾಥಮಿಕ ಶಿಕ್ಷಣ ಪಡೆಯುತ್ತಿರುವಾಗಲೇ ಯಕ್ಷಗಾನದ ಗೀಳನ್ನು ಅಂಟಿಸಿಕೊಂಡರು. ಏಳನೇ ತರಗತಿಯಲ್ಲಿರುವಾಗ ಪೆರ್ಲದ ಶ್ರೀ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ ಯಕ್ಷಗುರು ಸುಬ್ಬಣ್ಣಕೋಡಿ ರಾಮ ಭಟ್ ಅವರಿಂದ ಪ್ರಾಥಮಿಕ ತಾಳ, ಹೆಜ್ಜೆ ಅಭ್ಯಾಸ ಮಾಡಿದರು.
ಆ ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳ ಯಕ್ಷಗಾನ ತರಬೇತಿ ಕೇಂದ್ರದಲ್ಲಿ ತೆಂಕುತಿಟ್ಟು ಪರಂಪರೆಯ ಕಲಾವಿದ ದಿವಾಣ ಶಿವಶಂಕರ ಭಟ್ ಅವರಿಂದ ಹೆಚ್ಚಿನ ನಾಟ್ಯಾಭ್ಯಾಸ ನಡೆಸಿ, ಈ ಕಲೆಯಲ್ಲಿ ಪಳಗಿದರು. ಎಲ್ಲ ರೀತಿಯ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಬಲ್ಲ ನೈಪುಣ್ಯತೆ ಇರುವ ಶಶಿ ಕುಲಾಲ್, ಶ್ರೀ ಕ್ಷೇತ್ರ ಧರ್ಮಸ್ಥಳ ಮೇಳಕ್ಕೆ ಸೇರ್ಪಡೆಗೊಂಡು ವೃತ್ತಿ ಜೀವನ ಆರಂಭಿಸಿ, ಐದು ವರ್ಷ ತಿರುಗಾಟ ನಡೆಸಿದರು. ಆ ಬಳಿಕ ಕಾಸರಗೋಡು ಎಡನೀರು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಮಂಡಳಿ ಮೇಳಕ್ಕೆ ಸೇರಿ, ಕಳೆದ ಐದು ವರ್ಷಗಳಿಂದ ಇಲ್ಲಿ ಪ್ರಧಾನ ವೇಷಧಾರಿಯಾಗಿ ಗುರುತಿಸಿಕೊಂಡಿದ್ದಾರೆ.
ಶಶಿ ಅವರು ದೇಶದಲ್ಲಿ ಮಾತ್ರವಲ್ಲದೆ ದುಬೈ , ಅಬುದಾಬಿ, ಬೆಹರೈನ್, ಕುವೈಟ್, ಮಸ್ಕತ್ ಗೂ ತೆರಳಿ ಕಲಾ ಪ್ರೌಡ್ಹಿಮೆಯನ್ನು ಮೆರೆದು, ಅಲ್ಲಿಯ ಕಲಾಭಿಮಾನಿಗಳ ಮನಸೂರೆಗೊಳಿಸಿದ್ದಾರೆ. ಅವರ ಪ್ರತಿಭೆಯನ್ನು ಗುರುತಿಸಿ ಯಕ್ಷಗಾನ ಕಲಾ ಕೇಂದ್ರ ಉರ್ವ, ಒಡಿಯೂರು ಸಂಸ್ಥಾನ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿದೆ. ಪ್ರಸ್ತುತ ಕರ್ನಾಟಕ ಬ್ಯಾಂಕ್ ನಲ್ಲಿ ಉದ್ಯೋಗದಲ್ಲಿದ್ದರೂ ತಮ್ಮ ಕಲಾ ಸೇವೆಯನ್ನು ಮುಂದುವರಿಸಿದ್ದಾರೆ.
ಅಭಿಮನ್ಯು, ಮನ್ಮಥ, ಬಬ್ರುವಾಹನ, ಚಂಡ-ಮುಂಡರು, ಕಿರಾತ, ವಾಸುದೇವ, ಲಕ್ಷ್ಮಣ, ಅಶ್ವತ್ಥಾಮ ಮುಂತಾದ ಲವಲವಿಕೆಯ ಪ್ರಮುಖ ಪಾತ್ರಗಳಿಗೆ ಜೀವ ತುಂಬುವ ಮೂಲಕ ತಮ್ಮ ಅದ್ಭುತ ನಾಟ್ಯ- ಮಾತುಗಾರಿಕೆಯ ಮೂಲಕ ಜನಮನ ರಂಜಿಸುವಲ್ಲಿ ಯಶಸ್ವಿಯಾಗಿರುವ ಶಶಿ ಕುಲಾಲ್ , ಈ ಕ್ಷೇತ್ರದಲ್ಲೇ ನೈಪುಣ್ಯತೆ ಸಾಧಿಸಿ, ರಾಜ್ಯ ಗುರುತಿಸುವ ಕಲಾವಿದನಾಗಬೇಕೆಂಬ ಹೆಬ್ಬಯಕೆ ಹೊಂದಿದ್ದಾರೆ. ಶಶಿಯಂಥ ಯಕ್ಷಗಾನದ ಅಸಾಮಾನ್ಯ ಯುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕಿದೆ.
ಬರಹ : ದಿನೇಶ್ ಬಿ. ಐ