ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಇನ್ನೂ 21ರ ಹರೆಯದಲ್ಲಿರುವ ಶರತ್ ಕುಲಾಲ್ ಕುಳಾಯಿ ರಾಷ್ಟ್ರಮಟ್ಟದ ಚಿತ್ರ ಕಲಾವಿದ. ವಾಟರ್ ಕಲರ್ , ಆಯಿಲ್ ಕಲರ್, ಅಕ್ರಲಿಕ್ , ಡೈಫೇಸಲ್ , ಕೊಲಾಜ್ , ಚಾರ್ ಕೋಲ್ , ಇಂಟರಾಕ್ಟಿವ್ ಸೊಲ್ಯೂಶನ್ , ಪೆನ್ಸಿಲ್ ಮೊದಲಾದ ಕಲಾ ಪ್ರಕಾರಗಳು ಇವರಿಗೆ ಕರಗತ.
2008-09ರಲ್ಲಿ ಉಜ್ಜೈನಿಯಲ್ಲಿ ಮಾನವ ಸಂಕೇತ ಅಕಾಡೆಮಿ ವತಿಯಿಂದ ವಿದ್ಯಾರ್ಥಿಗಳಿಗೆ ನಡೆದ ರಾಷ್ಟ್ರಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಇವರು , 2009-10ರಲ್ಲಿ ಇದೇ ಸಂಸ್ಥೆಯ ವತಿಯಿಂದ ನಡೆದ ರಾಷ್ಟ್ರ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಪಡೆದಿದ್ದಾರೆ. 2013ರಲ್ಲಿ ದೆಹಲಿಯ ಫ್ಯೂಷನ್ ಆರ್ಟ್ ಗ್ಯಾಲರಿ ವತಿಯಿಂದ ಎಂ . ಎಫ್ ಹುಸೇನ್ ಆರ್ಟ್ ಗ್ಯಾಲರಿಯಲ್ಲಿ ನಡೆದ ರಾಷ್ಟ್ರ ಮಟ್ಟದ ಚಿತ್ರಕಲಾ ಸ್ಪರ್ಧೆಯ ವೃತ್ತಿಪರ ವಿಭಾಗದಲ್ಲಿ ದ್ವಿತೀಯ ಬಹುಮಾನ ಪಡೆದ ಹೆಗ್ಗಳಿಕೆ ಇವರಿಗಿದೆ.
10 ನೇ ತರಗತಿಯವರೆಗೆ ಸುರತ್ಕಲ್ ವಿದ್ಯಾದಾಯಿನಿ ಪ್ರೌಢ ಶಾಲೆಯಲ್ಲಿ ಅಧ್ಯಯನ ನಡೆಸಿ ಶಾಲೆಯ ಚಿತ್ರಕಲಾ ಶಿಕ್ಷಕಿ ಮನೋರಂಜನಿ ರಾವ್ ಅವರ ಮಾರ್ಗದರ್ಶನದಲ್ಲಿ ಮಂಗಳೂರಿನ ಮಹಾಲಸಾ ಚಿತ್ರಕಲಾ ಸಂಸ್ಥೆಯಲ್ಲಿ ಬಿವಿಎ ಪದವಿ ಅಧ್ಯಯನ ನಡೆಸಿದರು. ಅಲ್ಲಿನ ಗುರು ಎನ್ .ಎಸ್ ಪತ್ತಾರ್ ಅವರ ಮಾರ್ಗದರ್ಶನದಲ್ಲಿ ಬೆಳೆದರು.
ಪ್ರಸ್ತುತ ಶರತ್ ಕುಲಾಲ್ ಮಂಗಳೂರು ಬಲ್ಲಾಳ್ ಭಾಗ್ ನ ಐ ಪಾಯಿಂಟ್ ಇಂಟರಾಕ್ಟಿವ್ ಎಂಬ ಲರ್ನಿಂಗ್ ಕಂಪನಿಯಲ್ಲಿ ಗ್ರಾಫಿಕ್ ಡಿಸೈನರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.