ಬಡತನದ ಬೇಗೆಯಿಂದ ದಿಕ್ಕು ತೋಚದೆ ಕಣ್ಣೀರು ಸುರಿಸುತ್ತಿರುವ ಕುಟುಂಬ!
ಕಾರ್ಕಳ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಒಂದು ಕಡೆ ಕಿತ್ತು ತಿನ್ನುವ ಬಡತನ, ಮತ್ತೊಂದೆಡೆ ಜೀವ ಹಿಂಡುತ್ತಿರುವ ಕಿಡ್ನಿ ವೈಫಲ್ಯ. ಇನ್ನೊಂದೆಡೆ ಗಂಡನ ಅಕಾಲಿಕವಾಗಿ ಪತಿಯ ಕಳೆದುಕೊಂಡ ದುಃಖ. ಈ ಎಲ್ಲಾ ಸಂಕಷ್ಟದ ನಡುವೆ ಶಾಲೆ ಕಲಿಯುತ್ತಿರುವ ಇಬ್ಬರು ಮಕ್ಕಳ ಪೋಷಣೆಯ ಹೊಣೆ ಹೊತ್ತು ಬಸವಳಿದು ಸೋತು ಹೋಗಿರುವ ತಾಯಿಯೊಬ್ಬಳ ಕುಟುಂಬದ ಕರುಣಾಜನಕ ಕಣ್ಣೀರ ಕಥೆ..
ಹೌದು ಇಲ್ಲಿ ಹೇಳುತ್ತಾ ಇರುವುದು ಕಾರ್ಕಳ ತಾಲೂಕಿನ ಅಜೆಕಾರು ಸಮೀಪದ ಎಣ್ಣೆಹೊಳೆ ಕೈಕಂಬದ ದಿವಂಗತ ಶೇಖರ ಮೂಲ್ಯ ಅವರ ಪತ್ನಿ ಸಂಧ್ಯಾ ಅವರ ನೋವಿನ ಕಥೆ. ಇವರು ಇಬ್ಬರು ಗಂಡು ಮಕ್ಕಳನ್ನು ಬೆಳೆಸಿ ವಿದ್ಯಾಭ್ಯಾಸ ಕೊಡಿಸಿ ಸುಂದರ ಬದುಕಿನ ಕನಸು ಕಂಡಿದ್ದರು. ಬದುಕು ನಿರ್ವಹಣೆಗಾಗಿ ಸಣ್ಣ ಹೋಟೆಲ್ ಉದ್ಯಮ ಆರಂಬಿಸುವ ಎಲ್ಲಾ ತಯಾರಿ ನಡೆಸಿ ಇನ್ನೇನು ಆರಂಭಿಸಬೇಕು ಅನ್ನುವಷ್ಟರಲ್ಲಿ ಅದ್ಯಾವ ಕೆಟ್ಟ ದೃಷ್ಟಿಯ ಫಲವೋ ಇದ್ದಕ್ಕಿದ್ದಂತೆ ಶೇಖರ್ ಮೂಲ್ಯರು ನಿಗೂಢವಾಗಿ ಆತ್ಮಹತ್ಯೆಗೆ ಶರಣಾಗುತ್ತಾರೆ. ನುಚ್ಚು ನೂರಾದ ಕನಸಿನಿಂದ ಮತೊಮ್ಮೆ ಬದುಕು ಕಟ್ಟುವ ಛಲದೊಂದಿಗೆ ಬೀಡಿ ಕಟ್ಟಿ ದುಡಿದು ತನ್ನ ಇಬ್ಬರು ಗಂಡುಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ಹೆಣಗಾಡುತ್ತಾರೆ. ಫಲವಾಗಿ ತನ್ನ ಹಿರಿಮಗ ಕಂಪ್ಯೂಟರ್ ವಿಜ್ಞಾನ ವಿಭಾಗದಲ್ಲಿ ಕಲಿಯುತ್ತಿದ್ದು, ಕಿರಿಯವ ಹೈಸ್ಕೂಲ್ ವಿದ್ಯಾರ್ಥಿ. ಇನ್ನೇನು ಮಕ್ಕಳನ್ನು ಹೇಗಾದರೂ ಮಾಡಿ ಸಾಕುತ್ತೇನೆ ಎಂಬ ವಿಶ್ವಾಸದಿಂದ ಇರುವಷ್ಟರಲ್ಲೇ ಅನಾರೋಗ್ಯಕ್ಕೆ ತುತ್ತಾಗಿ ಪರೀಕ್ಷೆ ಮಾಡಿಸಿದಾಗ ತಾನು ಭೀಕರ ಕಿಡ್ನಿ ಕಾಯಿಲೆಗೆ ಗುರಿಯಾಗಿದ್ದೇನೆ ಅನ್ನುವ ಅಘಾತಕಾರಿ ಅಂಶ ಸಂಧ್ಯಾಗೆ ತಿಳಿಯುತ್ತದೆ. ಅವರ ಎರಡೂ ಕಿಡ್ನಿ ವೈಫಲ್ಯ ಆಗಿರುವ ವಿಷಯ ತಿಳಿದು, ಬರಸಿಡಿಲು ಬಡಿದಂತಾಗಿದೆ. ಕೂಡಿಟ್ಟ ಹಣ, ಒಡವೆ ಎಲ್ಲ ಮಾರಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಕಿಡ್ನಿ ಕಸಿ ಮಾಡಿಸದಿದ್ದರೆ ಸಂಧ್ಯಾ ಅವರು ಬದುಕುವುದೇ ಕಷ್ಟ ಎಂದು ವೈದ್ಯರು ಹೇಳಿದ್ದಾರೆ. ಆಕೆಯ ಆರೋಗ್ಯ ಕಾಪಾಡುವುದರ ಜೊತೆಗೆ ಮಕ್ಕಳ ಪೋಷಣೆ ಆಸ್ಪತ್ರೆ ಖರ್ಚು, ಚಿಕಿತ್ಸೆಗೆ ಹಣವಿಲ್ಲದೇ ಪರದಾಡುವಂತಾಗಿದೆ. ಪುಟ್ಟ ಮನೆಯಲ್ಲಿ ಬೀಡಿ ಕಟ್ಟಿ ಬರುವ ಸಣ್ಣ ಮೊತ್ತದಿಂದ ಕಷ್ಟದಲ್ಲೇ ಬದುಕು ಕಟ್ಟಿಕೊಂಡಿರುವ ಇವರು ಯಾರಾದರೂ ತನ್ನ ನೆರವಿಗೆ ಧಾವಿಸಿಯಾರೇ ಎಂದು ಆಸೆ ಕಂಗಳಿಂದ ಕಾಯುತ್ತಿದ್ದಾರೆ . ಈ ಬಡ ಕುಟುಂಬಕ್ಕೆ ಮಾನವೀಯತೆ ಮೆರೆಯುವ ಜೀವಗಳಿಂದ ಸಹಾಯಹಸ್ತ ಬೇಕಾಗಿದೆ. ಸಮಾಜದ ಬಂಧುಗಳು ಮಾನವೀಯ ನೆಲೆಯಲ್ಲಿ ತಮ್ಮಿಂದಾಗುವ ಧನ ಸಹಾಯವನ್ನು ಮಾಡಿದ್ದಲ್ಲಿ ಡಯಾಲಿಸಿಸ್ ಮಾಡಿಸಿ ಮುಂದಿನ ಚಿಕಿತ್ಸೆ ಕೊಡಿಸಲು ಸಾಧ್ಯ. ಸಂಧ್ಯಾ ಅವರಿಗೆ ಆರ್ಥಿಕ ನೆರವು ನೀಡುವ ದಾನಿಗಳು ಅಥವಾ ಸಂಘ ಸಂಸ್ಥೆಗಳು ಈ ಕೆಳಗಿನ ಬ್ಯಾಂಕ್ ಖಾತೆಗೆ ಹಣ ಸಹಾಯ ಮಾಡಬಹುದು.