ರಂಗಭೂಮಿಯೆಂದರೆ ‘ಅನಕ್ಷರಸ್ಥರ ವಿಶ್ವವಿದ್ಯಾಲಯ’ ಇದ್ದಂತೆ. ಅಕ್ಷರಸ್ಥರು ತಮಗೆ ಬೇಕಾದ್ದನ್ನು ಓದಿಯೇ ತಿಳಿದುಕೊಳ್ಳಬಹುದು. ರಾಮಾಯಣ, ಮಹಾಭಾರತ ಇತ್ಯಾದಿ ನಮ್ಮ ಸಂಸ್ಕೃತಿಯ ಸಾರವುಳ್ಳ ದೊಡ್ಡದೊಡ್ಡ ಕೃತಿಗಳನ್ನು ಓದಿ ಅರಿಯಲು ಅವಕಾಶ ಇಲ್ಲದವರೂ ನಾಟಕ, ಬಯಲಾಟ, ಯಕ್ಷಗಾನ… ಇತ್ಯಾದಿ ಸ್ಥಳೀಯ, ಜಾನಪದೀಯ ಕಲೆಗಳನ್ನು ನೋಡುವ, ಪ್ರತ್ಯಕ್ಷ ಆಡುವ ಮೂಲಕ ಮೈಗೂಡಿಸಿಕೊಳ್ಳುತ್ತಾರೆ. ಹಾಗಾಗಿಯೇ ದೇಶ ವ್ಯಾಪಿಯಾಗಿ ನಮ್ಮ ಮೌಲ್ಯಗಳನ್ನು ಕಾಣುತ್ತೇವೆ. ಹೊಸ ರೂಪ ನೀಡುವ ಪ್ರಯತ್ನ ರಂಗಭೂಮಿಯಲ್ಲಿ ನಡೆಯುತ್ತಿರುತ್ತದೆ. ಗುಬ್ಬಿ ವೀರಣ್ಣನವರಂಥ ರಂಗ – ಚಿತ್ರರಂಗ ಇತ್ಯಾದಿಗಳ ಮೂಲ ಪುರುಷರು (ಓದಿದ್ದು 3ನೇ ತರಗತಿ!) ತಮ್ಮ ಜನ ಪ್ರೀತಿಯಿಂದಾಗಿಯೇ ರಂಗಭೂಮಿಯನ್ನೇ ದೊಡ್ಡ ಉದ್ದಿಮೆಯನ್ನಾಗಿಸಿ, ಸಂಘಟನಾ ಕುಶಲರಾಗಿ ಊರಿಂದೂರಿಗೆ ಹೋಗಿ ಜನಶಿಕ್ಷಣ ನೀಡಿದ್ದು ಸದಾ ಸ್ಮರಣೀಯ.
1960ರ ನಂತರ ರಂಗಭೂಮಿ ಶಿಕ್ಷಣ ವ್ಯವಸ್ಥೆಯೇ ರೂಪುಗೊಂಡು ಹೆಚ್ಚೆಚ್ಚು ಕಲಾವಿದರು ಹೊರಬರುತ್ತಿದ್ದಾರೆ. ಸೈದ್ಧಾಂತಿಕ ನೆಲೆ ಸಿಗುತ್ತಿದೆ. ವಿವಿಧ ಪ್ರಕಾರದ (ನಟನೆ, ಹಾಡುಗಾರಿಕೆ, ಬಣ್ಣ, ನೃತ್ಯ…) ಪ್ರಶಿಕ್ಷಣ ದೊರೆಯುತ್ತಿದೆ. ಹೀಗೆ ತಿಳಿವಳಿಕೆ ನೀಡಬಲ್ಲ, ಬದುಕನ್ನೇ ಬದಲಿಸಬಲ್ಲ ಅತ್ಯುತ್ತಮ ಸಂವಹನ ಮಾಧ್ಯಮ ರಂಗಭೂಮಿ.
ಉಳಿದ ಕಲೆಗಳಿರುವಂತಹ ಕಟ್ಟುಪಾಡುಗಳು ಆಡುವವರಿಗಿಲ್ಲ – ಪೂರ್ವಜ್ಞಾನದ ಅವಶ್ಯಕತೆ ನೋಡುಗರಿಗಿಲ್ಲ. ನಮ್ಮದೇ ಭಾವನೆಗಳನ್ನೇ ವಿವಿಧ ಪಾತ್ರಗಳ ಮೂಲಕ ನಾಟಕದಲ್ಲಿ ಕಂಡು ನಮ್ಮ ಬದುಕಿಗೆ ಹೊಂದಿಸಿಕೊಂಡು ಸುಖ – ದುಃಖಗಳನ್ನು ಅನುಭವಿಸುವ ವಿಶೇಷ ಕಲೆ ‘ನಾಟಕ’. ನೇರವಾಗಿ ಕೊಡು-ಕೊಳ್ಳುವಿಕೆಯ ಭಾವನೆಗಳ ವಿನಿಮಯ ಪ್ರಕ್ರಿಯೆಯಿಂದಾಗಿ ಜನಶಿಕ್ಷಣಕ್ಕೆ ಸಹಜ ಸುಲಭ. ನಾಟ್ಯ ಶಾಸ್ತ್ರದಲ್ಲಿ ಹೇಳಿರುವಂತೆ ‘ರಂಜನೆಯ ಮೂಲಕ ತಿಳಿವಳಿಕೆ ನೀಡುವುದೇ ನಾಟಕ’.
ಇಂಥ ರಂಗಭೂಮಿಯನ್ನೇ ನಂಬಿ ಕಳೆದ ನಾಲ್ಕು ದಶಕಗಳಿಂದ ‘ನಾಟಕ’ವನ್ನೇ ಉಸಿರಾಗಿಸಿಕೊಂಡವರು ಮಂಡ್ಯದ ಮುದ್ದೂರು ತಾಲೂಕು ಗುರುದೇವರಹಳ್ಳಿ ಗ್ರಾಮದವರಾದ ಸಿದ್ದರಾಜು. ಕುಂಬಾರ ಸಮುದಾಯದವರಾದ ಇವರು ಹುಟ್ಟಿದ್ದು 1952 ಮಾರ್ಚ್ 16. ಅಪ್ಪಟ ಗ್ರಾಮೀಣ ಪ್ರತಿಭೆ. ಬದುಕಿಗಾಗಿ ತಮ್ಮ ೮ನೆ ವಯಸ್ಸಿನಲ್ಲಿಯೇ ಟೈಲರಿಂಗ್ ವೃತ್ತಿಯನ್ನು ಆರಂಭಿಸಿದರೂ 12ನೇ ವಯಸ್ಸಿನಲ್ಲಿ ಬಣ್ಣ ಹಚ್ಚಿ ರಂಗಭೂಮಿಗೆ ತಮ್ಮನ್ನು ಸಮರ್ಪಿಸಿಕೊಂಡರು.
ಡ್ರಾಮಾ ಮಾಸ್ಟರ್ ಆದ ತಂದೆ ಮರಿಶೆಟ್ಟರ ಪ್ರಭಾವದಿಂದ ಕಳೆದ 35 ವರ್ಷಗಳಿಂದ ನಿರಂತರವಾಗಿ ರಂಗಭೂಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪಾತ್ರಗಳ ಪರಕಾಯ ಪ್ರವೇಶದ ಮೂಲಕ ರಂಗಭೂಮಿಯ ಪ್ರತಿಭಾವಂತ ಕಲಾವಿದರಾಗಿರುವ ಇವರು ಈವರೆಗೆ 150ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ.
ರಾಜ್ಯ ಪ್ರಶಸ್ತಿಗೆ ಆಗ್ರಹ
ಜಿ.ಎಂ.ಸಿದ್ದರಾಜು ರಾಷ್ಟ್ರ ಹಾಗೂ ರಾಜ್ಯಗಳಲ್ಲಿ ತಮ್ಮ ಪ್ರತಿಭೆಗಾಗಿ ಅನೇಕ ಪ್ರಶಸ್ತಿಗಳನ್ನು ಗಳಿಸಿದ್ದು ಇವರಿಗೆ ರಾಜ್ಯ ಪ್ರಶಸ್ತಿ ನೀಡುವಂತೆ ಕರ್ನಾಟಕ ರಾಜ್ಯ ಕುಂಬಾರರ ಮಹಾ ಮಂಡಳಿ ಒತ್ತಾಯಿಸಿದೆ. ಕರ್ನಾಟಕ ರಾಜ್ಯ ಕುಂಬಾರರ ಮಹಾಮಂಡಳಿ ರಾಜ್ಯಾಧ್ಯಕ್ಷ ಎಸ್.ಡಿ. ನಾಗರಾಜು ಅವರು, ಜಿ.ಎಂ.ಸಿದ್ದರಾಜು ಕುಂಬಾರರ ಸಮುದಾಯಕ್ಕೆ ಸೇರಿದವರಾಗಿದ್ದು ತಮ್ಮ ಪ್ರತಿಭೆಯಿಂದ ರಾಜ್ಯಕ್ಕೆ ಉತ್ತಮ ಕೊಡುಗೆ ನೀಡುತ್ತಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ಇಂತಹ ಪ್ರತಿಭೆಯನ್ನು ಗುರ್ತಿಸಿ ರಾಜ್ಯ ಪ್ರಶಸ್ತಿಯನ್ನು ನೀಡಬೇಕೆಂದು ತಿಳಿಸಿದ್ದಾರೆ.


