ಹಿಂದೆ ಅಡಿಗೆಯ ಮನೆಯಲ್ಲಿ ‘ಒಂಟಿಪೊಯ್ಯಿ’ (ಕುಂಬಾರೊಲೆ) ಮತ್ತು ದೇಸಿಯವಾಗಿ ಸ್ವತಃ ಹುತ್ತದ ಮಣ್ಣು ಮತ್ತು ಇಟ್ಟಿಗೆಗಳನ್ನು ಬಳಸಿ ಹಾಕಿರುವ ಎರಡು ತೂತು ಒಲೆ ಇರುತ್ತಿತ್ತು. ಅಕ್ಕಿಯನ್ನಿಟ್ಟಿರುವ ‘ಗುಡುವ’ (ಗುಡಾಣ), ‘ಬಾನೆ’, ಹಿಟ್ಟು ಮಾಡಲು ಬಳಸಿವ ‘ಸಂಗಟಿಸಟ್ಟಿ’ (ಹಿಟ್ಟುಗೋಲು), ಅದರ ಮೇಲೆ ಮುಚ್ಚುವ ‘ಮೂಗಟಿ'(ಚಟ್ಣ), ಸಾರನ್ನು ಮಾಡಲು ಬಳಸುವ ‘ಸ್ಯಾರುಸಟ್ಟಿ’, (ಸಾರು ಮಡಿಕೆ) ಅದರ ಮೇಲೆ ಮುಚ್ಚುವ ‘ಮೂಗಟಿ’ (ಚಟ್ಣ), ಸ್ಯಾರನ್ನು ಬಸಿಯಲು ಬಳಸುವ ‘ಗಿದ್ದಿ'(ಕುಡಿಕೆ), ‘ಬೊಪ್ಪುಲು’.(ಮರಗಿ) ನೀರನ್ನು ಕುಡಿಯಲು ಉಪಯೋಗಿಸುವ ‘ಮುಂತುಲು’ (ಕುಡಿಕೆ), ನೀರನ್ನು ತುಂಬಿಡುತ್ತಿದ್ದ ‘ಗೆಡಿಗಲು’, ‘ಕಡವಲು'(ಕೊಡ/ಹರಿವೆ) ,ಹಾಲು ಕಡಿಯಲು ಬಳಸುತ್ತಿದ್ದ ‘ಪಾಲಸಟ್ಟಿ’ (ಹಾಲುಮಡಿಕೆ), ತುಪ್ಪವನ್ನು ಶೇಖರಿಸುತ್ತಿದ್ದ ‘ನೆಯ್ಯಿಮುಂತಾ’ (ತುಪ್ಪದ ಕುಡಿಕೆ), ಹಾಲನ್ನು ಕರೆಯಲು ಬಳಸುತ್ತಿದ್ದ ‘ಪಾಲಮುಂತ’ (ಹಾಲು ಕುಡಿಕೆ),ಅಡಿಗೆಯ ಪಾತ್ರೆಯಿಂದ ತೆಗೆದ ‘ಮಾಡುಗೋಕ’ (ಮುಸುರೆ) ನ್ನು ಹಾಕಲು ಅಲ್ಲೇ ಇಟ್ಟು ಕೊಂಡಿರುತ್ತಿದ್ದ ‘ಕುಡಿತಿಬಾನ’, ಅಕ್ಕಿಕಾಳುಗಳನ್ನು ಹಾಕಿಕೊಳ್ಳುವ ‘ದಂತುಲು’ (ಅರಕಲ ಗಡಿಗೆಗಳು) ಮತ್ತು ‘ಕುಮ್ಮರ ಗಾದುಲು’ (ಕುಂಬಾರ ವಾಡೆ ಕಣಜಗಳು) ಮುಂತಾದ ಮಣ್ಣಿನ ಪಾತ್ರೆ-ಪರಡಿಗಳು ಅಲ್ಲಿರುತ್ತಿದ್ದವು.
ನಡುಮನೆಯಲ್ಲಿ ”ದೀಗೂಡಿ’ನಲ್ಲಿ ‘ದೀಪಾಂತಿ’ಗಳು ಇರುತ್ತಿದ್ದವು. ಗುಡಿಸಿಲ್ಲು ಮತ್ತು ಸುಟ್ಟಿಲ್ಲುಗಳಲ್ಲಿ ಕುಂಬಾರವಾಡೆಗಳು ಅರಕಲ ಗಡಿಗೆಗಳೂ ಅಲ್ಲೆ ಜೋಡಿಸಿರುವುದುಂಟು.



