ಬೆಂಗಳೂರು(ನ.೦೨, ಕುಲಾಲ ವರ್ಲ್ಡ್ ಡಾಟ್ ಕಾಮ್) : ಅಖಿಲ ಕರ್ನಾಟಕ ಕುಂಭ ವೈದ್ಯರ ಒಕ್ಕೂಟದ ದಶಮಾನೋತ್ಸವ ಸಂಭ್ರಮ, ಸಾಧಕರಿಗೆ ಸನ್ಮಾನ ಹಾಗೂ ಕರ್ನಾಟಕ ರಾಜ್ಯೋತ್ಸವ ಆಚರಣೆಯನ್ನು ರಾಜಧಾನಿ ಬೆಂಗಳೂರಿನಲ್ಲಿ ಅತ್ಯಂತ ಅದ್ಧೂರಿಯಾಗಿ ನೆರವೇರಿಸಲಾಯಿತು.
ಸಂಘಟನೆಯ ಸ್ಥಾಪಕರೂ ಹಾಗೂ ಅಧ್ಯಕ್ಷರೂ ಆಗಿರುವ ಡಾ. ಅಣ್ಣಯ್ಯ ಕುಲಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಆಗಮಿಸಿದ್ದ ಸರ್ವರನ್ನೂ ಪ್ರೀತಿಯಿಂದ ಸ್ವಾಗತಿಸಿದರು. ಬಳಿಕ ಮಾತನಾಡಿದ ಅವರು, “ಕುಂಭ ವೈದ್ಯರ ಒಕ್ಕೂಟವು ರಾಜ್ಯದ ಸಮಾನ ಮನಸ್ಕ ಸಂಘಟನೆಗಳೊಂದಿಗೆ ಕೈಜೋಡಿಸಿ, ಕುಂಬಾರ ಸಮುದಾಯದ ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯ ಉನ್ನತಿಗಾಗಿ ಎಲ್ಲಾ ರೀತಿಯ ಸಕ್ರಿಯ ಪ್ರಯತ್ನಗಳನ್ನು ಮಾಡಲಿದೆ” ಎಂದು ತಿಳಿಸಿದರು. ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರನ್ನು ಪರಿಚಯಿಸಿ, ಗೌರವಿಸಿ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಡಾ. ಮಹೇಶ್ ಅವರು ಒಕ್ಕೂಟದ ಪರಿಷ್ಕೃತ ಬೈಲಾವನ್ನು ಸಭೆಯಲ್ಲಿ ಮಂಡಿಸಿ, ಸರ್ವಾನುಮತದ ಅನುಮೋದನೆ ಪಡೆದುಕೊಂಡರು. ಸಂಘಟನೆಯ ಆರಂಭದ ದಿನಗಳಿಂದಲೂ ಒಡನಾಡಿಯಾಗಿ ಸಹಕರಿಸಿದ್ದ ಅಖಿಲ ಭಾರತ ಕುಂಬಾರ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಶಿವಕುಮಾರ್ ಚೌಡ ಶೆಟ್ಟಿ ಅವರು ಸಾಧಕರನ್ನು ಸನ್ಮಾನಿಸಿ, ಸಂಸ್ಥೆಯ ಭವಿಷ್ಯದ ಕಾರ್ಯಕ್ರಮಗಳಿಗೆ ಶುಭ ಹಾರೈಸಿದರು.
ರಾಜಕೀಯ ಪ್ರಾತಿನಿಧ್ಯಕ್ಕಾಗಿ ರಾಷ್ಟ್ರಮಟ್ಟದ ಹೋರಾಟ:
ಕುಂಭ ವೈದ್ಯ ಕೂಟದ ಸಂಘಟನಾ ಕಾರ್ಯದರ್ಶಿ ಹಾಗೂ ಅಖಿಲ ಭಾರತ ಕುಂಬಾರ ಮಹಾಸಭಾದ ರಾಷ್ಟ್ರೀಯ ಯುವ ಅಧ್ಯಕ್ಷರಾದ ಡಾ. ನಾಗರಾಜ್ ಮಾತನಾಡಿ, “ಕರ್ನಾಟಕದಲ್ಲಿ ದೊಡ್ಡ ಪ್ರಮಾಣದಲ್ಲಿರುವ ಕುಂಬಾರ ಸಮುದಾಯದಲ್ಲಿ ರಾಜ್ಯಸಭೆ, ವಿಧಾನ ಪರಿಷತ್ ಹಾಗೂ ವಿಧಾನಸಭೆಗೆ ಆಯ್ಕೆಯಾಗುವ ಸಾಮರ್ಥ್ಯವಿರುವ ಸಾಕಷ್ಟು ನಾಯಕರಿದ್ದಾರೆ. ಆದರೆ ಪ್ರಮುಖ ರಾಜಕೀಯ ಪಕ್ಷಗಳು ಸಮುದಾಯಕ್ಕೆ ಸಾಮಾಜಿಕ ಹಾಗೂ ರಾಜಕೀಯ ನ್ಯಾಯ ಒದಗಿಸಲು ಹಿಂದೇಟು ಹಾಕುತ್ತಿವೆ. ಈ ಬಾರಿ ಬರೀ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಸೀಮಿತಗೊಳಿಸದೆ, ರಾಜ್ಯಸಭೆ, ವಿಧಾನ ಪರಿಷತ್, ಸಂಸದ ಹಾಗೂ ಶಾಸಕ ಸ್ಥಾನಗಳಿಗೂ ಕುಂಬಾರ ಸಮುದಾಯಕ್ಕೆ ಟಿಕೆಟ್ ನೀಡುವಂತೆ ಒತ್ತಾಯಿಸಿ ರಾಷ್ಟ್ರ ಮಟ್ಟದ ಹೋರಾಟ ರೂಪಿಸಲು ಸಿದ್ಧತೆ ನಡೆಸಲಾಗಿದೆ” ಎಂದು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಒಕ್ಕೂಟದ ಕೋಶಾಧಿಕಾರಿ ಡಾ. ರಾಜಶೇಖರ್, ಹಿರಿಯ ಸಲಹೆಗಾರರಾದ ಡಾ. ಸಾಗರ್ ಮೈಸೂರು, ಡಾ. ರಾಮಚಂದ್ರ, ಡಾ. ಮಂಜುನಾಥ್ ಶಿವಮೊಗ್ಗ, ಡಾ. ಪ್ರಕಾಶ್ ಮಲೇಷಿಯಾ, ಡಾ. ಗೋವಿಂದ ಶೆಟ್ಟಿ ಸೇರಿದಂತೆ ಇಡೀ ರಾಜ್ಯದ ಹಿರಿಯ-ಕಿರಿಯ ಮೆಡಿಕಲ್, ಡೆಂಟಲ್, ಆಯುರ್ವೇದ ಹಾಗೂ ಆಯುಷ್ ವೈದ್ಯರು ಉಪಸ್ಥಿತರಿದ್ದರು.
ಒಕ್ಕೂಟದ ಉಪಾಧ್ಯಕ್ಷರುಗಳಾದ ಡಾ. ಜಿ. ಬಿ. ಕುಂಭಾರ, ಡಾ. ಪೂರ್ಣಿಮಾ, ಡಾ. ಪದ್ಮಾವತಿ, ಡಾ. ರುಕ್ಮಿಣಿ ಮತ್ತು ಡಾ. ಮಂಜುಳಾ ಅವರು ಕಾರ್ಯಕ್ರಮದ ಸಂಯೋಜನೆ, ನಿರ್ವಹಣೆ ಹಾಗೂ ವಂದನಾರ್ಪಣೆಗೆ ಸಂಪೂರ್ಣ ಸಹಕಾರ ನೀಡಿದರು.

