ಗುಡಿಕೈಗಾರಿಕೆ ಮತ್ತು ಇತರ ಕೈಕಸಬುಗಳಲ್ಲೆಲ್ಲಾ ಕುಂಬಾರಗೆಲಸವು ಅತ್ಯಂತ ಪ್ರಾಚೀನವಾದುದು. ತಿಗರಿಯ ಸುತ್ತ ತಮ್ಮ ಬದುಕನ್ನು ಸಾಗಿಸುತ್ತಿರುವ ಕುಂಬಾರರ ನಿಪುಣ ಹಸ್ತಗಳಿಂದ ಮೂಡಿ ಬರುವ ವಿವಿಧ ಆಕಾರಗಳನ್ನು ನೋಡುವುದೇ ಮನಸ್ಸಿಗೆ ಉಲ್ಲಾಸಕರವಾಗಿದೆ. ನಮ್ಮ ದೇಶದಲ್ಲಿ ಹಿಂದೇ ಕುಂಬಾರಗೆಲಸವು ಹೆಚ್ಚಾಗಿ ಪಾತ್ರೆ ಪಗಡಿಗಳನ್ನು ಮಾಡುವುದಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ ಪ್ರಪಂಚದ ಬೇರೆ ಕೆಲವು ಕಡೆ ಬಹಳ ಹಿಂದಿನಿಂದಲೇ ಹಂಚುಗಳು, ನೆಲಕ್ಕೆ ಹಾಸುವ ಇಟ್ಟಿಗೆ, ಗೋಡೆಗೆ ಹಾಸುವ ಇಟ್ಟಿಗೆ, ಇತ್ಯಾದಿ ತಯಾರಿಕೆಗಳ ಮೂಲಕ ಕುಂಬಾರಗೆಲಸವು ವಿವಿಧ ರೂಪವನ್ನು ಪಡೆದಿತ್ತು. ಶಿಲಾಯುಗದಲ್ಲಿ ಅಂದರೆ ಇನ್ನು ನಿಖರವಾಗಿ ಹೇಳಬೇಕಾದರೆ ಹೊಸ ಶಿಲಾಯುಗದಲ್ಲಿ ಒಂದು ಸ್ಥಳದಲ್ಲಿ ನೆಲೆನಿಂತ ಆಹಾರ ಸಂಗ್ರಾಹಕ ಮಾನವವು, ಆಹಾರ ಉತ್ಪಾದಕನಾದಾಗ (ವ್ಯವಸಾಯ ಅಥವಾ ಕೃಷಿ ಕೆಲಸವನ್ನು ಕಂಡು ಕುಡುಕಿದಾಗ) ಆತನು ಸಂಶೋಧಕನಾಗಬೇಕಾಯಿತು. ಈ ವಿಶ್ವವನ್ನೇ ಬದಲಾಯಿಸಲು ಶಕ್ತವಾದ ಅವನ ಎರಡು ಮುಖ್ಯ ಸಂಶೋಧನೆಗಳು ಬೆಂಕಿ ಮತ್ತು ಚಕ್ರ. ಸಾಧಾರಣವೆಂದು ಕಂಡು ಬಂದರೂ ಚಕ್ರವು ಮಾನವನ ಅತ್ಯಂತ ಶ್ರೇಷ್ಠ ಸಂಶೋಧನೆ. ಮನುಷ್ಯನ ಚಲನೆ ಮತ್ತು ವಿವಿಧ ವಸ್ತುಗಳ ಉತ್ಪಾದನೆ ಚಕ್ರವಿಲ್ಲದೆ ಸಾಧ್ಯವೇ ಇಲ್ಲ. ಇಂದು ವಿಶ್ವದಾದ್ಯಂತ ಪ್ರತಿಯೊಬ್ಬರಿಗೂ ಅಗತ್ಯವಿರುವ ಮತ್ತು ಅಷ್ಟೇ ಪ್ರಾಮುಖ್ಯ ಸಾಧನವಾದ ಚಕ್ರವನ್ನು ಪ್ರಾಚೀನ ಕಾಲದಲ್ಲಿ ಯಾರು ಸಂಶೋಧಿಸಿದರು ಎಂಬುದು ತಿಳಿದಿಲ್ಲ. ಆದರೆ ಈ ಚಕ್ರವನ್ನು ಕಂಡು ಹಿಡಿಯುವುದಕ್ಕಿಂತ ಹಿಂದೆಯೇ ಹೊಸ ಶಿಲಾಯುಗದಲ್ಲಿ ಆತನು ಮಣ್ಣನ್ನು ತಟ್ಟಿ ಅದಕ್ಕೆ ವಿವಿಧ ರೂಪಕೊಟ್ಟು ಮಡಿಕೆ ಕುಡಿಕೆಗಳನ್ನು ತಯಾರಿಸಿದ್ದ ಎಂಬುದು ದೃಢಪಟ್ಟಿದೆ. ಆರಂಭದಲ್ಲಿ ಗವಿಗಳಲ್ಲಿ ವಾಸಿಸುತ್ತಿದ್ದ ಆತನು ನಂತರ ಒಂದು ಸ್ಥಳದಲ್ಲಿ ನೆಲೆನಿಂತು ವ್ಯವಸಾಯ, ಬೆಂಕಿ ಮತ್ತು ಚಕ್ರವನ್ನು ಕಂಡು ಹುಡುಕಿದಾಗ, ಆದಾಗಲೇ ಆತನು ಮಡಿಕೆಗಳನ್ನು ತಯಾರಿಸುತ್ತಿದ್ದರೂ, ನಂತರ ಚಕ್ರದ ಸಹಾಯದಿಂದ ವಿವಿಧ ರೂಪದ ಮಡಿಕೆಗಳನ್ನು, ತನ್ನ ವಾಸಕ್ಕಾಗಿ ಕಟ್ಟಿಕೊಂಡ ಮನೆಗೆ ಹೊದಿಸಲು ಹಂಚುಗಳನ್ನು ತಯಾರಿಸಲು ಪ್ರಾರಂಭಿಸಿದ. ಹೀಗೆ ಗವಿಗಳ ಬದಲು ತನ್ನ ವಾಸಕ್ಕಾಗಿ ಮಾನವನು ಮನೆಗಳನ್ನು ಕಟ್ಟಲು ಗಮನ ನೀಡಬೇಕಾಗಿ ಬಂದುದು ಆತನನ್ನು ಹಂಚು ತಯಾರಿಸಲು ಪ್ರೇರೇಪಿಸಿತು.
ಕುಂಬಾರ ಚಕ್ರ (ತಿಗರಿ)
pottery
1 Min Read


