ಸಂಘಟನೆಗೂ ಸೈ… ನಟನೆಗೂ ಜೈ.. ಯಜ್ಞೇಶ್ವರ್ ಕುಲಾಲ್
ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಮಂಗಳೂರು ದಸರಾ ಸಂದರ್ಭದಲ್ಲಿ ವರ್ಷಂಪ್ರತಿ ಹುಲಿ ವೇಷದ ಮೂಲಕ ಭಾರೀ ಸದ್ದು ಮಾಡುತ್ತಿರುವ ‘ಬರ್ಕೆ ಫ್ರೆಂಡ್ಸ್’ ಸಂಘಟನೆಯ ಹಿಂದಿರುವ ಪ್ರಮುಖ ಶಕ್ತಿ ಬರ್ಕೆಯ ಯಜ್ಞೇಶ್ವರ್ ಕುಲಾಲ್ ಈ ಬಾರಿ ಸಿನಿಮಾ ಅಭಿನಯದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಒಂದು ಕಾಲದಲ್ಲಿ ಭೂಗತಲೋಕಕ್ಕೆ ಕಾಲಿಟ್ಟು, ಆ ಬಳಿಕ ಎಲ್ಲವನ್ನೂ ತ್ಯಜಿಸಿ ಹೊಸ ಜೀವನ ಆರಂಭಿಸಿ ಯಶಸ್ವೀ ಉದ್ಯಮಿಯಾಗಿ, ಸಮಾಜ ಸೇವಕರಾಗಿ, ಸಂಘಟಕರಾಗಿ ಹೆಸರು ಗಳಿಸಿರುವ ಯಜ್ಞೇಶ್ವರ್ (ಬರ್ಕೆ ಯದ್ದು) ‘ಕಟಪಾಡಿ ಕಟ್ಟಪ್ಪ’ ತುಳು ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಮೂಲಕ ನಟನೆಗೂ ಸೈ ಎನಿಸಿದ್ದಾರೆ.
ನಟನೆಯನ್ನೇ ಅರಿಯದ ಯಜ್ಞೇಶ್ವರ್ ಅವರಂಥ ಹೊಸಬರನ್ನು ಹಾಕಿಕೊಂಡು ಸಿನಿಮಾ ಮಾಡಿರುವ ನಿರ್ದೇಶಕ ಜೆ.ಪಿ. ತೂಮಿನಾಡ್ ಅಲ್ಲಲ್ಲಿ ಸ್ವಲ್ಪ ಉಪ್ಪು-ಹುಳಿ-ಖಾರ ಬೆರೆಸಿ ‘ಕಟಪಾಡಿ ಕಟ್ಟಪ್ಪ’ ಎಂಬ ಮಸಾಲೆ ಅರೆದು ಸಿನಿಪ್ರಿಯರಿಗೆ ಮನೋರಂಜನೆಗೆ ಮೋಸ ಇಲ್ಲದ ಚಿತ್ರವನ್ನು ನೀಡಿದ್ದಾರೆ. ಮೊಟ್ಟ ಮೊದಲ ಬಾರಿಗೆ ಕ್ಯಾಮೆರಾ ಎದುರಿಸಿದ ಯಜ್ಞೇಶ್ವರ್ ಬರ್ಕೆ, ನಟನೆಯಲ್ಲಿ ಅಲ್ಲಲ್ಲಿ ಎಡವಿದರೂ ಇಡೀ ಸಿನಿಮಾದಲ್ಲೂ ಎಲ್ಲೂ ಅಭಾಸ ಎನಿಸುವುದಿಲ್ಲ. ಎರಡು ಶೇಡ್ ನಲ್ಲಿ ಮಿಂಚಿರುವ ಯಜ್ಞೇಶ್ವರ್ ಬರ್ಕೆ ತಮ್ಮ ಪಾತ್ರಕ್ಕೆ ತಕ್ಕ ನ್ಯಾಯ ಒದಗಿಸಿದ್ದಾರೆ ಎಂದು ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ.
‘ಕಟಪಾಡಿ ಕಟ್ಟಪ್ಪ’ ವನ್ ಲೈನ್ ಸ್ಟೋರಿ :
ಒಳ್ಳೆತನವನ್ನೇ ಮೈಗೂಡಿಸಿಕೊಂಡಿರುವ ‘ಕಟ್ಟಪ್ಪ’ (ಯಜ್ಞೇಶ್ವರ್ ಬರ್ಕೆ) ಎಂಬ ಮುಗ್ದ ಎಂಎಲ್ಎ. ಸದಾ ಆತನ ಕಾಲೆಳೆಯಲು ತಯಾರಾಗುವ ಬದ್ಧ ವೈರಿ ಲೋಕಿ (ವಿಜಯ್ ಕುಮಾರ್ ಕೊಡಿಯಾಲ್ ಬೈಲ್). ಇವರಿಬ್ಬರ ನಡುವೆ ಕಟ್ಟಪ್ಪನ ಆಜ್ಞೆಯನ್ನು ಚಾಚೂ ತಪ್ಪದೇ ಪಾಲಿಸುವ ಆತನ ರೈಟ್ ಹ್ಯಾಂಡ್ ಚಿತ್ರದ ನಾಯಕ ಚೇತು (ಉದಯ್ ಪೂಜಾರಿ). ಭ್ರಷ್ಟಚಾರದಲ್ಲಿ ಮುಳುಗಿ ಶೋಕಿ ಜೀವನ ನಡೆಸುತ್ತಿರುವ ಮಂತ್ರಿಗೆ ಸದಾ ಬಕೆಟ್ ಹಿಡಿದು ತನ್ನ ಬೇಳೆ ಬೇಯಿಸಿಕೊಳ್ಳುವ ಎಂಎಲ್ಎ ಕಟ್ಟಪ್ಪನನ್ನು ರಾಜಕೀಯದಿಂದ ಮಟ್ಟ ಹಾಕಿ, ತಾನೂ ರಾಜಕಾರಣದ ಗದ್ದುಗೆ ಏರಬೇಕೆಂದು ಒಂದಿಲ್ಲೊಂದು ಪ್ಲ್ಯಾನ್ ಮಾಡುವ ಲೋಕಿ. ಕೊನೆಗೂ ಕಟ್ಟಪ್ಪನನ್ನು ಅಧಿಕಾರದಿಂದ ಇಳಿಸಿ ಲೋಕಿ ಗದ್ದುಗೆ ಏರ್ತಾರಾ ಎನ್ನುವುದಕ್ಕೆ ಉತ್ತರ ಸಿಗಬೇಕಾದರೆ ನೀವು ಸಿನಿಮಾ ನೋಡಬೇಕು.